7

ನಿಜದ ನೆಲೆ ಕಾಣುವ ಹಂಬಲದ ಬರವಣಿಗೆ

Published:
Updated:
ನಿಜದ ನೆಲೆ ಕಾಣುವ ಹಂಬಲದ ಬರವಣಿಗೆ

ನೀಲಿ ಮೂಗಿನ ನತ್ತು

ಲೇ: ಹೆಚ್.ಆರ್. ಸುಜಾತಾ

ಪ್ರಕಾಶನ: ನವಕರ್ನಾಟಕ ಪ್ರಕಾಶನ, ಬೆಂಗಳೂರು

*

ಎಚ್.ಆರ್. ಸುಜಾತಾ ಅವರ ‘ನೀಲಿ ಮೂಗಿನ ನತ್ತು’ ಹಲವು ಕಾರಣಗಳಿಗಾಗಿ ನಮ್ಮ ಗಮನ ಸೆಳೆಯುತ್ತದೆ. ಕಥನ ಪ್ರಕಾರದಲ್ಲಿನ ಹೊಸ ಸಾಧ್ಯತೆಗಳನ್ನು ಮುಂದಿಡುತ್ತಿರುವ ಕಾರಣಕ್ಕಾಗಿ, ಕನ್ನಡ ಭಾಷೆಯ ಡೈಲೆಕ್ಟೊಂದನ್ನು ಅದರೆಲ್ಲ ಶಕ್ತಿ ಮತ್ತು ಬನಿಯಲ್ಲಿ ಬಳಸಿಕೊಳ್ಳುವ ಮೂಲಕ ಕನ್ನಡ ಭಾಷೆಯು ಎದುರಿಸುತ್ತಿರುವ ಸವಾಲುಗಳಿಗೆ ಒಡ್ಡಿದ ಪ್ರತಿಕ್ರಿಯೆಯಾಗಿ, ಹಲವು ದ್ವಂದ್ವಗಳು ಮತ್ತು ಆಯ್ಕೆಯ ಈ ನಮ್ಮ ಕಾಲವನ್ನು, ಕಣ್ಣು ಹೊರಳಿಸಿ ಹಿಂದ ಹಿಂದ ನೋಡುತ್ತಲೇ ಅರ್ಥ ಮಾಡಿಕೊಳ್ಳಲು ನಡೆಸುವ ಪ್ರಯತ್ನವಾಗಿ –ಹೀಗೆ ಹಲವು ದೃಷ್ಟಿಗಳಲ್ಲಿ ಇದನ್ನು ನೋಡಲು ಸಾಧ್ಯವಾಗುವುದು ಮುಖ್ಯವಾಗಿ ಒಂದು ಕಾರಣಕ್ಕೆ. ಅದೆಂದರೆ, ಈ ಕೃತಿ ಹಳಹಳಿಕೆಯ ಸುಲಭದ ದಾರಿಯನ್ನು ಬಿಟ್ಟುಕೊಟ್ಟಿದೆ. ಪ್ರಶ್ನೆಗಳಿಗೆ ಉತ್ತರ ಹುಡುಕುವ ಇರಾದೆಯೂ ಇದಕ್ಕಿರುವಂತೆ ಕಾಣಿಸುವುದಿಲ್ಲ. ನಗರಾರಣ್ಯದಲ್ಲಿ ತನ್ನನ್ನು ಕಳೆದುಕೊಂಡ ಮನಸ್ಸೊಂದು ತನ್ನ ನಿಜದ ನೆಲೆಯನ್ನು, ತನ್ನ ಅಂತರಗಂಗೆಯನ್ನು ಕಾಣುವ ಹಂಬಲದ ತುರ್ತಿನ ಬರವಣಿಗೆ ಇದು.

ಈ ಕೃತಿಯುದ್ದಕ್ಕೂ ಕಾಣಿಸುವ ಒಂದು ವಿಶೇಷ ಲಕ್ಷಣ ಎಂದರೆ, ಯಾವೆಲ್ಲ ಅನುಭವಗಳು ತನ್ನ ಗತಕಾಲದ, ಈ ನನ್ನ ವರ್ತಮಾನಕ್ಕೆ ಸಂಬಂಧಿಸಿದವಲ್ಲ ಎಂದು ತಿಳಿಯಲಾಗಿತ್ತೋ ಅವೇ ತನ್ನ ಬದುಕಿನ ಅತ್ಯಮೂಲ್ಯ ಅನುಭವಲೋಕ ಮಾತ್ರವಲ್ಲ, ತನ್ನ ಇಂದಿನ ಬದುಕಿನ ಗತಿಯನ್ನು ನಿರ್ಧರಿಸುತ್ತಿರುವುದೂ ಅದೇ ಅನುಭವಲೋಕ ಎನ್ನುವ ಅರಿವು. ಸುಪ್ತವಾಗಿಯೇ ತನ್ನ ವ್ಯಕ್ತಿತ್ವವನ್ನು ರೂಪಿಸಿದ, ಈಗಲೂ ಕೈ ಹಿಡಿದು ನಡೆಸುತ್ತಿರುವ ಗತವನ್ನು ಗತಿ ತಾರ್ಕಿಕತೆಯಲ್ಲಿ ತನ್ನ ಅರಿವಿನ ಮುನ್ನೆಲೆಗೆ ತಂದುಕೊಳ್ಳುತ್ತಿರುವ ಪ್ರಯತ್ನವಾಗಿ ಈ ನಿರೂಪಣೆಗಳು ಕಾಣಿಸುತ್ತವೆ. ಈ ದೃಷ್ಟಿಯಿಂದ ಇವು ವೈಯಕ್ತಿಕ ತುರ್ತಿನ ನಿರೂಪಣೆಗಳೂ ಹೌದು, ಕಾಲಶೋಧದ ನಿರೂಪಣೆಗಳೂ ಹೌದು.

ಬರಹಗಾರರ ಮೂಲ ಆಕರ ಬಾಲ್ಯ ಎನ್ನುವ ಸಿದ್ಧಾಂತದ ಪ್ರತಿಪಾದನೆಯಂತೆ ಕಾಣುವ ಈ ನಿರೂಪಣೆಗಳಿಗೆ ನಮ್ಮ ಸಂದರ್ಭದ ಕಾರಣಕ್ಕಾಗಿ ಸಾಂಸ್ಕೃತಿಕ ಆಯಾಮವೂ ಅಷ್ಟೇ ದಟ್ಟವಾಗಿ ದಕ್ಕಿದೆ. ಭಾಷೆ ಮತ್ತು ಶೈಲಿಯನ್ನೇ ಒಂದು ರಾಜಕೀಯ ಹೋರಾಟದ ದಾರಿಯಾಗಿ ಪರಿಗಣಿಸುವ ಕ್ರಮ ಇತ್ತೀಚಿನ ಮಾನವಿಕ ಅಧ್ಯಯನಗಳಲ್ಲಿ ಚಾಲ್ತಿಗೆ ಬರುತ್ತಿರುವುದರ ಹಿನ್ನೆಲೆಯಲ್ಲಿ ಸುಜಾತಾ ಅವರು ಬಳಸಿಕೊಂಡಿರುವ ಭಾಷೆ, ಸ್ಥಾಪಿತ ಭಾಷೆಯ, ಪ್ರಮಾಣೀಕೃತ ಭಾಷೆಯ ಎದುರು ಪ್ರಾದೇಶಿಕ ನುಡಿಗಟ್ಟುಗಳು ಒಡ್ಡಬಹುದಾದ ಪ್ರತಿರೋಧವಾಗಿ ಕಾಣಿಸುತ್ತದೆ. ಇದನ್ನೇ ಮುಂದುವರಿಸಿ ಹೇಳುವುದಾದರೆ, ಅದು ದೇಸೀ ನುಡಿಗಟ್ಟುಗಳು ತಮ್ಮ ಚಹರೆಯನ್ನು ಉಳಿಸಿಕೊಳ್ಳುವ ಅಸ್ತಿತ್ವದ ಹೋರಾಟವಾಗಿಯೂ ಕಾಣಿಸುತ್ತದೆ.

ಇಲ್ಲಿನ ನಿರೂಪಣೆಗಳಿಗೆ ಅತ್ಯಂತ ಶಕ್ತವಾದ ಚಿತ್ರಕ ಶಕ್ತಿ ಇದೆ. ಈ ಚಿತ್ರಕ ಶಕ್ತಿ ಅನುಭವಗಳ ಸಾಂದ್ರತೆಯಿಂದ ಮಾತ್ರವಲ್ಲ, ಆ ಅನುಭವಕ್ಕೆ ಬೇಕಾದ ಭಾಷಾ ಸಾಮಗ್ರಿಯ ಅನಿವಾರ್ಯತೆಯಿಂದ ಸಾಧ್ಯವಾಗಿದೆ. ಅನುಭವ ಮತ್ತು ಭಾಷೆಯ ನಡುವಿನ ಅವಿನಾ ಸಂಬಂಧ ಆದಿಮ ಸರಿ. ಆದರೆ, ಆ ನುಡಿಗಟ್ಟಿನಲ್ಲಲ್ಲದೆ ಬೇರೆ ನುಡಿಗಟ್ಟಿಗೆ ದಾಟಿಸಲು ಅಸಾಧ್ಯವೆನಿಸುವ ಶಬ್ದಾರ್ಥಗಳ ಸಾಂಗತ್ಯವೊಂದು ಈ ಕೃತಿಯ ಯಶಸ್ಸಿನ ಮೂಲಧಾತುವಾಗಿದೆ.

ಇದು ಹಳಹಳಿಕೆಯ ಸವಾಲನ್ನು ಮೀರಿಕೊಂಡಿದೆ ಎಂದದ್ದನ್ನು ತುಸು ಚರ್ಚಿಸುವುದಾದರೆ, ಕೊನೆಗೂ ಯಾವುದೇ ಸಾಹಿತ್ಯಕ ಕಥನಗಳು ಕಟ್ಟುವುದು, ಕಟ್ಟಬೇಕಾಗಿರುವುದು ಮಾನವೀಯಲೋಕವನ್ನು. ಆಯಾಕಾಲದ ಒತ್ತಡಗಳು, ಸನ್ನಿವೇಶಗಳು, ಲೋಕದೃಷ್ಟಿಗಳು ಕಟ್ಟುವ ಸಮುದಾಯ ವಿಶಿಷ್ಟ ಮಾನವೀಯಲೋಕ ಒಂದಿದ್ದರೆ, ಯಾವ ಕಾಲಕ್ಕೂ ಅದೇ ಅದೇ ಆಗಿರುವ ಮಾನವೀಯಲೋಕ ಇನ್ನೊಂದಿರುತ್ತದೆ. ಈ ಎರಡನ್ನೂ ಕಾಣಿಸಬಲ್ಲದ್ದೇ ಶಕ್ತವಾದ ಕೃತಿ. ಆದರೆ ಹೀಗೆ ಮಾಡುವಾಗ ಸಾಮಾನ್ಯವಾಗಿ ಬರಹಗಾರರು ಎದುರಿಸುವ ಬಲು ದೊಡ್ಡ ಸವಾಲು ಎಂದರೆ, ಗೊತ್ತಿದ್ದೋ ಗೊತ್ತಿಲ್ಲದೆಯೋ ನ್ಯಾಯಾಧೀಶರ ಪಾತ್ರ ವಹಿಸುವುದು. ಅದನ್ನು ಸರಿ ತಪ್ಪುಗಳ, ಸುವರ್ಣ ಯುಗ ಮತ್ತು ಕೆಟ್ಟುಹೋದ ಕಾಲವನ್ನು ಎದುರುಬದುರಾಗಿಸುವ ಆಮಿಷ. ಹೀಗಾಗದೇ ಲೇಖಕರಾದವರಿಗೆ ಎರಡು ಅಂಶಗಳು ಇರುವುದು ಅವಶ್ಯ ಎನಿಸುತ್ತದೆ. ಒಂದು ನಿರುದ್ವಿಗ್ನತೆ, ಎರಡು ಮಾನವೀಯತೆಯ ಬಗೆಗಿನ ನಂಬಿಕೆ. ಸುಜಾತ ಈ ಕೃತಿಯಲ್ಲಿ ಈ ಸಂಯಮ ಮತ್ತು ನಂಬಿಕೆಯನ್ನು ಬಹುಪಾಲು ಕಡೆ ಉಳಿಸಿಕೊಂಡಿದ್ದಾರೆ. ಕೆಲವು ಕಡೆ, ‘ಅಯ್ಯೋ, ಇಂಥದೊಂದು ಕಳೆದುಹೋಯಿತಲ್ಲ’ ಎನ್ನುವ ನೋವು ಢಾಳಾಗಿಯೇ ಕಾಣುತ್ತದೆ. ನಗರಕ್ಕೆ ಎದುರಾಗಿ ಹಳ್ಳಿಯನ್ನು ನಿಲ್ಲಿಸುವ ಪ್ರಯತ್ನವನ್ನೂ ಇವರು ಕೆಲವು ಕಡೆ ಮಾಡುತ್ತಾರೆ. ಅವು ಈ ಕೃತಿಯ ಸಾಧಾರಣ ನಿರೂಪಣೆಗಳಾಗಿ ಮಾತ್ರ ಉಳಿಯುತ್ತವೆ. ಆದರೆ ಈ ಕೃತಿಯ ಉತ್ತಮ ನಿರೂಪಣೆಗಳು ಈ ದೌರ್ಬಲ್ಯದಿಂದ ಪಾರಾಗಿ, ಅಪ್ಪಟ ಮಾನವೀಯ ನಿರೂಪಣೆಗಳಾಗಿವೆ.

ಗಂಡು–ಹೆಣ್ಣಿನ ಸಂಬಂಧದ ಕೊನೆಯಿಲ್ಲದ ಒಳದಾರಿಗಳು, ಕೌಟುಂಬಿಕ ತಲ್ಲಣಗಳನ್ನು ನಿಧಾನಕ್ಕೆ ತಣಿಸುತ್ತಾ ಹೋಗುವ ಅಂತಃಕರಣದ ಶಕ್ತಿ, ಕೆಲವೊಮ್ಮೆ ಯಾವ ಅಂತಃಕರಣಕ್ಕೂ ಬಗ್ಗದ ಮನುಷ್ಯನ ಕ್ರೌರ್ಯ, ಬದುಕನ್ನು ಹಸಿರಾಗಿಸುವ, ಕೊನೆಯವರೆಗೂ ಶಕ್ತಿವರ್ಧಕಗಳಂತೆ ನಮ್ಮನ್ನು ಪೊರೆಯುವ ಸಂಬಂಧಗಳನ್ನು ಈ ಕೃತಿ ಬಲು ಆಸ್ಥೆಯಿಂದ ಚಿತ್ರಿಸುತ್ತದೆ. ಯಾವ ಹೊತ್ತಿಗೂ ನಂಬಿಕೆ ಕಳೆದುಕೊಳ್ಳದ ಹೆಣ್ಣಿನ ಚಿತ್ರಗಳು ಈ ಕೃತಿಯ ಮುಖ್ಯ ಕಾಳಜಿಗಳಲ್ಲೊಂದು. ಅಷ್ಟೇ ಮುಖ್ಯವಾಗಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ಕುಟುಂಬವನ್ನು ಇವರು ಮರು ಸ್ಥಾಪಿಸುವ ಪರಿ. ಹಲವು ವ್ಯಕ್ತಿಗಳ ಸಂಘಟನೆಯಾಗಿ ಕುಟುಂಬವನ್ನು ಇವರು ನೋಡುವುದಿಲ್ಲ. ಬದಲಿಗೆ ವ್ಯಕ್ತಿಗಳನ್ನು ಕುಂಟುಂಬದ ಒಂದು ಭಾಗ ಎನ್ನುವಂತೆ ಪರಿಭಾವಿಸುತ್ತಾರೆ. ಬಹುಶಃ ತಮ್ಮ ಕಾಲವನ್ನು ಇವರು ಅರ್ಥೈಸುತ್ತಿರುವ ಪರಿಯೂ ಇದೇ ಅನಿಸುತ್ತದೆ. ತನ್ನ ವರ್ತಮಾನವನ್ನೂ ಬಾಲ್ಯವನ್ನೂ ಒಟ್ಟಾಗಿಯೂ ಬೇರೆ ಬೇರೆಯಾಗಿಯೂ ಗ್ರಹಿಸುತ್ತಲೇ ಆ ಎರಡರ ನಡುವಿನ ಗತಿ ತಾರ್ಕಿಕತೆಯನ್ನು ಇವರು ಕಾಣಲು ಯತ್ನಿಸುತ್ತಿದ್ದಾರೆ ಎನಿಸುತ್ತದೆ. ಇದೊಂದು ಬಹು ಮುಖ್ಯವಾದ, ಅಗತ್ಯವಾದ ಮತ್ತು ಅನಿವಾರ್ಯವಾದ ಅಗ್ನಿ ಪರೀಕ್ಷೆ. ಆದರೆ ಇದನ್ನು ಕಾಲಾಯ ತಸ್ಮೈ ನಮಃ ಎನ್ನುವ ಸಿದ್ಧತೆಯಲ್ಲಿ ನಡೆಸದಿದ್ದರೆ, ಸಿನಿಕತನವೋ, ತೀರ್ಪುಗಾರಿಕೆಯೋ ನಮ್ಮನ್ನು ಅರೆಗುರುಡರನ್ನಾಗಿ ಮಾಡಿಬಿಡುತ್ತದೆ. ಎಲ್ಲ ಕಾಲವೂ ಹಾಯಲೇಬೇಕಾದ ತಲ್ಲಣಗಳನ್ನು ನಂಬಿ ಒಪ್ಪಿ ನಡೆದರೆ ಮಾತ್ರ ಸ್ಥಿತ್ಯಂತರಗಳನ್ನು ವಸ್ತುನಿಷ್ಠವಾಗಿ ನೋಡಲು ಸಾಧ್ಯ. ಇದನ್ನು ಸಾಧಿಸಲು ಸುಜಾತಾ ಅವರು ಪ್ರಜ್ಞಾಪೂರ್ವಕವಾಗಿಯೇ  ನಡೆಸಿರುವ ಪ್ರಯತ್ನ ಉದ್ದಕ್ಕೂ ನಮ್ಮ ಅನುಭವಕ್ಕೆ ಬರುತ್ತದೆ.

‘ನೀಲಿ ಮೂಗಿನ ನತ್ತು’ ಕಥನ ಇವರ ಕಥನಗಾರಿಕೆಯ ಸಹಜತೆ, ವಿಶಿಷ್ಟತೆಯನ್ನು ಹೇಳುವ ಪ್ರಾತಿನಿಧಿಕ ಬರವಣಿಗೆ. ನತ್ತೊಂದರ ಚೆಲುವು, ಅದನ್ನು ಕುರಿತ ಹೆಣ್ಣೊಬ್ಬಳ ಸಹಜ ಪ್ರೀತಿಯನ್ನು ಅದ್ಭುತವಾಗಿ ಹೇಳುತ್ತಲೇ ಈ ಕಥನ ಅದರ ಹಿಂದಿನ ಆರ್ಥಿಕ ಅಸಮಾನತೆಯ, ಅಸೂಯೆಯ, ಕೊನೆಗೂ ಒಡವೆ ಎನ್ನುವುದು ಕುಟುಂಬದ, ಕಲ್ಯಾಣಕ್ಕಾಗಿ ಒದಗಿಬರಬಹುದಾದ ಇನ್ನೆಲ್ಲಾ ಅಂಶಗಳನ್ನೂ ದಾಖಲಿಸುವ ಮೂಲಕ ಮಹಿಳಾ ಸಂಕಥನಕ್ಕೆ ಸೇರ್ಪಡೆಯಾಗಿ ಬಿಡುತ್ತದೆ. ಸಾಂಸ್ಕೃತಿಕ ನಿರೂಪಣೆ ಮಾತ್ರವಾಗಿ ಬಿಡಬಹುದಾಗಿದ್ದ ಇದು, ಈ ವ್ಯಾಪ್ತಿಯ ಕಾರಣಕ್ಕಾಗಿ ಹೆಣ್ಣಿನ ಹೋರಾಟ ಮತ್ತು ಬದುಕಿನ ರೂಪಕವೂ ಆಗಿಬಿಡುತ್ತದೆ.

ಅದಮ್ಯ ಜೀವನ ಪ್ರೀತಿಯ ಕಾರಣಕ್ಕಾಗಿ ಇಲ್ಲಿನ ನಿರೂಪಣೆಗಳು ಓದುಗರನ್ನು ತನ್ಮಯಗೊಳಿಸುತ್ತವೆ. ಆದರೆ, ಅದೇ ಹೊತ್ತಿಗೆ ಈ ನಿರೂಪಣೆಗಳು ಒಟ್ಟೂ ಸಮುದಾಯದ ರಾಜಕೀಯ ಸ್ಥಿತ್ಯಂತರದ ನೆಲೆಗಳನ್ನು ದಾಖಲಿಸುವ ಅಪೂರ್ವ ಅವಕಾಶವೊಂದನ್ನು ಕಳೆದುಕೊಂಡು ಬಿಟ್ಟವೇ ಎನ್ನುವ ಪ್ರಶ್ನೆಯನ್ನೂ ಉಳಿಸುತ್ತವೆ. ಏಕೆಂದರೆ, ಇದನ್ನು ಹಾಗೆ ವಿಸ್ತರಿಸುವ ಶಕ್ತಿ ಮತ್ತು ಆವರಣಗಳೆರಡೂ ಇಲ್ಲಿವೆ ಎನ್ನುವುದು ನಮ್ಮ ಗಮನದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಇತ್ತೀಚಿನ ದಿನಗಳಲ್ಲಿ ಇಂಥ ಅಪ್ಪಟ ನುಡಿಗಟ್ಟಿನ ಬರವಣಿಗೆ, ಇಂಥ ಶಬ್ದಚಿತ್ರಗಳಲ್ಲಿ ಬಂದದ್ದೇ ಇಲ್ಲ ಎನಿಸುವಷ್ಟು ಈ ಕೃತಿ ನುಡಿಗಟ್ಟನ್ನೇ ಸಮುದಾಯವೊಂದರ ವ್ಯಕ್ತಿತ್ವವಾಗಿ ನಮ್ಮೆದುರಿಗೆ ಶಿಲ್ಪವೊಂದರ ಹಾಗೆ ಕಟೆದು ನಿಲ್ಲಿಸುತ್ತದೆ. ಈ ಸ್ಪಷ್ಟತೆ ಮತ್ತು ಚೆಲುವು ಎರಡೂ ಮನಸೆಳೆಯುವಂತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry