ಶಿವಭಕ್ತರೆಲ್ಲರೂ ಹಿಂದೂಗಳಲ್ಲ ನಿಡುಮಾಮಿಡಿ ಶ್ರೀ

ಮಂಗಳವಾರ, ಜೂನ್ 25, 2019
27 °C

ಶಿವಭಕ್ತರೆಲ್ಲರೂ ಹಿಂದೂಗಳಲ್ಲ ನಿಡುಮಾಮಿಡಿ ಶ್ರೀ

Published:
Updated:
ಶಿವಭಕ್ತರೆಲ್ಲರೂ ಹಿಂದೂಗಳಲ್ಲ ನಿಡುಮಾಮಿಡಿ ಶ್ರೀ

ಮೈಸೂರು: ಶಿವನನ್ನು ಪೂಜಿಸುವವರೆಲ್ಲರೂ ಹಿಂದೂಗಳು ಎಂಬ ಮಾತನ್ನು ಪೇಜಾವರ ಸ್ವಾಮೀಜಿ ಮತ್ತು ಇತರ ಕೆಲವು ಯತಿಗಳು ಹೇಳುತ್ತಾ ಬಂದಿದ್ದಾರೆ. ಆದರೆ ಶಿವಭಕ್ತರೆಲ್ಲರೂ ಹಿಂದೂಗಳಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ ಎಂದು ಬೆಂಗಳೂರಿನ ಮಾನವ ಧರ್ಮಪೀಠದ ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಶುಕ್ರವಾರ ಹೇಳಿದರು.

ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಬಲಿ ಚಕ್ರವರ್ತಿ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎಲ್ಲ ಶಿವಭಕ್ತರು ಹಿಂದೂಗಳು ಎನ್ನುವ ಮಾತಿನಲ್ಲಿ ನ್ಯಾಯವಿಲ್ಲ. ಇದು ಅತ್ಯಂತ ಅನ್ಯಾಯದ ಮಾತು. ಶಿವಭಕ್ತರಲ್ಲಿ ಕೆಲವರು ಮಾತ್ರ ಹಿಂದೂಗಳು ಆಗಿರಬಹುದು ಎಂದು ಅಭಿಪ್ರಾಯಪಟ್ಟರು.

ಶಿವನ ಪರಂಪರೆಯನ್ನು ಪಾಲಿಸುವ 18 ಕೋಮುಗಳು ಈ ದೇಶದಲ್ಲಿವೆ. ಇವರೆಲ್ಲರೂ ಅವೈದಿಕರಾಗಿದ್ದಾರೆ. ತಳಸಮುದಾಯಕ್ಕೆ ಸಂಬಂಧಪಟ್ಟವರಾಗಿದ್ದು, ವೈದಿಕ ಮೌಲ್ಯಗಳನ್ನು ಸಂಪೂರ್ಣವಾಗಿ ನಿರಾಕರಿಸುವ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ಹೇಳಿದರು.

ಶಿವ ಪರಂಪರೆಯನ್ನು ದಮನ ಮಾಡುವುದು ಆರ್ಯರ ಗುರಿಯಾಗಿತ್ತು. ಇದಕ್ಕಾಗಿ ಅವರು ಮೊದಲು ದಾಳಿ ಮಾಡಿದ್ದು ಶಿವ ಸಂಸ್ಕೃತಿಯ ಮೇಲೆ. ಸ್ಥಳೀಯ ಭಾಷೆ, ಸಂಸ್ಕೃತಿ ಮತ್ತು ನಾಯಕತ್ವವನ್ನು ನಾಶ ಮಾಡಿ ಏಕ ಧರ್ಮ ಮತ್ತು ಏಕ ಸಂಸ್ಕೃತಿ ಕಟ್ಟುವ ಕೆಲಸವನ್ನು ಪ್ರಾಚೀನ ಕಾಲದಿಂದಲೂ ವೈದಿಕರು ಮಾಡುತ್ತಾ ಬಂದಿದ್ದಾರೆ ಎಂದು ವಿಶ್ಲೇಷಿಸಿದರು.

ದೇಶದ ಪ್ರತಿಯೊಂದು ಸಮುದಾಯ ಕೂಡಾ ತನ್ನ ಅಸ್ತಿತ್ವವನ್ನು ಕಟ್ಟಿಕೊಳ್ಳುವ ಸಂದರ್ಭ ಒದಗಿ ಬಂದಿದೆ. ಆಯಾ ಸಮುದಾಯದ ಧಾರ್ಮಿಕ ಮತ್ತು ರಾಜಕೀಯ ನಾಯಕರು ಈ ಸೂಕ್ಷ್ಮಗಳನ್ನು ಅರ್ಥಮಾಡಿಕೊಂಡು ತಮ್ಮ ಸಮುದಾಯಗಳ ಏಳಿಗೆಗೆ ದುಡಿಯಬೇಕು ಎಂದು ಕರೆ ನೀಡಿದರು.

ಪ್ರಜಾಪ್ರಭುತ್ವಕ್ಕೆ ಅಪಾಯ: ಬಹು ಸಂಸ್ಕೃತಿ, ಧರ್ಮ ಮತ್ತು ಭಾಷೆಗಳನ್ನು ಒಳಗೊಂಡಿರುವ ಈ ದೇಶದ ಮೇಲೆ ಏಕಸಂಸ್ಕೃತಿ ಮತ್ತು ಏಕಧರ್ಮವನ್ನು ಹೇರುವ ರಾಜಕೀಯ ಪ್ರಯತ್ನ ನಡೆಯುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಪ್ರಜಾಪ್ರಭುತ್ವಕ್ಕೆ ಗಂಡಾಂತರ ಕಾದಿದೆ ಎಂದು ಅವರು ಎಚ್ಚರಿಸಿದರು.

ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳು ಉಳಿದುಕೊಂಡರೆ ಮಾತ್ರ ಈ ದೇಶಕ್ಕೆ ಉಳಿಗಾಲವಿದೆ. ಪ್ರಜಾಪ್ರಭುತ್ವ ದುರ್ಬಲಗೊಂಡರೆ ನಮ್ಮನ್ನು ರಕ್ಷಿಸುವವರು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry