ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ನೀರಲ್ಲಿ ಕೊಚ್ಚಿ ಹೋದ ಜನ: ಎನ್‌ಜಿಟಿ ಕಳವಳ

Last Updated 23 ಅಕ್ಟೋಬರ್ 2017, 20:16 IST
ಅಕ್ಷರ ಗಾತ್ರ

ನವದೆಹಲಿ: ಮಳೆ ನೀರು ಸರಾಗವಾಗಿ ಹರಿದು ಹೋಗದೆ ಬೆಂಗಳೂರಿನಲ್ಲಿ ಇತ್ತೀಚೆಗೆ 16 ಜನ ಸಾವಿಗೀಡಾದ ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ (ಎನ್‌ಜಿಟಿ) ಸೋಮವಾರ ತೀವ್ರ ಕಳವಳ ವ್ಯಕ್ತಪಡಿಸಿದೆ.

ಬೆಳ್ಳಂದೂರು, ಅಗರ ಮತ್ತು ವರ್ತೂರು ಕೆರೆಗಳ ಮಾಲಿನ್ಯದಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ ಎಂದು ದೂರಿ ಹಾಗೂ ಒಳಚರಂಡಿ ವ್ಯವಸ್ಥೆ ಅಳವಡಿಕೆಗೆ ಕೋರಿ ರಾಜ್ಯಸಭೆ ಸುದಸ್ಯ ಡಿ.ಕುಪೇಂದ್ರ ರೆಡ್ಡಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸ್ವತಂತ್ರಕುಮಾರ್‌ ನೇತೃತ್ವದ ಪೀಠ, ಕೆರೆಗಳು ಮಲಿನಗೊಂದರೆ ಮಳೆಯ ನೀರು ಸರಾಗವಾಗಿ ಹರಿದು ಹೋಗುವುದಿಲ್ಲ. ಇದಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಅಭಿಪ್ರಾಯಪಟ್ಟಿತು.

ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಬೆಂಗಳೂರಿನಾದ್ಯಂತ ಕೃತಕ ಪ್ರವಾಹ ಸೃಷ್ಟಿಯಾಗಿತ್ತು. ರಾಜ ಕಾಲುವೆಗಳಲ್ಲಿ ಕೆಲವರು ಕೊಚ್ಚಿ ಹೋಗಿದ್ದರೆ, ಕೆಲವು ವಾಹನಗಳು ಚಾಲಕರ ನಿಯಂತ್ರಣ ತಪ್ಪಿ ರಸ್ತೆಯ ಗುಂಡಿಗಳಲ್ಲಿ ಬಿದ್ದು ಸಾವಿಗೀಡಾಗಿದ್ದಾರೆ ಎಂದು ಅರ್ಜಿದಾರರ ಪರ ವಕೀಲ ಪಿ.ರಾಮಪ್ರಸಾದ್‌ ಹಸಿರು ಪೀಠದ ಗಮನ ಸೆಳೆದರು.

‘ಬೆಂಗಳೂರಿನಲ್ಲಿ ಚರಂಡಿ ವ್ಯವಸ್ಥೆಗೆ ಏನಾಗಿದೆ’ ಎಂದು ಪ್ರಶ್ನಿಸಿದ ಪೀಠ, ಮಳೆ ನೀರು ಹರಿದುಹೋಗಲು ಚರಂಡಿ ವ್ಯವಸ್ಥೆ ಸಮರ್ಪಕವಾಗಿ ಇರಬೇಕು. ಸಮರ್ಪಕ ವ್ಯವಸ್ಥೆಯೇ ಇರದಿದ್ದರೆ ಇಂಥ ಅನಾಹುತಗಳು ಸಂಭವಿಸುತ್ತವೆ. ಸರ್ಕಾರ ಈ ಬಗ್ಗೆ ಮುಂಜಾಗೃತೆ ವಹಿಸಬೇಕಿತ್ತು’ ಎಂದು ಅಭಿಪ್ರಾಯಪಟ್ಟಿತು.

‘ಮಹಾನಗರವೊಂದರ ಜನರು ಮಳೆ ನೀರಿನಲ್ಲಿ ಕೊಚ್ಚಿ ಹೋಗಿ ಸಾಯುವುದು ಎಂದರೆ, ಅದರಂತಹ ದೊಡ್ಡ ದುರಂತ ಮತ್ತೊಂದಿಲ್ಲ. ಮಳೆ ನೀರು ಹರಿದು ಹೋಗುವ ಚರಂಡಿ ವ್ಯವಸ್ಥೆಗೆ ಏನಾಗಿದೆ ಎಂಬುದನ್ನು ಪರಿಶೀಲಿಸಬೇಕು. ಮಳೆ ನೀರನ್ನು ಹಿಡಿದಿಟ್ಟುಕೊಳ್ಳಬೇಕಿದ್ದ ಕೆರೆಗಳಲ್ಲಿ ಕಸ ತುಂಬಿಕೊಂಡರೆ ಹೀಗೇ ಆಗುತ್ತದೆ’ ಎಂದು ಅಚ್ಚರಿ ವ್ಯಕ್ತಪಡಿಸಿದ ನ್ಯಾಯಮೂರ್ತಿ ಸ್ವತಂತ್ರಕುಮಾರ್, ರಾಜ್ಯ ಸರ್ಕಾರದ ಪರ ವಕೀಲರ ಕೋರಿಕೆಯ ಮೇರೆಗೆ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 30ಕ್ಕೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT