ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಟ್ಸ್‌ಆ್ಯಪ್‌ನಲ್ಲಿ ಐಎಸ್‌ ಪರ ಸಂದೇಶ

Last Updated 7 ಮೇ 2017, 19:30 IST
ಅಕ್ಷರ ಗಾತ್ರ

ತಿರುವನಂತಪುರ: ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್‌ ಸ್ಟೇಟ್‌ನ (ಐಎಸ್‌) ಸಿದ್ಧಾಂತಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚುರ ಪಡಿಸಲು ಯತ್ನಿಸುತ್ತಿದ್ದ ಶಂಕಿತ ಪ್ರಕರಣ ಕಾಸರಗೋಡಿನಲ್ಲಿ ಬೆಳಕಿಗೆ ಬಂದಿದೆ.

ವಾಟ್ಸ್‌ಆ್ಯಪ್‌ ಗುಂಪೊಂದರಲ್ಲಿ  ಬಂದ ಐಎಸ್‌ ಪರ ಸಂದೇಶಗಳ ಕುರಿತಾಗಿ ಕಾಸರಗೋಡಿನ ಹ್ಯಾರಿಸ್‌ ಮಸ್ತಾನ್‌ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ.

‘ಮೆಸೇಜ್‌ ಟು ಕೇರಳ’ ಎಂಬ ವಾಟ್ಸ್‌ ಆ್ಯಪ್‌ ಗುಂಪಿಗೆ ಹ್ಯಾರಿಸ್‌ ಅವರನ್ನು ಯಾರೋ ಸೇರ್ಪಡೆಗೊಳಿಸಿದ್ದರು. ಈ ಗುಂಪಿನಲ್ಲಿ ಜಿಹಾದ್‌ ಅನ್ನು ಹೊಗಳಿ ಸಂದೇಶಗಳು ಬರುತ್ತಿದ್ದವು. ಆ ಗುಂಪಿನ ನಿರ್ವಾಹಕನ ಬಳಿ ಗುಂಪಿನ ಬಗ್ಗೆ ವಿವರಗಳನ್ನು ಕೇಳಿದಾಗ, ಮಲಯಾಳದಲ್ಲಿ ಧ್ವನಿ ಸಂದೇಶಗಳನ್ನು ಕಳುಹಿಸಿದ ಎಂದು ದೂರಿನಲ್ಲಿ ಹ್ಯಾರಿಸ್‌ ತಿಳಿಸಿದ್ದಾರೆ.

‘ಗುಂಪಿನ ನಿರ್ವಾಹಕ ಆಫ್ಘಾನಿಸ್ತಾನದ ಮೊಬೈಲ್‌ ಸಂಖ್ಯೆಯನ್ನು ಬಳಸುತ್ತಿರುವ ಸಂಗತಿ ನಂತರ ಗೊತ್ತಾಯಿತು’ ಎಂದು ಹ್ಯಾರಿಸ್  ತಿಳಿಸಿದ್ದಾರೆ.
ಧ್ವನಿ ಸಂದೇಶದಲ್ಲಿ ಒಬ್ಬ ತನ್ನನ್ನು ಅಬ್ದುಲ್‌ ರಶೀದ್‌ ಎಂದು ಗುರುತಿಸಿಕೊಂಡಿದ್ದಾನೆ. 2016ರಲ್ಲಿ ಕೇರಳದಿಂದ ಕಣ್ಮರೆಯಾಗಿ, ಐಎಸ್‌ ಸೇರಿದ್ದಾರೆ ಎನ್ನಲಾದ 22 ಜನರಲ್ಲಿ ಈತನೂ ಒಬ್ಬ. ಐಎಸ್‌ ನೇಮಕದ ಬಗ್ಗೆ ರಾಷ್ಟ್ರೀಯತನಿಖಾ ಸಂಸ್ಥೆ (ಎನ್‌ಐಎ) ಬಿಡುಗಡೆಗೊಳಿಸಿದ್ದ ಮಾಹಿತಿಯನ್ನು ಧ್ವನಿ ಸಂದೇಶದಲ್ಲಿ ಆತ ನಿರಾಕರಿಸಿದ್ದಾನೆ.

ತನಿಖೆ?: ಶಂಕಿತ ವಾಟ್ಸ್‌ಆ್ಯಪ್‌ ಅಭಿಯಾನದ ಬಗ್ಗೆ ಎನ್‌ಐಎ ತನಿಖೆ ಆರಂಭಿಸಿದೆ ಎಂದು ಗೊತ್ತಾಗಿದೆ.

ಅಬು ಇಸಾ ಎಂಬಾತ ‘ಮೆಸೇಜ್‌ ಟು ಕೇರಳ’ ಗುಂಪಿನ ನಿರ್ವಾಹಕನಾಗಿದ್ದಾನೆ. ಇಸಾ, ಪಾಲಕ್ಕಾಡ್‌ ನಿವಾಸಿಯಾಗಿರುವ ಸಾಧ್ಯತೆಯಿದ್ದು, ನಾಪತ್ತೆಯಾಗಿರುವವರ ಪೈಕಿ ಒಬ್ಬನಾಗಿರಬಹುದು ಎಂದು ಶಂಕಿಸಲಾಗಿದೆ.

ಕಾಶ್ಮೀರದಲ್ಲಿ ನೆಲೆ ಸೃಷ್ಟಿಗೆ ಯತ್ನ
ಶ್ರೀನಗರ: ಉಗ್ರಗಾಮಿ ಸಂಘಟನೆ ಐಎಸ್‌, ಕಾಶ್ಮೀರ ಕಣಿವೆಯಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿರುವ ಸಾಧ್ಯತೆ ಇದೆ ಎಂದು ಭದ್ರತಾ ಸಂಸ್ಥೆಗಳು ಹೇಳಿವೆ.

ಕಾಶ್ಮೀರದ ಕೆಲವು ಯುವಕರು ಸಿರಿಯಾ ಮತ್ತು ಇರಾಕ್‌ನಲ್ಲಿರುವ ಐಎಸ್‌ ಉಗ್ರರ ಜತೆ ಸಂಪರ್ಕ ಸಾಧಿಸುತ್ತಿರುವುದು ಕಳೆದ ಆರು ತಿಂಗಳಲ್ಲಿ ಹೆಚ್ಚಾಗಿದೆ. ಇಂತಹ ಯುವಕರು ಇರುವ ಕೆಲವು ಪ್ರದೇಶಗಳನ್ನು ಗುರುತಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪುಲ್ವಾಮದಲ್ಲಿರುವ ಹಿಜ್ಬುಲ್‌ ಮುಜಾಹಿದ್ದೀನ್‌ ಉಗ್ರನೊಬ್ಬನ ಗೋರಿ ಬಳಿ, ಮುಖವಾಡ ಧರಿಸಿದ್ದ ಬಂದೂಕುಧಾರಿಗಳಿಬ್ಬರು ಕಳೆದ ತಿಂಗಳು ಕಾಣಿಸಿಕೊಂಡಿದ್ದರು.
‘ತಾಲಿಬಾನ್‌ ಮತ್ತು ಐಎಸ್‌ನ ನಿಯಮಗಳನ್ನು ಪಾಲಿಸಬೇಕು. ಪಾಕಿಸ್ತಾನವನ್ನು ಬೆಂಬಲಿಸಬಾರದು ಮತ್ತು ಆ ದೇಶದ ಪರ ಘೋಷಣೆಗಳನ್ನು ಕೂಗಬಾರದು’ ಎಂದು ಅಲ್ಲಿ ಸೇರಿದ್ದ ಜನರಲ್ಲಿ ಬಂದೂಕುಧಾರಿಗಳು ಹೇಳಿದ್ದರು.

ಮೂರು ನಿಮಿಷದ ಭಾಷಣದಲ್ಲಿ ಅವರು ಇಸ್ಲಾಮೀಕರಣ ಮತ್ತು ಷರಿಯತ್‌ ಕಾನೂನು ಅನುಸರಿಸುವ ಬಗ್ಗೆ ಮಾತನಾಡಿದ್ದರು.

ಕಾಶ್ಮೀರದಲ್ಲಿ ಐಎಸ್‌ ನೆಲೆ ಕಂಡುಕೊಳ್ಳಲು ಯತ್ನಿಸುತ್ತಿದೆ ಎಂಬುದನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರಗಾಮಿ ಸಂಘಟನೆಗಳ ಒಕ್ಕೂಟ ಯುನೈಟೆಡ್‌ ಜಿಹಾದ್‌ ಕೌನ್ಸಿಲ್‌ ಮತ್ತು ಕಾಶ್ಮೀರದ ಉಗ್ರಗಾಮಿ ಸಂಘಟನೆ ಹಿಜ್ಬುಲ್‌ ಮುಜಾಹಿದ್ದೀನ್‌ ತಳ್ಳಿಹಾಕಿವೆ. ಆದರೆ ಭದ್ರತಾ ಪಡೆಗಳು ಇದನ್ನು ಗಂಭೀರವಾಗಿ ಪರಿಗಣಿಸಿವೆ. ಐಎಸ್‌ ಪ್ರಭಾವ ಹೆಚ್ಚುತ್ತಿರುವುದನ್ನು ತಡೆಯದೇ ಇದ್ದರೆ ಅದು ಕಣಿವೆಯ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲಿದೆ ಎಂದು ಮೂಲಗಳು ತಿಳಿಸಿವೆ.

ಕಾಶ್ಮೀರದಿಂದ ಅಂತರ್ಜಾಲದ ಮೂಲಕ ಇರಾಕ್‌ ಮತ್ತು ಸಿರಿಯಾದಲ್ಲಿರುವವರನ್ನು ಸಂಪರ್ಕಿಸುತ್ತಿರುವವರ ಮೇಲೆ ಭದ್ರತಾ ಪಡೆಗಳು ಕಣ್ಣಿಟ್ಟಿವೆ. 2014, 2015 ಮತ್ತು 2016ರ ಮಧ್ಯಭಾಗದವರೆಗೆ ಇಂತಹ ಕೆಲವೇ ಪ್ರಕರಣಗಳು ಪತ್ತೆಯಾಗಿವೆ. ಈ ವರ್ಷದ ಆರಂಭದಿಂದ ನೂರಕ್ಕೂ ಹೆಚ್ಚು ಜನರು ಇರಾಕ್‌ ಮತ್ತು ಸಿರಿಯಾದಲ್ಲಿರುವವರ ಜತೆ ಸಂವಹನ ನಡೆಸುತ್ತಿರುವುದು ಪತ್ತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT