ಬುಧವಾರ, ಫೆಬ್ರವರಿ 19, 2020
24 °C
ಜಾಲದಲ್ಲಿ ಸಿಲುಕಿದವರ ಅಂತರಾಳ ಬಿಚ್ಚಿಟ್ಟ ವರದಿ: ವಿವಾಹ ನೆಪದಲ್ಲಿ ಮಾರಾಟಕ್ಕೆ ‘ಗುಜ್ಜರ್‌ ಮದುವೆ’ ಸಾಕ್ಷಿ

₹1,000ಕ್ಕೂ ಬಿಕರಿಯಾಗಿದ್ದಾರೆ ಮುಗ್ಧ ಬಾಲೆಯರು!

ರಾಜೇಶ್ ರೈ ಚಟ್ಲ Updated:

ಅಕ್ಷರ ಗಾತ್ರ : | |

₹1,000ಕ್ಕೂ ಬಿಕರಿಯಾಗಿದ್ದಾರೆ ಮುಗ್ಧ ಬಾಲೆಯರು!

ಬೆಂಗಳೂರು: ರಾಜ್ಯದಲ್ಲಿ ಲೈಂಗಿಕ ವೃತ್ತಿಯಲ್ಲಿರುವ ಶೇಕಡಾ 33ಕ್ಕೂ ಹೆಚ್ಚು ಹೆಣ್ಣು ಮಕ್ಕಳ ಮಾರುಕಟ್ಟೆ ದರ ಕೇವಲ ₹1,000ದಿಂದ ₹5,000!

ಶೇಕಡಾ 50ರಷ್ಟು ಮಹಿಳೆಯರು ₹5,000ದಿಂದ ₹15,000 ಮಧ್ಯೆ ಮಾರಾಟ ಆಗಿದ್ದಾರೆ. ಉಳಿದ ಶೇಕಡಾ 17ರಷ್ಟು ಮಹಿಳೆಯರು ಮಾತ್ರ ₹15,000ಕ್ಕೂ ಹೆಚ್ಚು ಬೆಲೆಗೆ ಬಿಕರಿ ಆಗುತ್ತಾರೆ!!

‘ಲೈಂಗಿಕ ವೃತ್ತಿನಿರತರು ಸರಕಿನಂತೆ ಮಾರಾಟವಾಗುವುದು ಮನುಷ್ಯ ಘನತೆಯ ಅಧಃಪತನ; ಪ್ರಜ್ಞಾವಂತ ಸಮಾಜ ತಲೆತಗ್ಗಿಸುವ ಸಂಗತಿ’ ಎಂದು ‘ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿಗಳ ಅಧ್ಯಯನ’ ವರದಿ ಹೇಳಿದೆ.

ಲೈಂಗಿಕ ವೃತ್ತಿಯಲ್ಲಿ ಸಣ್ಣ ವಯಸ್ಸಿನ ಹೆಣ್ಣು ಮಕ್ಕಳು ಅಪಾರ ಸಂಖ್ಯೆಯಲ್ಲಿ ಇದ್ದಾರೆ. ಪೋಷಕರ ಭದ್ರತೆಯಲ್ಲಿ ಇರಬೇಕಾದ ಶಾಲಾ ವಯಸ್ಸಿನ ಮುಗ್ಧ ಬಾಲೆಯರು ಲಕ್ಷಾಂತರ ಸಂಖ್ಯೆಯಲ್ಲಿ ಇದ್ದಾರೆ.

ಗಿರಾಕಿಗಳ ಬೇಡಿಕೆಯಿಂದಾಗಿ ಹಲವು ಮಕ್ಕಳು ಮಾರಾಟ ವಸ್ತುಗಳಾಗಿ ಈ ದಂಧೆಯ ಜಾಲದಲ್ಲಿ ಸಿಲುಕಿದ್ದಾರೆ. ಏನೂ ಅರಿಯದ ಮಕ್ಕಳನ್ನು ಹಣದಾಸೆಗೆ ಈ ದಂಧೆಗೆ ದೂಡಲಾಗುತ್ತದೆ. ಗ್ರಾಮೀಣ ಕುಟುಂಬದ ಬಡ ಹೆಣ್ಣು ಮಕ್ಕಳನ್ನು ಆಮಿಷ ಒಡ್ಡಿ ತಳ್ಳಲಾಗುತ್ತದೆ. ಹೀಗೆ ಕಾಣೆಯಾದ ಮಕ್ಕಳನ್ನು ಪತ್ತೆ ಹಚ್ಚಲು ಕುಟುಂಬಗಳು ವಿಫಲವಾಗುತ್ತವೆ ಎನ್ನುವ ಅಂಶ ವರದಿಯಲ್ಲಿದೆ.

ಈ ದಂಧೆಗೆ ಮೂರು ಸ್ವರೂಪಗಳಿವೆ ಎನ್ನುವುದನ್ನು ವರದಿಯಲ್ಲಿ ಹೇಳಲಾಗಿದೆ. ಆರಂಭದಲ್ಲಿ ಮಹಿಳೆಯರು ಮಾನವ ಕಳ್ಳಸಾಗಣೆ ಅಥವಾ ಮಾರಾಟದ ಮೂಲಕ ಅಥವಾ ಸಂಬಂಧಿಗಳ, ಪರಿಚಿತರ ವಂಚನೆಗೊಳಗಾಗಿ ಈ ದಂಧೆಗೆ ಬೇರೆ ವಿಧಿ ಇಲ್ಲದೆ ಸೇರ್ಪಡೆಗೊಳ್ಳುತ್ತಾರೆ. ಎರಡನೇ ಹಂತದಲ್ಲಿ ಬೇಡಿಕೆ ಇರುವವರೆಗೆ ಅಥವಾ ಸೌಂದರ್ಯ ಮಾಸುವವರೆಗೆ ದಂಧೆಯಲ್ಲಿ ತೊಡಗಿರುತ್ತಾರೆ. ಮೂರನೇ ಹಂತದಲ್ಲಿ, ಬೇಡಿಕೆ ಕುಸಿಯುವುದರಿಂದ ಆರ್ಥಿಕ ಸಮಸ್ಯೆಗೆ ಒಳಗಾಗಿ ಜೀವನೋಪಾಯಕ್ಕಾಗಿ ದಲ್ಲಾಳಿಗಳಾಗಿ ದಂಧೆ ಮುಂದುವರಿಸುತ್ತಾರೆ. ಮಾನವ ಕಳ್ಳಸಾಗಣೆಯ ಹಿಂದಿನ ಮುಖ್ಯ ಕಾರಣ ಲೈಂಗಿಕ ಶೋಷಣೆ ಎನ್ನುವುದನ್ನು ಗಮನಿಸಬೇಕು ಎನ್ನುತ್ತದೆ ವರದಿ.

ಮಾನವ ಕಳ್ಳಸಾಗಣೆಯಲ್ಲಿ ದೇಶದಲ್ಲೇ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. 2009–12 ಅವಧಿಯಲ್ಲಿ ಅತಿ ಹೆಚ್ಚು ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿವೆ.

ಗೃಹ ಇಲಾಖೆ ಮಾಹಿತಿ ಪ್ರಕಾರ ಈ ನಾಲ್ಕು ವರ್ಷಗಳಲ್ಲಿ ಕರ್ನಾಟಕದಲ್ಲಿ 1,379 ಪ್ರಕರಣಗಳು ದಾಖಲಾಗಿವೆ. ಈ ಪಟ್ಟಿಯಲ್ಲಿ ತಮಿಳುನಾಡು 2,244 ಮೊದಲ ಸ್ಥಾನಲ್ಲಿದ್ದು, ಅತಿ ಹೆಚ್ಚು ಮಾನವ ಕಳ್ಳಸಾಗಣೆಯ ರಾಜ್ಯ ಎಂಬ ಅಪಖ್ಯಾತಿ ಪಡೆದಿದೆ. 2ನೇ ಸ್ಥಾನದಲ್ಲಿ ಆಂಧ್ರ ಪ್ರದೇಶ (2,157) ಇದೆ.

ಕೇಂದ್ರ ಸರ್ಕಾರದ ಅಂಕಿಅಂಶಗಳ ಪ್ರಕಾರ ದೇಶದಲ್ಲಿ 5 ಲಕ್ಷ ಹೆಣ್ಣು ಮಕ್ಕಳು ಲೈಂಗಿಕ ಉದ್ಯಮದಲ್ಲಿದ್ದಾರೆ. ಆದರೆ, 20 ಲಕ್ಷಕ್ಕಿಂತಲೂ ಹೆಚ್ಚು ಮಹಿಳೆಯರು ಮತ್ತು ಹೆಣ್ಣು ಮಕ್ಕಳು ದೇಶದ ‘ಕೆಂಪು ದೀಪ’ ಪ್ರದೇಶಗಳಲ್ಲಿ ವಾಣಿಜ್ಯ ಲೈಂಗಿಕ ದಂಧೆಯಲ್ಲಿ ಸಿಕ್ಕಿಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಪೈಕಿ, ಮುಂಬೈಯ ವೇಶ್ಯಾಗೃಹಗಳು ಮತ್ತು ಕೊಲ್ಕತ್ತದ ವಾಣಿಜ್ಯ ಲೈಂಗಿಕ ದಂಧೆಯಲ್ಲಿ ತಲಾ ಶೇಕಡಾ 20ರಷ್ಟು ಮಂದಿ ಇದ್ದಾರೆ. ಅದರಲ್ಲೂ ಅರ್ಧದಷ್ಟು ಮಹಿಳೆಯರು ಎಚ್ಐವಿ ಸೋಂಕಿತರು ಎನ್ನುವುದು ದಂಧೆಯ ದುಷ್ಪರಿಣಾಮಗಳಿಗೆ ಸಾಕ್ಷಿ ಎಂದು ವರದಿ ಹೇಳುತ್ತದೆ.

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಪ್ರಕಾರ ದೇಶದಲ್ಲಿ 30 ಲಕ್ಷ ಲೈಂಗಿಕ ವೃತ್ತಿನಿರತರಿದ್ದಾರೆ. ಅವರಲ್ಲಿ ಶೇ 40ರಷ್ಟು ಬಾಲಕಿಯರು. ಶೇ 15ರಷ್ಟು ಮಂದಿ 15 ವರ್ಷ ತುಂಬುವ ಮೊದಲೇ ಈ ದಂಧೆಗೆ ಬಂದಿದ್ದಾರೆ. ಶೇ 60ರಷ್ಟು ಮಂದಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ಜಾತಿಗೆ ಸೇರಿದವರು ಎಂದು ದಾಖಲಾಗಿದೆ.

ಸಮಿತಿ ಸಂವಾದ ನಡೆಸಿದ ಲೈಂಗಿಕ ವೃತ್ತಿನಿರತರ ಪೈಕಿ ಕಳ್ಳಸಾಗಣೆಯಿಂದ ಈ ದಂಧೆಗೆ ಅನಿವಾರ್ಯವಾಗಿ ಇಳಿದವರು ಶೇ 5 ರಷ್ಟು. ಆ ಪೈಕಿ, ಬಹುತೇಕರು ಬೆಳಗಾವಿ (20), ಮೈಸೂರು (48) ಚಿಕ್ಕಮಗಳೂರು (71), ಬೆಂಗಳೂರು ನಗರ (270) ಮತ್ತು ಬೆಂಗಳೂರು ಗ್ರಾಮಂತರ (71) ಜಿಲ್ಲೆಯವರು.

ವಿಪರ್ಯಾಸವೆಂದರೆ, ದಂಧೆಯಲ್ಲಿರುವ ಹೆಣ್ಣು ಮಕ್ಕಳಲ್ಲಿ ಸುಮಾರು ಶೇ 50ರಷ್ಟು ಮಂದಿಗೆ  ಮಾರಾಟಗೊಂಡ ಕುರಿತು  ಅರಿವೇ ಇಲ್ಲ. ದಂಧೆಗೆ ಬರುವಾಗ ಅವರು ಅಪ್ರಾಪ್ತ ವಯಸ್ಸಿನವರು. ಪ್ರತಿ ಜಿಲ್ಲೆಯಲ್ಲಿರುವ ಲೈಂಗಿಕ ಕಾರ್ಯಕರ್ತೆಯರಲ್ಲಿ ಶೇಕಡಾ 20ರಷ್ಟು ಮಂದಿ ಮಾರಾಟಕ್ಕೆ ಒಳಗಾಗಿ ಈ ಕಸುಬು ನಡೆಸುತ್ತಿದ್ದಾರೆ ಎಂದು ವರದಿ ಹೇಳಿದೆ.

ಮಾನವ ಕಳ್ಳಸಾಗಣೆ ಮತ್ತು ದಂಧೆ ನಡುವೆ ನೇರ ಸಂಬಂಧ ಇರುವುದನ್ನು ಸಮಿತಿ ಗಮನಿಸಿದೆ. ಮದುವೆ ನೆಪದಲ್ಲಿ ಮಾನವ ಕಳ್ಳಸಾಗಣೆ ಆಗುತ್ತಿರುವುದಕ್ಕೆ ‘ಗುಜ್ಜರ್‌’ ಮದುವೆ ಸಾಕ್ಷಿ.

ಆದರೆ, ಮಾರಾಟವಾಗಿರುವ ಮಹಿಳೆಯರ ಪೈಕಿ ಶೇ 88ರಷ್ಟು ಮಂದಿ ಒತ್ತಡ, ಭಯ, ಅರಿವಿನ ಕೊರತೆಯಿಂದ ದೂರು ನೀಡಲು ಮುಂದೆ ಬಂದಿಲ್ಲ ಎಂದೂ ವರದಿ ಹೇಳಿದೆ.

(ನಾಳಿನ ಸಂಚಿಕೆಯಲ್ಲಿ.. ‘ಕದ್ದೊಯ್ದು ದಂಧೆಗೆ ದೂಡುವ ಜಾಲ ವ್ಯಾಪಕ’)

**

ಮಾನವ ಕಳ್ಳಸಾಗಣೆಯ ಸೂತ್ರಧಾರರಿವರು
ಮಾರಾಟ ಮಾಡಿದವರು ಶೇ
ಸಂಬಂಧಿಕರು 2.4
ಅಪರಿಚಿತರು 26.4
ಪ್ರಿಯಕರ 10.8
ಪೋಷಕರು/ಬಂಧುಗಳು 1.4
ಇತರರು 49.5
ಒಂದಕ್ಕಿಂತ ಹೆಚ್ಚು 9.5

**

ಧರ್ಮಗುರುಗಳು, ಉಪಾಧ್ಯಾಯರೂ ಕಳ್ಳಸಾಗಣೆದಾರರು!

ಮಾನವ ಕಳ್ಳಸಾಗಣೆಗೆ ಒಳಗಾದವರ ಜೊತೆಗಿನ ಮಾತುಕತೆಯ ಸಂದರ್ಭದಲ್ಲಿ ದಂಧೆ ನಿರತರರಿಂದ ವ್ಯಕ್ತವಾದ ಒಡಲಾಳದ ನೋವುಗಳನ್ನು ವರದಿಯುಲ್ಲಿ ನೀಡಲಾಗಿದೆ. ಈ ನೋವಿನ ಪರಿಣಾಮವಾಗಿ ಅವರು ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಕಳ್ಳಸಾಗಣೆ ಮಾಡುವವರು ಪೋಷಕರು, ಒಡಹುಟ್ಟಿದವರು, ಸಂಬಂಧಿಕರು, ಸಮುದಾಯದ ಸ್ನೇಹಿತರು, ಶಾಲಾ ಉಪಾಧ್ಯಾಯರು, ಸ್ಥಳೀಯ ಮುಖಂಡರು, ಗ್ರಾಮಸ್ಥರು, ನಿರುದ್ಯೋಗಿಗಳು, ಧರ್ಮಗುರುಗಳು, ದಂಧೆಯಲ್ಲಿ ಇರುವವರು, ನೇಮಕಾತಿ ಸಂಸ್ಥೆಯವರು, ಪ್ರವಾಸೋದ್ಯಮ ಗೈಡುಗಳು, ವಿವಾಹ ಸಂಪರ್ಕ ಕೇಂದ್ರಗಳು, ಪ್ರಭಾವಶಾಲಿ ಅಧಿಕಾರಿಗಳು ಮತ್ತು ಸ್ಥಳೀಯರು ಎಂಬ ಸತ್ಯವನ್ನು ಹಂಚಿಕೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅದರಲ್ಲೂ ರಕ್ತ ಸಂಬಂಧಿಗಳು, ಪ್ರೇಮಿಗಳು, ಪರಿಚಿತರು ಮುಂಚೂಣಿಯಲ್ಲಿದ್ದಾರೆ. ಹೀಗೆ ಮಾರಾಟ ಆದವರ ಪೈಕಿ ಅರ್ಧದಷ್ಟು ಪ್ರಕರಣಗಳಲ್ಲಿ ಹೆಣ್ಣು ಮಕ್ಕಳನ್ನು ದಲ್ಲಾಳಿಗಳು, ವೇಶ್ಯಾಗೃಹಗಳ ಮಾಲೀಕರು ಮಾರಾಟ ಮಾಡಿರುವುದು ಗೊತ್ತಾಗಿದೆ.

ಪತಿಯಿಂದ ಪ್ರತ್ಯೇಕವಾದವರು, ಕಾನೂನುಬಾಹಿರ ವಲಸೆಗಾರರು, ಬಾಲ ಕಾರ್ಮಿಕರು, ಕಾಣೆಯಾದವರು, ಎಚ್ಐವಿ/ ಏಡ್ಸ್‌ನಿಂದ ಬಳಲುತ್ತಿರುವವರು, ನಿರ್ಲಕ್ಷಿತ ಮಕ್ಕಳು ಆರ್ಥಿಕ ಕಾರಣಕ್ಕಾಗಿ ಕಳ್ಳಸಾಗಣೆಯ ಜಾಲಕ್ಕೆ ಸಿಕ್ಕಿದ್ದಾರೆ. ಬೇಜವಾಬ್ದಾರಿ ಗಂಡನಿಂದ ಮಕ್ಕಳು ಬೀದಿಗೆ ಬೀಳಬಾರದೆಂದು ಅನೇಕ ಮಹಿಳೆಯರು ಈ ಕೆಲಸಕ್ಕೆ ಇಳಿದಿದ್ದಾರೆ.

**

‘4,000ಕ್ಕೆ ಮಾರಾಟ ಆಗಿದ್ದೆ’

‘13 ವರ್ಷದವಳಾಗಿದ್ದಾಗಲೇ ತಾಯಿಯ ತಮ್ಮನ ಜೊತೆ ನನಗೆ ಮದುವೆಯಾಗಿತ್ತು. ತಾಯಿ ತೀರಿಕೊಂಡಿದ್ದರು. ತಂದೆ ಮದ್ಯ ಸೇವಿಸುತ್ತಿದ್ದರು. ಯಾರ ಬಳಿ ಮಾತನಾಡಿದರೂ ಪತಿ ಕೆಟ್ಟ ಭಾವನೆಯಿಂದ ನೋಡುತ್ತಿದ್ದರು. ಪತಿಯ ಮನೆಯವರೂ ಕಿರುಕುಳ ನೀಡುತ್ತಿದ್ದರು. ಅಲ್ಲಿದ್ದರೆ ಅಪಾಯವೆಂದು ಸ್ನೇಹಿತೆಯ ಮಾತು ಕೇಳಿ ಮಕ್ಕಳ ಜೊತೆ ಮನೆ ಬಿಟ್ಟು ಬಂದೆ. ಕಾಲ್ಗೆಜ್ಜೆ ಮಾರಿ ಮಕ್ಕಳಿಗೆ ಮಸಾಲೆ ದೋಸೆ ಕೊಡಿಸಿದೆ. ಸ್ಪಲ್ಪ ಸಮಯದ ಬಳಿಕ ಮಕ್ಕಳು ಅಪ್ಪ ಬೇಕು ಎಂದು ಅಳಲು ಶುರು ಮಾಡಿದರು. ಅವರನ್ನು ಪತಿಯ ಮನೆ ಬಳಿ ಬಿಟ್ಟು ಬಂದೆ. ಬಳಿಕ ನನಗೊಬ್ಬರು ಸಿಕ್ಕರು. ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಿದರು. ಮದುವೆ ಮಾಡಿಕೊಂಡ ಮೂರು ವರ್ಷ ಚೆನ್ನಾಗಿಯೇ ಇದ್ದರು. ಅನಂತರ ಹಿಂಸೆ ನೀಡಲು ಆರಂಭಿಸಿದರು. ಅವರಿಗೆ ಮೊದಲೇ ಮದುವೆಯಾಗಿ ಮಕ್ಕಳಿದ್ದರು. ನನಗೇ ಗೊತ್ತಿಲ್ಲದಂತೆ ನಾನು ಅವರಿಗೆ ₹4000ಕ್ಕೆ ಮಾರಾಟ ಆಗಿದ್ದೆ’

ಫುಟ್‌ಪಾತಿಗೆ ಬಂದವಳು

‘ನನ್ನ ಊರು ಹಾಸನದ ಹತ್ತಿರದ ಹಳ್ಳಿ. ಯಾರೋ ಒಬ್ಬರು ಮೈಸೂರಿನಲ್ಲಿ ಕೆಲಸ ಕೊಡಿಸುತ್ತೇನೆ ಎಂದು ಕರೆದುಕೊಂಡು ಹೋಗಿ ಒಬ್ಬರಿಗೆ ಮಾರಿದರು. ಆಗ ನನಗೆ 13ರಿಂದ 14 ವಯಸ್ಸು. ಆ ಮನೆಯಲ್ಲಿ 15 ದಿನ ಇರಿಸಿಕೊಂಡಿದ್ದರು. ನಂತರ ‘ಪಾರ್ಟಿ ಪಿಕ್‌ ಅಪ್‌’ ಎಂದು ಹೇಳಿ ನಂಜನಗೂಡಿನ ವ್ಯಕ್ತಿಯೊಬ್ಬ ಕರೆದೊಯ್ದ. ಹಾಗೆಂದರೆ ಏನೆಂದೇ ನನಗೆ ಗೊತ್ತಿರಲಿಲ್ಲ. ಪಾರ್ಟಿ (ಗಿರಾಕಿ) ತುಂಬ ಎಣ್ಣೆ ಹೊಡೆದಿದ್ದ. ಹಿಂಸೆ ನೀಡಲು ಆರಂಭಿಸಿದ. ನೀರಿನ ಬಾಟಲಿ ತೆಗೆದು ಅವನ ತಲೆಗೆ ಹೊಡೆದೆ. ಅವನ ಬುರುಡೆ ಒಡೆಯಿತು. ಅಲ್ಲಿಂದ ತಪ್ಪಿಸಿಕೊಳ್ಳುವುದು ಹೇಗೆಂದೂ ತೋಚಲಿಲ್ಲ. ಯಾರನ್ನೋ ಕೇಳಿಕೊಂಡು ಹೇಗೋ ಹೊರಗೆ ಬಂದೆ.’ 

‘ಬೇರೆ ಜಾಗ ಗೊತ್ತಿಲ್ಲದೇ ಇದ್ದುದರಿಂದ,  ಮತ್ತೆ ಅಲ್ಲಿಗೆ ಮರಳಿದೆ. ‘ನಿನಗೆ ₹15,000 ಕೊಟ್ಟು ಖರೀದಿ ಮಾಡಿದ್ದು  ನಾನು ಹೇಳಿದಂತೆ ಕೇಳಬೇಕು ಎಂಬ ಕಾರಣಕ್ಕೆ’ ಎಂದು ಹೊಡೆದು, ಬಡಿದು ಹಿಂಸೆ ಕೊಟ್ಟ. 2–3 ವರ್ಷ ಅಲ್ಲಿ ಬದುಕು ಸವೆಸಿದೆ.  ಊಟ, ಬಟ್ಟೆ ಬಿಟ್ಟರೆ ನಯಾಪೈಸೆ ಕೊಡುತ್ತಿರಲಿಲ್ಲ. ಹಳ್ಳಿಗೆ ಹೋಗೋಣ ಎಂದರೆ ಇಷ್ಟು ದಿನ ಎಲ್ಲಿದ್ದಳೋ, ಯಾರನ್ನು ಕಟ್ಟಿಕಂಡು ಹೋಗಿದ್ದಳೋ ಅಂತಾರೆ. ಅದಕ್ಕೆ ಊರಿಗೆ ಹೋಗಲಿಲ್ಲ. ಸೀದಾ ಫುಟ್‌ಪಾತಿಗೆ ಬಂದೆ. ಇವತ್ತಿಗೂ ಊರಿಗೆ ಹೋಗಿಲ್ಲ. ತಂದೆ– ತಾಯಿ ಬದುಕಿದ್ದಾರಾ ಎನ್ನುವುದೂ ಗೊತ್ತಿಲ್ಲ...’

**

ಕಳ್ಳಸಾಗಣೆಗೆ ಕಾರಣಗಳು

* ಯುವಕ, ವಯಸ್ಕ ಗಿರಾಕಿಗಳು ಸಣ್ಣ ಪ್ರಾಯದ ಹುಡುಗಿಯರನ್ನು ಹೆಚ್ಚು ಬಯಸುತ್ತಾರೆ
* ಬಡತನ, ವಲಸೆ, ಬರಗಾಲ, ಅತಿವೃಷ್ಟಿ, ನಿರುದ್ಯೋಗ
* ಕೊಲ್ಲಿ ರಾಷ್ಟ್ರಗಳ ಗಿರಾಕಿಗಳ  ಬೇಡಿಕೆಯಿಂದ ಮುಂಬೈ, ಹೈದರಾಬಾದ್‌ನಲ್ಲಿ ದಂಧೆ ಪ್ರಮಾಣ ಹೆಚ್ಚು
* ಸಣ್ಣ ವಯಸ್ಸಿನಲ್ಲಿ ವಿವಾಹ
* ವೈವಾಹಿಕ ಜೀವನದ ಬಿರುಕಿನಿಂದ ವಿಚ್ಛೇದನ ಪಡೆಯುವವರು ಸೆಕ್ಸ್ ರ್‌್ಯಾಕೆಟ್‌ಗೆ ಬರುತ್ತಾರೆ
* ‘ಕನ್ಯೆ’ ಜೊತೆಗಿನ ಲೈಂಗಿಕಕ್ರಿಯೆಯಿಂದ  ಲೈಂಗಿಕ ಕಾಯಿಲೆ ವಾಸಿಯಾಗುತ್ತದೆ ಎಂಬ ಮೂಢನಂಬಿಕೆ
* ನಟಿಯಾಗುವ ಆಸೆ ಕೆಲವರನ್ನು ಈ ದಂಧೆಗೆ ದೂಡಿದೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)