ನಿಲ್ಲದ ಮಳೆ: ಮುಂದುವರಿದ ಹಾನಿ

7

ನಿಲ್ಲದ ಮಳೆ: ಮುಂದುವರಿದ ಹಾನಿ

Published:
Updated:
ನಿಲ್ಲದ ಮಳೆ: ಮುಂದುವರಿದ ಹಾನಿ

ಮೂಲ್ಕಿ: ಮೂರು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಮೂಲ್ಕಿ ಬಳಿಯ ಕಾರ್ನಾಡು ಹರಿಹರ ದೇವಸ್ಥಾನ ದ ಸುಖಾನಂದ ನಗರ ಪ್ರದೇಶದಲ್ಲಿ ರಸ್ತೆಯೊಂದು ಕುಸಿದಿರುವುದರಿಂದ ಮನೆ ಆವರಣ ಗೋಡೆಯೂ ಅಪಾಯದಲ್ಲಿದೆ.

ಈ ರಸ್ತೆಗೆ ಕೆಲವು ತಿಂಗಳ ಹಿಂದೆ ಯಷ್ಟೇ ಮೂಲ್ಕಿ ಪಟ್ಟಣ ಪಂಚಾಯಿತಿ ಯು ಸಂಪರ್ಕಕ್ಕಾಗಿ ಇಂಟರ್ ಲಾಕ್ ಹಾಕಲಾಗಿತ್ತು. ರಸ್ತೆಯ ಕುಸಿತದಿಂದ ಮನೆಯೊಂದರ ಆವರಣ ಗೋಡೆಗೆ ಹಾನಿಯಾಗಿದೆ. ಮಳೆಯು ಹೆಚ್ಚಾದಲ್ಲಿ ಕುಸಿತದ ಪ್ರಮಾಣವು ಹೆಚ್ಚಾಗುತ್ತಿದೆ. ಹತ್ತಿರದಲ್ಲಿರುವ ವಿದ್ಯುತ್ ಪರಿವರ್ತಕ ಕ್ಕೂ ಹಾನಿಯಾಗುವ ಭೀತಿ ಇದೆ.

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಪಟ್ಟಣ ಪಂಚಾಯಿತಿ ಸದಸ್ಯ ಹರ್ಷರಾಜ್ ಶೆಟ್ಟಿ, ರಸ್ತೆ ನಿರ್ಮಾ ಣದ ಸಂದರ್ಭ ಮಳೆ ನೀರು ಸಮರ್ಪಕವಾಗಿ ಇಳಿದುಹೋಗಲು ವ್ಯವಸ್ಥೆ ಮಾಡಿರದ ಕಾರಣ ಆವರಣ ಗೋಡೆಯ ಸಹಿತ ರಸ್ತೆ ಕುಸಿದು ಹೋಗಲು ಕಾರಣವಾಗಿದೆ ಎಂದು ತಿಳಿಸಿದರು.ಈ ರಸ್ತೆಯ ಕುಸಿತ ಹಾಗೂ ಮನೆ ಯೊಂದರ ಆವರಣ ಗೋಡೆ ಬಿದ್ದಿರುವ ಪರಿಣಾಮ ಲಕ್ಷಾಂತರ ನಷ್ಟ ಉಂಟಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ನಿವೇಶನಕ್ಕೆ ನುಗ್ಗಿದ ನೀರು

ಪುತ್ತೂರು: ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಪುತ್ತೂರು ನಗರ ಸಭೆಯ ವ್ಯಾಪ್ತಿಯಲ್ಲಿ ಮೂರು ಮನೆಗಳಿಗೆ ಹಾನಿಯಾಗಿದೆ. ಪುತ್ತೂರು ನಗರದ ಸಾಮೆತ್ತಡ್ಕ ಎಂಬಲ್ಲಿ ಪಕ್ಕದ ಧರೆ ಕುಸಿದ ಪರಿಣಾಮ ವಾಗಿ ಲವಕುಮಾರ್ ಎಂಬವರ ಮನೆಗೆ ಹಾನಿಯಾಗಿದೆ. ಮಳೆ ಮುಂದುವರಿದಲ್ಲಿ ಧರೆ ಮತ್ತಷ್ಟು ಕುಸಿದು ಹೆಚ್ಚಿನ ಹಾನಿ ಸಂಭವಿಸುವ ಅಪಾಯ ಎದುರಾಗಿದೆ. ಸಾಮೆತ್ತಡ್ಕದಲ್ಲಿ ಪಕ್ಕದ ಜಮೀನಿಗೆ ತುಂಬಿದ್ದ ಮಣ್ಣು ನೀರಿನೊಂದಿಗೆ ಕೊಚ್ಚಿಕೊಂಡು ಬಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರ ನಿವೇಶನಕ್ಕೆ ನುಗ್ಗಿದ ಪರಿಣಾಮವಾಗಿ ಆವರಣಗೋಡೆ ಕುಸಿದಿದೆ.

ಪುತ್ತೂರು ನಗರದ ಹೊರವಲಯ ದ ಪರ್ಲಡ್ಕ ಜಂಕ್ಷನ್ ಬಳಿ ರಾಧಾಕೃಷ್ಣ ಎಂಬವರ ಮನೆಯಂಗಳ ಕುಸಿದಿದ್ದು, ಮನೆಗೆ ಹಾನಿಯಾಗಿರುವುದಾಗಿ ತಿಳಿದು ಬಂದಿದೆ.  ಪುತ್ತೂರು ಬೈಪಾಸ್‌ನಲ್ಲಿ ಹೆದ್ದಾರಿ ಮೋರಿ ಮತ್ತು ಚರಂಡಿ ಮುಚ್ಚಿದ ಪರಿಣಾಮ ಈ ಪ್ರದೇಶದಲ್ಲಿ ಕೃತಕ ನೆರೆ ಹಾವಳಿ ಎದುರಾಗಿದೆ. ನೀರು ತುಂಬಿಕೊಂಡಿರುವುದರಿಂದ ಈ ಭಾಗದ ಮನೆಗಳು ಕುಸಿಯುವ ಅಪಾಯ ಎದುರಾಗಿದೆ. ನಗರಸಭೆ ಸಿಬ್ಬಂದಿ ತಾತ್ಕಾಲಿಕವಾಗಿ ಚರಂಡಿ ಹೂಳೆತ್ತುವ ಹಾಗೂ ಸೆಸ್ ಟ್ಯಾಂಕ್ ಮೂಲಕ ನೀರು ಖಾಲಿ ಮಾಡಿಸುವ ಪ್ರಯತ್ನ ನಡೆಸಿದ್ದಾರೆ.

ಹಾನಿಯಾದ ಸ್ಥಳಗಳಿಗೆ ನಗರಸಭೆ ಯ ಅಧ್ಯಕ್ಷೆ ಜಯಂತಿ ಬಲ್ನಾಡು, ಸದಸ್ಯ ಎಚ್.ಮಹಮ್ಮದ್ ಆಲಿ ಭೇಟಿ ನೀಡಿ, ಪರಿಹಾರ ಕಾರ್ಯಕ್ಕೆ ಪ್ರಯತ್ನಿಸಿದ್ದಾರೆ. ಜಮೀನಿಗೆ ತುಂಬಿದ ಮಣ್ಣು: ಕಳೆದ ಎರಡು ದಿನಗಳಿಂದ ಎಡಬಿಡದೆ ಸುರಿದ ಮಳೆಯಿಂದಾಗಿ ಪಕ್ಕದ ಜಮೀನಿಗೆ ತುಂಬಲಾಗಿದ್ದ ಮಣ್ಣು ನೀರಿನೊಂದಿಗೆ ಕೊಚ್ಚಿಕೊಂಡು ಬಂದು ಪುತ್ತೂರು ನಗರದ ಸಾಮೆತ್ತಡ್ಕದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಿವೇಶನಕ್ಕೆ ನುಗ್ಗಿದ ಪರಿಣಾಮವಾಗಿ ಆವರಣ ಗೋಡೆ ಕುಸಿದು ಬಿದ್ದಿದೆ.

ಸಾಮೆತ್ತಡ್ಕ ರಸ್ತೆ ಸಮೀಪವೇ ಸಹಾಯಕ ಅರಣ್ಯ ಸಂರಕ್ಷಣಾಧಿ ಕಾರಿಯವರ ನಿವೇಶನವಿದೆ. ಇದರ ಬಲಭಾಗದಲ್ಲಿನ ಜಮೀನು ಸುಮಾರು 30 ಅಡಿ ಆಳವಿತ್ತು. ಈ ಜಮೀನನ್ನು ಸಮತಟ್ಟು ಮಾಡಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕೈಗೊಂಡ ಕಾಮಗಾರಿ ಇದೀಗ  ಸಮಸ್ಯೆ ಸೃಷ್ಟಿಸಿದೆ. ಮೇಲ್ಭಾಗದಿಂದ ಹರಿದು ಬಂದ ಮಳೆನೀರು ಈ ಜಮೀನಿನಲ್ಲಿ ಪೂರ್ತಿಯಾಗಿ ತುಂಬಿ, ಮಣ್ಣಿನೊಂದಿಗೆ ಕೆಳಭಾಗಕ್ಕೆ ನುಗ್ಗಿದ ಪರಿಣಾಮವಾಗಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರ ಮನೆಯ ಆವರಣಗೋಡೆ ಕುಸಿದಿದೆ. ಮಣ್ಣು ಆವರಣದೊಳಗೆ ಪ್ರವೇಶಿಸಿದೆ.

ಆಳವಾಗಿರುವ ಜಮೀನಿಗೆ ನಿವೇಶನದ ಕಾಂಪೌಂಡ್ ಹಾಗೂ ರಸ್ತೆ ಸಮಕ್ಕೆ ಮಣ್ಣು ತುಂಬಿ ಸುಮಾರು 30 ಅಡಿ ಆಳವನ್ನು ಪೂರ್ತಿಯಾಗಿ ಭರ್ತಿ ಮಾಡಲಾಗಿದೆ. ಆದರೆ ಈ ಕಾಮಗಾರಿ ನಡೆಸಿದ ವೇಳೆ ಚರಂಡಿ ವ್ಯವಸ್ಥೆ ಮಾಡದೆ ನಿರ್ಲಕ್ಷ್ಯ ವಹಿಸಲಾಗಿದ್ದು, ಇದರಿಂದಾಗಿಯೇ ಸಮಸ್ಯೆ ಉದ್ಭವಿಸಿದೆ.

ಪುತ್ತೂರು ವಲಯ ಅರಣ್ಯಾಧಿಕಾರಿ ಕಾರ್ಯಪ್ಪ, ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಮೀನಿಗೆ ಮಣ್ಣು ಭರ್ತಿ ಮಾಡುವ ಸಂದರ್ಭದಲ್ಲಿ  ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರೂ, ಸಂಬಂಧಪಟ್ಟವರು ಅದನ್ನು ಕ್ಯಾರೇ ಮಾಡದೆ ಮುಣ್ಣು ತುಂಬಿಸಿದ್ದರು. ಇದುವೇ ಸಮಸ್ಯೆಗೆ ಕಾರಣವಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಜಿಲ್ಲೆಯಲ್ಲಿ 93 ಮಿ.ಮೀ. ಮಳೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಸೋಮವಾರ ಉತ್ತಮ ಮಳೆಯಾಗಿದ್ದು, ಸರಾಸರಿ 93 ಮಿ.ಮೀ. ಮಳೆ ಬಿದ್ದಿದೆ.ಬೆಳ್ತಂಗಡಿ ತಾಲ್ಲೂಕಿನಲ್ಲಿ ಗರಿಷ್ಠ 109.5 ಮಿ.ಮೀ. ಮಳೆ ಸುರಿದಿದೆ. ಮಂಗಳೂರು ತಾಲ್ಲೂಕಿನಲ್ಲಿ 105.9 ಮಿ.ಮೀ., ಬಂಟ್ವಾಳ ತಾಲ್ಲೂಕಿನಲ್ಲಿ 92.7 ಮಿ.ಮೀ., ಸುಳ್ಯ ತಾಲ್ಲೂಕಿನಲ್ಲಿ 86.9 ಮಿ.ಮೀ. ಮತ್ತು ಪುತ್ತೂರು ತಾಲ್ಲೂಕಿನಲ್ಲಿ 69.8 ಮಿ.ಮೀ. ಮಳೆ ಬಿದ್ದಿದೆ.

ಸೋಮವಾರ ಬೆಳಿಗ್ಗೆ ಮತ್ತು ಮಧ್ಯಾಹ್ನ ಕೆಲಕಾಲ ಮಳೆಯ ಅಬ್ಬರ ಜೋರಾಗಿತ್ತು. ವೇಗದಿಂದ ಗಾಳಿ ಕೂಡ ಬೀಸುತ್ತಿತ್ತು. ಮಳೆ ಮತ್ತು ಗಾಳಿಯ ರಭಸಕ್ಕೆ ನಗರದ ಲೇಡಿಹಿಲ್‌ ಬಳಿ ಮರವೊಂದು ಉರುಳಿ ರಸ್ತೆಗೆ ಬಿದ್ದಿತ್ತು. ಇದರಿಂದ ಕೆಲಕಾಲ ವಾಹನಗಳ ಸಂಚಾರಕ್ಕೆ ಅಡಚಣೆಯಾಯಿತು. ಸ್ಥಳಕ್ಕೆ ಧಾವಿಸಿದ ಮಂಗಳೂರು ಮಹಾನಗರ ಪಾಲಿಕೆ ಸಿಬ್ಬಂದಿ ಮರವನ್ನು ಕತ್ತರಿಸಿ ತೆರವು ಮಾಡಿದರು.

ನಗರದ ಹಲವೆಡೆ ತಗ್ಗುಪ್ರದೇಶಗಳಲ್ಲಿ ಭಾನುವಾರ ಮಳೆನೀರು ಮನೆ, ಅಂಗಡಿ, ವಾಣಿಜ್ಯ ಕಟ್ಟಡಗಳಿಗೆ ನುಗ್ಗಿತ್ತು. ಕೆಲವು ಪ್ರದೇಶಗಳಲ್ಲಿ ಸೋಮವಾರ ಕೂಡ ನೀರನ್ನು ಹೊರಹಾಕುವ ಕೆಲಸ ಮುಂದುವರಿದಿತ್ತು. ಮಹಾನಗರ ಪಾಲಿಕೆ ಮೇಯರ್‌ ಕವಿತಾ ಸನಿಲ್‌ ಹಲವು ಪ್ರದೇಶ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಗ್ಗುಪ್ರದೇಶದಲ್ಲಿ ನೀರು ಸರಾಗವಾಗಿ ಹರಿದು ಚರಂಡಿ ಸೇರಲು ಇರುವ ಅಡಚಣೆಗಳನ್ನು ತೆರವು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

* * 

ಕಾರ್ನಾಡುವಿನಲ್ಲಿ ರಸ್ತೆ ಕುಸಿದಿರುವ ಕುರಿತು ಸಂಬಂಧ ಪಟ್ಟ ಗುತ್ತಿಗೆದಾರರಲ್ಲಿ ಮುಂಜಾಗ್ರತೆಯ ಕ್ರಮಕ್ಕೆ ಪಂಚಾಯಿತಿನಿಂದ ಕ್ರಮ ಕೈಗೊಳ್ಳಲಾಗಿದೆ.

ಹರ್ಷರಾಜ್‌ ಶೆಟ್ಟಿ

ಮೂಲ್ಕಿ ಪ.ಪಂ. ಸದಸ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry