ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ವಿಷಬೀಜ ಬಿತ್ತುತ್ತಿರುವ ಸಿ.ಎಂ

Last Updated 4 ನವೆಂಬರ್ 2017, 9:34 IST
ಅಕ್ಷರ ಗಾತ್ರ

ಹೆಬ್ಬೂರು/ ತುರುವೇಕೆರೆ/ ಚಿಕ್ಕನಾಯಕನಹಳ್ಳಿ: ಬಿಜೆಪಿ ಹಮ್ಮಿಕೊಂಡಿರುವ ‘ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ’ ಸಮಾವೇಶ ಶುಕ್ರವಾರ ತುರುವೇಕೆರೆ, ಚಿಕ್ಕನಾಯಕನಹಳ್ಳಿ ಹಾಗೂ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಬ್ಬೂರಿನಲ್ಲಿ ಜರುಗಿತು. ಎಲ್ಲ ಸಭೆಗಳಲ್ಲಿಯೂ ಮುಖಂಡರು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕೇಂದ್ರ ಸರ್ಕಾರದ ಸಾಧನೆಗಳನ್ನು ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದರು.

‘ಬಿಜೆಪಿಯವರು ಹಿಂದುತ್ವದ ಹೆಸರಿನಲ್ಲಿ ಧರ್ಮಗಳ ನಡುವೆ ಕಂದಕ ನಿರ್ಮಿಸುತ್ತಿದ್ದಾರೆ. ಮೊದಲು ಅವರು ಪರಿವರ್ತನೆಯಾಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಸಿದ್ದರಾಮಯ್ಯ ಅವರೇ ಜಾತಿ ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ವಿಷಬೀಜ ಬಿತ್ತುತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

‘ಕಳೆದ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನು ಸೋಲಿಸಲು ಸಿದ್ದರಾಮಯ್ಯ ವ್ಯವಸ್ಥಿತ ಪಿತೂರಿ ನಡೆಸಿದರು’ ಎಂದು ಆರೋಪಿಸಿದರು.
‘ಬಿಜೆಪಿ 19 ರಾಜ್ಯಗಳಲ್ಲಿ ಈಗ ಅಧಿಕಾರದಲ್ಲಿ ಇದೆ. ಕಾಂಗ್ರೆಸ್ ಪಕ್ಷಕ್ಕೆ ಸಂಸತ್ತಿನಲ್ಲಿ ಅಧಿಕೃತ ವಿರೋಧ ಪಕ್ಷದ ಸ್ಥಾನ ಪ‍ಡೆಯಲು ಅಗತ್ಯವಾದ ಸಂಖ್ಯೆಯ ಸಂಸದರನ್ನೂ ಗೆಲ್ಲಿಸಿಕೊಳ್ಳಲು ಸಾಧ್ಯವಾಗಲಿಲ್ಲ. ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚುವುದು ಖಚಿತ’ ಎಂದು ಹೇಳಿದರು.

‘ಭಾಗ್ಯಲಕ್ಷ್ಮಿ ಯೋಜನೆಗೆ ಗ್ರಹಣ ಬಡಿದಿದೆ. 100 ಹೆಣ್ಣು ಮಕ್ಕಳು ಜನಿಸಿದರೆ 10 ಮಕ್ಕಳಿಗೆ ಮಾತ್ರ ಸೌಲಭ್ಯ ದೊರೆಯುತ್ತಿದೆ. ನಾನು ಮುಖ್ಯಮಂತ್ರಿಯಾದ ಅವಧಿಯಲ್ಲಿ ಮುಸ್ಲಿಮ್ ಸಮುದಾಯದವರೂ ಹೆಚ್ಚು ಸಂಖ್ಯೆಯಲ್ಲಿ ಭಾಗ್ಯಲಕ್ಷ್ಮಿ ಯೋಜನೆಯ ಸೌಲಭ್ಯ ಪಡೆದಿದ್ದರು’ ಎಂದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರ‍ಪ್ಪ ಮಾತನಾಡಿ, ‘ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಡೆದಾಗ ಆರ್‌ಎಸ್‌ಎಸ್ ಹಾಗೂ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದ್ದರು. ಹತ್ಯೆ ಮಾಡಿದವರು ಯಾರು ಎನ್ನುವುದು ತಮಗೆ ಗೊತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಆದರೆ ಇಲ್ಲಿಯವರೆಗೂ ಹತ್ಯೆ ಮಾಡಿದವರನ್ನು ಬಂಧಿಸಲು ಸಾಧ್ಯವಾಗಿಲ್ಲ’ ಎಂದು ವ್ಯಂಗ್ಯವಾಡಿದರು.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ‘ಕರ್ನಾಟಕದ ಜನತಾದಳಕ್ಕೆ ಇದೇ ಕೊನೆಯ ಚುನಾವಣೆ. ಕಾಂಗ್ರೆಸ್ ಮುಳುಗುವ ಹಡಗು’ ಎಂದು ಟೀಕಿಸಿದರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವ ಕೆ.ಜೆ.ಜಾರ್ಜ್ ಎಟಿಎಂ ಇದ್ದಂತೆ. ಆದ್ದರಿಂದ ಅವರ ಪರ ಮಾತನಾಡುತ್ತಾರೆ, ಹಗರಣಗಳನ್ನು ಮುಚ್ಚಿಹಾಕುತ್ತಾರೆ’ ಎಂದು ಹೇಳಿದರು.

‘ಸಿದ್ದರಾಮಯ್ಯ ಅವರನ್ನು ನಿದ್ದೆಯಿಂದ ಎಚ್ಚರಿಸಲು ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್ ಕುಟುಂಬದ ಪಕ್ಷ, ಜೆಡಿಎಸ್ ಅಪ್ಪ ಮಕ್ಕಳ ಪಕ್ಷ. ಬಿಜೆಪಿ ಮಾತ್ರವೇ ಜನರ ಪಕ್ಷ. ಕುಮಾರಸ್ವಾಮಿ ಯಾವಾಗ ಬೇಕಾದರೂ ಮಾತು ಬದಲಿಸುತ್ತಾರೆ. ಅವರು ನಂಬಿಕೆಗೆ ಅರ್ಹರಲ್ಲ’ ಎಂದರು.’ ಎಂದು ಅವರು ಹೇಳಿದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ‘ಶಾಸಕ ಎಂ.ಟಿ.ಕೃಷ್ಣಪ್ಪ ಎಲ್ಲ ಅಭಿವೃದ್ಧಿಯ ಕೆಲಸಗಳಲ್ಲಿಯೂ ಕಮಿಷನ್ ಪಡೆಯುತ್ತಿದ್ದಾರೆ’ ಎಂದು ದೂರಿದರು. ಸಂಸದ ಶ್ರೀರಾಮುಲು, ‘ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಬರಗಾಲ ಆವರಿಸಿದೆ’ ಎಂದರು.

ಶಾಸಕರಾದ ಸುರೇಶ್ ಗೌಡ, ವೈ.ಎ.ನಾರಾಯಣಸ್ವಾಮಿ, ಎಸ್.ಸುರೇಶ್ ಕುಮಾರ್, ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ, ಜಿಲ್ಲಾ ಘಟಕದ ಅಧ್ಯಕ್ಷ ಜ್ಯೋತಿ ಗಣೇಶ್, ಮುಖಂಡ ಜಿ.ಎಸ್.ಬಸವರಾಜು, ನೆ.ಲ.ನರೇಂದ್ರ ಬಾಬು, ಹುಲಿನಾಯ್ಕರ್, ತೇಜಸ್ವಿನಿ ಗೌಡ, ಶಿವಪ್ರಸಾದ್, ಮುಖಂಡ ಜೆ.ಸಿ.ಮಾಧುಸ್ವಾಮಿ, ಕೆ.ಎಸ್.ಕಿರಣ್ ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಕೆ.ಮಂಜುನಾಥ್, ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಆರ್.ಶಶಿಧರ್, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT