ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತುಳುವಿಗೆ ಸಂವಿಧಾನದ ಮಾನ್ಯತೆ ನೀಡಿ’

Last Updated 30 ಅಕ್ಟೋಬರ್ 2017, 8:34 IST
ಅಕ್ಷರ ಗಾತ್ರ

ಉಜಿರೆ (ಮಂಗಳೂರು): ‘ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಮೂಲಕ ತುಳು ಭಾಷಿಕರ ಬಹುದಿನದ ಬೇಡಿಕೆಯನ್ನು ಈಡೇರಿಸಿ’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದರು.

ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್‌ಕೆಡಿಆರ್‌ಡಿಪಿ) ಸಮಾವೇಶದಲ್ಲಿ ಪ್ರಧಾನಿ ಭಾಷಣಕ್ಕೂ ಮುನ್ನ ಮಾತನಾಡಿದ ಅವರು, ‘ದೇಶದ ಇತರೆ ಭಾಷೆಗಳಿಗೆ ಸಿಕ್ಕಿರುವ ಸಾಂವಿಧಾನಿಕ ಮಾನ್ಯತೆ ಇನ್ನೂ ನಮ್ಮ ಮಾತೃಭಾಷೆಗೆ ಸಿಕ್ಕಿಲ್ಲ. ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸುವಂತೆ ತುಳುವರು ನಿಮ್ಮನ್ನು ಕೋರುತ್ತೇವೆ’ ಎಂದರು.

‘ಮೂರು ವರ್ಷಗಳಿಂದ ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಜಾಗೃತ ಭಾರತ ನಿರ್ಮಾಣದತ್ತ ನಾವು ಹೆಜ್ಜೆ ಇರಿಸಿದ್ದೇವೆ. ದೇಶಕ್ಕಾಗಿ ಹಗಲಿರುಳು ಸೇವೆ ಸಲ್ಲಿಸುವ ನಿಮ್ಮ ವ್ಯಕ್ತಿತ್ವಕ್ಕೆ ನಾನು ಮನಸೋತಿದ್ದೇನೆ. ನಿಮಗೆ ಆಯಸ್ಸು ಮತ್ತು ಆರೋಗ್ಯ ವೃದ್ಧಿಸಲಿ ಎಂದು ಮಂಜುನಾಥೇಶ್ವರನಲ್ಲಿ ಪ್ರಾರ್ಥಿಸಿದ್ದೇನೆ’ ಎಂದು ಹೇಳಿದರು.

80 ಲಕ್ಷ ಖಾತೆ:‘ಎಸ್‌ಕೆಡಿಆರ್‌ಡಿಪಿ 1982ರಿಂದಲೂ ಕೆಲಸ ಮಾಡುತ್ತಿರುವ ಸರ್ಕಾರೇತರ ಸಂಸ್ಥೆ. 18 ಸಾವಿರ ಕಾರ್ಯಕರ್ತರು ಗ್ರಾಮೀಣ ಪ್ರದೇಶದಲ್ಲಿ ಸ್ವಸಹಾಯ ಗುಂಪುಗಳನ್ನು ರಚಿಸಿ, ಆರ್ಥಿಕ ಬಲ ತುಂಬುವ ಕೆಲಸ ಮಾಡುತ್ತಿದ್ದಾರೆ. ಪ್ರಧಾನಮಂತ್ರಿ ಜನಧನ ಯೋಜನೆಯಡಿ ನಮ್ಮ ಸಂಸ್ಥೆಯ ಮೂಲಕ ಈವರೆಗೆ 12 ಲಕ್ಷ ಖಾತೆಗಳನ್ನು ತೆರೆದಿದ್ದೇವೆ. 2018ರ ಜೂನ್‌ ತಿಂಗಳೊಳಗೆ 40 ಲಕ್ಷ ಖಾತೆಗಳನ್ನು ತೆರೆಯುತ್ತೇವೆ’ ಎಂದು ಘೋಷಿಸಿದರು.

1982ರಲ್ಲೇ ಉಜಿರೆಯಲ್ಲಿ ರುಡ್‌ಸೆಟ್‌ ಸಂಸ್ಥೆ ಆರಂಭವಾಯಿತು. ಈಗ ಅದು ರಾಷ್ಟ್ರದ 587 ಕಡೆ ಕೇಂದ್ರಗಳನ್ನು ಹೊಂದಿದೆ. ಕೌಶಲ ಅಭಿವೃದ್ಧಿಯ ವಿಚಾರದಲ್ಲಿ ರಾಷ್ಟ್ರೀಯ ಯೋಜನೆಯಾಗಿ ಪರಿವರ್ತನೆಯಾಗಿದೆ. ನವೋದ್ಯಮಗಳ ಆರಂಭಕ್ಕೆ ಪೂರಕವಾಗಿ ಈವರೆಗೆ 25 ಲಕ್ಷ ಜನರಿಗೆ ತರಬೇತಿ ನೀಡಲಾಗಿದೆ ಎಂದು ಹೇಳಿದರು.

ಪರಿಸರ ಸಂಬಂಧಿ ವಿಷಯಗಳು ಮತ್ತು ಮುಂದಿನ ಪೀಳಿಗೆಯ ಮೇಲೆ ಅವುಗಳ ಪರಿಣಾಮದ ಬಗ್ಗೆ ನಾನು ಯಾವಾಗಲೂ ಯೋಚಿಸುತ್ತಿರುತ್ತೇನೆ. ಜನರು ಭೂಮಿಯನ್ನು ನಮಗೆ ಮಾತ್ರ ಇರುವುದು ಎಂದು ಭಾವಿಸಿದ್ದಾರೆ.

ನಾವು ಈಗ ಭೂಮಿ ಮತ್ತು ಪರಿಸರದ ಮೇಲೆ ಮಾಡುತ್ತಿರುವ ದಾಳಿಯ ಭವಿಷ್ಯದ ಪರಿಣಾಮಗಳ ಬಗ್ಗೆ ಯಾರೊಬ್ಬರೂ ಚಿಂತಿಸುತ್ತಿಲ್ಲ. ಭವಿಷ್ಯದ ಪೀಳಿಗೆಗಾಗಿ ಭೂಮಿಯನ್ನು ಸಂರಕ್ಷಿಸಲು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ’ ಎಂದರು. ‘ನಮಗೆ ಬಂದ ಭೂಮಿಯನ್ನು ರಕ್ಷಿಸಿ, ಮುಂದಿನ ಪೀಳಿಗೆಗೆ ಒಪ್ಪಿಸುವುದು ನಮ್ಮ ಮೇಲಿರುವ ಹೊಣೆ. ಅದಕ್ಕಾಗಿ ಸ್ವಚ್ಛ ಭೂಮಿಯನ್ನೂ ನಾವು ಕಾಯ್ದುಕೊಳ್ಳಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT