ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

22ರಿಂದ ಫಿಬಾ ಬಾಲಕಿಯರ ಏಷ್ಯನ್‌ ಚಾಂಪಿಯನ್‌ಷಿಪ್‌

Last Updated 14 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಂಠೀರವ ಕ್ರೀಡಾಂಗಣದಲ್ಲಿ ಅಕ್ಟೋಬರ್ 22 ರಿಂದ 28ರವರೆಗೆ 16 ವರ್ಷದೊಳಗಿನ ಬಾಲಕಿಯರ ಫಿಬಾ ಏಷ್ಯನ್ ಚಾಂಪಿಯನ್‌ಷಿಪ್ ಬ್ಯಾಸ್ಕೆಟ್‌ಬಾಲ್ ಟೂರ್ನಿ ನಡೆಯಲಿದೆ. ಟೂರ್ನಿಯಲ್ಲಿ 15 ತಂಡಗಳು ಸ್ಪರ್ಧಿಸಲಿವೆ. ಎರಡು ವಿಭಾಗಗಳಲ್ಲಿ ತಂಡಗಳು ಸ್ಪರ್ಧಿಸಲಿವೆ. 

ಸುದ್ದಿಗಾರರೊಂದಿಗೆ ಮಾತ ನಾಡಿದ ಭಾರತ ಬ್ಯಾಸ್ಕೆಟ್‌ಬಾಲ್ ಫೆಡರೇಷನ್ (ಬಿಎಫ್‌ಎ) ಅಧ್ಯಕ್ಷ ಕೆ. ಗೋವಿಂದರಾಜ್, ‘ಎಲ್ಲ ಸಿದ್ಧತೆಗಳೂ ಸಂಪೂರ್ಣವಾಗಿವೆ. ಭಾರತ ತಂಡದ ಆಟಗಾರರು ಕೋರಮಂಗಲ ಕ್ರೀಡಾಂಗಣದಲ್ಲಿ ನಡೆದಿರುವ ಶಿಬಿರದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಈ ಬಾರಿ ಭಾರತ ತಂಡದಲ್ಲಿ ಕರ್ನಾಟಕದ ಇಬ್ಬರು ಆಟಗಾರ್ತಿಯರು ಇದ್ದಾರೆ. ಈ ಟೂರ್ನಿಯಲ್ಲಿ ಮೊದಲ ನಾಲ್ಕು ಸ್ಥಾನ ಗಳಿಸುವ ತಂಡಗಳು 17 ವರ್ಷದೊಳಗಿನ ಬಾಲಕಿಯರ ವಿಶ್ವಕಪ್ ಬ್ಯಾಸ್ಕೆಟ್‌ಬಾಲ್‌ಗೆ ಅರ್ಹತೆ ಪಡೆಯಲಿವೆ. ಬೆಲಾರಸ್‌ನಲ್ಲಿ ಮುಂದಿನ ವರ್ಷ ವಿಶ್ವಕಪ್ ನಡೆಯಲಿದೆ’ ಎಂದರು.

‘ಬ್ಯಾಸ್ಕೆಟ್‌ಬಾಲ್ ತಂಡಗಳಿಗೆ ತರಬೇತಿ ನೀಡಲು ಇಬ್ಬರು ವಿದೇಶಿ ಕೋಚ್‌ಗಳನ್ನು ನೇಮಕ ಮಾಡಲು ಕೇಂದ್ರ ಸರ್ಕಾರವು ಅನುಮತಿ ನೀಡಿದೆ. ಕಂಠೀರವ ಕ್ರೀಡಾಂಗಣದಲ್ಲಿ ಬ್ಯಾಸ್ಕೆಟ್‌ಬಾಲ್ ತರಬೇತಿಯ ಪ್ರಮುಖ ಕೇಂದ್ರವನ್ನು ಸ್ಥಾಪಿಸಲು ರಾಜ್ಯ ಸರ್ಕಾರವೂ ಅನುಮತಿ ನೀಡಿದೆ. ಇದರಿಂದಾಗಿ ನಮ್ಮ ಸಂಸ್ಥೆಯ ಎಲ್ಲ ಶಿಬಿರಗಳನ್ನು ಇಲ್ಲಿ ನಡೆಸಲು  ಅನುಕೂಲವಾಗಲಿದೆ. 21ರಂದು ಚಾನ್ಸರಿ ಹೋಟೆಲ್‌ನಲ್ಲಿ ಉದ್ಘಾಟನೆ ಸಮಾರಂಭ ನಡೆಯಲಿದೆ. 22ರಿಂದ ಟೂರ್ನಿ ನಡೆಯಲಿದೆ’ ಎಂದರು.

‘ಆಸ್ಟ್ರೇಲಿಯಾ, ಚೀನಾ, ಕೊರಿಯಾ, ಜಪಾನ್, ತೈಪೆ, ಥಾಯ್ಲೆಂಡ್, ನ್ಯೂಜಿ ಲೆಂಡ್, ಹಾಂಕಾಂಗ್, ಭಾರತ, ಮಲೇ ಷ್ಯಾ, ಶ್ರೀಲಂಕಾ, ಕಜಕಸ್ತಾನ, ಇರಾನ್, ಮಾಲ್ಡೀವ್ಸ್‌ ಮತ್ತು ನೇಪಾಳ ತಂಡಗಳು ಸ್ಪರ್ಧಿಸಲಿವೆ’ ಎಂದು ಹೇಳಿದರು.

‘ಹೋದ ಜುಲೈನಲ್ಲಿ ಮಹಿಳೆಯರ ಫಿಬಾ ಏಷ್ಯಾ ಕಪ್ (ಸೀನಿಯರ್) ಟೂರ್ನಿಯು ಇಲ್ಲಿ ಯಶಸ್ವಿಯಾಗಿ ನಡೆದಿತ್ತು. ಜಪಾನ್ ತಂಡವು ಚಾಂಪಿಯನ್ ಆಗಿತ್ತು. ಟೂರ್ನಿಯ ಎಲ್ಲ ಪಂದ್ಯಗಳನ್ನು ನೋಡಲು ಬಹಳಷ್ಟು ಅಭಿಮಾನಿಗಳು ಸೇರಿದ್ದರು’ ಎಂದರು.

ಈ ಸಂದರ್ಭದಲ್ಲಿ ಹಾಜರಿದ್ದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಿರ್ದೇಶಕ ಅನುಪಮ್ ಅಗರವಾಲ್, ‘ಮಳೆ ನೀರಿನಿಂದಾಗಿ ನೆಲಹಾಸು ಸ್ವಲ್ಪ ಹಾನಿಗೊಂಡಿತ್ತು. ಅಂತಹ ದೊಡ್ಡಮಟ್ಟದ ಹಾನಿಯಲ್ಲ. ಅದನ್ನು ಸರಿಪಡಿಸಲಾಗಿದೆ. ಟೂರ್ನಿ ನಡೆಸಲು ಯಾವುದೇ ತೊಂದರೆ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT