ಗುರುವಾರ , ಆಗಸ್ಟ್ 18, 2022
25 °C

ಬಾಂಬುಗಳ ಮಹಾತಾಯಿಗೆ 36 ಉಗ್ರರ ಬಲಿ

ಪಿಟಿಐ Updated:

ಅಕ್ಷರ ಗಾತ್ರ : | |

ಬಾಂಬುಗಳ ಮಹಾತಾಯಿಗೆ 36 ಉಗ್ರರ ಬಲಿ

ವಾಷಿಂಗ್ಟನ್: ‘ಆಫ್ಘಾನಿಸ್ತಾನದ ನಂಗರ್‌ಹಾರ್‌ ಪ್ರಾಂತದ ಅಚಿನ್‌ನಲ್ಲಿ ಇಸ್ಲಾಮಿಕ್ ಸ್ಟೇಟ್‌ (ಐಎಸ್) ಉಗ್ರರ ಅಡಗುದಾಣದ ಮೇಲೆ ಗುರುವಾರ ನಡೆಸಿದ್ದ ಬಾಂಬ್‌ ದಾಳಿಯಲ್ಲಿ 36 ಐಎಸ್ ಉಗ್ರರು ಬಲಿಯಾಗಿದ್ದಾರೆ. ಜತೆಗೆ ಉಗ್ರರು ನೆಲೆಸಿದ್ದ ಹಲವು ಸುರಂಗಗಳು ನಾಶವಾಗಿವೆ’ ಎಂದು ಅಮೆರಿಕ ರಕ್ಷಣಾ ಸಚಿವಾಲಯ ತಿಳಿಸಿದೆ.

ವಿಶ್ವದ ಎರಡನೇ ದೊಡ್ಡ ಸಾಂಪ್ರದಾಯಿಕ ಬಾಂಬ್‌ ಆಗಿರುವ ‘ಮ್ಯಾಸಿವ್ ಆರ್ಡಿನೆನ್ಸ್ ಏರ್‌ ಬ್ಲಾಸ್ಟ್– ಎಂಒಎಬಿ’ ಯನ್ನು ಈ ದಾಳಿಗೆ ಅಮೆರಿಕ ಬಳಸಿತ್ತು.  ಭಾರಿ ತೂಕ ಮತ್ತು ಭಾರಿ ಪರಿಣಾಮ ಬೀರುವ ಕಾರಣ ಇದನ್ನು ಬಾಂಬುಗಳ ಮಹಾತಾಯಿ (ಮದರ್ ಆಫ್ ಆಲ್ ಬಾಂಬ್ಸ್) ಎಂದೂ ಕರೆಯಲಾಗುತ್ತದೆ.‘ನಂಗರ್‌ಹಾರ್‌ ಪ್ರಾಂತದ ಗುಡ್ಡಗಾಡುಗಳಲ್ಲಿ ಇದ್ದ ನಾಗರಿಕರನ್ನು ತೆರವು ಮಾಡಿ ಐಎಸ್‌ ಉಗ್ರರು ಅಡಗುದಾಣಗಳನ್ನು ನಿರ್ಮಿಸಿಕೊಂಡಿದ್ದಾರೆ. ಸುರಂಗಗಳಲ್ಲಿ ನೆಲೆಸಿರುವ ಉಗ್ರರನ್ನು ಪತ್ತೆ ಮಾಡುವುದು ಕಷ್ಟ. ಆದರೆ, ಉಗ್ರರು ಅಮೆರಿಕ ಮತ್ತು ಆಫ್ಘನ್ ಸೈನಿಕರ ಮೇಲೆ  ಸುಲಭವಾಗಿ ದಾಳಿ ಮಾಡಲು ಸಾಧ್ಯವಿದೆ. ಹೀಗಾಗಿ ಈ ಸುರಂಗಗಳನ್ನು  ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ’ ಎಂದು ಅಮೆರಿಕ ತಿಳಿಸಿದೆ.‘ಇದು ಭಾರಿ ಬಾಂಬ್ ಆದರೂ, ಸ್ಫೋಟದ ಸಂದರ್ಭದಲ್ಲಷ್ಟೇ ಹಾನಿ ಮಾಡುತ್ತದೆ. ನೆಲಮಟ್ಟದಿಂದ ಭಾರಿ ಆಳದಲ್ಲಿರುವ ಸುರಂಗಗಳನ್ನು ಬೇರೆ ಸಾಂಪ್ರದಾಯಿಕ ಬಾಂಬ್‌ಗಳಿಂದ ನಾಶ ಮಾಡಲು ಸಾಧ್ಯವಿಲ್ಲ. ಆದರೆ ಆಳದ ಸುರಂಗಗಳನ್ನೂ ನಾಶ ಮಾಡುವ ರೀತಿಯಲ್ಲಿ ಎಂಒಎಬಿ ಅಭಿವೃದ್ಧಿಪಡಿಸಲಾಗಿದೆ. ಹೀಗಾಗಿ ಈ ಬಾಂಬ್‌ ಬಳಸಿದ್ದೇವೆ. ಈ ಅಡಗುದಾಣಗಳಲ್ಲಿ ಸುಮಾರು 900 ಜನ ಉಗ್ರರು ನೆಲೆಸಿದ್ದರು ಎಂದು ನಮ್ಮ ಮೂಲಗಳು ಖಚಿತಪಡಿಸಿದ್ದವು. ಈ ದಾಳಿಯಲ್ಲಿ ಇನ್ನೂ ಹಲವು ಉಗ್ರರು ಮೃತಪಟ್ಟಿರಬಹುದು. ಆಸ್ತಿ–ಪಾಸ್ತಿಗೆ ಆಗಿರುವ ಹಾನಿಯ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ’ ಎಂದು ಅಮೆರಿಕ ಹೇಳಿದೆ.ಸೇನೆ ಬಗ್ಗೆ ಹೆಮ್ಮೆಯಿದೆ: ಟ್ರಂಪ್‌ ಅಭಿನಂದನೆ

‘ಇದು ನಿಜವಾಗಲೂ ಮತ್ತೊಂದು ಯಶಸ್ವಿ ಕಾರ್ಯಾಚರಣೆ. ನಮ್ಮ ಸೇನೆಯ ಬಗ್ಗೆ ನಮಗೆ ಹೆಮ್ಮೆ ಇದೆ’ ಎಂದು ಅಮೆರಿಕ ಸೇನೆಯನ್ನು ಅಧ್ಯಕ್ಷ ಡೋನಾಲ್ಡ್‌  ಟ್ರಂಪ್‌ ಅಭಿನಂದಿಸಿದ್ದಾರೆ.‘ಸೇನೆಗೆ ನಾನು ಪೂರ್ಣ ಪ್ರಮಾಣದ ಅಧಿಕಾರ ನೀಡಿದ್ದರಿಂದ ಇಂಥ ದಾಳಿ ನಡೆಸಲು ಸಾಧ್ಯವಾಗಿದೆ. ಸೇನೆಯ ಅಧಿಕಾರಿಗಳು ತಮ್ಮ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಕಳೆದ ಎಂಟು ವಾರಗಳಲ್ಲಿ ಸೇನೆಯ ಸಾಧನೆ ಹಾಗೂ ಹಿಂದಿನ ಎಂಟು ವರ್ಷಗಳಲ್ಲಿನ ಸಾಧನೆ  ಏನು ಎಂಬುದನ್ನು ನೋಡಿ. ತುಂಬಾ ವ್ಯತ್ಯಾಸಗಳು ಕಾಣಿಸುತ್ತದೆ’ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

‘ಐಎಸ್‌ ವಿರುದ್ಧದ ಕಾರ್ಯಾಚರಣೆ ಉತ್ತರ ಕೊರಿಯಾಕ್ಕೆ ಸ್ಪಷ್ಟ ಸಂದೇಶ ರವಾನಿಸಿದೆಯೇ ಎಂಬುದು ನನಗೆ ಗೊತ್ತಿಲ್ಲ. ಅವರಿಗೆ ಸಂದೇಶ, ಹೊಗಲಿ, ಬಿಡಲಿ ಏನೂ ವ್ಯತ್ಯಾಸ ಆಗದು’ ಎಂದಿದ್ದಾರೆ.ಕೇರಳದ ವ್ಯಕ್ತಿ ಬಲಿ

ಕಾಸರಗೋಡು:
ಮಧ್ಯಪ್ರಾಚ್ಯ ರಾಷ್ಟ್ರದಿಂದ ನಾಪತ್ತೆಯಾಗಿ, ಐಎಸ್‌ ಸಂಘಟನೆ ಸೇರಿದ್ದಾನೆ ಎಂದು ಶಂಕಿಸಲಾದ ಇಲ್ಲಿನ ಪಡನ್ನ ನಿವಾಸಿ ಆಫ್ಘಾನಿಸ್ತಾನದಲ್ಲಿ ಬಾಂಬ್‌ ದಾಳಿಗೆ ಬಲಿಯಾಗಿದ್ದಾನೆ.

‘ಅಫ್ಘಾನಿಸ್ತಾನದ ನಂಗರ್‌ಹಾರ್‌ ಪ್ರಾಂತ್ಯದಲ್ಲಿ ಅಮೆರಿಕ ನಡೆಸಿದ ಬಾಂಬ್‌ ದಾಳಿಯಲ್ಲಿ  ಮುರ್ಷಿದ್‌ ಮೊಹಮ್ಮದ್‌ (23) ಸಾವನ್ನಪ್ಪಿದ್ದಾನೆ ಎಂದು ಸಾಮಾಜಿಕ ಜಾಲತಾಣ ಟೆಲಿಗ್ರಾಂನಿಂದ ಸಂದೇಶ ಬಂದಿದೆ. ಕಾಸರಗೋಡು ಜಿಲ್ಲೆಯ ತ್ರಿಕರಿಪುರ ಮತ್ತು ಪಡನ್ನ ಪ್ರದೇಶದ 17 ಮಂದಿ ಸೇರಿ ಕೇರಳದ ಒಟ್ಟು  21 ಮಂದಿ ಕಳೆದ ವರ್ಷ  ನಾಪತ್ತೆಯಾಗಿದ್ದರು. ಇವರು ಸಿರಿಯಾಕ್ಕೆ ತೆರಳಿ ಐಎಸ್‌ ಸೇರಿರಬಹುದು ಎಂದು ಶಂಕಿಸಲಾಗಿತ್ತು.ಈ ತಂಡ ಅಫ್ಘಾನಿಸ್ತಾನದ ನಂಗರ್‌ಹಾರ್‌ ಪ್ರಾಂತ್ಯದಲ್ಲಿ ನೆಲೆಸಿರುವುದು ಬಳಿಕ ಖಚಿತವಾಗಿತ್ತು. ನಾಪತ್ತೆಯಾದ ತಂಡದ ಅಶ್ಫಾಕ್‌ ಎಂಬಾತ ಮುಂಬೈಯಲ್ಲಿರುವ ಮೃತನ ತಂದೆಗೆ ಮತ್ತು ಪಡನ್ನದಲ್ಲಿರುವ ಸಂಬಂಧಿಕರೊಬ್ಬರಿಗೆ ಮುರ್ಷಿದ್‌ ಮೊಹಮ್ಮದ್‌ ಮೃತಪಟ್ಟಿರುವ ಸಂದೇಶ ಕಳುಹಿಸಿದ್ದಾನೆ ಎಂದು ಗೊತ್ತಾಗಿದೆ.ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.