ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗಳ ಆಗರ ಆಲಗೂಡ ಗ್ರಾಮ

Last Updated 17 ಅಕ್ಟೋಬರ್ 2017, 7:03 IST
ಅಕ್ಷರ ಗಾತ್ರ

ಕಮಲಾಪುರ: ಕಳೆದ ಬಾರಿ ಗ್ರಾಮ ಪಂಚಾಯಿತಿ ಪುನರ್ವಿಂಗಡಣೆ ನಂತರ ಅವರಾದ (ಬಿ) ದಿಂದ ಬೇರ್ಪಟ್ಟು ಆಲಗೂಡ ಹೊಸ ಪಂಚಾಯಿತಿಯಾಗಿ ರಚನೆಗೊಂಡಿದೆ. ಎರಡು ವರ್ಷ ಕಳೆದರೂ ಮೂಲ ಸೌಕರ್ಯಗಳಿಲ್ಲದ ಗ್ರಾ.ಪಂ.ನ ಸಾಧನೆ ಮಾತ್ರ ಶೂನ್ಯ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಇಲ್ಲಿಯ ಜನ.

ತೊಂಡಕಲ್‌, ಕೇರೂರ, ಹಾಳ ಸುಲ್ತಾನಪುರ, ಕಡಬೂರ ಈ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಟ್ಟಿವೆ. ಒಟ್ಟು 11 ಸದಸ್ಯರಲ್ಲಿ 4 ಜನ ಆಲಗೂಡನವರಿದ್ದಾರೆ. ಸುಮಾರು 4 ಸಾವಿರ ಜನಸಂಖ್ಯೆ, 2 ಅಂಗನವಾಡಿ ಕೇಂದ್ರ, 8ನೇ ತರಗತಿವರೆಗೆ ಶಾಲೆ ಇದೆ.

ಗ್ರಾಮ ಪಂಚಾಯಿತಿಗೆ ವ್ಯವಸ್ಥಿತ ಕಟ್ಟಡವಿಲ್ಲ. ಒಂದು ಕೋಣೆಯ ಅಂಗನವಾಡಿ ಕಟ್ಟಡದಲ್ಲೆ ಗ್ರಾಮ ಪಂಚಾಯತಿ ಕಚೇರಿ ಸ್ಥಾಪಿಸಲಾಗಿದೆ. ಮಳೆಗೆ ಸೋರುತ್ತದೆ. ಸುತ್ತಲೂ ನೀರು ನಿಲ್ಲುತ್ತವೆ. ಹೆಚ್ಚು ಮಳೆಯಾದರೆ ನೀರು ಒಳಗೆ ಹೊಕ್ಕುತ್ತದೆ. ಇದರಲ್ಲಿ ಗ್ರಾಮ ಪಂಚಾಯಿತಿ ಕಾರ್ಯಕಲಾಪಗಳನ್ನು ನಡೆಸಲು ತೊಂದರೆಯಾಗುತ್ತಿದೆ. ಕೂಡಲೆ ಗ್ರಾಮ ಪಂಚಾಯಿತಿಗೆ ಸುಸಜ್ಜಿತ ಕಟ್ಟಡ ನಿರ್ಮಿಸಿಕೊಡಬೇಕು ಎನ್ನುತ್ತಾರೆ ಸದಸ್ಯರು.

‘ಗ್ರಾಮದ ಅನೇಕ ಕಡೆಗಳಲ್ಲಿ ಚರಂಡಿ ನಿರ್ಮಿಸಿಲ್ಲ. ಸಿಸಿ ರಸ್ತೆ ಇಲ್ಲ. ಎಸ್‌ಸಿ ಓಣಿಯಿಂದ ಶಾಲೆಯವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದೆ. ರಸ್ತೆ ಮೇಲೆ ಚರಂಡಿ ನೀರು ಸಂಗ್ರಹಗೊಂಡು ಗಬ್ಬು ನಾರುತ್ತಿದೆ. ಜನರ ಓಡಾಟಕ್ಕೆ ತೊಂದರೆಯಾಗುತ್ತಿದೆ. ಕೇವಲ 50 ಸಾವಿರ ಲೀಟರ್‌ ಸಂಗ್ರಹ ಸಾಮರ್ಥ್ಯದ ನೀರಿನ ಟ್ಯಾಂಕ್‌ ಇದ್ದು, ಲಕ್ಷ ಲೀಟರ್‌ ಸಂಗ್ರಹ ಸಾಮರ್ಥ್ಯದ ಟ್ಯಾಂಕ್‌ ನಿರ್ಮಿಸಬೇಕು’ ಎನ್ನುತ್ತಾರೆ ಗ್ರಾ.ಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಮಾಳಗೆ, ಮುಖಂಡ ದೌಲತರಾವ ಪಾಟೀಲ.

ಹಾಗೆಯೇ, ‘ಗ್ರಾಮದಲ್ಲಿ 8ನೇ ತರಗತಿವರೆಗೆ ಮಾತ್ರ ಶಾಲೆ ಇರುವುದರಿಂದ ಮಕ್ಕಳ ಮುಂದಿನ ಶಿಕ್ಷಣ ಕುಂಠಿತಗೊಳ್ಳುತ್ತಿದೆ. ಬೇರೆ ಗ್ರಾಮಗಳಿಗೆ ಕಳುಹಿಸಬೇಕಾದ್ದರಿಂದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪಾಲಕರು ಮುತುವರ್ಜಿವಹಿಸುತ್ತಿಲ್ಲ. ಹೀಗಾಗಿ, ಪ್ರೌಢಶಾಲೆ ನಿರ್ಮಾಣ ಅಗತ್ಯವಾಗಿದೆ’ ಎನ್ನುತ್ತಾರೆ.

ಗ್ರಾಮದಲ್ಲಿ ರೈತಾಪಿ ಜನ ಹೆಚ್ಚಿದ್ದು, ಸುಮಾರು 2 ಸಾವಿರ ಜಾನುವಾರುಗಳಿವೆ. ಅನಾರೋಗ್ಯ, ವಿವಿಧ ಲಸಿಕೆ ಹಾಕಿಸಲು ಜಾನುವಾರುಗಳಿಗೆ ಬೇರೆ ಗ್ರಾಮಗಳಿಗೆ ಕೊಂಡೊಯ್ಯಬೇಕಾಗುತ್ತದೆ. ಇದರಿಂದ ದಿನ ಪೂರ್ತಿ ವ್ಯರ್ಥವಾಗುತ್ತದೆ. ಕೂಡಲೆ ಗ್ರಾಮದಲ್ಲೇ ಪಶು ಆಸ್ಪತ್ರೆ ಸ್ಥಾಪಿಸಬೇಕು. ಜೊತೆಗೆ, ಕೃಷಿ ಪತ್ತಿನ ಸಹಾಕಾರಿ ಸಂಘ ಸ್ಥಾಪಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ರೈತರ ಬೇಡಿಕೆ.

‘ಗ್ರಂಥಾಲಯ, ಶುದ್ಧಕುಡಿಯುವ ನೀರಿನ ಘಟಕ, ಇನ್ನೊಂದು ಅಂಗನವಾಡಿ ಕೇಂದ್ರ, ಸಮುದಾಯ ಭವನ ನಿರ್ಮಾಣ ಮಾಡಬೇಕು. ಹೊಸ ಗ್ರಾಮ ಪಂಚಾಯಿತಿಗೆ ಹೆಚ್ಚಿನ ಅನುದಾನ ಒದಗಿಸಿ ಗ್ರಾಮದ ಅಭಿವೃದ್ಧಿಗೆ ಸರ್ಕಾರ ಸಹಕರಿಸಬೇಕು ಎನ್ನುತ್ತಾರೆ’ ಗ್ರಾ.ಪಂ ಸದಸ್ಯೆ ಭಾರತಬಾಯಿ ದೇವಿಂದ್ರ ಮೂಲಗಿ, ಮುಖಂಡ ಸಂಜೀವಕುಮಾರ ಪರೀಟ.

ತೀರ್ಥಕುಮಾರ ಬೆಳಕೋಟಾ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT