ಬುಧವಾರ, ಫೆಬ್ರವರಿ 19, 2020
23 °C

ನಿರುದ್ಯೋಗ ಭೀತಿಯಲ್ಲಿ ಬಾರ್‌ ಸಿಬ್ಬಂದಿ

ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

ನಿರುದ್ಯೋಗ ಭೀತಿಯಲ್ಲಿ ಬಾರ್‌ ಸಿಬ್ಬಂದಿ

ರಾಯಚೂರು: ಶುಕ್ರವಾರ ನಡುರಾತ್ರಿ ವರೆಗೂ ಮದ್ಯಪ್ರಿಯರ ಮಧ್ಯೆ ಓಡಾಡಿಕೊಂಡಿದ್ದ ಬಾರ್‌ ಸಿಬ್ಬಂದಿ ಮುಖದಲ್ಲಿ ಸಂಪೂರ್ಣ ಮಂಕು ಆವರಿಸಿತ್ತು. ಸುಪ್ರೀಂ ಕೋರ್ಟ್‌ ಆದೇಶದಂತೆ ಹೆದ್ದಾರಿಯಲ್ಲಿರುವ ಬಾರ್‌ಗಳನ್ನು ಮುಚ್ಚಲಾಗಿದೆ. ಇದರಿಂದ ತಮ್ಮ ಬದುಕಿಗೆ ಆಧಾರ ವಾಗಿದ್ದ ಕೆಲಸ ಇರುವುದಿಲ್ಲ ಎನ್ನುವ ಭೀತಿ ಅವರಲ್ಲಿ ಮನೆ ಮಾಡಿತ್ತು.

ನಗರದ ಉಮಾ ಹೋಟೆಲ್‌, ಬೋರ್ಡಿಂಗ್‌ ಆ್ಯಂಡ್‌ ಲಾಡ್ಜಿಂಗ್‌ ಆವರಣವನ್ನು ಶನಿವಾರ ಸ್ವಚ್ಛತೆಗೊಳಿಸುತ್ತಿದ್ದ ಬಾರ್‌ ಸಿಬ್ಬಂದಿಯನ್ನು ನೋಡಿದಾಗ ಕಂಡುಬಂದ ದೃಶ್ಯ ಇದು.
ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 167 (ಜಡಚರ್ಲಾ–ಹಗರಿ)ಗೆ ಹೊಂದಿ ಕೊಂಡಿರುವ ನೃಪತುಂಗ ಹೋಟೆಲ್‌, ಎಸ್‌ಎಲ್‌ವಿ ಬಾರ್‌ ಆ್ಯಂಡ್‌ ರೆಸ್ಟೊರೆಂಟ್‌, ಕುಬೇರ್‌ ಬಾರ್‌ ಆ್ಯಂಡ್‌ ರೆಸ್ಟೊರೆಂಟ್‌, ಪ್ರಿಯಾ ರೆಸ್ಟೊರೆಂಟ್‌, ಲಕ್ಷ್ಮೀ ಬಾರ್‌ ಆ್ಯಂಡ್‌ ರೆಸ್ಟೊರೆಂಟ್‌ ಸೇರಿದಂತೆ ಎಲ್ಲ ಬಾರ್‌ಗಳಲ್ಲೂ ಕೆಲಸ ಮಾಡುತ್ತಿದ್ದ ಸಿಬ್ಬಂದಿಯಲ್ಲಿ ಇದೇ ರೀತಿಯ ದುಗುಡ ಆವರಿಸಿದೆ.

‘ಲಿಕ್ಕರ್‌ ಮಾರಾಟ ಇರುವುದಿಲ್ಲ ಎನ್ನುವುದು ಗೊತ್ತಾಗಿದೆ. ಸದ್ಯಕ್ಕೆ ಬಾರ್ ಆವರಣ ಸ್ವಚ್ಛತೆ ಮಾಡಿಸುತ್ತಿದ್ದಾರೆ. ಏನು ಕೆಲಸ ಕೊಟ್ಟರೂ ಇಲ್ಲಿಯೇ ಮಾಡಿಕೊಂಡಿರುತ್ತೇವೆ. ಕೆಲಸದಿಂದ ತೆಗೆದುಹಾಕಿದರೆ ಬೇರೆ ಜಾಗಗಳಲ್ಲಿ ಇರುವ ಬಾರ್‌ಗಳಿಗೆ ಕೆಲಸ ಹುಡುಕಿಕೊಂಡು ಹೋಗಬೇಕಾಗುತ್ತದೆ’ ಎಂದು ಒತ್ತರಿಸಿ ಬಂದ ಕಣ್ಣೀರು ತಡೆದು ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

ರಾಯಚೂರು ತಾಲ್ಲೂಕು ಸರಹದ್ದು ಪ್ರಾರಂಭವಾಗುವ ತೆಲಂಗಾಣದ ಕೃಷ್ಣಾ ಗ್ರಾಮದಿಂದ (ನದಿ ಪಕ್ಕದಲ್ಲೆ ಇರುವ ಗ್ರಾಮ) ತಾಲ್ಲೂಕು ಸರಹದ್ದು ಮುಕ್ತಾಯವಾಗುವ ತುಂಗಾ ಗ್ರಾಮದವರೆಗೂ ಸುಮಾರು 30 ಕಿಲೋ ಮೀಟರ್‌ ರಾಷ್ಟ್ರೀಯ ಹೆದ್ದಾರಿ–167 ಹಾಯ್ದು ಹೋಗಿದೆ. ಈ ಹೆದ್ದಾರಿಯಲ್ಲಿರುವ ಗಿಲ್ಲೆಸುಗೂರು, ಯರಗೇರೆ, ರಾಯಚೂರು ನಗರ, ಯರಮರಸ್‌, ಚಿಕ್ಕಸುಗೂರು, ದೇವಸುಗೂರಿನಲ್ಲಿದ್ದ ಒಟ್ಟು 48 ಬಾರ್‌ಗಳು ರದ್ದುಗೊಂಡಿವೆ.

ಲಿಂಗಸುಗೂರು ತಾಲ್ಲೂಕು ಸರಹದ್ದು ಆರಂಭವಾಗುವ ತಿಂಥಣಿ ಬ್ರಿಡ್ಜ್‌ನಿಂದ ಸಿಂಧನೂರು ತಾಲ್ಲೂಕು ಸರಹದ್ದು ಮುಕ್ತಾಯದವರೆಗಿನ 80 ಕಿಲೋ ಮೀಟರ್‌ ಉದ್ದಕ್ಕೂ ರಾಷ್ಟ್ರೀಯ ಹೆದ್ದಾರಿ (ಸಂಖ್ಯೆ–150ಎ)ಯಲ್ಲಿರುವ 36 ಬಾರ್‌ಗಳು ರದ್ದಾಗಿವೆ. ಅದರಲ್ಲೂ ಸಿಎಲ್‌್–7 ಪರವಾನಿಗೆ ಹೊಂದಿದ್ದ 14 ಬೋರ್ಡಿಂಗ್‌ ಆ್ಯಂಡ್‌ ಲಾಡ್ಜಿಂಗ್‌ಗಳಲ್ಲಿ ಮದ್ಯಮಾರಾಟ ಕೋರ್ಟ್‌ ಆದೇಶದಂತೆ ಶಾಶ್ವತ ರದ್ದಾಗಿದೆ.

‘ಬೇರೆ ರೀತಿಯ ಪರವಾನಿಗೆದಾರರು ಆಕ್ಷೇಪಣಾ ರಹಿತ ಸ್ಥಳದಲ್ಲಿ ಬಾರ್‌ ತೆರೆಯುವುದಕ್ಕೆ ಅವಕಾಶವಿದೆ. ಬೋರ್ಡಿಂಗ್‌ ಹೊಂದಿದ ಸಿಎಲ್‌–7 ಪರವಾನಿಗೆದಾರರಿಗೆ ಈ ಅವಕಾಶವಿಲ್ಲ. ಹೀಗಾಗಿ ದೇಶದಲ್ಲಿರುವ ಸಿಎಲ್‌–7 ಪರವಾನಿಗೆ ಹೊಂದಿದ ಬೋರ್ಡಿಂಗ್‌ ಮಾಲೀಕರೆಲ್ಲ ಸೇರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಹಾಕಿದ್ದಾರೆ. ಜುಲೈ 4 ರಂದು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ವಿಚಾರಣೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಏನು ನಿರ್ಧಾರವಾಗುತ್ತದೆ ಕಾದು ನೋಡುತ್ತೇವೆ’ ಎಂದು ಉಮಾ ಹೋಟೆಲ್‌ ಮಾಲೀಕ ರಾಘವೇಂದ್ರ ಅವರು ಹೇಳಿದರು.

‘ಸುಪ್ರೀಂ ಕೋರ್ಟ್‌ ಆದೇಶದಂತೆ ಅಬಕಾರಿ ಅಧಿಕಾರಿಗಳು ಬಾರ್‌ಗೆ ಬೀಗ ಜಡಿದು ಹೋಗಿದ್ದಾರೆ. ಬಾರ್‌ನಲ್ಲಿ ಸ್ಥಳೀಯರು ಹಾಗೂ ಹೊರಗಿನ ಹುಡುಗರು ಕೆಲಸ ಮಾಡುತ್ತಿದ್ದರು. 40 ವರ್ಷಗಳಿಂದ ಹೋಟೆಲ್‌ ವ್ಯವಹಾರ ಇದ್ದೇ ಇದೆ. ಅದರಲ್ಲೆ ಬಾರ್‌ ಸಿಬ್ಬಂದಿಗೂ ಕೆಲಸ ಮುಂದುವರಿಸುತ್ತೇವೆ’ ಎಂದರು.

ಮದ್ಯಪ್ರಿಯರ ಭೇಟಿ: ಬಾರ್‌ಗಳು ಬಂದ್‌ ಆಗಿದ್ದರೂ ಮದ್ಯಪ್ರಿಯರು ಅಂಗಡಿಗಳತ್ತ ಧಾವಿಸಿ ಬರುತ್ತಿರುವುದು ಕಂಡುಬಂತು. ಕೋರ್ಟ್ ಆದೇಶದ ಅರಿವಿದ್ದರೂ ಕೆಲವರು ಬಾರ್‌ ತನಕ ಬಂದು ವಿಚಾರಿಸಿಕೊಂಡು ವಾಪಸ್ಸಾದರು. ‘ಕಾಯಂ ಬಂದ್‌ ಮಾಡಿದರೆ ಕುಡಿಯುವುದನ್ನೆ ಬಿಡುತ್ತೇವೆ’ ಎಂದು ಪ್ರತಿಜ್ಞೆಯ ಧ್ವನಿಯಲ್ಲಿ ಹೇಳಿಕೊಂಡು ಹೋಗುವುದು ಹಾಸ್ಯಾಸ್ಪದವಾಗಿ ತೋರಿತು. ಮದ್ಯಪ್ರಿಯರ ಈ ಮಾತಿನಿಂದ ಬಾರ್‌ ಸಿಬ್ಬಂದಿಯು ನಿರುದ್ಯೋಗದ ಕೊರಗಿನಲ್ಲೂ ನಕ್ಕಿದ್ದು ಗಮನ ಸೆಳೆಯಿತು.

ಅಂಕಿ– ಅಂಶಗಳು
213 ಜಿಲ್ಲೆಯಲ್ಲಿ ಮದ್ಯಮಾರಾಟ ಪರವಾನಗಿ ಪಡೆದವರು

84 ರದ್ದುಗೊಂಡ ಎನ್‌ಎಚ್‌ ಪಕ್ಕದ ಮದ್ಯದಂಗಡಿಗಳು

47 ರದ್ದುಗೊಂಡ ಎಸ್‌ಎಚ್‌ ಪಕ್ಕದ ಮದ್ಯದಂಗಡಿಗಳು

82 ನವೀಕರಣಕ್ಕೆ ಅರ್ಹತೆ ಇರುವ ಬಾರ್‌ಗಳು

ಬೀಗ ಹಾಕಿದ ಅಧಿಕಾರಿಗಳು
ಜಿಲ್ಲೆಯಲ್ಲಿರುವ ಎಲ್ಲ ಬಾರ್‌ಗಳಿಗೂ ಅಬಕಾರಿ ಅಧಿಕಾರಿಗಳು ಶನಿವಾರ ಬೀಗ ಹಾಕಿ ಶೀಲ್‌್ ಹಾಕಿದ್ದಾರೆ. ಆಕ್ಷೇಪಣಾ ರಹಿತ ಸ್ಥಳದಲ್ಲಿರುವ 82 ಬಾರ್‌ಗಳಿಗೆ ಮಾತ್ರ ಪರವಾನಗಿ ನವೀಕರಣ ಮಾಡಿಕೊಡುವ ಪ್ರಕ್ರಿಯೆ ಆರಂಭಿಸಿದ್ದಾರೆ. ಇದು ಪೂರ್ಣವಾಗಲು ಕೆಲವು ದಿನಗಳು ಬೇಕಾಗುತ್ತದೆ ಎನ್ನುವುದು ಅಧಿಕಾರಿಗಳ ವಿವರಣೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)