ಬುಧವಾರ, ಸೆಪ್ಟೆಂಬರ್ 22, 2021
22 °C
ಬಹುಮತ ಸಾಬೀತಿಗೆ 15 ದಿನಗಳ ಗಡುವು

ಗೋವಾ, ಮಣಿಪುರದಲ್ಲೂ ಬಿಜೆಪಿ ನೇತೃತ್ವದ ಸರ್ಕಾರ

ಪಿಟಿಐ Updated:

ಅಕ್ಷರ ಗಾತ್ರ : | |

ಗೋವಾ, ಮಣಿಪುರದಲ್ಲೂ ಬಿಜೆಪಿ ನೇತೃತ್ವದ ಸರ್ಕಾರ

ಪಣಜಿ/ಇಂಫಾಲ: ಗೋವಾ ಮತ್ತು ಮಣಿಪುರ ರಾಜ್ಯಗಳಲ್ಲಿ ಎರಡನೆಯ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ, ಸಣ್ಣ ಪಕ್ಷಗಳ ಬೆಂಬಲ ಪಡೆದು ಎರಡೂ ಕಡೆ ಸರ್ಕಾರ ರಚಿಸಲು ಮುಂದಾಗಿದೆ.

ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಬಿಜೆಪಿ ನಿಚ್ಚಳ ಬಹುಮತ ಪಡೆದಿರುವ ಕಾರಣ ಅಲ್ಲಿ ಸರ್ಕಾರ ರಚನೆಗೆ ಸಮಸ್ಯೆ ಇಲ್ಲ. ಅತಂತ್ರ ವಿಧಾನಸಭೆ ರಚನೆಯಾಗಿರುವ ಗೋವಾ ಮತ್ತು ಮಣಿಪುರ ರಾಜ್ಯಗಳಲ್ಲಿ ಇತರ ಪಕ್ಷಗಳ ಬೆಂಬಲ ಪಡೆದು ಸರ್ಕಾರ ರಚಿಸಿದರೆ, ಚುನಾವಣೆ ನಡೆದ ಐದು ರಾಜ್ಯಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಅಧಿಕಾರ ಹಿಡಿದಂತಾಗಲಿದೆ.

ಪರಿಕ್ಕರ್ ಮುಂದಿನ ಸಿ.ಎಂ: ಗೋವಾದಲ್ಲಿ 13 ಸ್ಥಾನ ಗೆದ್ದಿರುವ ಬಿಜೆಪಿ ಹೊಸ ಸರ್ಕಾರ ರಚಿಸಲು ಅವಕಾಶ ನೀಡುವಂತೆ ಕೋರಿ ರಾಜ್ಯಪಾಲರಾದ ಮೃದುಲಾ ಸಿನ್ಹಾ ಅವರಿಗೆ ಮನವಿ ಸಲ್ಲಿಸಿದ್ದು, ಪ್ರಮಾಣ ವಚನ ಸ್ವೀಕರಿಸಿದ 15 ದಿನಗಳಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಮನೋಹರ್‌ ಪರಿಕ್ಕರ್‌ ಅವರಿಗೆ ಸೂಚಿಸಿದ್ದಾರೆ.

ಇದಕ್ಕೂ ಮೊದಲು ಸಭೆ ನಡೆಸಿದ್ದ ಬಿಜೆಪಿ ಶಾಸಕರು, ಪರಿಕ್ಕರ್‌ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲು ಅವಕಾಶ ನೀಡುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರನ್ನು ಒಕ್ಕೊರಲಿನಿಂದ ಒತ್ತಾಯಿಸಿದ್ದರು.

ಗೋವಾ ಫಾರ್ವರ್ಡ್‌ ಪಾರ್ಟಿ (ಜಿಎಫ್‌ಪಿ) ಮತ್ತು ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷಗಳ (ಎಂಜಿಪಿ) ತಲಾ ಮೂವರು ಶಾಸಕರ, ಇಬ್ಬರು ಪಕ್ಷೇತರ ಶಾಸಕರ, ಎನ್‌ಸಿಪಿಯ ಒಬ್ಬ ಶಾಸಕನ ಬೆಂಬಲ ಪತ್ರದೊಂದಿಗೆ ಪರಿಕ್ಕರ್ ರಾಜ್ಯಪಾಲರನ್ನು ಭೇಟಿ ಮಾಡಿದರು.

‘ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಪರಿಕ್ಕರ್ ರಕ್ಷಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ’ ಎಂದು  ಕೇಂದ್ರ ಸಚಿವ ನಿತಿನ್ ಗಡ್ಕರಿ ಸುದ್ದಿಗಾರರಿಗೆ ತಿಳಿಸಿದರು.

ಮಣಿಪುರದಲ್ಲಿ ಬೆಂಬಲ: ಮಣಿಪುರದಲ್ಲಿ 21 ಸ್ಥಾನ ಗೆದ್ದಿರುವ ಬಿಜೆಪಿ, ಎನ್‌ಪಿಪಿ (ನ್ಯಾಷನಲ್ ಪೀಪಲ್ಸ್‌ ಪಾರ್ಟಿ) ಮತ್ತು ಎಲ್‌ಜೆಪಿ (ಲೋಕ ಜನಶಕ್ತಿ ಪಾರ್ಟಿ), ಟಿಎಂಸಿ ಬೆಂಬಲ ಗಿಟ್ಟಿಸಿಕೊಂಡಿದೆ.

ಎನ್‌ಪಿಎಫ್‌ ಪಕ್ಷವು ಬಿಜೆಪಿಗೆ ಬಾಹ್ಯ ಬೆಂಬಲ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಕಾಂಗ್ರೆಸ್‌ಗೆ ಸರ್ಕಾರ ರಚನೆಗೆ ಬೆಂಬಲ ನೀಡುವುದಿಲ್ಲ ಎಂಬ ಪತ್ರವನ್ನು ಪಕ್ಷ ರಾಜ್ಯಪಾಲರಿಗೆ ಬರೆದಿದೆ.

ಎನ್‌ಪಿಪಿ ಮತ್ತು ಎಲ್‌ಜೆಪಿ ಕೇಂದ್ರದಲ್ಲಿ ಎನ್‌ಡಿಎ ಅಂಗಪಕ್ಷಗಳು. ‘ನಾಲ್ಕು ಸ್ಥಾನ ಗೆದ್ದಿರುವ ಎನ್‌ಪಿಎಫ್‌ (ನಾಗಾ ಪೀಪಲ್ಸ್‌ ಫ್ರಂಟ್‌) ಜೊತೆಗಿನ ಒಪ್ಪಂದದ ಪ್ರಕಾರ, ಆ ಪಕ್ಷ ಬಿಜೆಪಿಯನ್ನು ಬೆಂಬಲಿಸಲಿದೆ. ಒಬ್ಬ ಪಕ್ಷೇತರ ಶಾಸಕರಿಂದ ಬೆಂಬಲ ಪಡೆಯಲಾಗುವುದು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ.

‘ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದ ಎನ್‌ಪಿಎಫ್‌ ಕಾಂಗ್ರೆಸ್ಸೇತರ ಸರ್ಕಾರ ರಚನೆಗೆ ಮನಸ್ಸು ಹೊಂದಿರುವುದಾಗಿ ತಿಳಿಸಿತ್ತು’ ಎಂದು ಹೇಳಿದರು.

16ಕ್ಕೆ ಅಮರಿಂದರ್ ಪ್ರಮಾಣ ವಚನ

ಪಟಿಯಾಲ
: ಪಂಜಾಬ್‌ನ ನೂತನ ಮುಖ್ಯಮಂತ್ರಿಯಾಗಿ ಇದೇ 16 ರಂದು ಪ್ರಮಾಣ ವಚನ ಸ್ವೀಕರಿಸುವುದಾಗಿ ಅಮರಿಂದರ್ ಸಿಂಗ್ ಹೇಳಿದ್ದಾರೆ.

16ರಂದು ಆಯ್ಕೆ

ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳ ನೂತನ ಮುಖ್ಯಮಂತ್ರಿ ಆಯ್ಕೆ 16ರಂದು ನಡೆಯಲಿದೆ. ಆಯ್ಕೆ ಅಧಿಕಾರವನ್ನು ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರಿಗೆ ನೀಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.