100 ಮೀಟರ್ ಭೂಮಿ ಶೀಘ್ರ ಹಸ್ತಾಂತರ

7

100 ಮೀಟರ್ ಭೂಮಿ ಶೀಘ್ರ ಹಸ್ತಾಂತರ

Published:
Updated:
100 ಮೀಟರ್ ಭೂಮಿ ಶೀಘ್ರ ಹಸ್ತಾಂತರ

ಕೊಪ್ಪಳ: ಕೊಪ್ಪಳ – ಭಾಗ್ಯನಗರದ ರೈಲ್ವೆ ಗೇಟ್ ಸಂಖ್ಯೆ – 62ಕ್ಕೆ ನಿರ್ಮಿಸಲಾಗುತ್ತಿರುವ ಮೇಲು ಸೇತುವೆ ಕಾಮಗಾರಿಗೆ ರೈಲು ನಿಲ್ದಾಣ ರಸ್ತೆವರೆಗೆ 100 ಮೀಟರ್ ಭೂಮಿಯನ್ನು ರೈಲ್ವೆ ಇಲಾಖೆಗೆ ಶೀಘ್ರವೇ ಹಸ್ತಾಂತರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಹೇಳಿದರು.

ಮೇಲ್ಸೇತುವೆ ನಿರ್ಮಾಣ ಕುರಿತಂತೆ ಭೂಮಿ ಹಾಗೂ ಕಟ್ಟಡಗಳ ಮಾಲೀಕರು, ಅಧಿಕಾರಿಗಳೊಂದಿಗೆ ಗುರುವಾರ ತಮ್ಮ ಕಚೇರಿಯಲ್ಲಿ ಏರ್ಪಡಿಸಲಾದ ಸಭೆಯ ಬಳಿಕ ಅವರು ಮಾತನಾಡಿದರು.

‘ಭೂಮಿ ಹಸ್ತಾಂತರಿಸಿದಲ್ಲಿ, 5 ತಿಂಗಳ ಒಳಗೆ ಮೇಲು ಸೇತುವೆ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಭೂಮಿಯನ್ನು ಮಾಲೀಕರಿಂದ ನೇರವಾಗಿ ಖರೀದಿಸಲು ಸರ್ಕಾರ ಮಂಜೂರಾತಿ ನೀಡಿದ ನಂತರ, ನಿರಂತರ ಸಭೆಗಳನ್ನು ನಡೆಸಲಾಗಿದೆ.

ಜಿಲ್ಲಾಡಳಿತದಿಂದ ಯಾವುದೇ ವಿಳಂಬ ಆಗಿಲ್ಲ. ಭೂಮಿಯನ್ನು ಮಾಲೀಕರ ಒಪ್ಪಿಗೆಯೊಂದಿಗೆ, ನೇರವಾಗಿ ಖರೀದಿಸುವ ಪ್ರಕ್ರಿಯೆಯಿಂದ ಅನಗತ್ಯ ವಿಳಂಬ ಉಂಟಾಗುವುದನ್ನು ತಡೆಯಬಹುದು’ ಎಂದು ಅವರು ಹೇಳಿದರು.

‘ವಶಕ್ಕೆ ಪಡೆಯಬೇಕಿರುವ ಭೂಮಿ /ಕಟ್ಟಡ ಒಟ್ಟು 17 ಜನರಿಗೆ ಸೇರಿದೆ. ಭೂಮಿಯನ್ನು ನೇರವಾಗಿ ಖರೀದಿಸಲು ಮಾರ್ಚ್ 21ರಂದು ಸರ್ಕಾರ ಮಂಜೂರಾತಿ ಪತ್ರ ನೀಡಿದೆ. ಬಳಿಕ ಸರ್ವೆ ಕೈಗೊಳ್ಳಲಾಗಿದೆ. ಭೂ ಮಾಲೀಕರು ಆಸ್ತಿಗಳ ದಾಖಲೆಗಳನ್ನು ಸಲ್ಲಿಸಿದ ಬಳಿಕವಷ್ಟೇ ಮೌಲ್ಯ ನಿರ್ಧರಿಸಲು ಅವಕಾಶವಿದೆ. 16 ಜನರ ಭೂಮಿ / ಕಟ್ಟಡಗಳಿಗೆ ಈಗಾಗಲೆ ಮೌಲ್ಯ ನಿರ್ಧರಿಸಲಾಗಿದೆ. ಇನ್ನೂ ಒಂದು ಆಸ್ತಿಯ ಮೌಲ್ಯಮಾಪನ ಬಾಕಿ ಇದೆ ಎಂದು ಅವರು ಹೇಳಿದರು.

‘ಮಾರ್ಗಸೂಚಿಯನ್ವಯ ಭಾಗ್ಯನಗರದಿಂದ ಕನಕಾಚಲ ಟಾಕೀಸ್‍ ವರೆಗೆ ಒಂದು ದರ ಹಾಗೂ ಮಂಜುನಾಥ ಲಾಡ್ಜ್‌ನಿಂದ ರೈಲ್ವೆ ಸ್ಟೇಷನ್ ರಸ್ತೆಯವರೆಗೆ ಒಂದು ದರ. ಹೀಗೆ ಎರಡು ಬಗೆಯಲ್ಲಿ ದರವನ್ನು ನಿರ್ಧರಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ - 63 ಬಳಿ ಇಬ್ಬರ ಆಸ್ತಿ ಇದೆ. ಜೂನ್ 5ರಂದು ಕಟ್ಟಡಗಳ ಮೌಲ್ಯ ನಿಗದಿಪಡಿಸಲಾಗಿದೆ. ಪರಿಹಾರ ವಿತರಿಸಲು ಸರ್ಕಾರ ₹ 2 ಕೋಟಿ ಬಿಡುಗಡೆ ಮಾಡಿದೆ. ಇನ್ನೂ ₹ 5 ಕೋಟಿ ಅನುದಾನ ಬಿಡುಗಡೆ ಆಗಬೇಕಿದೆ’ ಎಂದು ಅವರು ಹೇಳಿದರು.

‘ಭೂ ಸ್ವಾಧೀನ ಪ್ರಕ್ರಿಯೆಗೆ ಮುಂದಾದರೆ, ಅದು ಪೂರ್ಣಗೊಳ್ಳಲು ಸುಮಾರು 2ರಿಂದ 3 ವರ್ಷ ಬೇಕಾಗುತ್ತದೆ. ಹೀಗಾಗಿ ನೇರವಾಗಿ ಖರೀದಿಸಲಾಗುತ್ತಿದೆ. ಗದಗ-ವಾಡಿ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ, ಯಲಬುರ್ಗಾ ಮತ್ತು ಕುಷ್ಟಗಿ ತಾಲ್ಲೂಕಿನಲ್ಲಿ ಸುಮಾರು 625 ಎಕರೆ ಭೂಮಿ ಸ್ವಾಧೀನ ಮಾಡಿಕೊಳ್ಳಲಾಗಿದೆ. 

ಗಿಣಿಗೇರಾ-ಮೆಹಬೂಬ್ ನಗರ ರೈಲು ಮಾರ್ಗ ಸಂಬಂಧಿಸಿ ಗಂಗಾವತಿ ತಾಲ್ಲೂಕಿನಲ್ಲಿ 76 ಎಕರೆ ಭೂಮಿಯನ್ನು ರೈತರಿಂದ ನೇರವಾಗಿ ಖರೀದಿ ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

ರೈಲ್ವೆ ಇಲಾಖೆ ವಿಭಾಗ ಅಧಿಕಾರಿ ಸುಧಾಕರ್ ಮಾತನಾಡಿ, ‘ಭೂಮಿಯನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಿದಲ್ಲಿ, 5 ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದು ಭರವಸೆ ನೀಡಿದರು. ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ, ಲೋಕೋಪಯೋಗಿ, ಕಂದಾಯ ಇಲಾಖೆ, ನಗರಸಭೆ ಅಧಿಕಾರಿಗಳು ಪಾಲ್ಗೊಂಡಿದ್ದರು.

ಅಂಕಿ ಅಂಶ

17 ಜನರ ಭೂಮಿ, ಕಟ್ಟಡ ವಶ

₹7ಕೋಟಿ  ಪರಿಹಾರ ನೀಡಲು ಬೇಕಾದ ಮೊತ್ತ

5ತಿಂಗಳು ಭೂಮಿ ಹಸ್ತಾಂತರಿಸಿದರೆ ಕಾಮಗಾರಿ ಪೂರ್ಣಗೊಳ್ಳುವ ಅವಧಿ

* * 

ಕೆಲವು ಭೂಮಾಲೀಕರು ಆಸ್ತಿಯ ದಾಖಲೆ ಸಲ್ಲಿಸುವುದು ವಿಳಂಬ ಮಾಡಿದ್ದರಿಂದ ಮೌಲ್ಯಮಾಪನವೂ ವಿಳಂಬವಾಗಿದೆ.

ಎಂ.ಕನಗವಲ್ಲಿ, ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry