ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಅಲ್ಲ ಎನ್ನುವ ತಾಕತ್ತಿದೆಯೇ?

Last Updated 29 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಹಾವೇರಿ: ‘ತಾವು ಲಿಂಗಾಯತ ಅಲ್ಲ ಎನ್ನುವವರು, ತಾಕತ್ತಿದ್ದರೆ ಮುಂದಿನ ಚುನಾವಣೆಯಲ್ಲಿ ಲಿಂಗಾಯತ ಹೆಸರು ಹೇಳದೇ ‘ಬಿ ಫಾರಂ’ ಪಡೆಯಲಿ’ ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ ಸವಾಲು ಹಾಕಿದರು.

ಭಾನುವಾರ ಇಲ್ಲಿ ಆಯೋಜಿಸಿದ್ದ ಲಿಂಗಾಯತ ಸ್ವತಂತ್ರ ಧರ್ಮ ಚಿಂತನಾ ಸಭೆಯಲ್ಲಿ ಅವರು ಮಾತನಾಡಿದರು.

‘ವಿವಿಧ ಧರ್ಮ– ಜಾತಿಯ ರಾಜಕಾರಣಿಗಳು ಎಲ್ಲ ಪಕ್ಷಗಳಲ್ಲೂ ಇದ್ದಾರೆ. ಆದರೆ, ಧರ್ಮದ ವಿಷಯ ಬಂದಾಗ ಒಂದಾಗುತ್ತಾರೆ. ನಮ್ಮಲ್ಲಿ ಅಧಿಕಾರಕ್ಕೆ ಮಾತ್ರ ‘ಲಿಂಗಾಯತ’ ಕೋಟಾ ಬೇಕಾಗಿದೆ. ಆ ಹೆಸರಲ್ಲಿ ಅಧಿಕಾರ ಪಡೆದು, ವೈದಿಕ ಧರ್ಮಕ್ಕೆ ನೀರೆರೆದ ನಾಯಕರು ಬಿಜೆಪಿಯಲ್ಲಿ ಇದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಇಂತಹ ನಾಯಕರಿಗೆ ಪ್ರತ್ಯೇಕ ಧರ್ಮ ಬೇಡವಾಗಿದೆ. ಏಕೆಂದರೆ ಅವರು ದುಡ್ಡು ಮಾಡಿದ್ದಾರೆ. ಅವರಿಗೆ ಹಳ್ಳಿಯಲ್ಲಿರುವ ಬಡ ಲಿಂಗಾಯತರು ಅನುಭವಿಸುವ ಕಷ್ಟ, ಅಸ್ಪೃಶ್ಯತೆಯ ನೋವಿನ ಅರಿವಿಲ್ಲ’ ಎಂದರು.

‘ಬ್ರಾಹ್ಮಣ್ಯ ಮತ್ತು ವೈದಿಕಶಾಹಿಯನ್ನು ‘ಹಿಂದೂ ಧರ್ಮ’ ಎಂದು ಬಿಂಬಿಸಿರುವುದು ತಂತ್ರಗಾರಿಕೆ. ಹಿಂದೂ ಧರ್ಮ ಎನ್ನುವುದೇ ಇಲ್ಲ. ಅದೊಂದು ಸಂಸ್ಕೃತಿ, ಪರಂಪರೆ, ಪ್ರಾದೇಶಿಕತೆಯ ಅಸ್ಮಿತೆ. ಈ ಕುರಿತು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಪೂರಕ ಉಲ್ಲೇಖಗಳಿವೆ’ ಎಂದ ಅವರು, ‘ಮಾನ್ಯತೆ ಪಡೆದರೆ, ರಾಷ್ಟ್ರ ಧರ್ಮ ಆಗಿ ಪರಿವರ್ತನೆಗೊಳ್ಳಲಿರುವ ಏಕೈಕ ಧರ್ಮವೇ ಲಿಂಗಾಯತ’ ಎಂದರು.

‘ಬಸವಣ್ಣನನ್ನು ಗಡೀಪಾರು ಮಾಡಿದ್ದು ಮುಸ್ಲಿಮರಾಗಲೀ ಕ್ರೈಸ್ತರಾಗಲೀ ಅಲ್ಲ; ಲಿಂಗ, ವಿಭೂತಿ, ರುದ್ರಾಕ್ಷಿ ಕಂಡಲ್ಲಿ ರುಂಡ ಕಡಿಯಿರಿ ಎಂದು ಕರೆ ಕೊಟ್ಟ ಸನಾತನಿಗಳು’ ಎಂದರು.

ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ‘ನಮಗೆ ಇತರ ಧರ್ಮ, ಪಂಚ ಪೀಠಗಳ ಬಗ್ಗೆ ಯಾವುದೇ ವಿರೋಧ ಇಲ್ಲ. ಆದರೆ, ಬಸವಣ್ಣನ ಹೆಸರಲ್ಲಿ ಸ್ಥಾಪಿಸಿದ ವಿರಕ್ತಮಠಗಳ ಆತ್ಮವಂಚನೆಯ ಬಗ್ಗೆ ಬೇಸರ ಇದೆ’ ಎಂದರು.

‘ವೈದಿಕರ ಕೈಯಲ್ಲಿ ಲಿಂಗಾಯತರ ಜುಟ್ಟು’
‘ರಾಜಾಶ್ರಯ ಇಲ್ಲದೇ ಹೋಗಿದ್ದರಿಂದ ‘ಲಿಂಗಾಯತ ಧರ್ಮ’ಕ್ಕೆ 900 ವರ್ಷಗಳಿಂದ ಮಾನ್ಯತೆ ಸಿಕ್ಕಿಲ್ಲ. ಈಗ ಮೂರು ಸಾವಿರ ಮಠಗಳು, ಮೂರು ಕೋಟಿ ಜನಸಂಖ್ಯೆ, ಶಿಕ್ಷಣ ಸಂಸ್ಥೆಗಳು, ಸಾಹಿತ್ಯ, ಸಂಸ್ಕೃತಿ, ಪರಂಪರೆ, ಸಾವಿರಾರು ಎಕರೆ ಆಸ್ತಿ ಇದ್ದರೂ ಬಸವ ತತ್ವಕ್ಕೆ ಮಾನ್ಯತೆ ದೊರಕಿಸಲು ಸಾಧ್ಯವಾಗಿಲ್ಲ. ಏಕೆಂದರೆ ಎಲ್ಲರ ಜುಟ್ಟು ವೈದಿಕರ ಕೈಯಲ್ಲಿದೆ’ ಎಂದು ನಿಜಗುಣ ಪ್ರಭು ತೋಂಟದಾರ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT