ಪಾಲಿ ಹೌಸ್‌ಗೆ ನುಗ್ಗಿದ ಚಿರತೆ ಕೊಂದ ಗ್ರಾಮಸ್ಥರು

ಶನಿವಾರ, ಮೇ 25, 2019
32 °C

ಪಾಲಿ ಹೌಸ್‌ಗೆ ನುಗ್ಗಿದ ಚಿರತೆ ಕೊಂದ ಗ್ರಾಮಸ್ಥರು

Published:
Updated:
ಪಾಲಿ ಹೌಸ್‌ಗೆ ನುಗ್ಗಿದ ಚಿರತೆ ಕೊಂದ ಗ್ರಾಮಸ್ಥರು

ಹರಪನಹಳ್ಳಿ (ದಾವಣಗೆರೆ ಜಿಲ್ಲೆ): ತಾಲ್ಲೂಕಿನ ಅಳಗಂಚಿಕೇರಿ ಗ್ರಾಮದ ಪಾಲಿ ಹೌಸ್‌ಗೆ ನುಗ್ಗಿದ ಬಾಣಂತಿ ಚಿರತೆಯನ್ನು ಗ್ರಾಮಸ್ಥರು ಶನಿವಾರ ಕೊಂದು ಹಾಕಿದ್ದಾರೆ.

ನಾಲ್ಕು ವರ್ಷದ ಚಿರತೆಯು ಎರಡು ತಿಂಗಳ ಹಿಂದೆ ಮರಿಹಾಕಿದೆ. ಅದರ ಮರಿಗಳು ಎಲ್ಲಿವೆ ಎಂದು ತಿಳಿದುಬಂದಿಲ್ಲ. ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿ ಸುಟ್ಟುಹಾಕುವುದಾಗಿ ಅರಣ್ಯ ಇಲಾಖೆ ಅಧಿಕಾರಿ ಶಂಕರ್‌ ನಾಯ್ಕ ತಿಳಿಸಿದ್ದಾರೆ.

ಗ್ರಾಮದ ಕುರುವತ್ತಿ ಬಸಣ್ಣ ಎಂಬುವರು ತಮ್ಮ ಜಮೀನಿನಲ್ಲಿ ದಪ್ಪ ಮೆಣಸಿನಕಾಯಿ ಬೀಜೋತ್ಪಾದನೆಗೆ ಪಾಲಿ ಹೌಸ್‌ ನಿರ್ಮಿಸಿಕೊಂಡಿದ್ದರು. ಆಹಾರ ಅರಸಿ ಗ್ರಾಮಕ್ಕೆ ಬಂದ ಚಿರತೆಯು ಅದರಲ್ಲಿ ಹೊಂಚು ಹಾಕಿ ಕುಳಿತಿತ್ತು.

ಚಿರತೆಯನ್ನು ನೋಡಿ ಭಯಭೀತರಾದ ಬಸಣ್ಣ, ತಕ್ಷಣವೇ ಹೊರ ಬಂದು ಪಾಲಿಹೌಸ್‌ನ ಬಾಗಿಲಿಗೆ ಕಲ್ಲುಗಳನ್ನಿಟ್ಟು ಭದ್ರಪಡಿಸಿ ಕೂಗಿಕೊಂಡರು. ಆಗ ಗ್ರಾಮಸ್ಥರು ಜಮಾಯಿಸಿದರು. ಪಾಲಿ ಹೌಸ್‌ನಿಂದ ತಪ್ಪಿಸಿಕೊಳ್ಳಲು ಚಿರತೆ ಹೆಣಗಾಡಿತು. ಪರದೆ ಹರಿದು ಹೊರ ಹೋಗಲು ಯತ್ನಿಸಿದಾಗ ಗ್ರಾಮಸ್ಥರು ಅದರ ತಲೆಭಾಗಕ್ಕೆ ಮಾರಕಾಸ್ತ್ರಗಳಿಂದ ಬಲವಾಗಿ ಹೊಡೆದರು. ಕೆಲಕಾಲ ಒದ್ದಾಡಿದ ಚಿರತೆಯು ಅಲ್ಲಿಯೇ ಮೃತಪಟ್ಟಿತು.

ಮೂರನೇ ಚಿರತೆ: ಒಂದೂವರೆ ವರ್ಷದ ಅಂತರದಲ್ಲಿ ಚಿರತೆ ಸಾಯಿಸಿದ ಮೂರನೇ ಪ್ರಕರಣ ಇದು. ಈ ಹಿಂದೆ ಮೈ‌ದೂರು, ನಂದಿಬೇವೂರು, ಗ್ರಾಮಗಳಿಗೆ ನುಗ್ಗಿದ ಚಿರತೆಗಳನ್ನು ಅಲ್ಲಿನ ಗ್ರಾಮಸ್ಥರು ಕೊಂದುಹಾಕಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry