ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ಶಾಸಕ ಯೋಗೇಶ್ವರ್ ವಿದಾಯ

Last Updated 14 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ರಾಮನಗರ: ಚನ್ನಪಟ್ಟಣ ಶಾಸಕ ಸಿ.ಪಿ. ಯೋಗೇಶ್ವರ್‌ ಕಾಂಗ್ರೆಸ್‌ ವಿರುದ್ಧ ಸಿಡಿದೆದ್ದಿದ್ದು, ಪಕ್ಷದ ಪ್ರಾಥಮಿಕ ಸದಸ್ಯತ್ವ ಹಾಗೂ ಶಾಸಕಾಂಗ ಪಕ್ಷದ ಸಹ ಸದಸ್ಯತ್ವಗಳಿಗೆ ಶನಿವಾರ ರಾಜೀನಾಮೆ ನೀಡಿದ್ದಾರೆ.

‘ಕಾಂಗ್ರೆಸ್‌ ವರಿಷ್ಠರ ನಿರ್ಲಕ್ಷ್ಯದಿಂದ ಬೇಸತ್ತು ಈ ನಿರ್ಧಾರ ಕೈಕೊಂಡಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್‌ ಜೊತೆಗೆ ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ಕಾರ್ಯದರ್ಶಿಗಳಿಗೂ ರಾಜೀನಾಮೆ ರವಾನಿಸಿದ್ದೇನೆ’ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತಮ್ಮ ಮುಂದಿನ ನಡೆ ಬಗ್ಗೆ ಗುಟ್ಟು ಬಿಟ್ಟುಕೊಡದ ಅವರು ‘ಅ.22ರಂದು ಚನ್ನಪಟ್ಟಣದಲ್ಲಿ ಕಾರ್ಯಕರ್ತರ ಸಭೆ ಕರೆದಿದ್ದೇನೆ. ಅಲ್ಲಿನ ಅಭಿಪ್ರಾಯದಂತೆ ತೀರ್ಮಾನ ಪ್ರಕಟಿಸುತ್ತೇನೆ’ ಎಂದರು.

‘ಯಾವುದೇ ಪಕ್ಷ ಸೇರ್ಪಡೆ ಕುರಿತಂತೆ ಈವರೆಗೆ ನಾನು ಯಾರನ್ನೂ ಸಂಪರ್ಕಿಸಿಲ್ಲ. ನಾಳೆಯಿಂದ ನಾನೇ ಅವರನ್ನು ಸಂಪರ್ಕಿಸುತ್ತೇನೆ. ಕ್ಷೇತ್ರದಿಂದ ಯಾವುದೇ ಪಕ್ಷದ ಚಿಹ್ನೆಯ ಅಡಿ ನಿಂತರೂ ಜನ ನನ್ನನ್ನು ಭಾರಿ ಬಹುಮತದಿಂದ ಗೆಲ್ಲಿಸುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಡಿಕೆಶಿ ವಿರುದ್ಧ ವಾಗ್ದಾಳಿ: ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಅವರು ವಾಗ್ದಾಳಿ ನಡೆಸಿದರು. ‘20 ವರ್ಷಗಳ ಹಿಂದಿನ ಚುನಾವಣೆಯಲ್ಲಿ ಇದೇ ವ್ಯಕ್ತಿ ನನ್ನ ನಾಮಪತ್ರ ಹರಿದುಹಾಕಿ ಅವಮಾನ ಮಾಡಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿಯೂ ನನಗೆ ಟಿಕೆಟ್ ತಪ್ಪಿಸಿದರು. ಬಳಿಕ ಅವರೇ ಬಂದು ಕೇಳಿಕೊಂಡಿದ್ದರಿಂದ ಬೆಂಬಲಿಸಿದ್ದೆ. ಆದಾಗ್ಯೂ ಅವರು ನನ್ನನ್ನು ರಾಜಕೀಯವಾಗಿ ಮುಗಿಸಲು ಪಿತೂರಿ ಮುಂದುವರಿಸಿದರು. ಅನುದಾನ ಹಂಚಿಕೆಯಲ್ಲೂ ಇಲ್ಲಿನ ಸಚಿವರು, ಸಂಸದರು ಸಾಕಷ್ಟು ತಾರತಮ್ಯ ಮಾಡಿದರು’ ಎಂದು ದೂರಿದರು.

ಒಂದು ಕೋಟಿ ರೂಪಾಯಿ ಖರ್ಚು: ‘ಅ.17ರಂದು ಚನ್ನಪಟ್ಟಣದಲ್ಲಿ ನಡೆಯಲಿರುವ ಕಾಂಗ್ರೆಸ್ ಸಮಾವೇಶಕ್ಕೆ ಡಿ.ಕೆ. ಶಿವಕುಮಾರ್ ಈಗಾಗಲೇ ಒಂದು ಕೋಟಿ ರೂಪಾಯಿ ಹಂಚಿಕೆ ಮಾಡಿದ್ದಾರೆ. ಐ.ಟಿ. ದಾಳಿ ನಡೆದರೂ ದೇಶದ ಯಾವುದೇ ಕಾನೂನು ಅವರನ್ನು ಅಲ್ಲಾಡಿಸಲೂ ಆಗದು’ಎಂದು ದೂರಿದರು.

‘ಅವರಿಗೆ ಹಣ ಬಲ ಇದ್ದರೆ, ನನಗೆ ಜನ ಬಲ ಇದೆ. ಈ ಭಾಗದ ಪ್ರಬಲ ನಾಯಕನಾಗಿ ಬೆಳೆಯುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೈಕಮಾಂಡ್‌ ದುರ್ಬಲ: ‘ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಸಹಿತ ಯಾರೊಬ್ಬರೂ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಕಾಂಗ್ರೆಸ್ ಹೈಕಮಾಂಡ್ ತುಂಬಾ ದುರ್ಬಲವಾಗಿದೆ. ಅವರಿಗೆ ಜನಪರ ನಾಯಕರನ್ನು ಗುರುತಿಸುವ ಶಕ್ತಿ ಇಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ನನ್ನನ್ನು ಸಾರ್ವಜನಿಕವಾಗಿ ಬಳಸಿಕೊಳ್ಳಲಿಲ್ಲ’ ಎಂದು ದೂರಿದರು.

‘ಮುಂದಿನ ಚುನಾವಣೆಗೆ ಚನ್ನಪಟ್ಟಣ, ಮದ್ದೂರು ಇಲ್ಲವೇ ಬೇರೆ ಕ್ಷೇತ್ರದಿಂದ ಸ್ಪರ್ಧಿಸುವ ಯೋಚನೆ ಇದೆ. ಆದರೆ ನನ್ನ ಕುಟುಂಬದವರು ಯಾರೂ ಚುನಾವಣೆಗೆ ನಿಲ್ಲುವುದಿಲ್ಲ. ಅಗತ್ಯ ಬಿದ್ದರೆ ಚನ್ನಪಟ್ಟಣದಲ್ಲಿ ಕಾರ್ಯಕರ್ತರೊಬ್ಬರನ್ನು ನಿಲ್ಲಿಸಿ ಗೆಲ್ಲಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT