ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆರಿಗೆಗೆ ಆಸ್ಪತ್ರೆಗೇ ಹೋಗಬೇಕಿಲ್ಲ !

Last Updated 25 ಅಕ್ಟೋಬರ್ 2017, 6:51 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹಳ್ಳಿಯಿಂದ ಹುಬ್ಬಳ್ಳಿಯ ಹಳೇ ಬಸ್‌ ನಿಲ್ದಾಣಕ್ಕೆ ಬಂದು ಕಿಮ್ಸ್‌ ಆಸ್ಪತ್ರೆಗೆ ಹೋಗಲು ಬಸ್‌ ಹತ್ತಿರುವ ತುಂಬು ಗರ್ಭಿಣಿಯರಿಗೆ ಆಸ್ಪತ್ರೆಯಲ್ಲೇ ಹೆರಿಗೆ ಆಗುತ್ತದೆ ಎಂಬ ಖಾತ್ರಿ ಏನೂ ಇಲ್ಲ. ನಿಲ್ದಾಣ ದಾಟುವಷ್ಟರಲ್ಲೇ ಹೆರಿಗೆ ನೋವು ಕಾಣಿಸಿಕೊಂಡರೂ ಅಚ್ಚರಿ ಇಲ್ಲ! ಅಷ್ಟರ ಮಟ್ಟಿಗೆ ಇಲ್ಲಿನ ಬಸ್‌ ನಿಲ್ದಾಣದಲ್ಲಿ ತಗ್ಗುಗಳು ಅಪಾಯಕಾರಿಯಾಗಿವೆ.

ಸಾರಿಗೆ ಸಂಸ್ಥೆಯವರು ಪೂರ್ಣ ಪ್ರಮಾಣದಲ್ಲಿ ನಿಲ್ದಾಣದ ಆವರಣದ ರಸ್ತೆಯ ದುರಸ್ತಿ ಕಾರ್ಯ ಕೈಗೊಳ್ಳದಿರುವುದರಿಂದಲೂ ತಗ್ಗುಗಳಿಗೆ ಶಾಶ್ವತ ಮುಕ್ತಿ ನೀಡಲಾಗಿಲ್ಲ ಎಂಬ ಆರೋಪಗಳು ಪ್ರಯಾಣಿಕರಿಂದ ಕೇಳಿ ಬರುತ್ತಿವೆ.

ಧಾರವಾಡಕ್ಕೆ ಹೋಗುವ ಭಾಗದಲ್ಲಿ ನಾಲ್ಕೈದು ದೊಡ್ಡ ಸರಣಿ ತಗ್ಗುಗಳು ಬಿದ್ದಿದ್ದು, ಬಸ್‌ಗಳು ವಾಲುತ್ತಾ ಸಾಗಬೇಕಿದೆ. ‘ಬೆಳಗಾವಿಯಿಂದ ಗೋವಾಕ್ಕೆ ಹೋಗುವಲ್ಲಿ ಬರುವ ಅನಮೋಡ ಘಾಟ್‌ನಲ್ಲಿ ಬೇಕಾದರೂ ನಿರಾಳವಾಗಿ ಬಸ್‌ ಓಡಿಸಬಹುದು. ಆದರೆ, ಹಳೇ ಬಸ್‌ ನಿಲ್ದಾಣದ ಈ ತಗ್ಗುಗಳನ್ನು ದಾಟಿಸಬೇಕಾದರೆ ನಮ್ಮ ಬುದ್ಧಿಯನ್ನೆಲ್ಲ ಖರ್ಚು ಮಾಡಬೇಕಾತು ನೋಡ್ರಿ’ ಎನ್ನುತ್ತಾರೆ ಬೆಳಗಾವಿ ಜಿಲ್ಲೆ ಸಾರಿಗೆ ಘಟಕವೊಂದರಲ್ಲಿ ಬಸ್‌ ಚಾಲಕರಾಗಿರುವ ಮಂಜುನಾಥ.

‘ತಿಂಗಳ ಹಿಂದೆ ಇಲ್ಲಿನ ತಗ್ಗುಗಳ ಮೇಲೆ ಪೇವರ್ಸ್‌ಗಳನ್ನು ಹಾಕಲಾಯಿತು. ಆದರೆ, ವಾರದ ಹಿಂದೆ ಸುರಿದ ಮಳೆಗೆ ಪೇವರ್ಸ್‌ಗಳು ಇನ್ನಷ್ಟು ಆಳಕ್ಕೆ ಇಳಿದಿವೆ. ಅದೇ ತಗ್ಗುಗಳ ಮೇಲೆಯೇ ಅನಿವಾರ್ಯವಾಗಿ ಬಸ್‌ಗಳನ್ನು ಓಡಿಸಬೇಕಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಹುಬ್ಬಳ್ಳಿ–ಧಾರವಾಡ ಅವಳಿ ನಗರದ ಮಧ್ಯೆ ಬಸ್‌ ಓಡಿಸುವ ಫಕ್ಕೀರಪ್ಪ.

‘ನಮ್ಮೂರಾಗೂ ರಸ್ತಾ ಇಷ್ಟೊಂದು ಹದಗೆಟ್ಟಿಲ್ಲ ಬಿಡ್ರಿ. ಜಗದೀಶ ಶೆಟ್ರು, ಪ್ರಹ್ಲಾದ ಜೋಶಿ ಅವರು ಇದ್ದರೂ ಹುಬ್ಬಳ್ಯಾಗೂ ಇಂತಹ ಕೆಟ್ಟ ರೋಡ್‌ ನೋಡಿ ನಮಗೂ ಸಾಕಾಗಿ ಹೋಗೇತ್ರಿ. ಎಪ್ಪಾ ನೀವೆಲ್ಲ ಹೆಂಗ್‌ ಇರ್ತೀರಿ’ ಎಂದು ಅಚ್ಚರಿ ತುಂಬಿದ ಕಕ್ಕುಲಾತಿಯಿಂದ ಪ್ರಶ್ನಿಸಿದವರು ಕುಂದಗೋಳ ತಾಲ್ಲೂಕು ನೂಲ್ವಿ ಗ್ರಾಮದ ವೃದ್ಧೆ ಕಾಶಿಬಾಯಿ.

ಹಳೇ ಬಸ್‌ ನಿಲ್ದಾಣದಲ್ಲಿ ಗುಂಡಿ ಬಿದ್ದ ಬಗ್ಗೆ ಗಮನ ಸೆಳೆದಾಗ ‘ಈ ಊರಿನ ಪ್ರಭಾವಿಗಳು ಎನಿಸಿಕೊಂಡವರು ಹಂಗ ನೋಡಿ ಇದಕ್ಕೂ ತಮಗೂ ಸಂಬಂಧ ಇಲ್ದಾರಂಗ ಎ.ಸಿ. ಕಾರಿನ್ಯಾಗ ಕುಂತ್‌ ಹೋಗ್ತಾರ. ಇದರ ಬಗ್ಗೆ ಸ್ವಲ್ಪ ಸ್ಟ್ರಾಂಗ್ ಆಗೀನಿ ಬರೀರಿ’ ಎಂದವರು ಗೋಕುಲ ಗ್ರಾಮದ ವೀರಭದ್ರಪ್ಪ ಹೊಸಮನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT