ಶನಿವಾರ, ಡಿಸೆಂಬರ್ 14, 2019
20 °C

ಊಟ ಎಂದರೆ ಕರ್ಮವಲ್ಲ, ಕಲೆ!

ದೀಪಾ ಫಡ್ಕೆ Updated:

ಅಕ್ಷರ ಗಾತ್ರ : | |

ಊಟ ಎಂದರೆ ಕರ್ಮವಲ್ಲ, ಕಲೆ!

ಎಳೆಹಸಿರಿನ ಬಾಳೆಎಲೆ, ಕರಾವಳಿ ಕಡೆಗಳಲ್ಲಾದರೆ ಬಾಡಿಸಿದ ಎಲೆ, ಎಲೆಯ ಮೇಲೆ ಬಡಿಸಿದ ಹತ್ತಿಪ್ಪತ್ತು ಬಗೆಯ ವ್ಯಂಜನಗಳು, ಎಲೆಯ ಮುಂದೆ ಕುಳಿತವರ ಕೈಗೆ ಮೊದಲು ಸಿಗುವಂತೆಯೂ ಪದ್ಧತಿಯ ಪ್ರಕಾರ ಮೊದಲು ಸಿಹಿಯುಣ್ಣುವ ಕಾರಣಕ್ಕಾಗಿಯೂ ಬಡಿಸಿದ ಪಾಯಸ, ಮೇಲಿನ ಸಾಲಿನ ಪಲ್ಯ, ಕೋಸಂಬರಿಗಳು – ಹೀಗೆ ಹಲವು ಬಗೆಗಳಿಂದ ನಮ್ಮ ಹಸಿವನ್ನು ತೀರಿಸಲು ಸಜ್ಜಾಗಿರುವ ಖಾದ್ಯಗಳನ್ನು ತಿನ್ನುವ ಕ್ರಿಯೆಯಾದ ‘ಊಟ’ ಎಂಬ ಅಗತ್ಯವೂ ಒಂದು ಕಲೆಯಾದೀತು, ಕಲೆಯಾಗಬೇಕು. ನಾವು ನಾಗರಿಕತೆಯೆಂಬ ಉಡುಪಿನೊಳಕ್ಕೆ ತೂರಿಕೊಂಡಾಗಿನಿಂದ, ಎಲ್ಲದಕ್ಕೂ ಒಪ್ಪವಿರಬೇಕು, ಓರಣ ಅಲ್ಲಿರಲೇಬೇಕು ಎಂಬ ತುಡಿತವೂ ಬೆಳೆಯುತ್ತ ಬಂದಿದೆ. ಊಟ ಎನ್ನುವುದೂ ಅಗತ್ಯದಷ್ಟೇ, ನಯ ನಾಜೂಕಿನ ವಿಷಯವೂ ಹೌದು. ‘ಊಟ ಒಂದು ಅಗತ್ಯವಾದರೆ ಅಡುಗೆ ಒಂದು ಕಲೆ’ ಎನ್ನುವುದುಂಟು. ಅಂತಯೇ ‘ಊಟ ಒಂದು ಅಗತ್ಯವಾದರೆ ತಿನ್ನುವುದು ಕೂಡ ಒಂದು ಕಲೆ’ ಎನ್ನಲು ಅಡ್ಡಿಯಿಲ್ಲ.

ಅಪರೂಪಕ್ಕೆ ದೂರದ ಹಿರಿಯ ಸಂಬಂಧಿಯೊಬ್ಬರು ಬಂದಿದ್ದರು. ಜೊತೆಯಲ್ಲಿ ಊಟ ಮಾಡುತ್ತಿದ್ದಾಗ ಅವರು ಎಷ್ಟು ಬೇಕೋ ಅಷ್ಟೇ ಅನ್ನ, ಸಾರು, ಪಲ್ಯಗಳನ್ನು ಹಾಕಿಸಿಕೊಳ್ಳುತ್ತಿದ್ದುದಷ್ಟೇ ಅಲ್ಲದೇ ಅವರು ಮಾಡುತ್ತಿದ್ದ ಊಟದ ನಾಜೂಕು ಕೂಡ ಪ್ರತಿಯೊಬ್ಬರೂ ಅನುಸರಿಸುವಂತಿತ್ತು. ಒಂದಗುಳನ್ನೂ ಬಿಡದೇ ಊಟವನ್ನೇ ಒಂದು ಧ್ಯಾನದಂತೆ ಶ್ರದ್ಧೆಯಿಂದ ಮಾಡಿದ್ದನ್ನು ನೋಡಿದಾಗ ‘ಹೌದು, ತಿನ್ನುವುದೂ ಬರೀ ಹೊಟ್ಟೆ ತುಂಬಿಸುವುದಕ್ಕಾಗಿ ಅಷ್ಟೇ ಅಲ್ಲದೇ, ಅದು ನಮ್ಮ ವೈಯಕ್ತಿಕ ಶಿಸ್ತು, ಶಿಷ್ಟಾಚಾರವನ್ನೂ ತೋರುತ್ತದೆ’ ಎನ್ನುವ ಮನವರಿಕೆಯೂ ಆಯಿತು. ಹೌದು, ಅಡುಗೆ ಅನ್ನುವುದು ಕಲೆಯಾದರೆ ತಿನ್ನುವುದೂ ಆ  ಕಲೆಯನ್ನು ಗೌರವಿಸುವ ಶಿಷ್ಟಾಚಾರ.

ನಾವು ಅನ್ನವನ್ನು ಪರಬ್ರಹ್ಮ ಎಂದವರು. ಬ್ರಹ್ಮವೆಂದರೆ ಅಂತಿಮ, ಪರಮೋಚ್ಚವಾದುದು. ಇದೇ ಕಾರಣಕ್ಕಾಗಿ ಅನ್ನಬ್ರಹ್ಮವನ್ನು ಬೆಳೆಯುವ ರೈತನನ್ನು ಯೋಗಿಯೆನ್ನುವುದು. ತಾನು ಬೆಳೆಯುವ ಅನ್ನವನ್ನು ತಿನ್ನುವ ಜೀವಗಳಾವುವು – ಎನ್ನುವ ಒಂದಿನಿತೂ ಯೋಚನೆಯಿಲ್ಲದೇ ಶ್ರದ್ಧೆಯಿಂದ ಉತ್ತಿ ಬಿತ್ತಿ, ಅವನು ಹೊಟ್ಟೆಯ ಅಗ್ನಿಗೆ ಬೀಳುವ ಹವಿಸ್ಸನ್ನು ಬೆಳೆಸುತ್ತ ಯೋಗಿಯಾಗುತ್ತಾನೆ. ಈ ಯೋಗಿಯ ಕಾಯಕಕ್ಕೆ ಕೃತಜ್ಞತೆ ತೋರುವುದೆಂದರೆ ಅವನು ಬೆಳೆದ ಅನ್ನವನ್ನು ಗೌರವಿಸುವುದು. ನಮ್ಮಲ್ಲಿ ಮೊದಲ ತುತ್ತು ಬಾಯಿಗಿಡುವ ಮುನ್ನ ಈಶ್ವರನನ್ನು ಸ್ಮರಿಸುವ ಸಂಪ್ರದಾಯವಿದೆ. ಉಪನಿಷತ್ತಿನಲ್ಲಿ ‘ಓಂ ಸಹ ನಾವವತು ಸಹ ನೌಭುನಕ್ತು ಸಹ ವೀರ್ಯಂ ಕರವಾವಹೈ, ತೇಜಸ್ವಿ ನಾವಧೀತ ಮಸ್ತು, ಮಾ ವಿದ್ವಿಷಾವಹೈಃ; ಓಂ ಶಾಂತಿಃ ಶಾಂತಿಃ ಶಾಂತಿಃ’ – ಎಂಬ ಶಾಂತಿಮಂತ್ರವಿದೆ. ‘ಜೊತೆಜೊತೆಯಲ್ಲಿ ನಾವಿರೋಣ, ಜೊತೆಯಲ್ಲಿ ಆಹಾರ ಸೇವಿಸೋಣ, ಜೊತೆಯಲ್ಲಿ ವಿದ್ಯೆಯನ್ನೂ ಕಲಿಯುತ್ತಾ ತೇಜಸ್ವಿಗಳಾಗೋಣ, ಪರಸ್ಪರರನ್ನು ಗೌರವಿಸುತ್ತಾ ಶಾಂತಿಯಿಂದ ಬದುಕೋಣ’ ಎನ್ನುವ ಸಂದೇಶವನ್ನೂ ಹೇಳುತ್ತಾ ಅನ್ನವನ್ನು ಊಟ ಮಾಡುವುದುಂಟು, ನಮ್ಮ ಪರಂಪರೆಯಲ್ಲಿ; ಊಟವನ್ನೂ ಬದುಕಿನ ಒಂದು ಉನ್ನತ ಅಭ್ಯಾಸವಾಗಿ ಪರಿಭಾವಿಸಿಕೊಂಡಿರುವುದು ಇದರಿಂದ ಸ್ಪಷ್ಟವಾಗುತ್ತದೆ.

ಪ್ರತಿ ಕಲೆಯ ಮೊದಲ ಪಾಠವೇ ಶ್ರದ್ಧೆ. ಶ್ರದ್ಧೆಯೆಂದರೆ ಅದರೆಡೆಗೆ ತೀರದ ಗೌರವವಿರಬೇಕು. ಅನ್ನವೆಂದರೆ ನಮ್ಮನ್ನು ಜೀವಂತವಾಗಿಡುವ ವಿಶೇಷ. ಆ ವಿಶೇಷವನ್ನು ಬೇಕಾಬಿಟ್ಟಿಯಾಗಿ ಉಪಯೋಗಿಸಬಾರದಲ್ಲವೇ? ಆಹಾರ ನಮ್ಮ ಶರೀರದೊಳಕ್ಕೆ ಸೇರಿ ಶಕ್ತಿಯನ್ನು ಉತ್ಪಾದಿಸಿ ನಮ್ಮನ್ನು ಉಸಿರಿರುವ ತನಕ ಕಾಪಾಡುವ ಜೀವದ್ರವ್ಯ. ಹೀಗಾಗಿ ಈ ಜೀವದ್ರವ್ಯವನ್ನು ಭಗವಂತನೆಂದು ಕರೆಯುತ್ತಿರುವುದು ಸಮಂಜಸವಲ್ಲವೇ? ಹಾಗಿರುವಾಗ ಈ ಭಗವಂತನನ್ನು ನಾವು ಯಾವ ರೀತಿ ಬಳಸಿಕೊಳ್ಳುತ್ತಿದ್ದೇವೆ, ಹೇಗೆ ಮತ್ತು ಎಷ್ಟು ಗೌರವದಿಂದ ನೋಡುತ್ತಿದ್ದೇವೆ – ಎನ್ನುವುದೂ ಮುಖ್ಯವಾಗುತ್ತದೆ. ಅಗತ್ಯವಿದ್ದಷ್ಟು ಮಾತ್ರವೇ ಅನ್ನ ಮತ್ತು ಉಳಿದ ವ್ಯಂಜನಗಳನ್ನು ಬಡಿಸಿಕೊಳ್ಳುವುದು ಈ ಕಲೆಯ ಮೊದಲ ಹಂತ. ನಮ್ಮ ಅಕ್ಕಪಕ್ಕ ಇತರರೂ ಕುಳಿತು ಊಟ ಮಾಡುತ್ತಿರುತ್ತಾರೆ ಎನ್ನುವ ಗಮನವೂ ಒಂದು ಹಂತ.

ಪಕ್ಕದಲ್ಲಿ ಕುಳಿತು ಊಟ ಮಾಡುತ್ತಿರುವವರಿಗೆ ಮುಜುಗರವಾಗುವಂತೆ ಸದ್ದು ಮಾಡುವುದಾಗಲಿ, ಆಹಾರವನ್ನು ರಾಶಿ ಹಾಕಿಕೊಂಡು ತಿನ್ನದೇ ಇರುವುದಾಗಲಿ ಮಾಡದೇ ಇರುವುದೂ ಸಹಭೋಜನದ ಉತ್ತಮ ಅಭ್ಯಾಸ. ಊಟ ಮಾಡುವಾಗ ತಟ್ಟೆಯ ಸುತ್ತ ಚೆಲ್ಲುವುದಾಗಲೀ, ಮೈಕೈಗಳಿಗೆ ಚೆಲ್ಲಿಕೊಳ್ಳುವುದಾಗಲೀ ಮಾಡದಿರುವುದು ಊಟದ ಶಿಷ್ಟಾಚಾರದ ಮಹತ್ವವನ್ನು ಹೆಚ್ಚಿಸುತ್ತದೆ; ಅಲ್ಲದೇ ನಾವು ತಿನ್ನುವ ಅನ್ನವನ್ನು ಗೌರವಿಸಿದಂತೆಯೂ ಆಗುತ್ತದೆ. ಊಟ ಮಾಡುವಾಗ ಮಾತಾಡಬಾರದು ಎನ್ನುವ ಹಿರಿಯರ ಆದೇಶದ ಹಿಂದಿರುವ ಆಶಯ – ಒಂದು, ಊಟವನ್ನು ಗೌರವಿಸುವುದು; ಇನ್ನೊಂದು, ಮಾತಾಡುತ್ತಾ ಊಟ ಮಾಡುವಾಗ ಆಕಸ್ಮಿಕವಾಗಿ ಬಾಯಿಂದ ಅನ್ನ ಸಿಡಿಯುವ ಸಂದರ್ಭಗಳೂ ಇಲ್ಲವೆನ್ನುವಂತಿಲ್ಲವಾದ್ದರಿಂದ. ಅದು ಅನ್ನಕ್ಕೆ ಮತ್ತು ಸದಾಚಾರಕ್ಕೆ ಕೊಟ್ಟ ಮಹತ್ವ. ಇನ್ನು ಊಟವನ್ನು ಆನಂದದಿಂದ ಚಪ್ಪರಿಸಿಕೊಂಡು ತಿನ್ನುವ ಸ್ವತಂತ್ರವೂ ನಮ್ಮದೇ ಆಗಿದ್ದರೂ ಭೋಜನದ ಹೊತ್ತಲ್ಲಿ ಇಂತಹ ಶಿಷ್ಟಾಚಾರವೂ ಅಗತ್ಯವೇ ಆಗಿದೆ.

ಊಟದ ಶಿಷ್ಟಾಚಾರದಷ್ಟೇ ಆಹಾರದ ಅಸಮರ್ಪಕ ಬಳಕೆಯ ಕುರಿತೂ ನಾಗರಿಕಪ್ರಜ್ಞೆ ಇರುವ ನಾವು ಯೋಚಿಸಬೇಕಾದ ಅಗತ್ಯ. ತಟ್ಟೆಯಲ್ಲಿ, ಎಲೆಯಲ್ಲಿ ಆಹಾರ ಬಿಡುವ ಮುನ್ನ ಖಂಡಿತ ನಾವು ಯೋಚಿಸಲೇಬೇಕು. ನಮ್ಮ ಈ ಜಗತ್ತಿನಲ್ಲಿ ಒಂದು ಹೊತ್ತು ಊಟವನ್ನೂ ನೋಡದೇ ಇರುವ ಲಕ್ಷಾಂತರ ಜನರಿದ್ದಾರೆ. ಅಂಥ ಜನರಿಗೆ ಒಂದು ಹೊತ್ತಿನ ಊಟ ಜೀವವುಳಿಸುವ ಅಗತ್ಯವಾಗಿದೆ. ಪ್ರತಿಯೊಂದು ತಟ್ಟೆಯಲ್ಲಿ ಹೆಚ್ಚಾಗಿ ಉಳಿದ ಅನ್ನ ನೋಡಿದಾಗ ನಮ್ಮಲ್ಲಿ ಕೊಂಚವಾದರೂ ಮುಜುಗರವಾದರೆ ಒಳಿತು. ಆ ಹೆಚ್ಚಾದ ಅನ್ನ ಇನ್ನೊಬ್ಬನ ಅಗತ್ಯವಾಗಿರುತ್ತದೆ. ಹಾಗಾಗಿ ಬಿಸಾಡುವ, ತಟ್ಟೆಯಿಂದ ಹೊರಚೆಲ್ಲುತ್ತಾ ಹೊರಗುಳಿದ ಅನ್ನ ನಾವು ಇನ್ನೊಬ್ಬನ  ಅನ್ನವನ್ನು ಎಳೆದು ತಿಂದಷ್ಟೇ ಅನ್ಯಾಯವೆನಿಸುತ್ತದೆ.

ನಗರ ಮತ್ತು ಪಟ್ಟಣಗಳ ಮದುವೆ ಮುಂತಾದ ಭರ್ಜರಿ ಸಮಾರಂಭಗಳಲ್ಲಿ ಎಲೆಯಲ್ಲಿ ಮತ್ತು ಹಾಗೇ ಹೆಚ್ಚಾಗಿ ಉಳಿಯುವ ಆಹಾರದ ಪ್ರಮಾಣ ಬಹಳ ದೊಡ್ಡದು ಎನ್ನುವುದಕ್ಕೆ ದೊರೆತಿರುವ ಅಂಕಿ–ಅಂಶಗಳೇ ಆಧಾರ. ಆಹಾರ ಅಗತ್ಯವೇ ಹೊರತು ಐಶಾರಾಮದ ಗುರುತಾಗಬಾರದು; ಅಹಂಕಾರದ ಗುರುತಾಗಬಾರದು. ಇದನ್ನು ನಾವು ನಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಹೇಳಿಕೊಡುವುದು ಉತ್ತಮ. ಹಾಗೇ ಬಾಲ್ಯದಿಂದಲೇ ಊಟ ಮಾಡುವ ಕ್ರಮವನ್ನೂ ಹೇಳಿಕೊಡುವುದು ಹೆತ್ತವರ ಜವಾಬ್ದಾರಿ. ಶುಚಿಯಾಗಿ ಊಟಮಾಡಬೇಕು; ಅನ್ನವನ್ನು ಗೌರವಿಸುತ್ತ ತಿನ್ನಬೇಕು; ಆಹಾರವನ್ನು ಚೆಲ್ಲಿ, ವ್ಯರ್ಥ ಮಾಡಬಾರದು; ಸದ್ದು ಮಾಡುತ್ತ, ಅಕ್ಕಪಕ್ಕದವರಿಗೆ ಮುಜುಗರವನ್ನುಂಟುಮಾಡಬಾರದು.

ಹೀಗೆ ಆಹಾರವನ್ನು ತಿನ್ನುವಾಗ ಅನುಸರಿಸಬೇಕಾದ ಉತ್ತಮ ಅಭ್ಯಾಸಗಳನ್ನು ಮಕ್ಕಳಿಗೆ ಹೇಳಿಕೊಟ್ಟರೆ ಬಹುಶಃ ಮುಂದೆ ದೊಡ್ಡವರಾಗಿ ಸಮುದಾಯದೊಂದಿಗೆ ಬದುಕುವಾಗ ಆಕೆ ಅಥವಾ ಅವನು ಸಾಮಾಜಿಕವಾಗಿ ಹೆಚ್ಚು ಸಲ್ಲುವವನಾಗುತ್ತಾನೆ/ಳೆ. ಹೀಗೆ ಆ ಮಗುವಿಗೆ ನಾಗರಿಕ ಜೀವನದ ಶಿಷ್ಟಾಚಾರ ಅರಿಯುವುದರೊಂದಿಗೆ ಅಗತ್ಯಗಳ ಮಹತ್ವವೂ ಮನದಟ್ಟಾಗಿರುತ್ತದೆ. ‘ದಾನೇ ದಾನೇ ಪೇ ಲಿಖ್ಖಾಹೇ ಖಾನೇ ವಾಲೇ ಕಾ ನಾಮ್’ ಎನ್ನುವ ಮಾತಿದೆ. ಪ್ರತಿ ಅಗಳಿನ ಮೇಲೂ ತಿನ್ನುವವನ ಹೆಸರಿರುತ್ತದೆಯಂತೆ. ಹಾಗಿದ್ದಲ್ಲಿ ನಾವು ಚೆಲ್ಲಿದ ಅನ್ನದ ಅಗಳುಗಳನ್ನು ನೋಡಿದರೆ ಎಷ್ಟು ಜನರ ಅನ್ನವನ್ನು ನಾವು ಕಸಿದುಕೊಂಡಿದ್ದೇವೆ ಎನ್ನುವುದು ಅರಿವಾಗುತ್ತದೆ. ಜಗತ್ತಿನ ಎಲ್ಲ ಸಂಸ್ಕೃತಿಗಳಲ್ಲೂ ‘ಟೇಬಲ್ ಎಟಿಕೇಟ್ಸ್ ’ ಎಂಬುದು ಮುಖ್ಯ. ನಮ್ಮ ನಡೆ–ನುಡಿಯಂತೆ ನಾವು ತಿನ್ನುವ ಕ್ರಮವೂ ನಮ್ಮ ವ್ಯಕ್ತಿತ್ವವನ್ನು ಪ್ರಕಟಿಸಬಲ್ಲ ಕ್ರಿಯೆ ಎನ್ನುವುದನ್ನು ಮರೆಯುವಂತಿಲ್ಲ.

**

ಊಟ ಮಾಡುವುದು ಕೇವಲ ಒಂದು ವೈಯಕ್ತಿಕವಾದ ಅಗತ್ಯವಲ್ಲ; ಅದೊಂದು ಕೌಟುಂಬಿಕ–ಸಾಮಾಜಿಕ ಸಾಮರಸ್ಯವನ್ನು ಕಾಪಾಡುವ ಸಾಂಸ್ಕೃತಿಕ ವಿಷಯವೂ ಹೌದು. ಶುಚಿತ್ವ, ಸಂಯಮ, ತಾಳ್ಮೆ, ಸಹಬಾಳ್ನೆ, ಸ್ನೇಹ, ಕೃತಜ್ಞತೆ, ಏಕಾಗ್ರತೆ, ವಿನಯ – ಹೀಗೆ ಹತ್ತು ಹಲವು ಗುಣಗಳು ಸೇರಿಕೊಂಡು ಊಟವೂ ಕಲೆಯಾಗುತ್ತದೆ. ಕಲೆಯ ಉದ್ದೇಶವೇ ಸಂತೋಷ. ಇದು ಅಂತರಂಗದ ಸಂತೋಷವೂ ಹೌದು, ಬಹಿರಂಗದ ಸಂತೋಷವೂ ಹೌದು. ಈ ಸಂತೋಷವೇ ನಮ್ಮ ದೈಹಿಕ ಆರೋಗ್ಯಕ್ಕೂ ಮಾನಸಿಕ ಆರೋಗ್ಯಕ್ಕೂ ಪೂರಕವಾಗಿರುವುದು.

**

ಪ್ರತಿ ಅನ್ನದ ಅಗಳಿನ ಮೇಲೂ ತಿನ್ನುವವನ ಹೆಸರಿರುತ್ತದೆಯಂತೆ. ಹಾಗಿದ್ದಲ್ಲಿ ನಾವು ಚೆಲ್ಲಿದ ಅನ್ನದ ಅಗಳುಗಳನ್ನು ನೋಡಿದರೆ ಎಷ್ಟು ಜನರ ಅನ್ನವನ್ನು ನಾವು ಕಸಿದುಕೊಂಡಿದ್ದೇವೆ ಎನ್ನುವುದು ಅರಿವಾಗುತ್ತದೆ. ನಮ್ಮ ನಡೆ–ನುಡಿಯಂತೆ ನಾವು ತಿನ್ನುವ ಕ್ರಮವೂ ನಮ್ಮ ವ್ಯಕ್ತಿತ್ವವನ್ನು ಪ್ರಕಟಿಸಬಲ್ಲ ಕ್ರಿಯೆ ಎನ್ನುವುದನ್ನು ಮರೆಯುವಂತಿಲ್ಲ.

ಪ್ರತಿಕ್ರಿಯಿಸಿ (+)