ಗುರುವಾರ , ಡಿಸೆಂಬರ್ 12, 2019
17 °C

ಕದನವಿರಾಮ ಉಲ್ಲಂಘನೆ: ಗ್ರಾಮಗಳ ಮೇಲೆ ಪಾಕ್‌ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕದನವಿರಾಮ ಉಲ್ಲಂಘನೆ: ಗ್ರಾಮಗಳ ಮೇಲೆ ಪಾಕ್‌ ದಾಳಿ

ಜಮ್ಮು: ಪೂಂಚ್‌ ವಲಯದ ಗಡಿ ನಿಯಂತ್ರಣ ರೇಖೆಯಲ್ಲಿನ ಭಾರತದ ಮುಂಚೂಣಿ ನೆಲೆಗಳು ಮತ್ತು ಗ್ರಾಮಗಳ ಮೇಲೆ ಪಾಕಿಸ್ತಾನದ ದಾಳಿ ಸೋಮವಾರವೂ ಮುಂದುವರಿಯಿತು. ಸಣ್ಣ ಫಿರಂಗಿ ಮತ್ತು ಶಸ್ತ್ರಾಸ್ತ್ರಗಳ ಮೂಲಕ ದಾಳಿ ನಡೆದಿದೆ. ಇದರಿಂದ ವ್ಯಾಪಾರ ನೆರವು ಕೇಂದ್ರ ಮತ್ತು ಪೊಲೀಸ್‌ ಬ್ಯಾರಕ್‌ಗಳಿಗೆ ಹಾನಿಯಾಗಿದೆ.

‘ಪಾಕಿಸ್ತಾನಿ ಪಡೆಗಳು ಭಾನುವಾರ ರಾತ್ರಿಯಿಡೀ ಭಾರಿ ಮದ್ದುಗುಂಡು ಮತ್ತು ಶೆಲ್‌ ದಾಳಿ ನಡೆಸಿದವು. ಇದು ಸೋಮವಾರ ಮಧ್ಯಾಹ್ನ 1 ಗಂಟೆವರೆಗೂ ಮುಂದುವರಿಯಿತು’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಾಕಿಸ್ತಾನ ಇತ್ತೀಚೆಗೆ 23 ಬಾರಿ ಕದನವಿರಾಮ ಉಲ್ಲಂಘನೆ ಮಾಡಿದೆ. ಕಳೆದ ತಿಂಗಳು ಗಡಿ ರಕ್ಷಣಾ ತಂಡ (ಬ್ಯಾಟ್‌) ನಡೆಸಿದ ದಾಳಿಯಲ್ಲಿ  ಮೂವರು ಯೋಧರು ಸೇರಿ ನಾಲ್ವರು ಮೃತಪಟ್ಟಿದ್ದಾರೆ. 12 ಮಂದಿ ಗಾಯಗೊಂಡಿದ್ದಾರೆ.

ಮೂವರು ಉಗ್ರರ ಹತ್ಯೆ (ಶ್ರೀನಗರ): ಉತ್ತರ ಕಾಶ್ಮೀರದ ನೌಗಾಮ್‌ ವಲಯದ ಗಡಿ ನಿಯಂತ್ರಣ ರೇಖೆಯಲ್ಲಿ  ಅಕ್ರಮವಾಗಿ ಒಳನುಸುಳುವಿಕೆಯನ್ನು ತಡೆದಿರುವ ಸೇನೆ, ಮೂವರು ಉಗ್ರರನ್ನು  ಹತ್ಯೆ  ಮಾಡಿದೆ.

‘ಗಡಿ ನಿಯಂತ್ರಣ ರೇಖೆಯಲ್ಲಿ ಭಾನುವಾರ ರಾತ್ರಿ ಅನುಮಾನಾಸ್ಪದವಾಗಿ ಕೆಲವರ ಚಲನವಲನ ಗಮನಕ್ಕೆ ಬಂತು. ಉಗ್ರರ ಜಾಡು ಹಿಡಿದು ದಾಳಿ ನಡೆಸಲಾಯಿತು’ ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅರಣ್ಯಗಳಲ್ಲಿ ಉಗ್ರರು ತಪ್ಪಿಸಿಕೊಂಡು ಹೋಗದಂತೆ ನೋಡಿಕೊಳ್ಳಲು ಜಂಟಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)