ಸೋಮವಾರ, ಮಾರ್ಚ್ 8, 2021
19 °C

‘ನಿಶ್ಶಬ್ದ 2’ ಚಿತ್ರದಲ್ಲಿ ರೂಪೇಶ್‌ ಹವಾ!

ಕೆ.ಎಂ.ಸತೀಶ್‌ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

‘ನಿಶ್ಶಬ್ದ 2’ ಚಿತ್ರದಲ್ಲಿ ರೂಪೇಶ್‌ ಹವಾ!

ಆರ್‌ಜೆಯಾಗಿ ಜನಪ್ರಿಯತೆ ಗಳಿಸಿದ್ದ ರೂಪೇಶ್‌ ಶೆಟ್ಟಿ ಈಗ ಚಿತ್ರರಂಗದಲ್ಲಿ ಒಂದೊಂದೇ ಮೆಟ್ಟಿಲು ಮೇಲೇರುತ್ತಿದ್ದಾರೆ. ಚಾಕೊಲೆಟ್‌ ಹೀರೊ ಲುಕ್ಕು ಹಾಗೂ ಯಾವುದೇ ಪಾತ್ರವನ್ನು ಲೀಲಾಜಾಲವಾಗಿ ಅಭಿನಯಿಸುವ ಗುಣ ಇವರ ಸಿನಿಗ್ರಾಫ್‌ ಏರಲು ಮುಖ್ಯ ಕಾರಣ.

‘ಡೇಂಜರ್‌ ಜೋನ್‌’ ಚಿತ್ರದಿಂದ ಸ್ಯಾಂಡಲ್‌ವುಡ್‌ ಪ್ರವೇಶಿಸಿದ್ದ ರೂಪೇಶ್‌ ಶೆಟ್ಟಿ, ‘ನಿಶ್ಶಬ್ದ 2’ ಚಿತ್ರದ ಮೂಲಕ ಮತ್ತೇ ಕನ್ನಡ ಪ್ರೇಕ್ಷಕರನ್ನು ರಂಜಿಸಲು ಬಂದಿದ್ದಾರೆ. ಥ್ರಿಲ್ಲರ್‌ ಕಥಾಹಂದರವುಳ್ಳ ಈ ಸಿನಿಮಾ ಪ್ರೇಕ್ಷಕರಿಗೆ ಭರಪೂರ ರಂಜನೆ ನೀಡಲಿದೆ ಎಂಬ ವಿಶ್ವಾಸ ಅವರದ್ದು.

‘ನನ್ನ ಮೊದಲ ಕನ್ನಡ ಚಿತ್ರ ‘ಡೇಂಜರ್‌ ಜೋನ್‌’ಗೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಆ ಚಿತ್ರತಂಡವೇ ‘ನಿಶ್ಶಬ್ದ 2’ ಸಿನಿಮಾದಲ್ಲೂ ಮುಂದುವರಿದಿದೆ.

‘ನಿಶ್ಶಬ್ದ 2’ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ. ಹೊಸ ಹೀರೊ ಸಾಮಾನ್ಯ ಲವ್ ಸ್ಟೋರಿ ಇರುವ ಸಿನಿಮಾ ಮಾಡಿದರೆ ಜನರಿಗೆ ತಲುಪುವುದು ಕಷ್ಟ. ಈ ಕಾರಣಕ್ಕಾಗಿ ವಿಭಿನ್ನ ಕಥಾಹಂದರವುಳ್ಳ ‘... 2’ ಸಿನಿಮಾವನ್ನು ಒಪ್ಪಿಕೊಂಡೆ. ಜತೆಗೆ ಹಳೆಯ ತಂಡದೊಂದಿಗೆ ಕೆಲಸ ಮಾಡುವಾಗ ಸಿಗುವ ಕಂಫರ್ಟ್‌ ಇನ್ನೊಂದು ಕಾರಣ’ ಎನ್ನುತ್ತಾರೆ ರೂಪೇಶ್‌.

‘ನಿಶ್ಶಬ್ದ 2’ ಸಿನಿಮಾ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ‘ನಿಶ್ಶಬ್ದ 2’ದ ಚಿತ್ರದ ಸೀಕ್ವೆಲ್ ಅಲ್ಲ. ಆದರೆ, ಆ ಚಿತ್ರಕ್ಕೂ ಈ ಚಿತ್ರಕ್ಕೂ ಕೆಲವೊಂದು ಸಾಮ್ಯತೆಗಳಿವೆಯಂತೆ. ವಿಷ್ಣುವರ್ಧನ್‌ ಅಭಿನಯಿಸಿದ್ದ ಆ ಸಿನಿಮಾದಲ್ಲಿ ನಾಯಿಗಳೇ ಪ್ರಧಾನ ಆಕರ್ಷಣೆಯಾಗಿದ್ದವು. ಅದೇರೀತಿ, ಈ ಚಿತ್ರದಲ್ಲೂ ಒಂದು ನಾಯಿ ಇದೆ. ಇದು ‘ನಿಶ್ಯಬ್ದ’ ಚಿತ್ರದ ಮುಂದುವರಿದ ಭಾಗ ಅನ್ನುವುದಕ್ಕಿಂತಲೂ ಚಿತ್ರಕತೆಗೆ ತುಂಬ ಚೆನ್ನಾಗಿ ಹೊಂದಾಣಿಕೆ ಆಗುತ್ತದೆ ಎಂಬ ಕಾರಣಕ್ಕೆ ಸಿನಿಮಾಕ್ಕೆ ಈ ಶೀರ್ಷಿಕೆ ಇಡಲಾಗಿದೆ.

‘ನಿಶ್ಶಬ್ದ 2’ ರಾಬರಿ ಮಾಡುವ ಒಂದು ತಂಡದ ಕತೆ ಹೇಳುತ್ತದೆ. ನಾನು ಈ ಚಿತ್ರದಲ್ಲಿ ಹ್ಯಾಕ್ ಮಾಡುವ ತಾಂತ್ರಿಕ ಜ್ಞಾನವುಳ್ಳ ನಾಯಕನ ಪಾತ್ರ ನಿರ್ವಹಿಸಿದ್ದೇನೆ. ದುಡ್ಡಿನ ಹಿಂದೆ ಬೀಳುವ ಪಾತ್ರ ಅದು. ಹಾಗೆಯೇ, ಈ ಚಿತ್ರದಲ್ಲಿ ನಾಯಿಯೂ ಪ್ರಧಾನ ಪಾತ್ರವಹಿಸಿದೆ. ಚಿತ್ರದಲ್ಲಿ ನಾಯಿಯದ್ದೇನು ಪಾತ್ರ. ಅದು ರಾಬರಿ ಮಾಡುವ ತಂಡಕ್ಕೆ ಸಪೋರ್ಟ್ ಮಾಡುತ್ತದೆಯೇ ಅಥವಾ ಅವರಿಗೆ ವಿರುದ್ಧವಾಗಿ ನಿಲ್ಲುತ್ತದೆಯೇ ಎಂಬುದೇ ಚಿತ್ರದ ಒನ್‌ ಲೈನ್‌ ಸ್ಟೋರಿ’ ಎನ್ನುತ್ತಾರೆ ರೂಪೇಶ್‌.

ಈ ಸಿನಿಮಾದ ಎರಡನೇ ಭಾಗದಲ್ಲಿ ಫುಲ್‌ ನಾಯಿಯದ್ದೇ ಹವಾ ಇರುತ್ತದೆ ಎನ್ನುವ ಅವರು, ನಾಯಿಯೊಟ್ಟಿಗೆ ಚಿತ್ರೀಕರಣದಲ್ಲಿ ಪಾಲ್ಗೊಂಡ ರೋಚಕ ಕ್ಷಣಗಳನ್ನು ಹಂಚಿಕೊಳ್ಳುವುದು ಹೀಗೆ: ‘ಚಿತ್ರದಲ್ಲಿ ರೆಮೋ ಎಂಬ ರ್‍ಯಾಟ್‌ವೀಲರ್‌ ನಾಯಿ ಮೊದಲಬಾರಿಗೆ ಕ್ಯಾಮೆರಾ ಎದುರಿಸಿದೆ. ನಾಯಿ ಜತೆಗೆ 12 ದಿನಗಳ ಕಾಲ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು ಒಂದು ರೋಚಕ ಅನುಭವ. ನಿರ್ದೇಶಕರು ಚಿತ್ರೀಕರಣ ಮಾಡಬೇಕೆಂದಾಗಲೆಲ್ಲಾ ರೆಮೋ ನಟಿಸಲು ಸಮ್ಮತಿ ತೋರುತ್ತಿರಲಿಲ್ಲ. ಅದಕ್ಕೆ ಮೂಡ್‌ ಇದ್ದಾಗಲಷ್ಟೇ ನಾವು ಚಿತ್ರೀಕರಣ ಮಾಡಬೇಕಿತ್ತು. ಹಾಗಾಗಿ, ಅದು ಅಭಿನಯಿಸುವ ಆಸಕ್ತಿ ತೋರಿದಾಗ ನಾವೆಲ್ಲರೂ ತುಂಬ ಎಚ್ಚರಿಕೆಯಿಂದ ಆ ದೃಶ್ಯಗಳನ್ನು ಮಾಡಿ ಮುಗಿಸುತ್ತಿದ್ದೆವು. ನಾಯಿ ಅಭಿನಯಿಸುವ ವೇಳೆ ನಟರು ಸ್ವಲ್ಪ ತಪ್ಪು ಮಾಡಿದರೂ ಇಡೀ ಶಾಟ್‌ ಅನ್ನು ಮತ್ತೇ ಚಿತ್ರೀಕರಿಸಬೇಕಾದ ಅನಿವಾರ್ಯತೆ ಎದುರಾಗುತ್ತಿತ್ತು. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಚಿತ್ರೀಕರಣ ಮುಗಿಸಿದೆವು. ಒಟ್ಟಾರೆಯಾಗಿ, ಚಿತ್ರದಲ್ಲಿ ನಾಯಿ ಜತೆಗೆ ನಟಿಸಿದ್ದು ತುಂಬ ಖುಷಿ ನೀಡಿತು’.

ದೇವ್‌ರಾಜ್‌ ಕುಮಾರ್‌ ನಿರ್ದೇಶನದ ‘ನಿಶ್ಶಬ್ದ 2’ ಚಿತ್ರವನ್ನು ತಾರನಾಥ್‌ ಶೆಟ್ಟಿ ಬೋಳಾರ್‌ ನಿರ್ಮಿಸಿದ್ದಾರೆ. ಸಿನಿಮಾ ಇಂದು (ನ.3) ತೆರೆಕಾಣುತ್ತಿದೆ. ‘ಆರಂಭದಲ್ಲಿ 50 ಚಿತ್ರಮಂದಿರಗಳಲ್ಲಷ್ಟೇ ಬಿಡುಗಡೆ ಮಾಡುವ ಯೋಚನೆ ಇತ್ತು. ಆದರೆ, ಈಗ 150 ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಇದಕ್ಕೆ ಪ್ರೇಕ್ಷಕರ ಪ್ರೀತಿಯೇ ಕಾರಣ. ಈ ಚಿತ್ರ ತುಂಬ ಚೆನ್ನಾಗಿ ಮೂಡಿಬಂದಿದೆ. ಹಾಗಾಗಿ, ಈ ಸಿನಿಮಾ ಒಂದೊಳ್ಳೆ ಬ್ರೇಕ್‌ ನೀಡುತ್ತದೆ ಎಂಬ ಭರವಸೆ ಇದೆ’ ಎಂದು ನಗು ಚೆಲ್ಲುತ್ತಾರೆ ರೂಪೇಶ್‌ ಶೆಟ್ಟಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.