ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರ ಮುಷ್ಕರದ ಮಾಹಿತಿ ಇಲ್ಲ

Last Updated 3 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಕೋಲಾರ: ‘ಭಾರತೀಯ ವೈದ್ಯ ಸಂಘದ (ಐಎಂಎ) ಸದಸ್ಯರು ಮುಷ್ಕರ ನಡೆಸುತ್ತಿರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಅವರು ಸರ್ಕಾರಕ್ಕಾಗಲಿ ಅಥವಾ ಆರೋಗ್ಯ ಸಚಿವನಾದ ನನಗಾಗಲಿ ಮುಷ್ಕರದ ಬಗ್ಗೆ ಯಾವುದೇ ನೋಟಿಸ್‌ ನೀಡಿಲ್ಲ’ ಎಂದು ಆರೋಗ್ಯ ಸಚಿವ ಕೆ.ಆರ್.ರಮೇಶ್‌ಕುಮಾರ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಮ್ಮದು ಪ್ರಜಾಪ್ರಭುತ್ವ ದೇಶವಾಗಿದ್ದು, ಪ್ರತಿಭಟನೆ ಮಾಡಲು ಪ್ರತಿಯೊಬ್ಬರಿಗೂ ಹಕ್ಕಿದೆ. ಅದರಂತೆ ಐಎಂಎ ಮುಷ್ಕರ ಮಾಡುತ್ತಿರಬಹುದು. ಅದನ್ನು ವಿರೋಧಿಸುವ ಹಕ್ಕು ನಮಗಿಲ್ಲ’ ಎಂದರು.

ವಿಧಾನಸಭೆಯಲ್ಲಿ ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ ತಿದ್ದುಪಡಿ ಮಸೂದೆ ಮಂಡಿಸುವ ಮುನ್ನ ಎಲ್ಲಾ ಸಂಘಟನೆಗಳೊಂದಿಗೆ ಚರ್ಚಿಸಲಾಗಿದೆ. ಮಸೂದೆ ಪರಿಶೀಲನಾ ಸಭೆ ನಡೆಸಿ ಎಲ್ಲರ ಅಭಿಪ್ರಾಯ ಪಡೆದು ಸರ್ಕಾರಕ್ಕೆ ಕಳುಹಿಸಲಾಗಿದೆ. ಅದರ ಕರಡು ಐಎಂಎ ಸದಸ್ಯರಿಗೂ ನೀಡಲಾಗಿತ್ತು. ಅವರು ಅದನ್ನು ಪರಿಶೀಲಿಸಿ ಮುಖ್ಯಮಂತ್ರಿ ನಡೆಸಿದ ಸಭೆಯಲ್ಲಿ ಸಮಾಧಾನ ವ್ಯಕ್ತಪಡಿಸಿದ್ದರು ಎಂದು ಹೇಳಿದರು.

ನಂತರ ಬಿಜೆಪಿ ನಾಯಕರ ಮೂಲಕ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡಿಸಿದರು. ನಂತರ ಮರು ಪರಿಶೀಲನೆಗೆ ಜಂಟಿ ಪರಿಶೀಲನಾ ಸಮಿತಿಗೆ ಒಪ್ಪಿಸಿದ್ದು, ಎರಡು ವಾರಗಳಲ್ಲಿ ಮುಗಿಸಬೇಕಾದ ಮಸೂದೆ ಪರಿಶೀಲನೆಗೆ 12 ವಾರ ಕಾಲಾವಕಾಶ ಪಡೆದು ಕಳುಹಿಸಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಮಸೂದೆ ಪರಿಶೀಲನೆಗೆ ಬರುತ್ತದೆ. ಕುಂದು ಕೊರತೆ ಪರಿಹಾರ ಸಮಿತಿ ರಚನೆಗೆ ಅಂಗೀಕಾರ ಸಿಗಲಿದೆ ಎಂದು ವಿವರಿಸಿದರು.

ಸಂಬಂಧವಿಲ್ಲ: ‘ಐಎಂಎ ಸದಸ್ಯರು ಯಾರು, ನಾವು ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕೆ ಕಾಯ್ದೆ ಜಾರಿಗೆ ತರುತ್ತಿದ್ದೇವೆ. ವೈದ್ಯರಿಗೂ ಈ ಕಾಯ್ದೆಗೂ ಸಂಬಂಧವಿಲ್ಲ. ನಾವು ಮಸೂದೆ ಮಂಡಿಸಿರುವುದು ಖಾಸಗಿ ಆಸ್ಪತ್ರೆಗಳ ವಿಚಾರದಲ್ಲೇ ಹೊರತು ವೈದ್ಯರ ವಿಚಾರದಲ್ಲಿ ಅಲ್ಲ’ ಎಂದು ಸ್ಪಷ್ಟಪಡಿಸಿದರು.

‘ಜನ ರೈಲು ಕೇಳಿದರು, ನಾವು ಹಾಕಿದ್ದೇವೆ. ಹಳಿಗಳ ಮೇಲೆ ಬಿದ್ದು ಯಾರಾದರೂ ಸತ್ತರೆ ಅದಕ್ಕೆ ನಾವು ಜವಾಬ್ದಾರರಲ್ಲ. ಟ್ರೈನ್ ಹಾಕದಿದ್ದರೂ ಜನ ಪ್ರಶ್ನಿಸುತ್ತಾರೆ, ಹಳಿ ಮೇಲೆ ಯಾರಾದರೂ ಸತ್ತಾಗಲು ಪ್ರಶ್ನಿಸಿ ಆಕ್ಷೇಪಿಸುತ್ತಾರೆ. ಜನರಿಗೆ ಆರೋಗ್ಯ ಸೇವೆ ಒದಗಿಸುವುದು ಸರ್ಕಾರದ ಜವಾಬ್ದಾರಿ. ಆ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡುತ್ತಿದ್ದೇವೆ. ಅದು ಬೇಡ ಎಂದರೆ ಹೇಗೆ’ ಎಂದು ಪ್ರಶ್ನಿಸಿದರು.

ಪ್ರತಿಭಟನೆ ಸರಿಯಲ್ಲ- ಸಿದ್ದರಾಮಯ್ಯ
ಬೆಂಗಳೂರು: ‘ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸುವ ಮಸೂದೆ ಇನ್ನೂ ವಿಧಾನಮಂಡಲದಲ್ಲಿ ಅಂಗೀಕಾರಗೊಂಡಿಲ್ಲ. ಈ ಹಂತದಲ್ಲಿ ಖಾಸಗಿ ವೈದ್ಯರು ಪ್ರತಿಭಟನೆ ನಡೆಸುವುದು ಸರಿಯಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಶುಕ್ರವಾರ ಮಾತನಾಡಿದ ಮುಖ್ಯಮಂತ್ರಿ, ‘ಮಸೂದೆ ಕುರಿತು ಖಾಸಗಿ ವೈದ್ಯರ ಜೊತೆ ಹಲವು ಬಾರಿ ಮಾತುಕತೆ ನಡೆಸಿದ್ದೇವೆ. ಆದರೆ, ಅವರು ಏಕಾಏಕಿ 24 ಗಂಟೆಗಳ ಮುಷ್ಕರಕ್ಕೆ ಕರೆ ನೀಡಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮುಷ್ಕರ ಕಾರಣದಿಂದ ರೋಗಿಗಳಿಗೆ ಯಾವುದೇ ರೀತಿಯಲ್ಲೂ ತೊಂದರೆ ಆಗದಂತೆ ಸರ್ಕಾರ ಕ್ರಮ ಕೈಗೊಂಡಿದೆ. ಸರ್ಕಾರಿ ವೈದ್ಯರು ಆಸ್ಪತ್ರೆಯಲ್ಲಿ ಹಾಜರಿರುವಂತೆ ಮತ್ತು ಔಷಧಿ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ’ ಎಂದರು.

‘ತಿದ್ದುಪಡಿ ಮಸೂದೆಯ ಪರಿಶೀಲನೆಗೆ ರಚಿಸಲಾದ ಜಂಟಿ ಸದನ ಸಮಿತಿ ಈಗಾಗಲೇ ವರದಿ ನೀಡಿದೆ. ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಮಸೂದೆ ಚರ್ಚೆಗೆ ಬರಲಿದೆ’ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT