ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಐ ವಿಶೇಷ ನಿರ್ದೆಶಕರಾಗಿ ಪದೋನ್ನತಿ: ಅಸ್ತಾನಾ ಬಡ್ತಿಗೆ ವಿರೋಧ

Last Updated 23 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಆಪ್ತವಾಗಿದ್ದಾರೆ ಎಂದು ಹೇಳಲಾದ ಹಿ‌ರಿಯ ಐಪಿಎಸ್‌ ಅಧಿಕಾರಿ ರಾಕೇಶ್‌ ಅಸ್ತಾನಾ ಅವರಿಗೆ ಬಡ್ತಿ ನೀಡಿರುವುದು ಈಗ ವಿವಾದ ಸೃಷ್ಟಿಸಿದೆ.

ಕೇಂದ್ರ ಜಾಗೃತ ಆಯೋಗ (ಸಿವಿಸಿ) ನೇತೃತ್ವದ ಸಮಿತಿಯ ಕೆಲವು ಸದಸ್ಯರು ಅಸ್ತಾನಾ ಅವರಿಗೆ ಬಡ್ತಿ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ನೇಮಕಾತಿ ಸಮಿತಿಯು 1984ರ ಗುಜರಾತ್‌ ವೃಂದದ ಐಪಿಎಸ್‌ ಅಧಿಕಾರಿಯಾಗಿರುವ  ಅಸ್ತಾನಾ ಅವರಿಗೆ ಸಿಬಿಐನ ವಿಶೇಷ ನಿರ್ದೇಶಕರಾಗಿ ಬಡ್ತಿ ನೀಡಲು ಒಪ್ಪಿಗೆ ನೀಡಿತ್ತು. ಇವರಲ್ಲದೇ ಇತರ ಏಳು ಅಧಿಕಾರಿಗಳ ಬಡ್ತಿಗೂ ಸಮ್ಮತಿ ಸೂಚಿಸಿತ್ತು. ಈ ಸಂಬಂಧ, ಭಾನುವಾರ ತಡ ರಾತ್ರಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಸದ್ಯ ಸಿಬಿಐನ ಹೆಚ್ಚುವರಿ ನಿರ್ದೇಶಕರಾಗಿರುವ ಅಸ್ತಾನಾ ಅವರು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಹಾಗೂ ಇತರರು ಭಾಗಿಯಾಗಿದ್ದಾರೆ ಎಂದು ಹೇಳಲಾದ ಹೋಟೆಲ್‌ ಭ್ರಷ್ಟಾಚಾರ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳ ತನಿಖೆಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ವಿರೋಧ: ಸಿಬಿಐಗೆ ನೇಮಕ ಮಾಡುವ ಮತ್ತು ಅಲ್ಲಿನ ಅಧಿಕಾರಿಗಳಿಗೆ ಬಡ್ತಿ ನೀಡುವ ಪ್ರಸ್ತಾವಗಳನ್ನು ಮುಖ್ಯ ಜಾಗೃತ ಆಯುಕ್ತ, ಇಬ್ಬರು ಜಾಗೃತ ಆಯುಕ್ತರು, ಗೃಹ ಕಾರ್ಯದರ್ಶಿ, ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯದ ಕಾರ್ಯದರ್ಶಿ ಹಾಗೂ ಸಿಬಿಐ ನಿರ್ದೇಶಕರನ್ನೊಳಗೊಂಡ ಸಮಿತಿ ಪರಿಶೀಲನೆ ನಡೆಸುತ್ತದೆ.

ಶನಿವಾರ ಈ ಸಮಿತಿಯ ಸಭೆ ನಡೆದಿತ್ತು. ಆದರೆ, ಅಸ್ತಾನಾ ಅವರಿಗೆ ಬಡ್ತಿ ನೀಡುವುದಕ್ಕೆ ಕೆಲವು ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರಿಂದ, ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಂಡಿರಲಿಲ್ಲ. ಆದರೆ ಸರ್ಕಾರ ಈಗ ಅವರಿಗೆ ಬಡ್ತಿ ನೀಡಿರುವುದನ್ನು ಹಲವರು ಪ್ರಶ್ನಿಸಿದ್ದಾರೆ.

ಈ ಹಿಂದೆ ಅಸ್ತಾನಾ ಅವರನ್ನು ಸಿಬಿಐ ನಿರ್ದೇಶಕರನ್ನಾಗಿ ಮಾಡಲು ಕೇಂದ್ರ ಸರ್ಕಾರ ಯೋಚಿಸಿತ್ತಾದರೂ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಆ ಯೋಚನೆ ಕೈಬಿಟ್ಟಿತ್ತು ಎಂದು ಹೇಳಲಾಗಿದೆ.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಸಿಬಿಐನ ನಿರ್ದೇಶಕ ಅನಿಲ್‌ ಸಿನ್ಹಾ ಅವರು ನಿವೃತ್ತರಾದಾಗ ಅಸ್ತಾನಾ ಅವರಿಗೆ ಸಿಬಿಐ ನಿರ್ದೇಶಕರಾಗಿ ಹೆಚ್ಚುವರಿ ಹೊಣೆ ವಹಿಸಲಾಗಿತ್ತು.

ಈ ವರ್ಷದ ಜನವರಿಯಲ್ಲಿ ಅಲೋಕ್‌ ಕುಮಾರ್‌ ವರ್ಮಾ ಅವರನ್ನು ಸಿಬಿಐ ನಿರ್ದೇಶಕರನ್ನಾಗಿ ನೇಮಕ ಮಾಡಿದಾಗ, ಅಸ್ತಾನಾ ಅವರು ಅಧಿಕಾರವನ್ನು ಹಸ್ತಾಂತರಿಸಿದ್ದರು.

ಕೇಂದ್ರದ ಈಗಿನ ನಿರ್ಧಾರವನ್ನು ಟೀಕಿಸಿರುವ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌, ‘ಮೋದಿ ಸರ್ಕಾರವು ನಿರ್ಲಜ್ಜೆಯಿಂದ ಕಾನೂನು ಉಲ್ಲಂಘಿಸುತ್ತಿರುವುದು ದಿನೇ ದಿನೇ ಹೆಚ್ಚುತ್ತಿದೆ. ಅಧಿಕಾರಿಗೆ ಸಿಬಿಐನ ವಿಶೇಷ ನಿರ್ದೇಶಕನಾಗಿ ಬಡ್ತಿ ನೀಡಿರುವುದು ಸುಪ್ರೀಂ ಕೋರ್ಟ್‌ ತೀರ್ಪುಗಳ ಉಲ್ಲಂಘನೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಅಸ್ತಾನಾ ಅವರಿಗೆ ಸಿಬಿಐ ನಿರ್ದೇಶಕರಾಗಿ ಹೆಚ್ಚುವರಿ ಹೊಣೆ ವಹಿಸಿದ್ದನ್ನು ಪ್ರಶ್ನಿಸಿ ಕಾಮನ್‌ ಕಾಸ್‌ ಎಂಬ ಸ್ವಯಂ ಸೇವಾ ಸಂಸ್ಥೆ (ಎನ್‌ಜಿಒ) ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯ ಪರವಾಗಿ ಪ್ರಶಾಂತ್‌ ಭೂಷಣ್‌ ವಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT