ಭಾನುವಾರ, ಡಿಸೆಂಬರ್ 8, 2019
21 °C

ನಿನ್ನೆಗಿಂತ ಉತ್ತಮರಾಗಿದ್ದೇವೆಯೇ?

Published:
Updated:
ನಿನ್ನೆಗಿಂತ  ಉತ್ತಮರಾಗಿದ್ದೇವೆಯೇ?

ನಮ್ಮಲ್ಲಿ ಅನೇಕರಿಗೆ ತಮ್ಮ ವ್ಯಕ್ತಿತ್ವವನ್ನು ದಿನದಿಂದ ದಿನಕ್ಕೆ ಉತ್ತಮಗೊಳಿಸಿಕೊಳ್ಳಬೇಕೆಂಬ ಆಶಯವಿರುತ್ತದೆ. ತಮ್ಮ ನಡೆ, ನುಡಿ, ಆಚಾರ, ವಿಚಾರ, ತೆಗೆದುಕೊಳ್ಳುವ ನಿರ್ಣಯಗಳು, ಮುಖಭಾವ - ಹೀಗೆ ಪ್ರತಿಯೊಂದರಲ್ಲಿಯೂ ಇನ್ನೂ ಸುಧಾರಿಸಬೇಕೆಂದು ಸುಪ್ತ ಮನಸ್ಸಿನಲ್ಲಿಯೇ ವಿಚಾರ ಮಾಡುತ್ತಿರುತ್ತಾರೆ.

ಎಷ್ಟೋ ಬಾರಿ, ತಾವು ದಿನನಿತ್ಯ ಒಡನಾಟದಲ್ಲಿ ಬರುವ ತಮ್ಮ ಹಿರಿಯ–ಕಿರಿಯ ಸಹೋದ್ಯೋಗಿಗಳು, ಗೆಳೆಯ-ಗೆಳತಿಯರು, ಶಿಕ್ಷಕರು – ಹೀಗೆ ಎಲ್ಲರ ವ್ಯಕ್ತಿತ್ವದಲ್ಲಿಯೂ ಒಂದಿಷ್ಟು ಒಳ್ಳೆಯ ಅಂಶಗಳನ್ನು ಗುರುತಿಸಿ, ಅವರಂತಹ ಪರಿಪೂರ್ಣ ವ್ಯಕ್ತಿತ್ವ ತನ್ನದಲ್ಲವಲ್ಲ ಎಂದು ಚಿಂತೆಗೆ ಒಳಗಾಗುತ್ತಾರೆ. ತಮ್ಮ ನಡವಳಿಕೆಯಲ್ಲಿರುವ ಕೊರತೆಗಳನ್ನು ನೆನೆದು ಮತ್ತೆ ಮತ್ತೆ ಬೇಸರಗೊಳ್ಳುತ್ತಾರೆ.

ಬಹಳಷ್ಟು ಜನರು ತಮ್ಮ ತಾಳ್ಮೆಯಿಲ್ಲದ ನಡೆವಳಿಕೆ, ಮಾನಸಿಕ ಚಂಚಲತೆ, ಸಣ್ಣ ವಿಚಾರಗಳಿಗೂ ಉದ್ವಿಗ್ನಗೊಳ್ಳುವ ಬಗೆ, ದುಡುಕುಮಾತು, ಗಂಟಿಕ್ಕಿದ ಮುಖ – ಇಂಥವನ್ನು ನಿಯಂತ್ರಿಸಲಾಗದೇ ಅಸಮಾಧಾನಗೊಳ್ಳುತ್ತಾರೆ. ಇನ್ನೂ ಕೆಲವರಿಗೆ ತಾವು ಸಮಸ್ಯೆಗಳನ್ನು ಪರಿಹರಿಸುವ ರೀತಿ, ಅವಕಾಶಗಳಿಗೆ ಸ್ಪಂದಿಸುವ ಬಗೆ, ಕುಟುಂಬದ ಸದಸ್ಯರೊಡನೆ ಹಾಗೂ ನೆರೆಹೊರೆಯವರೊಡನೆ ನಡೆದುಕೊಳ್ಳುವ ರೀತಿ, ದಿನದ ಸಮಯವನ್ನು ವಿನಿಯೋಗಿಸುವ ರೀತಿ, ನಿರ್ಧಾರಗಳನ್ನು ತೆಗೆದುಕೊಳ್ಳುವ ತಮ್ಮ ಪರಿ, ಸೋಲು-ಗೆಲುವುಗಳನ್ನು ಸ್ವೀಕರಿಸುವ ಬಗೆ – ಇಂಥ ಎಷ್ಟೋ ವಿಚಾರಗಳು ತಮಗೇ ಸರಿಯೆನಿಸದೇ ದ್ವಂದ್ವಕ್ಕೊಳಗಾಗುತ್ತಾರೆ.

ಅನೇಕ ಸಂದರ್ಭಗಳಲ್ಲಿ, ತಾವು ಮಾತನಾಡುವಾಗ ಅನಗತ್ಯ ವಿಷಯಗಳ ಬಗ್ಗೆ ಮಾತನಾಡಿದೆವು ಎಂದೋ ಅಥವಾ ವಿಷಯಕ್ಕೆ ಸಮರ್ಪಕವಾಗಿ ಹಾಗೂ ನಿರ್ದಿಷ್ಟವಾಗಿ ಉತ್ತರಿಸಲಿಲ್ಲ ಎಂದೋ ನೊಂದುಕೊಳ್ಳುತ್ತಾರೆ. ಕೆಲವೊಮ್ಮೆ ತಮ್ಮ ಮುಂಗೋಪವೇ ಪರಿಸ್ಥಿತಿಯ ತಿಳಿಯನ್ನು ಕೆಡೆಸಿಬಿಡುತ್ತದೆ.

ಆದರೆ, ಅದು ಆ ಕ್ಷಣದಲ್ಲಿ ಗಮನಕ್ಕೆ ಬಾರದೆ ಎಷ್ಟೋ ಹೊತ್ತಿನ ಬಳಿಕ ಆ ಬಗ್ಗೆ ಅರಿವಿಗೆ ಬಂದು, ಬೇಸರ ಪಟ್ಟುಕೊಳ್ಳುತ್ತಾರೆ. ಮನೆಯಲ್ಲಿ ಮಕ್ಕಳ ಎದುರು ತಾಳ್ಮೆ ಕಳೆದುಕೊಂಡು ಕೂಗಾಡಿ, ನಂತರ ಪಶ್ಚಾತಾಪದ ಭಾವಕ್ಕೆ ಒಳಗಾಗುತ್ತಾರೆ. ಹೀಗೆ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಈ ಬಗೆಯ ತಮ್ಮನ್ನು ತಾವು ಸರಿಪಡಿಸಿಕೊಳ್ಳುವ ವಿಚಾರಗಳ ತೊಳಲಾಟ ಒಮ್ಮೆಯಾದರೂ ನಡೆದಿರುತ್ತದೆ.

ವಯಸ್ಸಾದಂತೆ ನಮ್ಮ ಲೋಕಜ್ಞಾನ ಹೆಚ್ಚುತ್ತದೆ. ಅಷ್ಟೇ ಅಲ್ಲ, ಜೀವನವು ಅನುಭವದ ಸವಿ ಅಡುಗೆಯನ್ನು ಉಣಬಡಿಸುತ್ತದೆ. ಪಕ್ವಗೊಳ್ಳುವ ಹಣ್ಣಿನಂತೆ ನಾವು ಮಾಗುತ್ತೇವೆ. ಈ ನಿಧಾನ ಪ್ರಕ್ರಿಯೆಯಲ್ಲಿ ನಮ್ಮ ಮನಸ್ಸಿನಲ್ಲಿ ಅನೇಕ ಉತ್ತಮ ಬದಲಾವಣೆಗಳಾಗುತ್ತವೆ. ನಮ್ಮಲ್ಲಿಯೇ ನಾವು ಸಾಕಷ್ಟು ಒಳ್ಳೆಯ ಮಾರ್ಪಾಡನ್ನು ನೋಡಲು ಬಯಸುತ್ತೇವೆ.

ತಮ್ಮ ವ್ಯಕ್ತಿತ್ವ- ಗುಣಸ್ವಭಾವಗಳನ್ನು ಉತ್ತಮಗೊಳಿಸಿಕೊಳ್ಳಬೇಕೆಂಬ ಮನದಾಸೆ ಯಾರದ್ದೇ ಆಗಲಿ, ಅದು ನಿಜಕ್ಕೂ ಸ್ವಾಗತಾರ್ಹವೇ. ’ಹುಟ್ಟು ಗುಣ ಸುಟ್ಟರೂ ಹೋಗದು.’ ಇದು ಗಾದೆ ಮಾತು. ಆದರೆ, ಧೃಡ ಮನಸ್ಸು ಹಾಗೂ ಪ್ರಾಮಾಣಿಕ ಪ್ರಯತ್ನ ಇದ್ದರೆ, ಅದು ಅಸಾಧ್ಯದ ಮಾತೇನಲ್ಲ ಎಂಬುದು ನನ್ನ ಅನಿಸಿಕೆ.

ನಿಜ ಹೇಳಬೇಕೆಂದರೆ, ಇದು ನಮ್ಮೊಳಗೆ ನಾವು ಬೆಳೆಯುವ ಬದುಕಿನ ಹಂತ. ಈ ಹಂತದಲ್ಲಿ ನಮ್ಮಲ್ಲಿ ಬಹಳಷ್ಟು ಮಂದಿ ತಮ್ಮ ಸುತ್ತಲಿನವರ ವ್ಯಕ್ತಿತ್ವದೊಂದಿಗೆ ತಮ್ಮನ್ನು ಹೋಲಿಸಿಕೊಳ್ಳುತ್ತಾರೆ. ಒಡನಾಡಿಗಳ ಸುಂದರ ವ್ಯಕ್ತಿತ್ವದತ್ತ ಆಕರ್ಷಿತರಾಗಿ, ತಾವು ಅವರಂತೆ ಇಲ್ಲವಲ್ಲ ಎಂದು ಕೊರಗುತ್ತಾರೆ. ಈ ಬಗೆಯ ಹೋಲಿಕೆ ಹಾಗೂ ನಂತರದ ಕುಗ್ಗುವಿಕೆ ಮನಸ್ಸನ್ನು ಮತ್ತಷ್ಟು ಘಾಸಿಗೊಳಿಸುತ್ತದೆ.

ಹಾಗಾದರೆ, ನಾವು ಮಾಡಬೇಕಾದುದೇನು..?

ನಮ್ಮನ್ನು ನಾವು ಗಮನಿಸಿದಂತೆ, ನಾವು ಇಷ್ಟ ಪಡದ ನಮ್ಮ ಗುಣ ಸ್ವಭಾವಗಳು-ನಡೆನುಡಿಗಳನ್ನು ಮೊದಲು ಪಟ್ಟಿ ಮಾಡಿಕೊಳ್ಳಬೇಕು. ನಮ್ಮ ಮಾತು, ಸೋಮಾರಿತನ, ಚಂಚಲತೆ, ಕೋಪ, ಅಸಹನೆ, ಮುಖಭಾವ – ಹೀಗೆ ನಾವು ಎಲ್ಲಿ ಮತ್ತು ಯಾವ ಬದಲಾವಣೆಯನ್ನು ನಮ್ಮಲ್ಲಿ ತಂದುಕೊಳ್ಳಲು ಬಯಸುತ್ತೇವೆ ಎಂಬುದರ ಪರಿಕಲ್ಪನೆಯನ್ನೂ ಮನಸ್ಸಿಗೆ ತಂದುಕೊಳ್ಳಬೇಕು.

ಧೃಡ ಮನಸ್ಸು ಮಾಡಿ ಆ ಬದಲಾವಣೆಗಳನ್ನು ನಿತ್ಯದ ಜೀವನದಲ್ಲಿ ಚಾಲನೆಗೆ ತರಬೇಕು. ಪ್ರತಿದಿನದ ಕೊನೆಯಲ್ಲಿ ಒಮ್ಮೆ ನಮ್ಮ ಅಂತರಾತ್ಮದೊಡನೆ ಮಾತನಾಡಿಕೊಳ್ಳಬೇಕು; ಆತ್ಮಾವಲೋಕನ ಮಾಡಿಕೊಳ್ಳಬೇಕು. ಈ ವಿಚಾರದಲ್ಲಿ, ಇತರರೊಡನೆ ಹೋಲಿಕೆ ಬೇಡವೇ ಬೇಡ. ನಿನ್ನೆಯ ನಿಮ್ಮ ನಡೆ-ನುಡಿಗೂ ಇಂದಿನ ನಿಮ್ಮ ನಡೆ–ನುಡಿಗೂ ತಾಳೆ ಮಾಡಿ ನೋಡಬೇಕು. ನಿಮ್ಮ ಆ ದಿನದ ದಿನ ಪೂರ್ತಿಯ ನಡವಳಿಕೆ ಹಿಂದಿನ ದಿನಕ್ಕಿಂತ ಉತ್ತಮವಾಗಿತ್ತೇ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿಕೊಳ್ಳಬೇಕು.

ಎಲ್ಲಿ ಮತ್ತೆ ತಪ್ಪಿದ್ದೇವೆ ಎನ್ನಿಸುತ್ತದೆಯೋ ಅದರ ಸರಿಪಡಿಸುವಿಕೆ ಮಾರನೆಯ ದಿನ ಆಗಬೇಕು. ಹೀಗೆ ದಿನದ ಒಂದೊಂದು ಚಿಕ್ಕ ಸುಧಾರಣೆಯೂ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತ ನಿಮ್ಮೊಳಗಿನ ಬೆಳವಣಿಗೆಗೆ ಮೈಲಿಗಲ್ಲಾಗುತ್ತದೆ. ಹೀಗೆ ನೀವು ದಿನದಿಂದ ದಿನಕ್ಕೆ ಬೆಳೆಯುತ್ತ ಉನ್ನತ ವ್ಯಕ್ತಿತ್ವವನ್ನು ಪಡೆಯಬಹುದು.

ನಿಮ್ಮೊಳಗೆ ನೀವು ಬೆಳೆಯುತ್ತ ಪರಿಪೂರ್ಣತೆಯತ್ತ ಸಾಗಬಹುದು. ಇದು ನಿಮ್ಮ ಮಾನಸಿಕ ಸ್ವಾಸ್ಥತೆಗೆ ಕಾರಣವಾಗುತ್ತದೆ; ಆ ಮೂಲಕ ನಿಮಗೆ ಸಂತಸದ ಅನುಭವವೂ ಒದಗುತ್ತದೆ. ಪ್ರತಿಯೊಬ್ಬರ ಇಂಥ ಪ್ರಯತ್ನ ವ್ಯಕ್ತಿ ಹಾಗೂ ಆತನ ಕುಟುಂಬದ ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ; ಅದು ಆರೋಗ್ಯಕರ ಸಮಾಜದ ನಿರ್ಮಾಣಕ್ಕೂ ಮೆಟ್ಟಿಲಾಗುವುದರಲ್ಲಿ ಸಂಶಯವಿಲ್ಲ.

***

ತಮ್ಮ ವ್ಯಕ್ತಿತ್ವ- ಗುಣಸ್ವಭಾವಗಳನ್ನು ಉತ್ತಮಗೊಳಿಸಿಕೊಳ್ಳಬೇಕೆಂಬ ಮನದಾಸೆ ಯಾರದ್ದೇ ಆಗಲಿ, ಅದು ನಿಜಕ್ಕೂ ಸ್ವಾಗತಾರ್ಹವೇ. ’ಹುಟ್ಟು ಗುಣ ಸುಟ್ಟರೂ ಹೋಗದು.’ ಇದು ಗಾದೆ ಮಾತು. ಆದರೆ, ಧೃಡ ಮನಸ್ಸು ಹಾಗೂ ಪ್ರಾಮಾಣಿಕ ಪ್ರಯತ್ನ ಇದ್ದರೆ, ಅದು ಅಸಾಧ್ಯದ ಮಾತೇನಲ್ಲ.

***

ನಮ್ಮನ್ನು ನಾವು ಗಮನಿಸಿದಂತೆ, ನಾವು ಇಷ್ಟ ಪಡದ ನಮ್ಮ ಗುಣ ಸ್ವಭಾವಗಳು-ನಡೆನುಡಿಗಳನ್ನು ಮೊದಲು ಪಟ್ಟಿ ಮಾಡಿಕೊಳ್ಳಬೇಕು. ನಮ್ಮ ಮಾತು, ಸೋಮಾರಿತನ, ಚಂಚಲತೆ, ಕೋಪ, ಅಸಹನೆ, ಮುಖಭಾವ – ಹೀಗೆ ನಾವು ಎಲ್ಲಿ ಮತ್ತು ಯಾವ ಬದಲಾವಣೆಯನ್ನು ನಮ್ಮಲ್ಲಿ ತಂದುಕೊಳ್ಳಲು ಬಯಸುತ್ತೇವೆ ಎಂಬುದರ ಪರಿಕಲ್ಪನೆಯನ್ನೂ ಮನಸ್ಸಿಗೆ ತಂದುಕೊಳ್ಳಬೇಕು. ಧೃಡ ಮನಸ್ಸು ಮಾಡಿ ಆ ಬದಲಾವಣೆಗಳನ್ನು ನಿತ್ಯದ ಜೀವನದಲ್ಲಿ ಚಾಲನೆಗೆ ತರಬೇಕು.

ಪ್ರತಿಕ್ರಿಯಿಸಿ (+)