ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಷ್ಠಶಿಲ್ಪಗಳಲ್ಲಿ ನರ್ತಿಸುತ್ತಿರುವ ಮದನಿಕೆಯರು

Last Updated 12 ಜುಲೈ 2017, 19:30 IST
ಅಕ್ಷರ ಗಾತ್ರ

-ಅಭಿಲಾಷ ಬಿ.ಸಿ.
ವಿಧ ಭಾವ ಭಂಗಿಯಲ್ಲಿ ನಿಂತು ನೋಡುಗರನ್ನು ಸೆಳೆಯುವ ಮದನಿಕೆಯರು, ಶಾಂತಮೂರ್ತಿ ಬುದ್ಧ, ಧ್ಯಾನಸ್ಥರಾಗಿರುವ ಸ್ವಾಮಿ ವಿವೇಕಾನಂದ... ಈ ಚಿತ್ತಾಕರ್ಷಕ ಶಿಲ್ಪಗಳನ್ನು ಮಹಾತ್ಮ ಗಾಂಧಿ ಮೆಟ್ರೊ ನಿಲ್ದಾಣದ ರಂಗೋಲಿ ಕಲಾ ಕೇಂದ್ರದಲ್ಲಿ ನಡೆಯುತ್ತಿರುವ ಕಾಷ್ಠ ಶಿಲ್ಪಗಳ ಪ್ರದರ್ಶನದಲ್ಲಿ ನೋಡಬಹುದು.

ಇಲ್ಲಿ ಬೇಲೂರಿನ ಶಿಲಾಬಾಲಿಕೆಯರು ಕಾಷ್ಠಗಳ ಚೌಕಟ್ಟಿನಲ್ಲಿ ಶೃಂಗಾರ ಮಾಡಿಕೊಳ್ಳುತ್ತಾ, ನರ್ತನ ಮಾಡುತ್ತಿದ್ದಾರೆ. ಈ ಬಾಲಿಕೆಯರನ್ನು ಕಾಷ್ಠಗಳ ಮೇಲೂ ಅಷ್ಟೇ ಅಪೂರ್ವವಾಗಿ ರಚಿಸಲು ಸಾಧ್ಯವಿದೆ ಎಂಬುದನ್ನು ಇಲ್ಲಿ ಕಲಾವಿದರು ನಿರೂಪಿಸಿದ್ದಾರೆ. ತೇಗ ಮತ್ತು ಶಿವಹೊನ್ನೆ ಮರಗಳನ್ನು ಬಳಸಿ ಕೆತ್ತಲಾಗಿರುವ ಕಲಾಕೃತಿಗಳು ಕಲಾವಿದರ ಕಲಾಜ್ಞಾನಕ್ಕೆ ಹಿಡಿದ ಕನ್ನಡಿಯಂತಿದೆ.

ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಮತ್ತು ಬೆಂಗಳೂರು ಮೆಟ್ರೊ ರೈಲು ನಿಗಮವು ಜೂನ್ ಒಂಬತ್ತರಂದು ಸ್ವಾಮಿ ವಿವೇಕಾನಂದ ಮೆಟ್ರೊ ನಿಲ್ದಾಣದಲ್ಲಿ ಕಾಷ್ಠ ಶಿಲ್ಪಕಲಾ ಶಿಬಿರ ಆಯೋಜಿಸಿತ್ತು. ಒಂದು ವಾರ ನಡೆದ ಶಿಬಿರದಲ್ಲಿ ರಚಿಸಲಾದ ಶಿಲ್ಪಗಳನ್ನು ಇಲ್ಲಿ ಸಾರ್ವಜನಿಕರಿಗೆ ಪ್ರದರ್ಶನಕ್ಕೆ ಇಡಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಬಂದ 16 ಕಲಾವಿದರು ರಚಿಸಿರುವ ಕಲಾಕೃತಿಗಳನ್ನು ವೀಕ್ಷಿಸುವ ಅಪೂರ್ವ ಅವಕಾಶ ಇಲ್ಲಿದೆ.

ದರ್ಪಣ ಸುಂದರಿ, ನಾಟ್ಯ ಶಾಂತಲಾ, ಶುಕಭಾಷಿಣಿ ಮೊದಲಾದ ಮದನಿಕೆಯರನ್ನು ಅಷ್ಟೇ ಸಹಜವಾಗಿ ಕೆತ್ತನೆಯಲ್ಲಿ ಮೂಡಿಸಲಾಗಿದೆ. ಗಣಪತಿ, ಸರಸ್ವತಿ ಮೊದಲಾದ ದೇವರುಗಳ ಮೂರ್ತಿಗಳಂತೂ ಭಕ್ತಿಭಾವವನ್ನು ಸ್ಫುರಿಸುವಂತಿವೆ. ಹೊಯ್ಸಳ ಶೈಲಿಯಲ್ಲಿರುವ ಈ ಶಿಲ್ಪಗಳನ್ನು ಕಲಾವಿದ ವಿ.ಕೆ. ಚಿದಾನಂದಾಚಾರ್ಯ ಅವರ ನಿರ್ದೇಶನದಲ್ಲಿ ರಚಿಸಲಾಗಿದೆ.

ಚಿದಾನಂದ ಎಂ. ಮಹೇಶ್ ಜೋಗಿ, ವಿಶ್ವನಾಥ ಸಿ. ರಕ್ಕಪ್ಪ ಕಂಬಾರ, ಮಲ್ಲಿಕಾರ್ಜುನ, ಶಿವಕುಮಾರ್ ಜಿ.ವಿ. ಮತ್ತು ಮಂಜುನಾಥ ಆಚಾರ್ಯ ಇನ್ನಿತರ ಕಲಾವಿದರು ನಾಟ್ಯ ಭಂಗಿಯ ಮತ್ತು ಶೃಂಗಾರ ಮಾಡಿಕೊಳ್ಳುತ್ತಿರುವ ಮದನಿಕೆಯರನ್ನು ರಚಿಸಿದ್ದಾರೆ. ಶಿಬಿರದಲ್ಲಿ ಭಾಗವಹಿಸಿದ್ದ ಏಕೈಕ ಮಹಿಳಾ ಕಲಾವಿದೆ ಸುಮಲತಾ ವಿ. ಕವಲೂರು ಅವರು ಬೋಧಕ ಬುದ್ಧನ ಮೂರ್ತಿಯನ್ನು ರಚಿಸಿದರೆ, ಗುರುರಾಜ್ ಸಿ. ಉಡಿಗಾರ್ ಅವರು ಧ್ಯಾನಸ್ಥ ಬುದ್ಧನ ಮೂರ್ತಿಯನ್ನು ಕೆತ್ತಿದ್ದಾರೆ. ಎಂ ವಸಂತ ಕುಮಾರ ಅವರು ಉಳಿಯಲ್ಲಿ ಅರಳಿಸಿರುವ ಗಣಪತಿಯ ಮೂರ್ತಿ ವೀಕ್ಷಕರ ಗಮನ ಸೆಳೆಯುವಂತಿದೆ.

ಶಿಲ್ಪಕಲೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮತ್ತು ಆಸಕ್ತಿ ಬೆಳೆಸುವ ಉದ್ದೇಶದಿಂದ ಅಕಾಡೆಮಿಯು ಈ ಪ್ರದರ್ಶನವನ್ನು ಏರ್ಪಡಿಸಿದ್ದು, ಸಾರ್ವಜನಿಕರಿಗೆ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT