ಗುರುವಾರ , ಮೇ 13, 2021
22 °C

ಆ..ಆ..ಆ..ಆಕಳಿಕೆ

ಕ್ಷಮಾ ವಿ.ಭಾನುಪ್ರಕಾಶ್ Updated:

ಅಕ್ಷರ ಗಾತ್ರ : | |

ಆ..ಆ..ಆ..ಆಕಳಿಕೆ

ಆಕಳಿಕೆ ಎಂಬ ಪದ ಓದಿದ ತಕ್ಷಣವೇ ಆಕಳಿಸುತ್ತಿರೋ ಏನೋ! ಆದರೆ, ಈ ಆಕಳಿಕೆಯ ಹಿಂದಿನ ಕಾರಣ ಏನಿರಬಹುದೆಂದು ಊಹಿಸುವಿರಾ? ನಿದ್ದೆಯ ಆಕ್ರಮಣದ ಮುನ್ಸೂಚನೆ ಎನ್ನುತ್ತೀರಾ? ಆದರೆ, ನಿದ್ರೆಯ ಸಮಯವಲ್ಲದ ಸಮಯದಲ್ಲೂ ನಾವು ಆಕಳಿಸುವುದು ಇದ್ದೇ ಇದೆ. ಇನ್ನು ಬೋರ್ ಆಗದ ಸಿನೆಮಾನೋ, ಆಸಕ್ತಿದಾಯಕ ಪ್ರವಚನವೋ ಇದ್ದರೂ ನಮಗರಿವಿಲ್ಲದಂತೆಯೇ ನಾವು ಆಕಳಿಸಲು ಬಾಯಿ ತೆರೆಯುತ್ತೇವೆ. ಇದರ ಹಿಂದಿನ ಮರ್ಮವನ್ನು ಹಲವಾರು ವಿಜ್ಞಾನಿಗಳು ಹಲವಾರು ಬಗೆಯಲ್ಲಿ ಅಭ್ಯಸಿಸಿದ್ದಾರೆ ಮತ್ತು ವಿಶ್ಲೇಷಿಸಿದ್ದಾರೆ. ಆಕಳಿಕೆಯ ಆಚೀಚೆ ಏನುಂಟು ನೋಡೋಣ ಬನ್ನಿ.

 

ಕೆಲವು ವಿಜ್ಞಾನಿಗಳ ಪ್ರಕಾರ, ಮತ್ತು, ಸಾಮಾನ್ಯವಾಗಿ ಎಲ್ಲರೂ ನಂಬಿರುವ ಪ್ರಕಾರ, ದೇಹಕ್ಕೆ ಮನಸ್ಸಿಗೆ ಆಯಾಸವಾದಾಗ ಆಕಳಿಕೆ ಬರುತ್ತದೆ. ನಮ್ಮಲ್ಲಿ ಸಂತೋಷ, ಭಯದಂತಹ ವಿವಿಧ ಭಾವನೆಗಳು ಉಂಟಾದಾಗ ಹೇಗೆ ನಮ್ಮ ರಕ್ತದಲ್ಲಿ ಬಗೆ ಬಗೆಯ ಹಾರ್ಮೋನುಗಳು ಉತ್ಪತ್ತಿಯಾಗುತ್ತವೋ, ಹಾಗೆಯೇ, ಆಯಾಸ, ನಿರಾಸಕ್ತಿ, ಬೋರ್ ಆದಾಗ ಕೂಡ ಕೆಲವು ರಾಸಾಯನಿಕಗಳು, ಹಾರ್ಮೋನುಗಳು ಉತ್ಪತ್ತಿಯಾಗುತ್ತವೆ ಮತ್ತು ಇದರ ಪರಿಣಾಮವಾಗಿ ಆಕಳಿಕೆ ಉಂಟಾಗುತ್ತದೆ. ಇವುಗಳ ಪ್ರಮಾಣದಲ್ಲಿನ ಏರುಪೇರು ಆಕಳಿಕೆಯ ಪ್ರಮಾಣದಲ್ಲಿನ ಏರುಪೇರಿಗೆ ಕಾರಣವಾಗುತ್ತದೆ ಎನ್ನುತ್ತದೆ ಒಂದು ಸಂಶೋಧನೆ. ಇದರ ಪ್ರಕಾರ, ನಮ್ಮ ರಕ್ತದಲ್ಲಿ ಸೆರೋತಿನಿನ್, ಡೋಪಮೈನ್, ಗ್ಲುತಮಿಕ್ ಆಸಿಡ್ನಂತಹ ರಾಸಾಯನಿಕಗಳ ಪ್ರಮಾಣದಲ್ಲಿನ ಹೆಚ್ಚಳವು, ಆಕಳಿಕೆಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇನ್ನು, ಮೆದುಳಿನಲ್ಲಿ ಎಂಡಾರ್ಫಿನ್ಗಳ ಪ್ರಮಾಣದಲ್ಲಿನ ಹೆಚ್ಚಳವು ಆಕಳಿಕೆಯನ್ನು ಕಡಿಮೆಗೊಳಿಸುತ್ತದೆ. 

 

ಆಕಳಿಕೆಗೂ ನಮ್ಮ ಮೆದುಳಿಗೂ ಅವಿನಾಭಾವ ಸಂಬಂಧ. ಕೇವಲ ಎಂಡಾರ್ಫಿನ್ಗಳ ಪ್ರಮಾಣದಲ್ಲಿನ ಏರಿಕೆ ಅಥವಾ ಇಳಿಕೆಯಷ್ಟೇ ಅಲ್ಲದೆ, ಮೆದುಳಿನ ತಾಪಮಾನಕ್ಕೂ ಆಕಳಿಕೆಗೂ ಸಂಬಂಧವಿದೆ ಎನ್ನುತ್ತದೆ ಮತ್ತೊಂದು ಸಂಶೋಧನೆ. ನಮ್ಮ ದೈಹಿಕ ಹಾಗೂ ಮಾನಸಿಕ ಚಟುವಟಿಕೆಯ ಫಲವಾಗಿ ನಮ್ಮ ಮೆದುಳಿನ ತಾಪಮಾನವು ಬದಲಾಗುತ್ತಲೇ ಇರುತ್ತದೆ. ಮೆದುಳಿನ ತಾಪಮಾನವು ಏರಿದಾಗ, ಅದನ್ನು ತಗ್ಗಿಸಲು ತಂಪಾದ ರಕ್ತವು ಮೆದುಳಿನ ಸುತ್ತಲೂ ನುಗ್ಗಬೇಕಾಗುತ್ತದೆ; ರಕ್ತವು ತಂಪಾಗಲು ಹೆಚ್ಚು ಗಾಳಿಯ ಒಳಹರಿವು ಅಗತ್ಯ. ಹಾಗಾಗಿ ನಾವು ಹೆಚ್ಚು ಸಲ ಹಾಗೂ ಹೆಚ್ಚು ಹೊತ್ತು ಆಕಳಿಸಬೇಕಾಗುತ್ತದೆ. ಆಕಳಿಕೆಯ ಮೂಲಕ ಒಳಬಂದ ಹೆಚ್ಚುವರಿ ಗಾಳಿಯು, ಮೆದುಳಿನ ತಾಪಮಾನ ತಗ್ಗಿಸಿ ಸಮತೋಲನ ಕಾಯುವಲ್ಲಿ ಸಹಾಯ ಮಾಡುತ್ತದೆ.

 

ಮತ್ತೊಂದು ಸಿದ್ಧಾಂತದ ಪರಿಪಾಲಕರಾದ ವಿಜ್ಞಾನಿಗಳ ಪ್ರಕಾರ, ರಕ್ತದಲ್ಲಿ ಇಂಗಾಲದ ಡೈಆಕ್ಸೈಡ್ ನ ಪ್ರಮಾಣವು ಹೆಚ್ಚಾದಾಗ, ಆಮ್ಲಜನಕದ ಅಭಾವವಾದಾಗ, ಹೆಚ್ಚು ಆಮ್ಲಜನಕವು ಒಳಬರಲೆಂದು ಅಥವಾ ಒಂದಷ್ಟು ಇಂಗಾಲದ ಡೈಆಕ್ಸೈಡ್ ಹೊರಹೋಗಲೆಂದು ನಾವು ಆಕಳಿಸುತ್ತೇವೆ. ಆದರೆ, ಇದು ಸಂಪೂರ್ಣ ಸತ್ಯವಲ್ಲ ಎಂಬುದನ್ನು ಕೆಲವು ವಿಜ್ಞಾನಿಗಳ ಗುಂಪು ಸಾಬೀತು ಪಡಿಸಿದೆ. ವಾತಾವರಣದಲ್ಲಿ ಒಮ್ಮೆ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸಿ, ಮತ್ತೊಮ್ಮೆ ಇಂಗಾಲದ ಡೈಆಕ್ಸೈಡ್‌ನ ಪ್ರಮಾಣವನ್ನು ಹೆಚ್ಚಿಸಿ ಅವಲೋಕನ ನಡೆಸಿದರೂ, ಆಕಳಿಕೆಯ ಸಂಖ್ಯೆ ಅಥವಾ ಕಾಲಾವಧಿಯಲ್ಲಿ ಹೆಚ್ಚೇನೂ ವ್ಯತ್ಯಾಸವಾಗಲಿಲ್ಲ. ಹಾಗಾಗಿ, ಈ ಸಿದ್ಧಾಂತವನ್ನು ಬಹುಪಾಲು ನಿರಾಕರಿಸಿದರೂ, ಮೊದಲೆರಡು ಸಿದ್ಧಾಂತಗಳನ್ನು ಒಪ್ಪಲೇಬೇಕಾಗುತ್ತದೆ. ಇದಕ್ಕೆ ಕಾರಣ ಇವೆರಡೂ ಸಿದ್ಧಾಂತಗಳಿಗೂ ಪುಷ್ಟಿ ಒದಗಿಸುವಂತಹ ಇತ್ತೀಚಿನ ಒಂದು ಸಂಶೋಧನೆ.

 

ಆಂಡ್ರ್ಯೂ ಗಾಲಪ್ ಎಂಬ ಮನಶ್ಶಾಸ್ತ್ರಜ್ಞ ಮತ್ತವನ ತಂಡವು ನಡೆಸಿದ ಸಂಶೋಧನೆಯ ಪ್ರಕಾರ, ಮೆದುಳಿಗೂ, ಅದರಲ್ಲಿನ ನರಸಂವಾಹಕಗಳಿಗೂ, ಮೆದುಳಿನ ತಾಪಮಾನಕ್ಕೂ ಅಷ್ಟೇ ಅಲ್ಲದೆ ಮೆದುಳಿನ ಗಾತ್ರಕ್ಕೂ ಆಕಳಿಕೆಯೊಂದಿಗೆ ಸಂಬಂಧವಿದೆ. ಹಲವಾರು ಬಗೆಯ ಪ್ರಾಣಿಗಳ ಮೇಲೆ ಇವರು ನಡೆಸಿದ ಅಧ್ಯಯನದಿಂದ ತಿಳಿದುಬಂದದ್ದೆಂದರೆ, ಮೆದುಳಿನ ಗಾತ್ರವು ಹೆಚ್ಚಿದ್ದಷ್ಟೂ ಮತ್ತು ಮೆದುಳಿನಲ್ಲಿ ಹೆಚ್ಚು ಕಾರ್ಟಿಕಲ್ ನರಕೊಶಗಳಿದ್ದಷ್ಟೂ, ಆಕಳಿಕೆಯ ಕಾಲಾವಧಿ ಹೆಚ್ಚಿರುತ್ತದೆ. ಆಕಳಿಕೆಗೂ ಪ್ರಾಣಿ, ಪಕ್ಷಿ, ಮಾನವನ ದೇಹಗಾತ್ರಕ್ಕೂ, ಬಾಯಿಯ ಗಾತ್ರಕ್ಕೂ ಯಾವುದೇ ಸಂಬಂಧವಿಲ್ಲ. ದೊಡ್ಡ ಮೆದುಳೆಂದರೆ, ಅದನ್ನು ತಂಪಾಗಿಸಲು ಹೆಚ್ಚು ತಂಪು ರಕ್ತ ಬೇಕು; ಇದಕ್ಕಾಗಿ ಹೆಚ್ಚು ಗಾಳಿಯ ಒಳಹರಿವು ಬೇಕಾದ್ದರಿಂದ ಹೆಚ್ಚು ಹೊತ್ತು ಆಕಳಿಸಬೇಕು ಎನ್ನುತ್ತಾರೆ ಆಂಡ್ರ್ಯೂ ಗಾಲಪ್. ಆಕಳಿಕೆಯ ಹಿಂದಿರುವ ಇಷ್ಟೊಂದು ವೈಜ್ಞಾನಿಕ ಸತ್ಯಗಳನ್ನು ಓದಿ, ಮೆದುಳಿಗೆ ದಣಿವಾಗಿ ಆಕಳಿಸುತ್ತಿದ್ದೀರಾ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.