ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಕಂಠನ ಹಾಡಿನ ಮೂಡು

Last Updated 22 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

‘ಶ್ರೀಕಂಠ’ ಚಿತ್ರದ ಹಾಡುಗಳ ಧ್ವನಿಮುದ್ರಿಕೆ ಮಾರುಕಟ್ಟೆಗೆ ಬಂದಿದೆ; ಆ ಮೂಲಕ ಸುಮಾರು ಒಂದು ವರ್ಷದಿಂದ ಸಿನಿಮಾದ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳ ಕಾಯುವಿಕೆಗೆ ಒಂದು ತಾರ್ಕಿಕ ಅಂತ್ಯ ದೊರೆಯುವ ನಿರೀಕ್ಷೆ ಮೂಡಿದೆ. 

‘ಶಿವಸೈನ್ಯ’ದ ನಂತರ ಶಿವರಾಜಕುಮಾರ್ ಮತ್ತೆ ಒಬ್ಬ ಸಾಮಾನ್ಯ ನಾಗರಿಕನಾಗಿ ಕಾಣಿಸಿಕೊಂಡಿರುವ ಚಿತ್ರ ‘ಶ್ರೀಕಂಠ’. ಸಾಮಾನ್ಯ ವ್ಯಕ್ತಿಯಾಗಿದ್ದವನೊಬ್ಬ ಅನ್ಯಾಯದ ವಿರುದ್ಧ ಸಿಡಿದೇಳುವ ಕಥೆ ‘ಶ್ರೀಕಂಠ’ನದ್ದು. ‘ನಾನೂ ಎಷ್ಟು ದಿನ ಅಂತ ಸಾಚಾ ಮನುಷ್ಯನಾಗಿರಲಿ. ಒಮ್ಮೆಯಾದರೂ ಕೆಟ್ಟು ನೋಡೋಣ ಎಂದುಕೊಂಡಿದ್ದೇನೆ. ಈವರೆಗೆ ನನ್ನ ಬಾಯಲ್ಲಿ ಕೇಳಿರದ ಮಾತುಗಳೆಲ್ಲ ಈ ಚಿತ್ರದ ಸಂಭಾಷಣೆಯಲ್ಲಿವೆ’ ಎಂದು ಶಿವರಾಜಕುಮಾರ್ ತಮ್ಮ ಪಾತ್ರವನ್ನು ಪರಿಚಯಿಸಿದರು.

ಶಿವರಾಜಕುಮಾರ್ ಆಸೆಪಟ್ಟು ಈ ಚಿತ್ರದಲ್ಲಿ ಒಂದು ಹಾಡು ಹೇಳಿದ್ದಾರೆ. ಹಾಡಬೇಕು ಎಂಬ ತಮ್ಮ ಆಸೆಯನ್ನು ನಿರ್ದೇಶಕ ಮಂಜು ಸ್ವರಾಜ್ ಬಳಿ ಶಿವರಾಜ್ ಹೇಳಿಕೊಂಡ ತಕ್ಷಣವೇ ಅವರೂ ಖುಷಿಯಿಂದ ಒಪ್ಪಿಕೊಂಡಿದ್ದಾರೆ. ‘ಕಣ್ಣಾಣೆ, ಮೂಗಾಣೆ’ ಎಂಬ ಹಾಡಿಗೆ ಶಿವಣ್ಣ ದನಿಯಾಗಿದ್ದಾರೆ. ನಿಯಮಿತವಾಗಿ ಹಾಡುತ್ತಿದ್ದರೆ ಅದು ತಮ್ಮ ಧ್ವನಿಯ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಶಿವರಾಜಕುಮಾರ್ ಅಪರೂಪಕ್ಕೊಮ್ಮೆ ಹಾಡುತ್ತಾರೆ.

ಚಿತ್ರದಲ್ಲಿ ವಿಷ್ಣುವರ್ಧನ್ ಅವರ ‘ನಾಗರಹಾವು’ ಚಿತ್ರದ ‘ಹಾವಿನ ದ್ವೇಷ ಹನ್ನೆರಡು ವರುಷ’ ಹಾಡನ್ನು ಬಳಸಿಕೊಳ್ಳಲಾಗಿದೆ. ಈ ಬಗ್ಗೆ ಮಾತನಾಡಿದ ಶಿವರಾಜಕುಮಾರ್ – ‘ವಿಷ್ಣುವರ್ಧನ್ – ರಾಜಕುಮಾರ್ ಯಾವತ್ತೂ ಸ್ನೇಹಿತರೇ ಆಗಿದ್ದರು. ನಾವೆಲ್ಲ ಒಂದು ಎಂಬುದನ್ನು ಹೇಳಲು ಈ ಹಾಡನ್ನು ಬಳಸಿದ್ದೇವೆಯೇ ಹೊರತು ಯಾರಿಗೂ ಬೇಸರ ಮಾಡುವ ಉದ್ದೇಶ ನಮಗಿಲ್ಲ’ ಎಂದರು.

ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಹೇಮಂತ್ ಕುಮಾರ್, ಶಶಾಂಕ್ ಶೇಷಗಿರಿ, ಕಾರ್ತಿಕ್, ಶಿಲ್ಪಾ ಶ್ರೀಕಾಂತ್, ಬಾಬಿ ಹಾಡಿದ್ದಾರೆ. ಕೃಷ್ಣೇಗೌಡ, ವಿ. ನಾಗೇಂದ್ರಪ್ರಸಾದ್, ಚೇತನ್ ಗೀತಸಾಹಿತ್ಯ ರಚಿಸಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ಅವರ ಸಣ್ಣಕಥೆ ಆಧರಿಸಿ ಮಂಜು ಸ್ವರಾಜ್ ಚಿತ್ರದ ಕಥೆ ರಸಿಚಿದ್ದಾರೆ. ತಮ್ಮ ಶ್ರಮ ತೆರೆಯಮೇಲೆ ಕಾಣಿಸುವ ಭರವಸೆಯಲ್ಲಿದ್ದಾರೆ ನಿರ್ದೇಶಕರು. ಜನವರಿ ಮೊದಲ ವಾರದಲ್ಲಿ ಚಿತ್ರವನ್ನು ತೆರೆಗೆ ತರುವ ಯೋಚನೆಯಲ್ಲಿದ್ದಾರೆ ನಿರ್ಮಾಪಕ ಎಂ.ಎನ್. ಮನುಗೌಡ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT