ಗುರುವಾರ , ಮಾರ್ಚ್ 23, 2023
29 °C

ರಸ್ತೆ ಗುಂಡಿ ಮುಚ್ಚುವ ಸ್ವಯಂಸೇವೆ

ಹರವು ಸ್ಫೂರ್ತಿ Updated:

ಅಕ್ಷರ ಗಾತ್ರ : | |

ರಸ್ತೆ ಗುಂಡಿ ಮುಚ್ಚುವ ಸ್ವಯಂಸೇವೆ

ರಸ್ತೆ ಗುಂಡಿಗಳನ್ನು ಮುಚ್ಚಬೇಕು ಎಂದು ಏಕೆ ಅನಿಸ್ತು?

ವಿದೇಶಿಗರಿಗೆ ನಮ್ಮ ದೇಶದ ಬಗ್ಗೆ ಇದ್ದುದು ಒಂದೇ ಆರೋಪ. ರಸ್ತೆ ಸಂಚಾರ ಸಮಸ್ಯೆ ಮತ್ತು ರಸ್ತೆಗಳಲ್ಲಿ ಇರುವ ಗುಂಡಿ. ಅಲ್ಲದೆ ನನ್ನ ಗೆಳೆಯನ ಮಗಳು ರಸ್ತೆಯಲ್ಲಿನ ಗುಂಡಿಗಳಿಂದ ಅಪಘಾತವಾಗಿ ಸತ್ತು ಹೋಗಿದ್ದಳು. ಮತ್ತೊಬ್ಬ ಗೆಳೆಯ ಕಾಲು ಮುರಿದುಕೊಂಡಿದ್ದ. ಇದನ್ನೆಲ್ಲಾ ಗಮನಿಸಿದ ನನಗೆ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಬೇಕು ಎನಿಸಿತು. ನಾನು ಕೆಲ ವರ್ಷ ಶಾಲೆಗಳಿಗೆ ಪಾಠ ಮಾಡುತ್ತಿದೆ. ಆಗ ಪ್ರೌಢಶಾಲಾ ವಿದ್ಯಾರ್ಥಿಗಳು ಶಾಲಾ ಅಸೈನ್‌ಮೆಂಟ್‌ಗಾಗಿ ಕೆಲ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಮಕ್ಕಳೇ ಇಷ್ಟೆಲ್ಲಾ ಮಾಡುವಾಗ, ನಾನು ಕೂಡ ಗುಂಡಿಮುಚ್ಚುವ ಕೆಲಸ ಮಾಡಬಹುದು ಎಂದುಕೊಂಡೆ. ಕೆಲಸ ಆರಂಭಿಸಿದೆ.

ಗುಂಡಿ ಮುಚ್ಚಲು ಏನು ಬಳಸುತ್ತೀರಿ?

ಸಾಧಾರಣ ರಸ್ತೆ ಮಾಡಲು ಟಾರು, ಜಲ್ಲಿ ಎಲ್ಲಾ ಮಿಶ್ರಣವಾಗಿರುವ ಹಾಟ್‌ ಮಿಕ್ಸ್‌ ಬಳಸುತ್ತಾರೆ (ಡಾಂಬರು). ಇದನ್ನು ತಂದು ರಸ್ತೆ ಮೇಲೆ ಹರಡಿ, ಸಮತಟ್ಟು ಮಾಡಲು ಹಲವು ಯಂತ್ರೋಪಕರಣಗಳು ಬೇಕಾಗುತ್ತದೆ. ಇಷ್ಟೆಲ್ಲಾ ಹಣವೆಚ್ಚ ಮಾಡಲು ನಮ್ಮಿಂದ ಸಾಧ್ಯವಿಲ್ಲ. ಅದಕ್ಕೆ ನಾನು ಮೊದಲು ಗುಂಡಿಗಳನ್ನು ಮುಚ್ಚಲು ಸಾರ್ವಜನಿಕರು ಏನು ಬಳಸಬಹುದು ಎಂದು ಗೂಗಲ್ ಮಾಡಿದೆ. ಕೋಲ್ಡ್ ಆಸ್‌ಫಾಲ್ಟ್ (cold asphalt) ಬಗ್ಗೆ ತಿಳಿಯಿತು. ಭಾರತದಲ್ಲಿ ‘ಶೆಲ್‌ ಪೆಟ್ರೋಲಿಯಂ’ ಸಂಸ್ಥೆ ಈ ಕೋಲ್ಡ್ ಆಸ್‌ಫಾಲ್ಟ್ ತಯಾರು ಮಾಡುತ್ತದೆ. ಅವರಿಂದ ಕೋಲ್ಡ್‌ ಮಿಕ್ಸ್‌ ತರಿಸಿಕೊಳ್ಳುತ್ತಿದ್ದೆ. ಈಗ ಲಡ್ವಾ ಸೊಲ್ಯೂಷನ್ಸ್ ಸಂಸ್ಥೆಯಿಂದ ತರಿಸಿಕೊಳ್ಳುತ್ತಿದ್ದೇನೆ. ಒಂದು ಚೀಲಕ್ಕೆ ₹1,250.

ಗುಂಡಿಮುಚ್ಚುವ ಚಟುವಟಿಕೆ ಬಗ್ಗೆ ವಿವರಿಸಿ...

18 ತಿಂಗಳಿನಿಂದ ಗುಂಡಿಮುಚ್ಚುವ ಕೆಲಸವನ್ನು ಮಾಡುತ್ತಿದ್ದೇವೆ. ಕೋಲ್ಡ್ ಆಸ್‌ಫಾಲ್ಟ್ ಪರಿಸರ ಸ್ನೇಹಿ. ಈ ದ್ರವವನ್ನು ಬಳಸಿ ಬಿಸಾಡಿದ ಪ್ಲಾಸ್ಟಿಕ್‌ನಿಂದ ತಯಾರಿಸುತ್ತಾರೆ. ಇದನ್ನು ಜೆಲ್ಲಿಯೊಂದಿಗೆ ಮಿಶ್ರಣ ಮಾಡಿಕೊಳ್ಳಬಹುದು. ಈ ಮಿಶ್ರಣವನ್ನು ಹಾಕಿ ಒಬ್ಬರೇ 15ರಿಂದ 20 ನಿಮಿಷದಲ್ಲಿ ಗುಂಡಿ ಮುಚ್ಚಬಹುದು. ಇದುವರೆಗೆ 500 ಗುಂಡಿಗಳನ್ನು ಮುಚ್ಚಿದ್ದೇವೆ. ಕೋರಮಂಗಲದ ಸೇಂಟ್‌ ಜಾನ್ಸ್‌ ಆಸ್ಪತ್ರೆ ಎದುರು, ಕತ್ತರಿಗುಪ್ಪೆ, ಹಲಸೂರು ಮೆಟ್ರೊ ಜೆಂಕ್ಷನ್, ಎಚ್‌ಎಸ್‌ಆರ್‌ ಲೇಔಟ್‌, ಬನ್ನೇರುಘಟ್ಟ, ಬಿಡದಿ, ಎಲೆಕ್ಟ್ರಾನಿಕ್ ಸಿಟಿ ಕೈಗಾರಿಕಾ ಪ್ರದೇಶ, ಬಿಡದಿ ಕೈಗಾರಿಕಾ ಪ್ರದೇಶ ಸೇರಿದಂತೆ, ಹೈದರಾಬಾದ್ ನಗರದಲ್ಲೂ ಗುಂಡಿ ಮುಚ್ಚುವ ಕೆಲಸ ಮಾಡಿದ್ದೇವೆ. ಮುಂದಿನ ತಿಂಗಳು ಮುಂಬೈಗೆ ಹೋಗುವ ಯೋಜನೆ ಇದೆ.

ನಿಮ್ಮಿಂದ ಪ್ರೇರಣೆ ಪಡೆದು ಬೇರೆ ಯಾರದರೂ ನಿಮ್ಮಮೊಂದಿಗೆ ಕೈ ಜೋಡಿಸಿದ್ದಾರಾ?

ತುಂಬಾ ಜನ ನಮಗೆ ಬೆಂಬಲ ನೀಡುತ್ತಿದ್ದಾರೆ. ನಮ್ಮ ಕೆಲಸವನ್ನು ಗುರುತಿಸಿ 'ರೆಡ್‌ ಎಫ್‌ಎಂ' ಕಾರ್ಯಕ್ರಮ ಪ್ರಸಾರ ಮಾಡಿತ್ತು. ನಂತರ ನಮಗೆ ಗುಂಡಿಗಳ ಬಗ್ಗೆ ಸಿಗುವ ಮಾಹಿತಿ ಹೆಚ್ಚಾಯಿತು. ಕೆಲವರು ಸ್ವಯಂ ಪ್ರೇರಿತರಾಗಿ ಗುಂಡಿ ಮುಚ್ಚುವ ಕೆಲಸದಲ್ಲಿ ನಮ್ಮೊಂದಿಗೆ ತೊಡಗಿಕೊಳ್ಳುತ್ತಿದ್ದಾರೆ. ಐದಾರು ಜನ ಹಣ ಸಹಾಯ ಮಾಡುತ್ತಿದ್ದಾರೆ. ಎಚ್‌.ಪಿ. ಸಂಸ್ಥೆಯ ಸೌರಭ್, ಅಮೇರಿಕದಲ್ಲಿ ಐಐಎಂ ಸಂಸ್ಥೆಯಲ್ಲಿ ಸಂಶೋಧಕರಾಗಿದ್ದ ಸುಬ್ರಹ್ಮಣ್ಯಂ, ಈಗ ಕೆಲಸ ಬಿಟ್ಟು ನಮ್ಮೊಂದಿಗೆ ಸ್ವಯಂಸೇವಕರಾಗಿದ್ದಾರೆ. ಮತ್ತೊಬ್ಬ ಐಟಿ ಉದ್ಯೋಗಿ ಸಂಜಯ್, ಲೈಂಗಿಕ ಅಲ್ಪಸಂಖ್ಯಾತರಾದ ಆರ್‌ಜೆ ಪ್ರಿಯಾಂಕಾ, ಸಾಮಾಜಿಕ ಕಾರ್ಯಕರ್ತೆ ಕಲ್ಪನಾ ನಮ್ಮೊಂದಿಗೆ ಭಾಗವಹಿಸುತ್ತಾರೆ. 9 ವರ್ಷದ ನನ್ನ ಮಗಳು ಕೂಡ ನಮ್ಮೊಂದಿಗಿದ್ದಾಳೆ.

ಬಿಬಿಎಂಪಿ ವತಿಯಿಂದ ರಸ್ತೆ ಗುಂಡಿಗಳ ಬಗ್ಗೆ ದೂರು ನೀಡಲು ಆ್ಯಪ್‌ ಇದೆ. ಇದರ ಬಳಕೆ ಹೇಗಿದೆ?

ಆ್ಯಪ್‌ ಬಳಕೆ ಮಾಡುವವರು ರಸ್ತೆ ಗುಂಡಿಗಳ ಫೋಟೊ ತೆಗೆದು ಆ್ಯಪ್‌ನಲ್ಲಿ ಹಂಚಿಕೊಳ್ಳುತ್ತಾರೆ. ಆದರೆ ಕೆಲಸ ಎಷ್ಟರ ಮಟ್ಟಿಗೆ ಆಗಿದೆ. ಅದರ ಗುಣಮಟ್ಟು ಏನು ಎಂಬ ಬಗ್ಗೆ ಯಾವುದೇ ಮಾಹಿತಿ ಸಿಗುವುದಿಲ್ಲ. ಹೆಚ್ಚು ಜನರಿಗೆ ಈ ಆ್ಯಪ್‌ ಬಗ್ಗೆ ಗೊತ್ತಿಲ್ಲ. ನನಗೆ ದಿನಕ್ಕೆ 8ರಿಂದ 10 ದೂರುಗಳು ಬರುತ್ತದೆ. ಬಿಬಿಎಂಪಿ ಜತೆ ಈ ವಿಚಾರ ಮಾತನಾಡಿದಾಗ ಬಂದ ದೂರುಗಳನ್ನು ನಮಗೂ ಹೇಳಿ ನಾವು ಕೆಲಸ ಮಾಡುತ್ತೇವೆ ಎನ್ನುತ್ತಾರೆ.

ಸರ್ಕಾರ ನಿಮ್ಮ ಕೆಲಸವನ್ನು ಗುರುತಿಸಿದೆಯೇ?

ಬಿಬಿಎಂಪಿಗೆ ನಾವು ಮಾಡುವ ಚಟುವಟಿಕೆ ಬಗ್ಗೆ ಗೊತ್ತು. ಮಾಡಿ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಎನ್ನುತ್ತಾರೆ. ಅದಕ್ಕಿಂತ ಬೇರೇನೂ ಪ್ರಯೋಜನವಾಗಿಲ್ಲ. ಸಾರಿಗೆ ಇಲಾಖೆ ಮತ್ತು ಪೊಲೀಸರಿಗೂ ನಾವು ಮಾಡುವ ಕೆಲಸದ ಬಗ್ಗೆ ತುಂಬಾ ಖುಷಿ ಇದೆ. ಗುಂಡಿ ಮುಚ್ಚುವ ಕೆಲಸವನ್ನು ಮಧ್ಯರಾತ್ರಿ ಅಥವಾ ಮುಂಜಾನೆ ಮಾಡುತ್ತೇವೆ. ಸಂಚಾರಕ್ಕೆ ನಾವು ಅಡ್ಡಿ ಮಾಡುವುದಿಲ್ಲ.

ನಿಮ್ಮನು ಜನ ಸಂಪರ್ಕಿಸುವುದು ಹೇಗೆ?

‘ಪಾಟ್‌ಹೋಲ್ ರಾಜ’ (pothole raja) ಎಂಬ ಆ್ಯಪ್ ಇದೆ. ಅದರ ಮೂಲಕ ನಮ್ಮನು ಸಂಪರ್ಕಿಸಬಹುದು. ‘814pothole' ಎಂಬ ಸಂಖ್ಯೆ ಅಕ್ಷರಗಳ ಕಾಂಬಿನೇಷನ್ ಡಯಲ್ ಮಾಡಬಹುದು. ವಾಟ್ಸ್‌ಆ್ಯಪ್ ಮಾಡುವವರು ಈ ಸಂಖ್ಯೆಗೆ ರಸ್ತೆಗುಂಡಿಗಳ ಫೋಟೊ, ವಿಡಿಯೊ ಕಳುಹಿಸಬಹುದು. ಜೊತೆ ಲೊಕೇಷನ್ ಹಂಚಿಕೊಂಡರೆ ನಮಗೆ ಅನುಕೂಲವಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.