7

ತುಳಸಿ; ಪೂಜೆಗಷ್ಟೇ ಅಲ್ಲ, ಆದಾಯಕ್ಕೂ

Published:
Updated:
ತುಳಸಿ; ಪೂಜೆಗಷ್ಟೇ ಅಲ್ಲ, ಆದಾಯಕ್ಕೂ

–ಲೋಕೇಶ ಡಿ.

*

ತುಳಸಿಯನ್ನು ಕೊಳ್ಳುವವರು ಹೆಚ್ಚು. ಆದರೆ ಬೆಳೆಯುವವರ ಸಂಖ್ಯೆ ಕಡಿಮೆ. ಈ ಲೆಕ್ಕಾಚಾರ ಗುಬ್ಬಿ ತಾಲ್ಲೂಕು ಕಳ್ಳಿಪಾಳ್ಯದ ಲಕ್ಷ್ಮೀದೇವಮ್ಮ ಅವರಲ್ಲೂ ಬಂತು. ಆ ಲೆಕ್ಕಾಚಾರದ ಹಾಗೆಯೇ ತುಳಸಿ ಬೆಳೆದರು. ತುಳಸಿಯನ್ನು ವಾಣಿಜ್ಯ ಬೆಳೆಯಾಗಿ ಬೆಳೆದು ಲಾಭ ಗಳಿಸಬಹುದು ಎಂಬುದನ್ನು ತೋರಿಸಿಕೊಟ್ಟರು.

ಎಂಟು ವರ್ಷಗಳಿಂದಲೂ ತುಳಸಿ ಬೆಳೆದುಕೊಂಡು ಬಂದಿದ್ದಾರೆ ಲಕ್ಷ್ಮೀ ದೇವಮ್ಮ. ತೆಂಗು, ಅಡಿಕೆ, ಬಾಳೆ, ರಾಗಿ ಇವುಗಳ ಮಧ್ಯೆ ಮಿಶ್ರ ಬೆಳೆಯಾಗಿ ಇದನ್ನು ಕೈಗೊಂಡಿದ್ದಾರೆ. ಗಿಡದಿಂದ ಗಿಡಕ್ಕೆ 1 ಅಡಿ ಅಂತರ, ಸಾಲಿನಿಂದ ಸಾಲಿಗೆ 2 ಅಡಿ ಬಿಟ್ಟು ನಾಟಿ ಮಾಡಿದ್ದಾರೆ. ನಾಟಿ ಮಾಡಿದ ದಿನದಿಂದ ಒಂದು ತಿಂಗಳಿಗೆ ತುಳಸಿ ಪತ್ರೆ ಕೊಯ್ಲು ಪ್ರಾರಂಭಿಸುತ್ತಾರೆ. ಈ ಪತ್ರೆಯು ವರ್ಷ ಪೂರ್ತಿ ಇರುತ್ತದೆ. ಅನಂತರ ಗಿಡಗಳನ್ನು ಕಿತ್ತು ಹೊಸ ಸಸಿಗಳನ್ನು ಹಾಕುತ್ತಾರೆ.

‘ನಮ್ಮ ಜಮೀನಿನ ಒಂದು ಭಾಗದಲ್ಲಿ ಸ್ವಲ್ಪ ಗಿಡಗಳನ್ನು ಪತ್ರೆಗೆ ಕಟಾವು ಮಾಡದೆ ಬಿಟ್ಟು ಆದರಿಂದ ಬಂದ ಹೂಗಳಿಂದ ಬೀಜವನ್ನು ತೆಗೆದು ಸಸಿಗಳನ್ನು ಸಿದ್ದಪಡಿಸಿಕೊಳ್ಳುತ್ತೇವೆ’ ಎಂದು ತುಳಸಿಯನ್ನು ನಿರಂತರ ಬೆಳೆಯುವ ಕಾರ್ಯವೈಖರಿ ಬಿಡಿಸಿಡುತ್ತಾರೆ ಲಕ್ಷ್ಮೀದೇವಮ್ಮ.

ಭೂಮಿ ಸಿದ್ಧತೆ ಮತ್ತು ನೀರು ನಿರ್ವಹಣೆ: ಭೂಮಿಯನ್ನು ಮೊದಲು ರೋಟರ್‌ನಿಂದ ಹೊಡೆಸಿ ಮತ್ತೊಮ್ಮೆ ಟ್ರಾಕ್ಟರ್‌ನಲ್ಲಿ ಉಳುಮೆ ಮಾಡಿಸಿ ಕೊಟ್ಟಿಗೆ ಗೊಬ್ಬರವನ್ನು ಮಣ್ಣಿಗೆ ಸೇರಿಸುತ್ತಾರೆ. ಸಸಿಗಳನ್ನು ನಾಟಿ ಮಾಡುವಾಗ ಸಾಲುಗಳಿಗೆ ನೀರು ಬಿಟ್ಟುಕೊಂಡು ನಾಟಿ ಮಾಡುತ್ತಾರೆ. ಮೂರರಿಂದ ಐದು ದಿನಗಳಿಗೊಮ್ಮೆ ನೀರು ಹಾಯಿಸುತ್ತಾರೆ. ಸಸಿಗಳು ಬೆಳೆದಂತೆ ಹತ್ತು ಹದಿನೈದು ದಿನಗಳಿಗೆ ಒಂದಾವರ್ತಿ ನೀರು ಬಿಡುತ್ತಾರೆ. ಇದು ಇವರು ಅನುಸರಿಸಿಕೊಂಡು ಬಂದಿರುವ ಪದ್ಧತಿ.

ಗಿಡಗಳಿಗೆ ಪೋಷಕಾಂಶ ನೀಡುವ ದೃಷ್ಟಿಯಿಂದ ಎಳನೀರು ಕಷಾಯ ಸಿಂಪಡಣೆ ಮಾಡುತ್ತಾರೆ. ಒಂದು ಲೀಟರ್ ಎಳನೀರಿಗೆ 15 ಲೀಟರ್ ನೀರು ಬೆರೆಸಿ ತುಳಸಿ ಪತ್ರೆಗೆ ಸಿಂಪಡಣೆ ಮಾಡುತ್ತಾರೆ. ಇದರಿಂದ ತುಳಸಿ ಪತ್ರೆ ಹಚ್ಚ ಹಸಿರಿಂದ ಹೊಳಪು ಬರುತ್ತದೆ ಎಂಬುದು ಇವರ ಅನುಭವ. ಇದರಿಂದ ಮಾರುಕಟ್ಟೆಯಲ್ಲಿ ಹೆಚ್ಚಿಗೆ ಬೇಡಿಕೆ ಇದೆ ಎನ್ನುತ್ತಾರೆ.

ಮಾರುಕಟ್ಟೆ: ಸಾಮಾನ್ಯ ದಿನಗಳಲ್ಲಿ ಒಂದು ಮಾರು ಹೂವಿಗೆ ₹30ರಿಂದ ₹ 40 ರೂಪಾಯಿ ಬೆಲೆಯಿದ್ದರೆ, ಹಬ್ಬದ ಸಮಯದಲ್ಲಿ ₹50 ರಿಂದ ₹70ಕ್ಕೆ ಏರುತ್ತದೆ.

ಬೇರೆ ಹೂಗಳಂತೆ ಇದಕ್ಕೆ ಸೀಸನ್ ಇಲ್ಲ. ವರ್ಷದ ಎಲ್ಲಾ ಕಾಲವೂ ಪತ್ರೆ ಸಿಗುತ್ತದೆ, ಬೇಡಿಕೆಯೂ ಇರುತ್ತದೆ ಎಂಬುದು ತುಳಸಿಯನ್ನು ಇವರು ಬೆಳೆಯಲು ಇರುವ ಪ್ರಮುಖ ಕಾರಣ.

ವಿಘ್ನೇಶ್ವರ ಐಡಿಎಫ್ ಮಹಿಳಾ ಸಂಘದಲ್ಲಿ ಪ್ರತಿನಿಧಿಯಾಗಿರುವ ಇವರು ಮೊದಲ ಕಂತಿನಲ್ಲಿ ಎಸ್‍ಬಿಐ ಬ್ಯಾಂಕಿನಿಂದ ₹10 ಸಾವಿರ ಪಡೆದು, 2 ಮೇಕೆಗಳನ್ನು ತಂದು ನಾಲ್ಕೈದು ತಿಂಗಳ ತರುವಾಯ 15 ಸಾವಿರಕ್ಕೆ ಮಾರಿದ್ದಾರೆ. ಉಳಿದ ಹಣವನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಿದ್ದಾರೆ. ಸಂಪರ್ಕ 8151969336.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry