‘ಚಿಕಿತ್ಸೆ’ಗೆ ಕಾದಿವೆ ಸರ್ಕಾರಿ ಆಸ್ಪತ್ರೆಗಳು!

7

‘ಚಿಕಿತ್ಸೆ’ಗೆ ಕಾದಿವೆ ಸರ್ಕಾರಿ ಆಸ್ಪತ್ರೆಗಳು!

Published:
Updated:
‘ಚಿಕಿತ್ಸೆ’ಗೆ ಕಾದಿವೆ ಸರ್ಕಾರಿ ಆಸ್ಪತ್ರೆಗಳು!

ರಾಯಚೂರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಿಗೆ ಒಟ್ಟು 49 ತಜ್ಞ ವೈದ್ಯರ ಹುದ್ದೆಗಳು ಮಂಜೂರಾಗಿದ್ದು, 35 ಹುದ್ದೆಗಳು ಭರ್ತಿಯಾಗದೆ ವರ್ಷಗಳಿಂದ ಖಾಲಿ ಉಳಿದಿವೆ. ವೈದ್ಯರ ಕೊರತೆಯಿಂದ ಗ್ರಾಮೀಣ ಪ್ರದೇಶದಲ್ಲಿ ಸೂಕ್ತ ಚಿಕಿತ್ಸೆ ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳೆದ ಎರಡು ವರ್ಷಕ್ಕೂ ಅಧಿಕ ಕಾಲದಿಂದ ನೇರ ಸಂದರ್ಶನ ಮೂಲಕ ಆಯ್ಕೆ ಮಾಡಿಕೊಳ್ಳಲು ಪ್ರಕ್ರಿಯೆ ಕೈಗೊಂಡಿದ್ದರೂ, ಖಾಲಿ ಹುದ್ದೆಗಳು ತುಂಬಲು ಇಲಾಖೆಗೆ ಸಾಧ್ಯವಾಗಿಲ್ಲ. ನಾಲ್ಕು ವರ್ಷಗಳ ಆಡಳಿತದಲ್ಲಿ ಹಲವು ಸಾಧನೆಗಳು ಮಾಡಲಾಗಿದೆ ಎನ್ನುವ ಸರ್ಕಾರಕ್ಕೆ ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಕಾಪಾಡಲು ತಜ್ಞ ವೈದ್ಯರನ್ನು ಒದಗಿಸದಿರುವುದು ಗಂಭೀರವಾದ ಸಂಗತಿ.

49 ತಜ್ಞ ವೈದ್ಯರ ಪೈಕಿ 14 ವೈದ್ಯರು ಮಾತ್ರ ಕಾರ್ಯನಿರ್ವಹಣೆ ಮಾಡುತ್ತಿದ್ದು, ಗುತ್ತಿಗೆ ಆಧಾರದಲ್ಲಿ ಇಬ್ಬರು ತಜ್ಞ ವೈದ್ಯರು ಸೇವೆಯಲ್ಲಿದ್ದಾರೆ. ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಂಖ್ಯೆ 50 ಇದ್ದು, ಇಲ್ಲಿ ಕೂಡ 9 ಮಾತ್ರ ಖಾಯಂ ವೈದ್ಯಾಧಿಕಾರಿಗಳು ಇದ್ದಾರೆ. ಉಳಿದಂತೆ 31 ಆಯುಷ್‌ ವೈದ್ಯಾಧಿಕಾರಿಗಳ ಹಾಗೂ 8 ಗುತ್ತಿಗೆ ವೈದ್ಯಾಧಿಕಾರಿಗಳ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ವಹಣೆ ಮಾಡಲಾಗುತ್ತಿದೆ.

ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಿಗೆ ಮಾತ್ರ ತಜ್ಞ ವೈದ್ಯರ ಹುದ್ದೆಗಳು ಮಂಜೂರಾಗಿದ್ದು, ಜಿಲ್ಲೆಯ ಆರು ಸಮುದಾಯ ಆರೋಗ್ಯ ಕೇಂದ್ರಗಳ ಪೈಕಿ ಜೆ.ಮಲ್ಲಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಾತ್ರ ವೈದ್ಯಾಧಿಕಾರಿ ಇದ್ದಾರೆ. ಕವಿತಾಳ, ಅರಕೇರಾ, ಜಾಲಹಳ್ಳಿ, ಆನೆ ಹೊಸೂರು ಹಾಗೂ ಮುದುಗಲ್‌ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರ ಸಮಸ್ಯೆ ನೀಗಿಲ್ಲ.

‘ವೈದ್ಯರಿಗೆ ಗ್ರಾಮೀಣ ಸೇವೆ ಕಡ್ಡಾಯಗೊಳಿಸುವ ಮೂಲಕ ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಕಾಪಾಡಲು ಸರ್ಕಾರ ಹಲವು ಕ್ರಮಗಳು ಜರುಗಿಸಿದೆ. ಈಗಿನ ಪರಿಸ್ಥಿತಿ ಬದಲಾಗಿ ಒಳ್ಳೆಯ ದಿನಗಳು ಬರಲಿವೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ನಾರಾಯಣಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಆಯುಷ್‌ ವೈದ್ಯರೆ ಪರಿಹಾರ: ತಜ್ಞ ವೈದ್ಯರು ಮಾತ್ರವಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯಾಧಿಕಾರಿಗಳನ್ನು ಒದಗಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಜಿಲ್ಲೆಯಲ್ಲಿರುವ 50 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 31 ಆರೋಗ್ಯ ಕೇಂದ್ರಗಳಲ್ಲಿ ಆಯುಷ್‌ ವೈದ್ಯಾಧಿಕಾರಿಗಳು ಸೇವೆ ಒದಗಿಸುತ್ತಿದ್ದು, ಆಯುಷ್‌ ವೈದ್ಯರೆ ಪರಿಹಾರ ಎನ್ನುವಂತಾಗಿದೆ. ಜಿಲ್ಲೆಯಲ್ಲಿ ಆರೋಗ್ಯ ಕೇತ್ರದಲ್ಲಿ ಬಹಳಷ್ಟು ಸಮಸ್ಯೆಗಳಿದ್ದರೂ, ವೈದ್ಯರನ್ನು ಒದಗಿಸಲು ಇಲಾಖೆ ದಿಟ್ಟತನ ತೋರುತ್ತಿಲ್ಲ.

ಅಂಕಿ ಅಂಶ

49 ಮಂಜೂರಾದ ತಜ್ಞ ವೈದ್ಯರ ಹುದ್ದೆಗಳು

14 ಈಗಿರುವ ಕಾಯಂ ತಜ್ಞವೈದ್ಯರು

4 ಜಿಲ್ಲೆಯಲ್ಲಿರುವ ತಾಲ್ಲೂಕು ಆಸ್ಪತ್ರೆಗಳು

* * 

ವೈದ್ಯರ ಕೊರತೆ ನೀಗಿಸಲು ಎರಡು ವರ್ಷಗಳಿಂದ   ನೇರ ಸಂದರ್ಶನಕ್ಕೆ ಹಾಜರಾಗಲು ವೈದ್ಯರಿಗೆ ಅವಕಾಶ ನೀಡಿದರೂ,  ವೈದ್ಯರು ಹಿಂದೇಟು ಹಾಕುತ್ತಿದ್ದಾರೆ

ಡಾ.ನಾರಾಯಣಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry