ಗುರುವಾರ , ಸೆಪ್ಟೆಂಬರ್ 19, 2019
29 °C

ನಮ್ಮೂರ ಬದುಕು, ಸೊಗಸು

Published:
Updated:
ನಮ್ಮೂರ ಬದುಕು, ಸೊಗಸು

ಎಷ್ಟೇ ಅಭಿವೃದ್ಧಿ ಹೊಂದಿದರೂ ತನ್ನ ಸಾಂಪ್ರದಾಯಿಕ ಘಮಲನ್ನು ಉಳಿಸಿಕೊಂಡಿದೆ ಬೆಂಗಳೂರು ನಗರ. ಉದ್ಯೋಗಕ್ಕಾಗಿ ವಲಸೆ ಬಂದವರು, ರಸ್ತೆ ಬದಿ ವ್ಯಾಪಾರ ಮಾಡಿ ಜೀವನ ಸಾಗಿಸುವವರು, ಸೆಲೆಬ್ರಿಟಿ ಜೀವನ ಇವೆಲ್ಲವೂ ನಗರ ಜೀವನದ ಭಾಗವಾಗಿದೆ. ನಗರ ಜೀವನದ ಅಪೂರ್ಣ ಕ್ಷಣಗಳನ್ನು ಸೆರೆ ಹಿಡಿಯಲು ಸ್ಟ್ರೀಟ್‌ ಫೋಟೊಗ್ರಫಿಯಲ್ಲಿ ವಿಫುಲ ಅವಕಾಶಗಳಿವೆ. ನಗರದ ಅನೇಕರು ಸ್ಟ್ರೀಟ್‌ ಫೋಟೊಗ್ರಫಿಯನ್ನು ಹವ್ಯಾಸವನ್ನಾಗಿಸಿಕೊಂಡವರಿದ್ದಾರೆ.

ಹೆಸರೇ ಹೇಳುವಂತೆ ರಸ್ತೆಯಲ್ಲಿ ಹೋಗುವಾಗ ಕಣ್ಣಿಗೆ ಸಿಕ್ಕಿದ ಅಪರೂಪದ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುವುದು ಸ್ಟ್ರೀಟ್ ಫೋಟೊಗ್ರಫಿ ಎನಿಸಿಕೊಳ್ಳುತ್ತದೆ. ಈ ಶೈಲಿಯನ್ನು ರೂಢಿಸಿಕೊಳ್ಳಲು ಬಯಸುವವರು ಛಾಯಾಗ್ರಹಣದ ಮುಖ್ಯ ಅಂಶಗಳಾದ ಸಂಯೋಜನೆ, ಬೆಳಕು, ವಸ್ತು (ಆಬ್ಜೆಕ್ಟ್), ಹಿನ್ನೆಲೆ, ಕ್ಯಾಮೆರಾದ ಷಟರ್‌ ಸ್ಪೀಡ್‌ ಕುರಿತು ಅರಿತಿರಬೇಕು.

ಸ್ಟ್ರೀಟ್ ಫೋಟೊಗ್ರಾಫರ್‌ಗಳು

ಮನೆಯಿಂದ ಹೊರಗೆ ಕಾಲಿಡುವಾಗ ಕ್ಯಾಮೆರಾ ಕೈಲಿ ಹಿಡಿದೇ ಹೊರಡಬೇಕು. ಯಾವಾಗ, ಎಲ್ಲಿ ಉತ್ತಮ ಫೋಟೊಗಳು ಸಿಗುತ್ತವೆಯೋ ಹೇಳಲು ಸಾಧ್ಯವಿಲ್ಲ. ಸಂಜೆ ಪಾನಿಪೂರಿ ತಿನ್ನುವಾಗ, ರಾತ್ರಿ ಸ್ನೇಹಿತರ ಜೊತೆ ತಿರುಗಾಡಲು ಹೊರಟಾಗ, ಬೆಳಿಗ್ಗೆ ಆಫೀಸಿಗೆ ಹೋಗುವ ದಾರಿಯಲ್ಲಿ ಸಾಮಾನ್ಯರ ಕಣ್ಣಿಗೆ ಕಾಣಿಸದ ಹಲವು ಸಂಗತಿಗಳು ಇವರ ಕಣ್ಣಿಗೆ ಬೀಳುತ್ತವೆ.

ಕಿಕ್ಕಿರಿದ ಜನಸಂದಣಿಯಲ್ಲೂ ವ್ಯಾಪಾರ ಮಾಡುತ್ತಿರುವ ಅಂಧ, ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಪುಸ್ತಕ ಮಾರುವ ಬಾಲಕ, ರಸ್ತೆ ಬದಿಯ ಚಹಾದ ಅಂಗಡಿಯಲ್ಲಿ ಒಂದು ಕಪ್‌ನಿಂದ ಮತ್ತೊಂದು ಕಪ್‌ಗೆ ಚಹ ಸರಿಯುವಮಹಿಳೆ... ಇಂತಹ ನೂರಾರು ದೃಶ್ಯಗಳು ಇವರ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗುತ್ತಾ ಹೋಗುತ್ತವೆ.

‘ಸ್ಟ್ರೀಟ್‌ ಫೋಟೊಗ್ರಫಿಯನ್ನು ಯಾವುದೇ ಒಂದು ಸ್ಥಳಕ್ಕೆ ಹೋಗಿ ಕಲಿಯುವಂಥದ್ದಲ್ಲ. ಕ್ಯಾಮೆರಾ ಬಳಕೆ ಸುಲಲಿತವಾಗಿದ್ದರೆ ಅದ್ಭುತ ದೃಶ್ಯಗಳು ಸಿಗುತ್ತವೆ. ಇದೊಂದು ಥೆರಪಿಯಂತೆ. ಅಭ್ಯಾಸದಿಂದ ಕೈ ಹಿಡಿಯುತ್ತವೆ’ ಎಂದು ಹೇಳುತ್ತಾರೆ ಸ್ಟ್ರೀಟ್‌ ಫೋಟೊಗ್ರಫಿಯಲ್ಲಿ ಆಸಕ್ತಿ ಹೊಂದಿರುವ ವಿದ್ಯಾರಣ್ಯಪುರದ ಸುನಿಲ್‌ಕುಮಾರ್‌. ’ಬೆಂಗಳೂರಿಗೆ ಬಂದು 15 ವರ್ಷವಾಯಿತು. ಸಂಜೆ ಆಫೀಸಿನಿಂದ ಬರುವಾಗ ಕತ್ತಲೆಯಲ್ಲಿ ಬೆಳಕಿನ ರಾಶಿಯಲ್ಲಿ ಝಗಮಗಿಸುವ ನಗರ, ಮಾರ್ಗ ಬದಿಯಲ್ಲಿ ಆಹಾರ ಸೇವಿಸುವವರು, ವ್ಯಾಪಾರ ಮಾಡುವವರು ಇವೆಲ್ಲ ನನ್ನಲ್ಲಿ ಕುತೂಹಲ ಹುಟ್ಟಿಸುವ ಅಂಶಗಳು. ಈ ಫೋಟೊಗಳು ಯಾವಾಗಲೂ ಪರಿಸರ,  ಪರಿಸ್ಥಿತಿಯನ್ನು ಪ್ರತಿನಿಧಿಸುತ್ತವೆ’ ಎಂದು ಕ್ಯಾಮೆರಾ ಜೊತೆಗಿನ ತಮ್ಮ ಬಾಂಧವ್ಯವನ್ನು ಬಿಚ್ಚಿಡುತ್ತಾರೆ ಅವರು.

ಈ ಹವ್ಯಾಸಿಗಳು ಕ್ಯಾಮೆರಾ ಕೋನಗಳಿಂದಲೇ ಯೋಚಿಸುತ್ತಾರಂತೆ. ‘ಇಲ್ಲಿ ಸಮಯ ಮುಖ್ಯ’ ಎಂಬುದು ಹವ್ಯಾಸಿ ಛಾಯಾಗ್ರಾಹಕಿ

ಹೇಮಾ ನಾರಾಯಣ್‌ ಅವರ ಅನುಭವದ ಮಾತು.

‘ರಸ್ತೆಯಲ್ಲಿ ಸುಮ್ಮನೆ ನಡೆದುಕೊಂಡು ಹೋಗುತ್ತಿದ್ದರೆ, ಜೀವನದ ಅನೇಕ ಮುಖಗಳ ದರ್ಶನವಾಗುತ್ತವೆ. ಒಂದು ಕ್ಷಣದಲ್ಲಿ ಅಪರೂಪದ ದೃಶ್ಯ ಕಾಣಸಿಗುತ್ತದೆ. ಒಬ್ಬ ಫೋಟೊಗ್ರಾಫರ್‌ ಎಷ್ಟು ವೇಗವಾಗಿ ತನ್ನ ಸುತ್ತಲಿನ ವಾತಾವರಣವನ್ನು ಗ್ರಹಿಸುತ್ತಾನೋ ಅದು ಆತನ ಪ್ಲಸ್‌ ಪಾಯಿಟ್‌’ ಎಂದು ಹೇಳುತ್ತಾರೆ ಹೇಮಾ ನಾರಾಯಣ್‌.

‘ಬೆಳಕು ಎಲ್ಲಿಂದ ಬರುತ್ತಿದೆ? ಯಾವ ಕೋನದಿಂದ ಚಿತ್ರ ತೆಗೆಯುತ್ತೀರಿ ಎಂಬುದು ಮುಖ್ಯವಾಗುತ್ತದೆ. ಒಂದೊಂದು ಬಾರಿ ಇದೇ ಫೋಟೊವನ್ನು ಮತ್ತೊಂದು ಕೋನದಿಂದ ತೆಗೆದಿದ್ದರೆ ಹೇಗೆ ಬಂದಿರಬಹುದಿತ್ತು ಎಂದು ಆಲೋಚನೆ ಮಾಡಿದ್ದೂ ಇದೆ’ ಎಂದು ಹೇಳುತ್ತಾರೆ ಸುನಿಲ್‌.

ಸ್ಟ್ರೀಟ್‌ ಫೋಟೊಗ್ರಫಿಗೆ ಅತ್ಯುತ್ತಮ ಗುಣಮಟ್ಟದ ಕ್ಯಾಮೆರಾಗಳು ಬೇಕೆಂದಿಲ್ಲ. ಕ್ಯಾಮೆರಾ ಬಳಕೆ ತಂತ್ರ ಗೊತ್ತಿದ್ದರೆ, ಸಾಧಾರಣ ಕ್ಯಾಮೆರಾದಲ್ಲೇ ಫೋಟೊಗ್ರಫಿ ಮಾಡಬಹುದು' ಎಂಬುದು ಸುನಿಲ್‌ ಅಭಿಪ್ರಾಯ.

‘ಈ ಹಿಂದೆ ವಾರಾಣಸಿಗೆ ಹೋಗಿದ್ದಾಗ ಅಲ್ಲಿ ಒಂದು ಕಡೆ ಸ್ಮಶಾನ, ಇನ್ನೊಂದು ಕಡೆ ದೇವರಿಗೆ ದೀಪ ಬೆಳಗುತ್ತಿರುವ ಭಕ್ತರ ಚಿತ್ರ ತೆಗೆದಿದ್ದೆ. ಈ ಫೋಟೊಗಳಲ್ಲಿ ಭಾವನೆಗಳ ಮಿಶ್ರಣ ಇರುತ್ತದೆ. ಮುಖಭಾವ ಗ್ರಹಿಸುವುದರ ಜೊತೆಗೆ ಹಿನ್ನೆಲೆಯನ್ನು ಕಾವ್ಯಾತ್ಮಕವಾಗಿ ಒಂದೇ ಫ್ರೇಮ್‌ನಲ್ಲಿ ಸೆರೆಹಿಡಿಯುವುದನ್ನೂ ಅರಿತಿರಬೇಕು. ಇಂಥ ದೃಶ್ಯಗಳು ಸಿಕ್ಕಾಗ ಮನಸ್ಸಿಗೆ ಆಪ್ತವೆನಿಸುತ್ತವೆ’ ಎನ್ನುತ್ತಾರೆ ಹೇಮಾ.

‘ಒಬ್ಬ ಮಹಿಳೆಯಾಗಿ ಸ್ಟ್ರೀಟ್ ಫೋಟೊಗ್ರಫಿ ಕೊಂಚ ಕಷ್ಟದ್ದೇ’ ಎಂದು ಹೇಳುವ ಅವರು, ‘ಯಾವುದಾದರೂ ಮಾರ್ಕೆಟ್‌ನಲ್ಲಿ ಕ್ಯಾಮೆರಾ ಕುತ್ತಿಗೆಗೆ ಹಾಕಿಕೊಂಡು ಹೋದಾಕ್ಷಣ ಜನ ಆಲರ್ಟ್‌ ಆಗಿ ಬಿಡುತ್ತಾರೆ. ಸ್ವಲ್ಪ ಸಮಯ ಅಲ್ಲೇ ಇದ್ದು, ಸುಮ್ಮನಾಗಿ ಬಿಡುತ್ತೇನೆ. ಸೂಕ್ತ ಜಾಗದಲ್ಲಿ ಕುಳಿತುಕೊಂಡು ಅಲ್ಲಿನ ಪರಿಸರವನ್ನು ಅವಲೋಕಿಸುತ್ತೇನೆ. ನಂತರ ಮನಸ್ಸಿನಲ್ಲೇ ಫ್ರೇಮ್‌ ಶುರುವಾಗಿ ಬಿಡುತ್ತದೆ. ಜನರು ಗಮನ ನನ್ನ ಕಡೆ ಇಲ್ಲದಾಗ ಫೋಟೊಗಳನ್ನು ಕ್ಲಿಕ್ಕಿಸುತ್ತೇನೆ. ಇನ್ನು ಸಾಮಾನ್ಯರಂತೆ ಮಾರುಕಟ್ಟೆಗೆ ಹೋಗಿ ಅಲ್ಲಿ ಫೋಟೊ ತೆಗೆಯುವುದು ಮತ್ತೊಂದು ಬಗೆ ಟ್ರಿಕ್‌. ಇಂತಹ ನೂರಾರು ಟ್ರಿಕ್‌ಗಳನ್ನು ಸ್ಟ್ರೀಟ್‌ ಫೋಟೊಗ್ರಫಿಯಲ್ಲಿ ಅನುಸರಿಸಬೇಕಾಗುತ್ತದೆ’ ಎನ್ನುವ ತಂತ್ರವನ್ನು ಅವರು ಅನುಭವದಿಂದ ಕಂಡುಕೊಂಡಿದ್ದಾರೆ.

ಹಿನ್ನೆಲೆ ಅರಿತಿದ್ದರೆ ಸುಲಭ

ನಾನು ಬೆಂಗಳೂರಿನಲ್ಲೇ ಹುಟ್ಟಿ ಬೆಳೆದವಳು. ಹೀಗಾಗಿ ಇಲ್ಲಿನ ಯಾವ ಬೀದಿಯಲ್ಲಿ ಫೋಟೊಗ್ರಫಿ ಮಾಡಿದರೆ ಉತ್ತಮ ಎಂಬುದು ನನಗೆ ಗೊತ್ತಿದೆ. ಒಂದು ನಗರದ ಹಿನ್ನೆಲೆ, ಅಲ್ಲಿನ ಸಂಸ್ಕೃತಿ ಬಗ್ಗೆ ತಿಳಿದುಕೊಂಡು ಅದನ್ನೇ ನನ್ನ ಚಿತ್ರಗಳಲ್ಲಿ ಸೆರೆಹಿಡಿಯಲು ಬಯಸುತ್ತೇನೆ. ಹಬ್ಬ, ಜಾತ್ರೆ, ಆಚರಣೆಗಳನ್ನು ದಾಖಲು ಮಾಡಲು ನನಗೆ ಇಷ್ಟ. ಎರಡು ವರ್ಷದ ಹಿಂದೆ ಕಡಲೆಕಾಯಿ ಪರಿಷೆಯಲ್ಲಿ ಬಾಲಕನೊಬ್ಬ ಕಡಲೆಕಾಯಿ ಮಾರಾಟ ಮಾಡುತ್ತಿದ್ದ. ಆದರೆ ಆತನ ಗಮನ ಪಕ್ಕದಲ್ಲಿ ಮಾರುತ್ತಿದ್ದ ಬಲೂನ್‌ಗಳ ಮೇಲಿತ್ತು. ನಾನು ಆ ದೃಶ್ಯವನ್ನು ಕ್ಯಾಮೆರಾದಲ್ಲಿ ದಾಖಲಿಸಿದೆ. ಆದರೆ ಇಂದಿಗೂ ಆ ಚಿತ್ರ ನೋಡಿದಾಗಲೆಲ್ಲಾ ನನ್ನ ಮನಸು ಆರ್ದ್ರವಾಗುತ್ತೆ.

ಮಮತಾ ಶ್ರೀವತ್ಸ, ಜಯನಗರ, ಒರಾಕಲ್‌ ಕಂಪೆನಿಯಲ್ಲಿ ಟೆಕ್ನಿಕಲ್‌ ರೈಟರ್‌ ಆಗಿದ್ದಾರೆ

Post Comments (+)