ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಂದ್ವ ನಿಲುವು ಬಿಟ್ಟು ಹೋರಾಟಕ್ಕೆ ಬನ್ನಿ

Last Updated 5 ನವೆಂಬರ್ 2017, 19:49 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಅಖಿಲ ಭಾರತ ವೀರಶೈವ ಮಹಾಸಭಾ, ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಕ್ಕೆ ಅಡ್ಡಿಯಾಗಿದೆ. ಅದು ತನ್ನ ದ್ವಂದ್ವ ನಿಲುವು ಬಿಟ್ಟು ಹೋರಾಟಕ್ಕೆ ಬೆಂಬಲ ಸೂಚಿಸಬೇಕು. ಇಲ್ಲದಿದ್ದರೆ, ಮತ್ತೊಂದು ಪರ್ಯಾಯ ಸಂಸ್ಥೆ ಕಟ್ಟುತ್ತೇವೆ’ ಎಂದು ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಸಿದ್ದರಾಮ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಇಲ್ಲಿನ ನೆಹರೂ ಮೈದಾನದಲ್ಲಿ ಭಾನುವಾರ ನಡೆದ ಬೃಹತ್‌ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕು. ವಚನಗಳೇ ‘ಧರ್ಮ ಗ್ರಂಥ’ ಎನ್ನುವುದನ್ನು ಒಪ್ಪಬೇಕು. ಹೋರಾಟ ಕುರಿತು ಹೊಂದಿರುವ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳದಿದ್ದರೆ ಪರ್ಯಾಯವಾಗಿ ಅಖಿಲ ಭಾರತ ಲಿಂಗಾಯತ ಮಹಾಪರಿಷತ್‌ ರಚನೆ ಅನಿವಾರ್ಯವಾಗುತ್ತದೆ’ ಎಂದು ಅವರು ಹೇಳಿದರು.

‘ನಾವು ಧಾರ್ಮಿಕ ಅಲ್ಪಸಂಖ್ಯಾತರಾಗಲು ಲಿಂಗಾಯತ ಧರ್ಮ ಮಾನ್ಯತೆ ಪಡೆಯಬೇಕಿದೆ. ಎಲ್ಲಿಯವರೆಗೂ ಹೋರಾಟ ಮಾಡುವುದಿಲ್ಲವೊ ಅಲ್ಲಿಯವರೆಗೂ ನಮ್ಮ ಬೇಡಿಕೆ ಈಡೇರುವುದಿಲ್ಲ. ಗುರಿ ಮುಟ್ಟಲು ಒಗ್ಗಟ್ಟಿನ ಹೋರಾಟ ಅವಶ್ಯ’ ಎಂದರು.

ನಿರ್ಣಯ: ಲಿಂಗಾಯತ ಪ್ರತ್ಯೇಕ ಧರ್ಮ ರಚನೆ ಕುರಿತಾದ ಶಿಫಾರಸನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಕೇಂದ್ರಕ್ಕೆ ಕಳುಹಿಸಬೇಕು. ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಅದಕ್ಕೆ ಒಪ್ಪಿಗೆ ನೀಡಬೇಕು ಎಂಬ ನಿರ್ಣಯವನ್ನು ಸಮಾವೇಶದಲ್ಲಿ ಕೈಗೊಳ್ಳಲಾಯಿತು. ಲಿಂಗಾಯತ ಧರ್ಮ ವೇದಿಕೆ ಸಂಚಾಲಕ ಡಾ.ಸಿ.ಜಯಣ್ಣ ಅವರು ನಿರ್ಣಯವನ್ನು ಓದಿದರು.

ಹುಬ್ಬಳ್ಳಿಯಲ್ಲಿ ಬಸವ ಬಲ ಪ್ರದರ್ಶನ
ಹೋರಾಟದ ಸಾಗರಕ್ಕೆ ನದಿಗಳಂತೆ ಹರಿದು ಬಂದ ಜನ. ಮೊಳಗಿದ ‘ಬಸವ ಭಕ್ತಿ, ರಾಷ್ಟ್ರ ಶಕ್ತಿ’ ಘೋಷಣೆ. ಸ್ವತಂತ್ರ ಧರ್ಮ ಮಾನ್ಯತೆಗೆ ಹಕ್ಕೊತ್ತಾಯ. ಲಿಂಗಾಯತರ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾದ ಹುಬ್ಬಳ್ಳಿ.

ನಗರದ ನೆಹರೂ ಮೈದಾನದಲ್ಲಿ ಭಾನುವಾರ ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ನಡೆದ ಬೃಹತ್‌ ಸಮಾವೇಶದಲ್ಲಿ ಕಂಡುಬಂದ ದೃಶ್ಯಗಳಿವು.

‘ನಾನು ಲಿಂಗಾಯತ’ ಎಂಬ ಬರಹವುಳ್ಳ ಟೋಪಿ ಹಾಗೂ ಶ್ವೇತ ಬಣ್ಣದ ಉಡುಪನ್ನು ಧರಿಸಿ, ಕೈಯಲ್ಲಿ ಬಸವ ಧ್ವಜ ಹಿಡಿದ ಜನರಿದ್ದ ಮೈದಾನವು ಶ್ವೇತಸಾಗರದಲ್ಲಿ ಕೇಸರಿ ಹೂಗಳು ಅರಳಿದಂತೆ ಕಂಡು ಬಂತು. ಮಹಾರಾಷ್ಟ್ರ, ಕೇರಳ, ಆಂಧ್ರಪ್ರದೇಶ, ತಮಿಳುನಾಡಿನಿಂದಲೂ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು.

‘ಒಬ್ಬ ಲಿಂಗಾಯತ, ಕೋಟಿ ಲಿಂಗಾಯತ’, ‘ಭಾರತ ದೇಶ, ಜೈ ಬಸವೇಶ’, ‘ಬೇಕೆ ಬೇಕು ಮಾನ್ಯತೆ ಬೇಕು’ ಎಂಬ ಘೋಷಣೆಗಳು ಸಮಾವೇಶದಲ್ಲಿ ಮೊಳಗಿದವು.

ಜನರೆದುರು ಸತ್ಯ ಹೇಳಿ
ನಿವೃತ್ತ ಐಎಎಸ್‌ ಅಧಿಕಾರಿ ಎಸ್‌.ಎಂ.ಜಾಮದಾರ ಮಾತನಾಡಿ, ‘ಸುಪ್ರೀಂಕೋರ್ಟ್‌ ಮುಂದೆ ಮಹಾಸಭಾದವರು ‘ನಾವು ಹಿಂದೂಗಳಲ್ಲ. ಬಸವಣ್ಣ, ಧರ್ಮ ಸ್ಥಾಪಕ. ವಚನ ಸಾಹಿತ್ಯ ಧರ್ಮಗ್ರಂಥ ಎಂದು ಸತ್ಯ ಹೇಳಿದ್ದಾರೆ. ಆದರೆ, ನಿಮ್ಮ ಮುಂದೆ ಮಾತ್ರ ಆ ಸತ್ಯವನ್ನು ಹೇಳುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಲಿಂಗಾಯತ ಧರ್ಮ ವೇದಿಕೆ ಅಧ್ಯಕ್ಷ ಬಸವರಾಜ ಹೊರಟ್ಟಿ ಮಾತನಾಡಿ, ‘ಮಹಾಸಭಾದವರನ್ನು ನಮ್ಮೊಂದಿಗೆ ಕರೆದೊಯ್ಯಲು ಮಾತುಕತೆ ನಡೆಸಿದ್ದರೂ ಫಲಪ್ರದವಾಗಿಲ್ಲ. ಪ್ರತ್ಯೇಕ ಪರಿಷತ್ ರಚನೆಗೆ ಒತ್ತಡವಿದೆ. ನೀವು ಸ್ಪಂದಿಸದಿದ್ದರೆ ಪರಿಷತ್ ರಚನೆ ಅನಿವಾರ್ಯವಾಗುತ್ತದೆ’ ಎಂದು ಎಚ್ಚರಿಸಿದರು.

ಕೂಡಲ ಸಂಗಮದ ಬಸವ ಧರ್ಮ ಪೀಠ ಅಧ್ಯಕ್ಷೆ ಮಾತೆ ಮಹಾದೇವಿ ಮಾತನಾಡಿ, ‘ಬಿಜೆಪಿ ಮುಖಂಡರಾದ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್‌ ಅವರು ಹುಟ್ಟಿದಾಗ ಲಿಂಗಾಯತರು. ಲಿಂಗೈಕ್ಯರಾದಾಗ ಅಂತ್ಯಕ್ರಿಯೆಯನ್ನು ಲಿಂಗಾಯತ ಧರ್ಮದಂತೆ ಮಾಡಲಾಗುತ್ತದೆ. ಮಧ್ಯದಲ್ಲಿ ಮಾತ್ರ ಇವರಿಗೆ ಈ ಧರ್ಮ ಬೇಡವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

’ಬಸವಣ್ಣನವರನ್ನು ಗುರು ಎಂದು ಒಪ್ಪದವರ ಮನೆಗೆ ಹೆಣ್ಣು ಕೊಡುವುದಿಲ್ಲ. ತರುವುದಿಲ್ಲ ಎಂಬ ನಿರ್ಧಾರ ಮಾಡಬೇಕು’ ಎಂದು ಅವರು ಅಲ್ಲಿ ನೆರೆದಿದ್ದ ಜನರಲ್ಲಿ ಮನವಿ ಮಾಡಿದರು. ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಗೈರಾಗಿದ್ದರು.

‘ಐವರು ತಂದೆಗೆ ಹುಟ್ಟಿದವರು ವೀರಶೈವರು’
‘ಒಬ್ಬ ತಂದೆಗೆ ಹುಟ್ಟಿದವರು ಲಿಂಗಾಯತರು. ಐವರು ತಂದೆಗೆ ಹುಟ್ಟಿದವರು ವೀರಶೈವರು. ಬಸವಣ್ಣ ನಮಗೊಬ್ಬನೇ ತಂದೆ. ವೀರಶೈವರಿಗೆ ಐವರು ತಂದೆ’ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ‘ಚುನಾವಣಾ ಪ್ರಣಾಳಿಕೆಯಲ್ಲಿ ಯಾವ ಪಕ್ಷ ಲಿಂಗಾಯತ ಸ್ವತಂತ್ರ ಧರ್ಮ ಸೇರಿಸುತ್ತದೆಯೊ ಅದಕ್ಕೆ ಬೆಂಬಲ ಸಿಗುತ್ತದೆ’ ಎಂದು ಅವರು ಹೇಳಿದರು.
*

‘ಕಾವಿಗಾದರೂ ಬೆಲೆ ಕೊಡಿ’
ಬಾಳೆಹೊನ್ನೂರು:
ಹುಬ್ಬಳ್ಳಿಯಲ್ಲಿ ನಡೆದ ಸ್ವತಂತ್ರ ಲಿಂಗಾಯತ ಧರ್ಮ ಸಮಾವೇಶದಲ್ಲಿ ಕೂಡಲ ಸಂಗಮದ ಜಯಮೃತ್ಯುಂಜಯ ಸ್ವಾಮಿ ನೀಡಿದ ಹೇಳಿಕೆಯನ್ನು ವೀರಶೈವ ಪಂಚಪೀಠಗಳ ಒಕ್ಕೂಟ ವ್ಯವಸ್ಥೆಯ ಸಂಚಾಲಕರಾದ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಖಂಡಿಸಿದ್ದಾರೆ.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಶಿಷ್ಟವಾದ ತತ್ವ ಸಿದ್ಧಾಂತಗಳನ್ನು ಹೊಂದಿದ ವೀರಶೈವ ಧರ್ಮ ಸಕಲ ಜೀವ ಸಂಕುಲಕ್ಕೆ ಒಳಿತನ್ನೇ ಮಾಡುತ್ತಾ ಬಂದಿದೆ. ದೇಶಕ್ಕೊಂದು ಸಂವಿಧಾನವಿರುವಂತೆ ವೀರಶೈವಕ್ಕೊಂದು ಸಂವಿಧಾನವಿದೆ. ಅದನ್ನು ಅರಿತು ಆಚರಿಸಿ ಬಾಳಿದಾಗ ಸುಖ, ಶಾಂತಿ ಪ್ರಾಪ್ತಿಯಾಗಲು ಸಾಧ್ಯ. ಆದರೆ ಅದ್ಯಾವುದನ್ನೂ ಅರಿಯದ ಜಯಮೃತ್ಯುಂಜಯ ಸ್ವಾಮಿ ‘ಒಬ್ಬ ತಂದೆಗೆ ಹುಟ್ಟಿದವರು ಲಿಂಗಾಯಿತರು, ಐವರು ತಂದೆಗೆ ಹುಟ್ಟಿದವರು ವೀರಶೈವರು’ ಎಂದು ಹೇಳಿದ್ದು ಅವರು ಹಾಕಿಕೊಂಡ ಕಾವಿ ಹಾಗೂ ಪಡೆದುಕೊಂಡ ಸಂಸ್ಕಾರ–ಸಂಸ್ಕೃತಿ ಎಂತಹದು ಎಂಬುದನ್ನು ಎತ್ತಿ ತೋರಿಸುತ್ತಿದೆ ’ ಎಂದರು.

ಸ್ವತಂತ್ರ ಲಿಂಗಾಯತ ಧರ್ಮ ಪ್ರತಿಪಾದಿಸುವ ಮುಖಂಡರಿಗೆ ಸತ್ಯ ಅರಿಯುವುದು ಬೇಕಾಗಿಲ್ಲ. ಅಸತ್ಯವನ್ನು ಹಲವಾರು ಸಲ ಹೇಳುವ ಮೂಲಕ ಸತ್ಯ ಮಾಡಬಹುದೆಂಬ ಭ್ರಮೆ ಹಲವರಿಗೆ ಇದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT