‘ಅವೀನ ನೀನು ನನ್ನ ಅಮ್ಮ ಅಲ್ವಾ’

ಸೋಮವಾರ, ಮೇ 20, 2019
28 °C

‘ಅವೀನ ನೀನು ನನ್ನ ಅಮ್ಮ ಅಲ್ವಾ’

Published:
Updated:
‘ಅವೀನ ನೀನು ನನ್ನ ಅಮ್ಮ ಅಲ್ವಾ’

ಕೀರ್ತಿ ನನ್ನ ಜೊತೆಗೂಡಿ ಮನೆಗೆ ಬಂದಾಗ ಇದ್ದ ಸಂಭ್ರಮ ಹೆಚ್ಚು ದಿನ ಉಳಿಯಲಿಲ್ಲ. ಅವಳ ಕೂಗಾಟ, ನಡವಳಿಕೆ ಗಮನಿಸಿದ ನನಗೆ ಸಂಗಾತಿಯ ಆಯ್ಕೆಯಲ್ಲಿ ದೊಡ್ಡತಪ್ಪು ಮಾಡಿದೆನೇನೋ ಎನಿಸುತ್ತಿತ್ತು. ‘ಹೊಂದಾಣಿಕೆಯ ಸಮಸ್ಯೆಯಾಗಿದೆ, ಕೆಲವು ದಿನ ಹೋಗಲಿ’ ಎಂದು ಸುಮ್ಮನಿದ್ದೆ.

ಇವಳಿಗೆ ಚಿಕಿತ್ಸೆಬೇಕಾದ ಮಾನಸಿಕ ಸಮಸ್ಯೆಯಿದೆ ಎಂಬ ಸಂಗತಿ ಕ್ರಮೇಣ ಅರಿವಿಗೆ ಬಂತು. ಚಿಕಿತ್ಸೆಗೆ ಬರಲು ಇವಳು ಒಪ್ಪಲಿಲ್ಲ. ನಾನೊಬ್ಬನೇ ಮನೋವೈದ್ಯರಲ್ಲಿಗೆ ಹೋಗಿ ವಿವರಿಸಿದೆ. ಒಮ್ಮೆ ನಿದ್ದೆ ಮಾತ್ರೆಗಳನ್ನು ತೆಗೆದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿಬಿಟ್ಟಳು. ಆಸ್ಪತ್ರೆಗೆ ಸೇರಿಸಿ ವಾರಕ್ಕೂ ಹೆಚ್ಚು ಸಮಯ ಒದ್ದಾಡಿ, ಪೊಲೀಸ್ ಮತ್ತಿರರೊಂದಿಗೆ ಹೆಣಗಿ ಮನೆಗೆ ಬಂದೆವು.

ನಂತರದ ದಿನಗಳಲ್ಲಿ ನನ್ನ ಇತರ ಚಟುವಟಿಕೆಗಳನ್ನು ಕಡಿಮೆ ಮಾಡಿ, ಪೂರ್ಣ ಗಮನವನ್ನು ಅವಳಿಗೇ ಕೊಟ್ಟೆ. ಮನೋವೈದ್ಯರ ಭೇಟಿಗೆ ಪುಸಲಾಯಿಸಿದೆ. ಹೋಮಿಯೋಪತಿ ವೈದ್ಯ ಮಿತ್ರರೊಬ್ಬರು ಔಷಧವನ್ನು ಕೊಟ್ಟು, ‘ಇದನ್ನು ಕೊಡಿ ನಿಧಾನವಾಗಿ ಪರಿಣಾಮವಾಗುತ್ತದೆ. ಆಮೇಲೆ ನೋಡೋಣ’ ಎಂದರು. ಅವಳಿಗೆ ಮಧುಮೇಹವಿದ್ದುದು ಗೊತ್ತಿತ್ತು. ‘ಇದು ಶುಗರ್‌ಗೆ ಔಷಧಿ’ ಎಂದು ಸುಳ್ಳು ಹೇಳಿ ನೀರಿನಲ್ಲಿ ಕೆಲ ಹನಿಹಾಕಿ ಕೊಟ್ಟೆ. ಸುಮಾರು ಒಂದು ತಿಂಗಳಲ್ಲಿ ಸ್ವಲ್ಪ ಬದಲಾವಣೆ ಕಂಡಿತು.

ತಾನಾಗಿಯೇ ಮಾನಸಿಕ ಚಿಕಿತ್ಸೆಗೆ ಒಪ್ಪಿದಳು. ಆದರೆ, ಆಯುರ್ವೇದ ಎಂದಳು. ಡಾ.ವಸುಂಧರಾ ಭೂಪತಿ ಅವರ ಬಳಿ ಎಲ್ಲವನ್ನೂ ಹೇಳಿಕೊಂಡೆ. ಅವರು ಚಿಕಿತ್ಸೆ ನೀಡಿ. ಹಾಸನದ ಎಸ್‌ಡಿಎಂ ಆಯುರ್ವೇದ ಕಾಲೇಜು ಆಸ್ಪತ್ರೆಯಲ್ಲಿರುವ ಅವರ ಸಹಪಾಠಿ ವೈದ್ಯರೊಬ್ಬರನ್ನು ಸಂಪರ್ಕಿಸಲು ಹೇಳಿದರು. ಸುಮಾರು ಒಂದು ತಿಂಗಳು ನಾನೂ ರಜೆ ಹಾಕಿ ಅಲ್ಲಿಯೇ ಇದ್ದೆ. ಅಲ್ಲಿನ ಮಾನಸಿಕ ವಿಭಾಗದ ಡಾ.ನಾರಾಯಣ ಪ್ರಕಾಶ್ ಎಣೆಯಿಲ್ಲದ ಪ್ರೀತಿಯಿಂದ ನೋಡಿಕೊಂಡರು.

ಡಾ.ಮುರಳೀಧರ ಪೂಜಾರ್ ಅವರ ಸಹಾಯವನ್ನು ಮರೆಯುವಂತೆಯೇ ಇಲ್ಲ. ವೈದ್ಯರ ಪ್ರಯತ್ನದಿಂದ ಅವಳ ಸಿಟ್ಟು, ಸೆಡವು ಕಡಿಮೆಯಾಯಿತು. ಆತ್ಮಹತ್ಯೆಯಂತಹ ಯೋಚನೆಗಳು ಬಹುತೇಕ ಕಣ್ಮರೆಯಾಯಿತು. ಆದರೆ, ಅವಳಿಗೆ ಮಾತ್ರೆಯಿಲ್ಲದೆ ನಿದ್ದೆ ಬರುತ್ತಿರಲಿಲ್ಲ. ಆದರೆ ಈ ಬಾರಿ ಆಸ್ಪತ್ರೆಯಿಂದ ಬರುವ ಹೊತ್ತಿಗೆ ತೆಗೆದು ಕೊಳ್ಳುತ್ತಿದ್ದ ಮಾತ್ರೆಗಳ ಸಂಖ್ಯೆ ಕೇವಲ ಎರಡಕ್ಕೆ ಇಳಿದಿತ್ತು. ಮತ್ತೆ ಕೆಲವು ತಿಂಗಳ ನಂತರ ಬರಲು ವೈದ್ಯರು ಹೇಳಿದ್ದರು. ಇವಳು ಆ ಫಾಲೊಅಪ್‌ಗಳಿಗೆ ಬರಲೇ ಇಲ್ಲ.

ಕೆಲ ದಿನಗಳ ನಂತರ ಅಲೊಪತಿ ವಿಧಾನದಲ್ಲಿ ಚಿಕಿತ್ಸೆ ಆರಂಭಿಸಿದೆವು. ಅವಳ ಜೊತೆಯಲ್ಲಿ ಸದಾ ನಾನಿರಲೇಬೇಕು ಎಂದು ಹಠ ಮಾಡುತ್ತಿದ್ದಳು. ಇದರಿಂದಾಗಿ ಬೆಳಿಗ್ಗೆ 7ರಿಂದ ರಾತ್ರಿ 10ರವರೆಗೆ ಮನೆಯ ಹೊರಗೆ ಚಟುವಟಿಕೆಯಿಂದ ಇರುತ್ತಿದ್ದ ನನಗೆ ಕಟ್ಟಿಹಾಕಿದಂತಾಯಿತು. ನನ್ನ ಆಸಕ್ತಿಯ ಕ್ಷೇತ್ರವಾದ ವನ್ಯಜೀವಿ ಅಧ್ಯಯನ, ಸಂರಕ್ಷಣೆಯ ಕುರಿತು ಯೋಚಿಸಲೂ ಆಗದ ಸಂದರ್ಭ ಒದಗಿತು.

ನಾನು ತುಂಬಾ ಪ್ರೀತಿಸುತ್ತಿದ್ದ ಪಾಠ ಹೇಳುವ ಕೆಲಸವನ್ನು ಬಿಡಬೇಕಾಯಿತು. ‘ಅವೀನ ನೀನು ನನ್ನ ಅಮ್ಮ ಅಲ್ವಾ’ ಎನ್ನುತ್ತಿದ್ದಳು. ನನ್ನ ಪಾಲಿಗೆ ಅವಳೇ ಮುಖ್ಯ, ಉಳಿದುದೆಲ್ಲವೂ ಗೌಣ ಎನಿಸಿತ್ತು. ಅವಳಿಗಾಗಿ ಒಂದು ಒಳ್ಳೆಯ ಗೆಳೆಯರ ಗುಂಪು ಮಾಡಬೇಕೆಂದು ಪ್ರಯತ್ನಿಸಿದೆ, ಆಗಲಿಲ್ಲ.

ಕೀರ್ತಿ ಕ್ರಮೇಣ ನನ್ನೊಂದಿಗೆ ಹೆಚ್ಚು ಮಾತನಾಡತೊಡಗಿದಳು. ಅವಳು ಮನಬಿಚ್ಚಿ ನನ್ನೊಂದಿಗೆ ಮಾತನಾಡುವ ಹೊತ್ತಿಗೆ ನನ್ನ ಮದುವೆಯಾಗಿ ನಾಲ್ಕು ವರ್ಷವಾಗಿತ್ತು! ಅವಳ ದುರಂತದ ಕತೆ ಕೇಳಿ ನನ್ನ ಎದೆಯೊಡೆಯಿತು. ಬಹಳ ಕೆಟ್ಟ ಬಾಲ್ಯ. ಇವಳು ಮಗುವಾಗಿದ್ದಾಗಲೇ ತಾಯಿ ಸತ್ತು ಹೋಗಿದ್ದರು.

ತಂದೆಯೂ ತೀರಿಕೊಂಡ ನಂತರ ಅವರಿವರ ಮನೆಗಳಲ್ಲಿ, ಪಿಜಿಗಳಲ್ಲಿ ಬೆಳೆದಳು. ಸಾಮಾನ್ಯವಾಗಿ ಇಂಥವರು ಗಟ್ಟಿಯಾಗಿಬಿಡುತ್ತಾರೆ. ಆದರೆ ಇವಳು ಖಿನ್ನತೆಯಲ್ಲಿ ಮುಳುಗಿದ್ದಳು. ಅದಕ್ಕೆ ಅವಳ ಜೀವನದಲ್ಲಿ ಸಂಭವಿಸಿದ ಕೆಲ ಆಘಾತಕಾರಿ ಘಟನೆಗಳೇ ಕಾರಣ. ಅವೇನೆಂಬುದನ್ನು ಹೇಳಲು ಮನಸು ಬರುತ್ತಿಲ್ಲ.

ಚಿಕಿತ್ಸೆಗೆಂದು ಬೆಂಗಳೂರು (ಮಾನಸ ಆಸ್ಪತ್ರೆ), ಹಾಸನ, ಶಿವಮೊಗ್ಗ (ಡಾ.ಶ್ರೀಧರ್) ಎಂದೆಲ್ಲ ಹೋಗಿ ಬಂದೆವು. ಇವುಗಳಿಂದ ಪ್ರಯೋಜನವೂ ಆಯಿತು. ಆದರೆ ಫಾಲೋಅಪ್‌ಗಳಿಗೆ ಅವಳು ಬರುತ್ತಿರಲಿಲ್ಲ. ಹೀಗಾಗಿ ಚಿಕಿತ್ಸೆಯ ಪೂರ್ಣ ಪ್ರಯೋಜನ ಸಿಗಲಿಲ್ಲ.

ಅವಳು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾತ್ರ ಬಹಳ ಸಂತೋಷವಾಗಿ ಇರುತ್ತಿದ್ದಳು. ಸಾಮಾನ್ಯವಾಗಿ ಒಮ್ಮೆ ಹೋದರೆ ವಾರದವರೆಗೆ ಇದ್ದು ಬರುತ್ತಿದ್ದೆವು. ಮೈಸೂರಿನಲ್ಲಿ ಅವಳನ್ನು ತುಂಬು ಪ್ರೀತಿಯಿಂದ ಕಾಣುವ ಸೋದರತ್ತೆಯಿದ್ದಾರೆ. ಮದುವೆಯಾದ ನಂತರ ಮನೆ-ಆಸ್ಪತ್ರೆ-ಕುಕ್ಕೆ-ಮೈಸೂರು ಇಷ್ಟೇ ನನ್ನ ಜಗತ್ತು ಆಯಿತು. ಕೀರ್ತಿ ಹೆಚ್ಚು ಮಾತನಾಡುತ್ತಿದುದು ಆಸ್ಪತ್ರೆಗಳಲ್ಲಿ. ಬಹುಶಃ ಅಲ್ಲಿಯೇ ಅವಳಿಗೆ ಇಷ್ಟದ ಏಕಾಂತ ದೊರೆಯುತ್ತಿತ್ತೋ ಏನೋ?

ಒಮ್ಮೆ ಶಾಲೆಯ ಮಕ್ಕಳಿಗೆ ತೋರಿಸಲೆಂದು ಒಂದು ನೆಗೆಯುವ ಬೊಂಬೆ ತಂದಿದ್ದೆ. ಅದನ್ನು ನೋಡಿ ಎಷ್ಟು ಖುಷಿಪಟ್ಟಳೆಂದರೆ ಹೇಳಲಸಾಧ್ಯ. ಅವಳ ಮನೋವೈದ್ಯರಿಗೆ ಸುದ್ದಿ ಮುಟ್ಟಿಸಿದೆ. ‘ಇಂತಹ ಘಟನೆಗಳನ್ನು ತಪ್ಪದೆ ನನಗೆ ಹೇಳಿ’ ಎಂದರು. ಇನ್ನಷ್ಟು ಬೊಂಬೆಗಳನ್ನು ತಂದು ಕೊಟ್ಟೆ. ನಮ್ಮ ಗಣಿತದ ವಿ.ಎಸ್‌.ಎನ್.ಶಾಸ್ತ್ರಿಗಳು ‘ಇದೇ ನೆಪ ಇಟ್ಟುಕೊಂಡು ಒಂದು ಬೊಂಬೆ ಮನೆ ಮಾಡಿ’ ಎಂದು ಸಲಹೆ ಕೊಟ್ಟರು. ಇವಳಿಗೆ ಬೊಂಬೆ ತರಲೆಂದೇ ಚನ್ನಪಟ್ಟಣಕ್ಕೆ ಹೋಗಿಬಂದೆ. ಸುಮಾರು ಒಂದು ವರ್ಷ ಆ ಬೊಂಬೆಗಳ ಬಗ್ಗೆ ತುಂಬ ಪೊಸೆಸಿವ್ ಆಗಿದ್ದಳು.

ಅವಳ ಮಾನಸಿಕ ಆರೋಗ್ಯ ಸ್ಥಿಮಿತದಲ್ಲಿದ್ದಾಗ ಒಟ್ಟಿಗೆ ವಾಕಿಂಕ್ ಹೋಗುತ್ತಿದ್ದೆವು. ನಾನು ಹೊರಗೆ ಇದ್ದಾಗ ಒಮ್ಮೊಮ್ಮೆ ಫೋನ್ ಮಾಡಿ, ‘ಅವೀನ ನನ್ನಿಂದ ನಿಮಗೆ ತುಂಬಾ ತೊಂದ್ರೆ ಅಲ್ವಾ? ನಿಮ್ಮನ್ನ ನಾನು ತುಂಬಾ ಪ್ರೀತಿಸ್ತೀನಿ. ನೀನೇ ನನ್ನ ಅಮ್ಮ. ನಂಗೆ ಎಕ್ಸ್‌ಪ್ರೆಸ್ ಮಾಡೋಕೆ ಬರಲ್ಲ’ ಎನ್ನುತ್ತಾ ಬಿಕ್ಕಿಬಿಕ್ಕಿ ಅಳುತ್ತಿದ್ದಳು.

ಅವಳ ಮಧುಮೇಹ ನಿಯಂತ್ರಣ ಕಳೆದುಕೊಂಡಿತ್ತು. ಐಸಿಯು, ಅಸಿಡೋಸಿಸ್, ಬೈಕಾರ್ಬನೇಟ್ ದ್ರವ, ಸಲೈಲ್, ಆಂಟಿಬಯಾಟಿಕ್, ಆಸ್ಪತ್ರೆ, ಮನೆ... ಇದೊಂದು ಚಕ್ರವೇ ಆಗಿಬಿಟ್ಟಿತ್ತು. 2015 ಮತ್ತು 2016 ನನ್ನ ಬದುಕಿನ ಭಯಂಕರ ಸಮಯ. ಅವಳ ಒಂದು ಕಿಡ್ನಿಯಲ್ಲಿ ತೊಂದರೆ ಕಾಣಿಸಿಕೊಂಡಿತು. ನನ್ನ ಕೈಲಿದ್ದ ಕಾಸೂ ಕರಗಿತ್ತು. ಆಸ್ಪತ್ರೆಯಿಂದ ಡಿಸ್‌ ಚಾರ್ಜ್ ಮಾಡಿಸಲೂ ಹಣ ಇರಲಿಲ್ಲ.

ಆಸ್ಪತ್ರೆಯವರು ಹಣ ಹೊಂದಿಸಲು ಸಮಯ ನೀಡಿ ಮನೆಗೆ ಕಳಿಸಿದರು. ಅನೇಕರು ನನ್ನ ಸಹಾಯಕ್ಕೆ ಧಾವಿಸಿದರು. ಅನೇಕರು ನಮ್ಮ ಹೆಸರು ಹೇಳಬೇಡಿ ಎಂದಿದ್ದಾರೆ. ಇಲ್ಲವಾದಲ್ಲಿ ಎಲ್ಲರ ಹೆಸರು ಬರೆಯುತ್ತಿದ್ದೆ. ಅವರೆಲ್ಲರೂ ನನ್ನ ಮಟ್ಟಿಗೆ ದೇವರುಗಳೇ.

ಇಂದಲ್ಲ ನಾಳೆ ಅವರ ಹಣ ಹಿಂದಿರುಗಿಸುತ್ತೇನೆ. ಆದರೆ, ಅಂದಿನ ಅವರ ಸಹಾಯ? ಅವರ ಪ್ರೀತಿಯ ಋಣವನ್ನು ನಾನು ಜೀವಮಾನವಿಡೀ ಹೊತ್ತುಕೊಂಡೇ ತಿರುಗಬೇಕು. ಅದೇ ಶ್ರೇಯಸ್ಸು. ಜೀವನಪರ್ಯಂತ ಅವರನ್ನು ನೆನಪಿನಲ್ಲಿಟ್ಟುಕೊಂಡಿರುತ್ತೇನೆ.

ಬೆಂಗಳೂರಿನ 'ಮಾನಸ'ದಲ್ಲಿ ಕೊಟ್ಟ ಚಿಕಿತ್ಸೆ ಪರಿಣಾಮಕಾರಿಯಾಗಿತ್ತು. ಇನ್ನೆರೆಡು ವರ್ಷದಲ್ಲಿ ಅವಳು ಗುಣವಾಗುತ್ತಾಳೆ ಎಂದು ವೈದ್ಯರು ಹೇಳುತ್ತಿದ್ದರು. ನಾನೂ ಎಲ್ಲರಿಗೂ ಅದನ್ನೇ ಹೇಳಿಕೊಂಡು ಬರುತ್ತಿದ್ದೆ.

ಆದರೆ ಮತ್ತೆ ಮಧುಮೇಹದ ಸಮಸ್ಯೆ. ಈ ಬಾರಿ ಆಸ್ಪತ್ರೆಗೆ ಸೇರಿಸಿದಾಗ ನಮ್ಮ ಮಾಮೂಲಿ ರಂಗದೊರೈ ಆಸ್ಪತ್ರೆಯಲ್ಲಿ ಐಸಿಯು ಖಾಲಿಯಿರಲಿಲ್ಲ. ಪಕ್ಕದ ಬೃಂದಾವನ್ ಏರಿಯನ್‌ಗೆ ಹೋದೆವು. ಅಸಿಡೋಸಿಸ್ ಕಡಿಮೆಯಾದರೂ ಸೋಂಕು ಕಡಿಮೆಯಾಗಲಿಲ್ಲ.

ಹೃದಯಾಘಾತವೂ ಆಯಿತು. ಆಗಸ್ಟ್ 27ರ ರಾತ್ರಿ ಹನ್ನೆರೆಡು ಮುಕ್ಕಾಲಿನ ಸುಮಾರಿಗೆ ಐಸಿಯುನಲ್ಲಿದ್ದ ವೈದ್ಯರು ನನ್ನನ್ನು ಕರೆಸಿದರು. ‘ನಿಮ್ಮ ಪತ್ನಿಯ ಕೊನೆ ಘಳಿಗೆ ಸಮೀಪಿಸುತ್ತಿದೆ’ ಎಂದರು. ನನಗೆ ಸಿಡಿಲು ಬಡಿದಂತಾಯಿತು.

ಹೋಗಿ ಹತ್ತಿರ ನಿಂತೆ. ತಲೆ-ಮುಖ ಸವರಿ ಹಣೆಗೆ ಮುತ್ತಿಟ್ಟೆ. ಹೊರಗೆ ಬಂದೆ. ಅರ್ಧ ಗಂಟೆ ಕಳೆಯುವ ಹೊತ್ತಿಗೆ ಸುದ್ದಿ ಬಂತು, ಓಡಿದೆ. ಅವಳಿನ್ನೂ ಉಸಿರಾಡುತ್ತಿರುವಂತೆ ಕಾಣುತ್ತಿತ್ತು. ‘ಡಾಕ್ಟರ್ ಶೀ ಈಸ್ ಸ್ಟಿಲ್ ಬ್ರೀತಿಂಗ್’ (ಅವಳಿನ್ನೂ ಉಸಿರಾಡುತ್ತಿದ್ದಾಳೆ) ಎಂದೆ. ‘ನೋ ದಟ್ ಈಸ್ ಬಿಕಾಸ್ ಆಫ್ ವೆಂಟಿಲೇಟರ್’ (ಅದು ವೆಂಟಿಲೇಟರ್ ಕಾರಣದಿಂದ) ಎಂದರು. ಕುಸಿದುಕುಳಿತೆ. ಕೊನೇ ಘಳಿಗೆಯಲ್ಲಿ ಅವಳ ಮನಸ್ಸಿನಲ್ಲಿ ಏನು ಭಾವನೆಗಳಿತ್ತು? ಸ್ವಲ್ಪ ಹೊತ್ತು  ಮುಖವಂತೂ ಪ್ರಶಾಂತವಾಗಿತ್ತು.

ಅವಳಿಚ್ಚೆಯಂತೆ ಕಣ್ಣು ದಾನ ಮಾಡಿದೆ. ಅವಳು ನೋವು ಎಂದಾಗ ನಾನು ಜೊತೆಯಲ್ಲಿದ್ದೆ. ನಾನು ಮಾಡಬೇಕಾದದ್ದನ್ನು ನನ್ನ ಮಿತಿಯಲ್ಲಿ ಮಾಡಿದೆ. ನನ್ನಿಂದ ಕೆಲವು ಕನ್ನಡದ ಯೋಜನೆಗಳಿಗೆ ತೊಂದರೆಯಾಗಿದೆ. ನನ್ನದೇ ಪುಸ್ತಕಗಳು ಬರಲಿಲ್ಲ. ಇನ್ನು ಆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತೇನೆ. ಕೀರ್ತಿಗಾಗಿ ಹಾರೈಸಿದ ಮತ್ತು ಕಷ್ಟಕಾಲದಲ್ಲಿ ಬೆನ್ನಿಗೆ ನಿಂತ ಎಲ್ಲರಿಗೂ ನನ್ನ ನಮಸ್ಕಾರಗಳು.

ಯಾರಾದರೊಬ್ಬರು ಮೊದಲು ಹೋಗಲೇಬೇಕು

ಮದುವೆಯಲ್ಲಿ ಯಾರು ಏನೆಂದು ಹಾರೈಸಿದ್ದರೂ ಗಂಡ-ಹೆಂಡತಿ ಒಟ್ಟಿಗೆ ಸಾಯಲು ಆಗುವುದಿಲ್ಲ. ಯಾರಾದರೊಬ್ಬರು ಮೊದಲು ಹೋಗಲೇಬೇಕು. ಅವಳು ಸತ್ತಳು ಎಂಬುದಕ್ಕಿಂತ, 'ಇನ್ನೆರೆಡು ವರ್ಷಗಳಲ್ಲಿ ಅವಳ ಆರೋಗ್ಯ ಸರಿಹೋಗುತ್ತೆ ಎಂಬ ಭರವಸೆ ಸಿಕ್ಕ ನಂತರ ಹೀಗಾಯಿತಲ್ಲ. ಅಷ್ಟು ನೋವುಂಡ ಜೀವಕ್ಕೆ ಒಳ್ಳೆಯ ಬದುಕು ಕೊಡಲು ನನ್ನಿಂದ ಆಗಲೇ ಇಲ್ಲವಲ್ಲ' ಎಂಬ ಭಾವನೆ ಆಗಾಗ ಮನಸನ್ನು ಸುಡುತ್ತಲೇ ಇದೆ. ಕೀರ್ತಿಗಾಗಿ ಹಾರೈಸಿದ ಮತ್ತು ಕಷ್ಟಕಾಲದಲ್ಲಿ ಬೆನ್ನಿಗೆ ನಿಂತ ಎಲ್ಲರಿಗೂ ನನ್ನ ನಮಸ್ಕಾರಗಳು

ನವೀನ್ ಅವರ ಇಮೇಲ್‌ ವಿಳಾಸ: ksn.bird@gmail.com

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry