ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಲ್‌ಬಾಗ್‌ನಲ್ಲಿ ‘ಸಂಕನ್‌ ಉದ್ಯಾನ’

ತಾವರೆಕೊಳ–ಕಲ್ಯಾಣಿಗೂ ಉಂಟು ಜಾಗ l ಜೌಗು-ಜಲಸಸ್ಯಗಳೇ ಇಲ್ಲಿನ ಆಕರ್ಷಣೆ
Last Updated 12 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಬೆಂಗಳೂರು: ಹಸಿರು ಉಣಿಸುತ್ತಾ ಜನರ ಮನಸ್ಸಿಗೆ ಮುದ ನೀಡುವ ತಾಣವಾಗಿರುವ ಲಾಲ್‌ಬಾಗ್‌ ಸಸ್ಯತೋಟದಲ್ಲಿ ನಿರ್ಮಾಣವಾಗುತ್ತಿದೆ ಅಪರೂಪದ ಜಲ ಹಾಗೂ ಜೌಗು ಸಸ್ಯಗಳ ‘ಸಂಕನ್‌ ಉದ್ಯಾನ’.
 
ಲಾಲ್‌ಬಾಗ್‌ ಪಶ್ಚಿಮ ದ್ವಾರದ ಬಳಿಯ 30 ಎಕರೆ ಪ್ರದೇಶದಲ್ಲಿರುವ ಧನ್ವಂತರಿ ವನದಲ್ಲಿ ಈ ಉದ್ಯಾನ ರೂಪಗೊಳ್ಳುತ್ತಿದೆ. 2.5 ಎಕರೆ ಪ್ರದೇಶದ ತುಂಬ ಹಸಿರು ಹುಲ್ಲಿನ ಹಾಸು, ಕಲ್ಲಿನ ಪೀಠಗಳು, ಕಣ್ಸೆಳೆವ ತಾವರೆಕೊಳ, ಪುಟ್ಟದಾದ ಕಲ್ಯಾಣಿ ಇವುಗಳಿಂದ ಸಂಕನ್‌ ಉದ್ಯಾನ ಕಂಗೊಳಿಸಲಿದೆ.
 
ನೆಲಮಟ್ಟದಿಂದ ಕೆಳಗೆ ಈ ಉದ್ಯಾನವನ್ನು ನಿರ್ಮಿಸುತ್ತಿರುವುದರಿಂದ ಇದನ್ನು ‘ಸಂಕನ್‌ ಉದ್ಯಾನ’ ಎಂದು ಕರೆಯಲಾಗುತ್ತದೆ. ಈ ಉದ್ಯಾನ ಸಂಪೂರ್ಣ ತೇವಾಂಶ ಭರಿತವಾಗಿದ್ದು, ಅಲ್ಲಿನ ವಾತಾವರಣವನ್ನು ಮತ್ತಷ್ಟು ತಂಪುಗೊಳಿಸಲಿದೆ.
 
‘2016ರ ಸೆಪ್ಟೆಂಬರ್‌ನಲ್ಲಿ ಉದ್ಯಾನ ಕಾಮಗಾರಿ ಪ್ರಾರಂಭಗೊಂಡಿದ್ದು, ಶೇ 80ರಷ್ಟು ಕೆಲಸ ಪೂರ್ಣಗೊಂಡಿದೆ. ಆಗಸ್ಟ್‌ ವೇಳೆಗೆ ಉದ್ಯಾನ ಸಿದ್ಧಗೊಳ್ಳುವುದರಿಂದ ಈ ಬಾರಿ ಸ್ವಾತಂತ್ರ್ಯೋತ್ಸವದ ಫಲಪುಷ್ಪ ಪ್ರದರ್ಶನದಲ್ಲಿ ‘ಸಂಕನ್‌ ಉದ್ಯಾನ’ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಲಿದೆ’ ಎಂದು ರಾಜ್ಯ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ. ಎಂ. ಜಗದೀಶ್‌ ಹೇಳಿದರು.
 
‘ಲಾಲ್‌ಬಾಗ್‌ನಲ್ಲಿ ಕೆರೆಯೊಂದರಲ್ಲಿ ಬಿಟ್ಟರೆ ಉದ್ಯಾನದಲ್ಲಿ ಎಲ್ಲಿಯೂ ನೀರು ನಿಲ್ಲಿಸಲು ಅವಕಾಶವಿಲ್ಲ. ಹಾಗಾಗಿ ತೇವಾಂಶ ಭರಿತ ವಾತಾವರಣ ರೂಪಿಸಲು ಈ ಉದ್ಯಾನ ನಿರ್ಮಿಸುತ್ತಿದ್ದೇವೆ. 400ರಿಂದ 500 ಜಾತಿಯ ಜೌಗು ಸಸ್ಯಗಳು ಹಾಗೂ ಸುಮಾರು 250 ಜಾತಿಯ ಜಲಸಸ್ಯಗಳನ್ನು ಈ ಉದ್ಯಾನದಲ್ಲಿ ಬೆಳೆಯುತ್ತೇವೆ’ ಎಂದು ಮಾಹಿತಿ ನೀಡಿದರು.
 
‘ಉದ್ಯಾನದಲ್ಲಿನ ಸಸ್ಯಗಳ ಬಳಿ  ಅವುಗಳ ವೈಜ್ಞಾನಿಕ ಹೆಸರಿರುವ ಫಲಕಗಳನ್ನು ಹಾಕಲಾಗುತ್ತದೆ. ಪ್ರವಾಸಿಗರು ಎಲ್ಲಾ ಸಸ್ಯಗಳ ಬಳಿ ಹೋಗಿ ಅವುಗಳನ್ನು ವೀಕ್ಷಿಸಲು ಅನುವಾಗಲು ದಾರಿಯನ್ನೂ ನಿರ್ಮಿಸಲಾಗುತ್ತದೆ. ಒಟ್ಟು ₹65 ಲಕ್ಷ ವೆಚ್ಚದಲ್ಲಿ ಈ ಉದ್ಯಾನ ನಿರ್ಮಿಸಲಾಗುತ್ತಿದೆ. ಬೊಟಾನಿಕಲ್‌, ಬೋನ್ಸಾಯ್‌, ಟ್ರೋಪಿಕಲ್‌ ಉದ್ಯಾನದ ಜತೆಗೆ ಲಾಲ್‌ಬಾಗ್‌ಗೆ ಈ ಉದ್ಯಾನವೂ ಸೇರಿಕೊಳ್ಳಲಿದೆ’ ಎಂದು ಹೇಳಿದರು.
 
‘ಲಾಲ್‌ಬಾಗ್‌ಗೆ ವಿವಿಧ ಕಡೆಗಳಿಂದ ಸಸ್ಯಗಳನ್ನು ತರಿಸಿಕೊಂಡಿದ್ದೇವೆ.  ಸಂಕನ್‌ ಉದ್ಯಾನಕ್ಕೂ ಸಸ್ಯಗಳ ಶೋಧ ನಡೆಸುತ್ತಿದ್ದೇವೆ. ಕೆಲವು ಅಪರೂಪದ ಜಲಸಸ್ಯಗಳನ್ನು ಇತರೆ ಉದ್ಯಾನಗಳೊಂದಿಗೆ ವಿನಿಮಯ ಮಾಡಿಕೊಳ್ಳುತ್ತೇವೆ.
 
ಖಾಸಗಿ ನರ್ಸರಿಗಳಿಂದ ಕೆಲವು ಸಸ್ಯಗಳನ್ನು ತರುತ್ತೇವೆ. ಹೀಗೆ ಎಲ್ಲೆಲ್ಲಿ ಯಾವ ಯಾವ ಸಸ್ಯಗಳು ದೊರೆಯುತ್ತವೆ ಎಂಬ ಪಟ್ಟಿಯನ್ನು ತಯಾರಿಸಲಾಗುತ್ತಿದೆ’ ಎಂದು ತಿಳಿಸಿದರು. 
 
‘ಲಾಲ್‌ಬಾಗ್‌ನ ಸಸ್ಯತಜ್ಞರ ತಂಡ ಪ್ರತಿವರ್ಷವೂ ಮಳೆಗಾಲದಲ್ಲಿ ಪಶ್ಚಿಮ ಘಟ್ಟಕ್ಕೆ ಭೇಟಿ ನೀಡುತ್ತದೆ. ಅಲ್ಲಿನ ಅಪರೂಪದ ಸಸ್ಯಗಳನ್ನು ತಂದು ಲಾಲ್‌ಬಾಗ್‌ನಲ್ಲಿ ಬೆಳೆಸುವುದು ಈ ಪ್ರವಾಸದ ಉದ್ದೇಶ. ಪಶ್ಚಿಮಘಟ್ಟ, ಲಾಲ್‌ಬಾಗ್‌ ಸಸ್ಯತೋಟದ ಪ್ರಮುಖ ಆಕರ. 
 
ಪ್ರತಿವರ್ಷವೂ ಅಲ್ಲಿನ ಅನೇಕ ಅಪರೂಪದ ಸಸ್ಯತಳಿಗಳು ಲಾಲ್‌ಬಾಗ್‌ ಸಸ್ಯ ಜಗತ್ತಿಗೆ ಸೇರ್ಪಡೆಯಾಗುತ್ತಿರುತ್ತದೆ. ಹಾಗಾಗಿ ಸಸ್ಯಗಳನ್ನು ಹುಡುಕುವುದು ಕಷ್ಟದ ಕೆಲಸವಲ್ಲ’ ಎಂದು ಅವರು ಹೇಳಿದರು.
***
ಯಾವ ಯಾವ ಸಸ್ಯಗಳು ಇರಲಿವೆ?
ಜೌಗು ಪ್ರದೇಶದಲ್ಲಿ ಬೆಳೆಯುವ ಬಜೆ, ಅಲೋಶಿಯ, ಜಲ ಸಸ್ಯಗಳಾದ ನಿಂಫಿಯಾ ಆಲ್ಬಾ (ನೀರಿನಲ್ಲಿ ಬೆಳೆಯುವ ಲಿಲಿ ಹೂವಿನ ಒಂದು ಜಾತಿ), ಫ್ಲೋಟಿಂಗ್ ಹಾರ್ಟ್ , ತಾವರೆ, ಯೆಲ್ಲೋ ಪಾಂಡ್ ಲಿಲ್ಲಿ (ನೀರ ಮೇಲೆ ತೇಲುವ ಹಳದಿ ಹೂ), ಟೈಫಾ ಹುಲ್ಲನ್ನು ಇಲ್ಲಿ ಕಾಣಬಹುದು.
***
ನೀರಿನ ನಿರ್ವಹಣೆ
240 ಎಕರೆ ವಿಸ್ತೀರ್ಣದ ಈ ಉದ್ಯಾನಕ್ಕೆ ಸಮರ್ಪಕವಾಗಿ ನೀರಿನ ನಿರ್ವಹಣೆ ದೊಡ್ಡ ಸವಾಲು. ಇಲ್ಲಿರುವ ಕೆರೆ, ಒಂಬತ್ತು ಕೊಳವೆ ಬಾವಿಗಳು ಹಾಗೂ ಶುದ್ಧೀಕರಿಸಿದ ನೀರನ್ನು ಉದ್ಯಾನಕ್ಕೆ ಉಣಿಸಲಾಗುತ್ತಿದೆ. 
 
‘ಬೇಸಿಗೆಯಲ್ಲೂ  ಲಾಲ್‌ಬಾಗ್‌ನಲ್ಲಿನ ಸಸ್ಯಗಳಿಗೆ, ಪಕ್ಷಿಗಳಿಗೆ ಯಾವುದೇ ರೀತಿಯ ನೀರಿನ ಅಭಾವ ಉಂಟಾಗಿಲ್ಲ. ಉದ್ಯಾನಕ್ಕೆ ಬೇಕಾದಷ್ಟು ನೀರು ಲಭ್ಯವಿದೆ’ ಎಂದು ಜಗದೀಶ್‌ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT