ಗರ್ಭಿಣಿ ಬಾನು ಬೇಗಂ ಸಜೀವ ದಹನ

7
ತಾಯಿ, ತಮ್ಮ ಸೇರಿ ನಾಲ್ವರ ಬಂಧನ

ಗರ್ಭಿಣಿ ಬಾನು ಬೇಗಂ ಸಜೀವ ದಹನ

Published:
Updated:
ಗರ್ಭಿಣಿ ಬಾನು ಬೇಗಂ ಸಜೀವ ದಹನ

ವಿಜಯಪುರ: ಮುದ್ದೇಬಿಹಾಳ ತಾಲ್ಲೂಕು ಗುಂಡಕನಾಳ ಗ್ರಾಮದಲ್ಲಿ ಶನಿವಾರ ಸಂಜೆ ಮುಸ್ಲಿಂ ಯುವತಿಯೊಬ್ಬಳನ್ನು ಆಕೆಯ ಮನೆಯವರೇ ಸಜೀವವಾಗಿ ದಹಿಸಿದ್ದಾರೆ.

ಮನೆಯವರ ತೀವ್ರ ವಿರೋಧದ ನಡುವೆ, ವಾಲ್ಮೀಕಿ ಸಮುದಾಯಕ್ಕೆ ಸೇರಿದ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಬಾನು ಬೇಗಂ (21) ಕೊಲೆಯಾದ ಯುವತಿ.

ಮನೆಯವರ ವಿರೋಧ ಇದ್ದುದರಿಂದ ತಾನು ಪ್ರೀತಿಸಿದ್ದ ಸಾಯಬಣ್ಣ ಕೊಣ್ಣೂರ ಜೊತೆಗೆ ಗೋವಾಕ್ಕೆ ಹೋಗಿದ್ದಳು. ಇಬ್ಬರೂ ಇತ್ತೀಚೆಗಷ್ಟೇ ಗ್ರಾಮಕ್ಕೆ ಮರಳಿದ್ದರು ಎನ್ನಲಾಗಿದೆ.

ಗರ್ಭಿಣಿಗೆ ಇರಿದು, ಸುಟ್ಟರು: ‘ಯುವತಿಯ ತಾಯಿ, ಅಕ್ಕಂದಿರು, ಅಣ್ಣ–ತಮ್ಮಂದಿರು, ಭಾವ ಸೇರಿಕೊಂಡು ದಂಪತಿ ವಾಸಿಸುತ್ತಿದ್ದ ಮನೆಗೆ ನುಗ್ಗಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಸಾಯಬಣ್ಣನ ಮೇಲೆ ಬಡಿಗೆಯಿಂದ ಹಲ್ಲೆ ನಡೆಸಿ, ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಬಳಿಕ ಬಾನು ಬೇಗಂ ಗರ್ಭಿಣಿ ಎಂಬುದನ್ನು ತಿಳಿದು ಆಕೆಯ ಮೇಲೂ ಹಲ್ಲೆ ನಡೆಸಿ, ಚಾಕುವಿನಿಂದ ಇರಿದಿದ್ದಾರೆ. ನಂತರ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಸಜೀವವಾಗಿ ಸುಟ್ಟಿದ್ದಾರೆ. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಸಾಯಬಣ್ಣನ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಬಸವನಬಾಗೇವಾಡಿ ಡಿವೈಎಸ್‌ಪಿ ಪ್ರಭುಗೌಡ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ತಾಯಿ ರಮ್ಜಾನ್‌ ಬಿ ಅತ್ತಾರ, ಅಕ್ಕ ದಾವಲ್‌ ಬಿ ಅಲಿಯಾಸ್‌ ಸಲ್ಮಾ ಅತ್ತಾರ, ಭಾವ ಜಿಲಾನಿ ದಖನಿ, ತಮ್ಮ ಅಕ್ಬರ್‌ ಅತ್ತಾರ್‌ ಎಂಬುವವರನ್ನು ಬಂಧಿಸಲಾಗಿದೆ. ಇಬ್ಬರು ಅಕ್ಕಂದಿರು, ಅಣ್ಣಂದಿರಾದ ಇಬ್ರಾಹಿಂ, ಇಮಾಮ್‌ ತಲೆಮರೆಸಿಕೊಂಡಿದ್ದಾರೆ ಎಂದರು.

ಮುಖ್ಯಾಂಶಗಳು

* ತಾಯಿ, ಅಕ್ಕ–ತಮ್ಮಂದಿರಿಂದಲೇ ಕೃತ್ಯ

* ಯುವಕನ ಮೇಲೂ ಹಲ್ಲೆ

* ಕೆಲ ಆರೋಪಿಗಳು ಪರಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry