ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಗೆ ಮರ ಸ್ಥಳಾಂತರದ ಪಾಠ

ನೆಲಕಚ್ಚಬೇಕಿದ್ದ ನೇರಳೆ ಮರಕ್ಕೆ ಮರುಜೀವ ನೀಡಿದ ವೃಕ್ಷಪ್ರೇಮಿ ದೇವರಾಜ್‌
Last Updated 10 ಜುಲೈ 2017, 18:54 IST
ಅಕ್ಷರ ಗಾತ್ರ

ಬೆಂಗಳೂರು: ನೆರೆಹೊರೆಯವರಿಗೆ ಹೊರೆಯಾಗಿ ನೆಲಕಚ್ಚಬೇಕಿದ್ದ ನೇರಳೆಮರವೊಂದು ವೃಕ್ಷಪ್ರೇಮಿಯ ಕಾಳಜಿಯಿಂದಾಗಿ ಮರುಹುಟ್ಟು ಪಡೆದಿದೆ.

ಆಸುಪಾಸಿನ ಮನೆಯವರು ಕಡಿಯಲು ಉದ್ದೇಶಿಸಿದ್ದ ಮರವನ್ನು  ಮತ್ತೊಂದೆಡೆ ಸ್ಥಳಾಂತರಿಸುವ ಮೂಲಕ  ಅದಕ್ಕೆ ಮರುಹುಟ್ಟು ನೀಡಿದ ವೃಕ್ಷಪ್ರೇಮಿ ದೇವರಾಜ್‌ ಅವರ ಪರಿಸರ ಕಾಳಜಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಹೊಸ ಪಾಠವನ್ನೂ ಕಲಿಸಿತು.

ಸರ್ಜಾಪುರದಲ್ಲಿ ಗಲ್ಲಿಯೊಂದರಲ್ಲಿ ಬೆಳೆದ ನೇರಳೆ ಮರವು ಕಿರಿಕಿರಿ ಉಂಟು ಮಾಡುತ್ತಿದೆ ಎಂಬ ಕಾರಣಕ್ಕೆ ಅದನ್ನು  ಕಡಿಯಲು ಆಸುಪಾಸಿನ ಮನೆಯವರು ನಿರ್ಧರಿಸಿದ್ದರು. ಈ ವಿಚಾರ ದೇವರಾಜ್‌ ಅವರ ಕಿವಿಗೆ ಬಿದ್ದಿತ್ತು. ಅವರು ಆ ಮನೆಯವರ ಮನವೊಲಿಸಿ ಆ ಮರವನ್ನು ಸ್ಥಳಾಂತರಿಸಲು ಮುಂದಾದರು.

ದೇವರಾಜ್‌ ಅವರು ಮರದ ಬುಡವನ್ನು ಸ್ವತಃ ಬಿಡಿಸಿ, ಸ್ಥಳಾಂತರಕ್ಕೆ  ಸಿದ್ಧಗೊಳಿಸಿದ್ದರು. ಅದನ್ನು ಸೋಮವಾರ ಜೆಸಿಬಿ  ಸಹಾಯದಿಂದ ಮೇಲಕ್ಕೆತ್ತಲಾಯಿತು. ನಂತರ ಟ್ರ್ಯಾಕ್ಟರ್‌ನಲ್ಲಿ ಅದನ್ನು ಸರ್ಜಾಪುರ  ಸರ್ಕಾರಿ ಆಟದ ಮೈದಾನಕ್ಕೆ ಸ್ಥಳಾಂತರಿಸಿ ಅಲ್ಲಿ ಮರುನಾಟಿ ಮಾಡಲಾಯಿತು.

ಶಾಲಾ ವಿದ್ಯಾರ್ಥಿಗಳಲ್ಲೂ ಮರಗಳನ್ನು ಉಳಿಸುವ ಕಾಳಜಿ ಬೆಳೆಸಬೇಕು ಎಂಬ ಉದ್ದೇಶದಿಂದ  ಮರ ಸ್ಥಳಾಂತರ ಪ್ರಕ್ರಿಯೆಯನ್ನು ವೀಕ್ಷಿಸಲು ಸ್ಥಳೀಯ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಯಿತು.  ಸರ್ಜಾಪುರದ ಸರ್ಕಾರಿ ಪ್ರೌಢಶಾಲೆಯ 150 ವಿದ್ಯಾರ್ಥಿಗಳು ಹಾಗೂ ಸರ್ದಾರ್‌ ವಲ್ಲಭಬಾಯಿ ಪ್ರೌಢಶಾಲೆಯ 300 ವಿದ್ಯಾರ್ಥಿಗಳು ಈ ಇಡೀ ಪ್ರಕ್ರಿಯೆಯನ್ನು ಕಣ್ತುಂಬಿಕೊಂಡರು.

ಯಾರು ಈ ವೃಕ್ಷಪ್ರೇಮಿ? : ‘ದೇವರಾಜ್‌ ಅವರು ಈ ಹಿಂದೆ ಮರಗಳನ್ನು ಕಡಿಯುವ ವೃತ್ತಿಯಲ್ಲಿ ತೊಡಗಿದ್ದರು. ಇತ್ತೀಚೆಗೆ ಈ ಕಾಯಕವನ್ನು ಸಂಪೂರ್ಣ ತ್ಯಜಿಸಿರುವ ಅವರು ಮರಗಳನ್ನು ಕಡಿಯುವ ಬದಲು ಸ್ಥಳಾಂತರಿಸುವ ಕಾರ್ಯದಲ್ಲಿ ತೊಡಗಿದ್ದಾರೆ’ ಎನ್ನುತ್ತಾರೆ ಸರ್ಜಾಪುರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಜಾಯ್.

‘ಮರವನ್ನು ಸ್ಥಳಾಂತರಿಸುವುದಕ್ಕೂ ಸಾವಿರಾರು ರೂಪಾಯಿ ಹಣ ಬೇಕು. ದೇವರಾಜ್‌ ಅವರು ಸ್ವಂತ ಹಣ ವ್ಯಯ ಮಾಡಿ ಮರಗಳ ಸ್ಥಳಾಂತರ ಮಾಡುತ್ತಾರೆ’ ಎಂದರು.

ನೇರಳೆ ಮರವನ್ನು ಸ್ಥಳಾಂತರಿಸುವಾಗ ಅನಿರೀಕ್ಷಿತವಾಗಿ ಸ್ಥಳಕ್ಕೆ ಬಂದ ಉದ್ಯಮಿಯೊಬ್ಬರು ಈ ಕಾರ್ಯಕ್ಕಾಗಿ ₹ 5,000 ನೀಡಿದರು.
‘ಸಾರ್ವಜನಿಕರು ಇಂತಹ ಪುಣ್ಯಕಾರ್ಯದಲ್ಲಿ ಕೈಜೋಡಿಸಿದರೆ, ದೇವರಾಜ್‌ ಅವರಿಗೆ ಇನ್ನಷ್ಟು ಉತ್ತೇಜನ ಸಿಗಲಿದೆ’ ಎನ್ನುತ್ತಾರೆ ಜಾಯ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT