ಮಂಗಳವಾರ, ಮಾರ್ಚ್ 2, 2021
29 °C
ರಾಮಾಯಣ ರಸಯಾನ 13

ದರ್ಶನ–ವರ್ಣನಗಳ ಜೊತೆ–ನಡಿಗೆಯೇ ಕಾವ್ಯ

ಎಸ್‌. ಸೂರ್ಯಪ್ರಕಾಶ ಪಂಡಿತ್ Updated:

ಅಕ್ಷರ ಗಾತ್ರ : | |

ದರ್ಶನ–ವರ್ಣನಗಳ ಜೊತೆ–ನಡಿಗೆಯೇ ಕಾವ್ಯ

ದರ್ಶನ–ವರ್ಣನಗಳ ಬಗ್ಗೆ ಭಟ್ಟತೌತನ ಮಾತುಗಳು ಅಪೂರ್ವವಾಗಿವೆ:

ನಾನೃಷಿಃ ಕವಿರಿತ್ಯುಕ್ತಂ ಋಷಿಶ್ಚ ಕಿಲ ದರ್ಶನಾತ್‌ |

ವಿಚಿತ್ರಭಾವಧರ್ಮಾಂಶತತ್ತ್ವಪ್ರಖ್ಯಾ ಚ ದರ್ಶನಂ ||

ಸ ತತ್ತ್ವದರ್ಶನಾದೇವ ಶಾಸ್ತ್ರೇಷು ಪಠಿತಃ ಕವಿಃ |

ದರ್ಶನಾದ್ವರ್ಣನಾಚ್ಛಾಥ ರೂಢಾ ಲೋಕೇ ಕವಿಶ್ರುತಿಃ ||

ತಥಾ ಹಿ ದರ್ಶನೇ ಸ್ವಚ್ಛೇ ನಿತ್ಯೇsಪ್ಯಾದಿಕವೇರ್ಮುನೇಃ |

ನೋದಿತಾ ಕವಿತಾ ಲೋಕೇ ಯಾವಜ್ಜಾತಾ ನ ವರ್ಣನಾ ||

ಈ ಮಾತುಗಳನ್ನು ತೀನಂಶ್ರೀ ಅವರು ಸೊಗಸಾಗಿ ಕನ್ನಡಕ್ಕೆ ತಂದಿದ್ದಾರೆ, ಹೀಗೆ:

‘ಋಷಿಯಲ್ಲದ ಕವಿಯಿಲ್ಲ ಎನ್ನುವರು; ದರ್ಶನವುಳ್ಳವನು ತಾನೆ ಋಷಿ! ಜಗತ್ತಿನ ವಿವಿಧ ವಸ್ತುಗಳ ಧರ್ಮಾಂಶದ ತತ್ತ್ವವನ್ನು ಕಾಣುವುದೇ ದರ್ಶನ. ತತ್ತ್ವದರ್ಶನವನ್ನು ಹೊಂದಿರುವಷ್ಟಕ್ಕೇ ಒಬ್ಬನಿಗೆ ‘ಕವಿ’ಯೆಂಬ ಹೆಸರು ಶಾಸ್ತ್ರಗಳಲ್ಲಿ ಉಕ್ತವಾಗಿದೆ. ಆದರೆ ದರ್ಶನ ಮತ್ತು ವರ್ಣನೆ ಇವೆರಡೂ ಇದ್ದರೇ ಲೋಕದಲ್ಲಿ ಕವಿಯೆಂದು ಕರೆಯವುದು...’ ಇದನ್ನೇ ಮುಂದುವರೆಸುತ್ತ ಅವರು ವಾಲ್ಮೀಕಿಯ ಉದಾಹರಣೆಯನ್ನು ನೀಡಿರುವುದು ಇಲ್ಲಿ ಉಲ್ಲೇಖಾರ್ಹ: ‘... ಹೀಗೆ, ಆದಿಕವಿಯಾದ ವಾಲ್ಮೀಕಿಮುನಿಗೆ ನಿರ್ಮಲವಾದ ದರ್ಶನವು ನಿತ್ಯವಾಗಿದ್ದರೂ ಕೂಡ, ವರ್ಣನೆಯೂ ಅವನಲ್ಲಿ ಒದಗುವತನಕ ‍‍‍‍‍(ಎಂದರೆ, ಅವನು ‘ರಾಮಾಯಣ’ವನ್ನು ರಚಿಸುವತನಕ) ಕವಿಪಟ್ಟವು ಲೋಕದಲ್ಲಿ ದೊರೆಯಲಿಲ್ಲ’.

ವೇದ–ಉಪನಿಷತ್ತುಗಳಲ್ಲೂ ಶಾಸ್ತ್ರಗಳಲ್ಲೂ ‘ಕವಿ’ ಎಂಬ ಒಕ್ಕಣೆಯಿದೆ; ಆದರೆ ಇದು ತತ್ತ್ವವನ್ನಷ್ಟೆ ಕಂಡವರಿಗೆ ಸಲ್ಲುವಂಥ ಹೆಸರು. ಇದೊಂದು ಅಲೌಕಿಕವಾದ ವಿದ್ಯಮಾನ. ತತ್ತ್ವವನ್ನು ಕಂಡವನು ಋಷಿ; ಅವನು ‘ಕವಿ’ ಕೂಡ. ಆದರೆ ತಾನು ಕಂಡದ್ದನ್ನು ಲೋಕದಲ್ಲಿ ಪ್ರಕಟಿಸಲೇಬೇಕು ಎಂಬ ಒತ್ತಡವನ್ನು ಅವನು ಹೊಂದಿದವನಲ್ಲ. ತಾನು ಕಂಡ ದರ್ಶನವನ್ನು ಅಭಿವ್ಯಕ್ತಿಸಲು ತವಕ ಪಡುವವನೇ ಲೋಕದಲ್ಲಿ ‘ಕವಿ’ ಎಂಬ ಹೆಸರಿಗೆ ಅರ್ಹ. ವಾಲ್ಮೀಕಿಗೆ ಈಗ ಅಂಥ ಕವಿತ್ವದ ಪಟ್ಟ ದೊರೆತಿದೆ. ಕವಿತ್ವಕ್ಕೂ ಅಲೌಕಿಕತೆಗೂ ನಂಟನ್ನು ಕಲ್ಪಿಸಿರುವುದು ನಮ್ಮ ಸಂಸ್ಕೃತಿಗಷ್ಟೆ ಮೀಸಲಾದ ವಿದ್ಯಮಾನವಲ್ಲ; ಪಾಶ್ಚಾತ್ಯ ಕಾವ್ಯಮೀಮಾಂಸೆಯಲ್ಲೂ ಅಂಥ ನಿಲುವನ್ನು ಕಾಣಬಹುದಾಗಿದೆ. ವಿಲಿಯಂ ಬ್ಲೇಕ್‌ನ ಕಾವ್ಯದ ಬಗ್ಗೆ ಬರೆಯುವಾಗ ಹೆರಾಲ್ಡ್‌ ಬ್ಲೂಮ್‌ ‘Poetry, so frequently visionary, tries to domesticate the reader in a world where what she gazes upon has a transcendental aura’ ಎನ್ನುತ್ತಾರೆ. ಓದುಗನಿಗೆ ಲೋಕದೊಂದಿಗೂ ಲೋಕಾತೀತದೊಂದಿಗೂ ನಂಟನ್ನು ಒದಗಿಸಲು ದಾರ್ಶನಿಕ ಕಾವ್ಯ ತವಕಿಸುತ್ತಿರುತ್ತದೆ – ಎನ್ನುವುದು ಈ ಮಾತಿನ ತಾತ್ಪರ್ಯ.

ಹೀಗಿದ್ದರೂ ವಾಲ್ಮೀಕಿಗೆ ಅವನು ಕವಿಯಾಗಿರುವ ಸಂಗತಿ ಇನ್ನೂ ತಿಳಿದಿಲ್ಲ. ಹೀಗಾಗಿಯೇ ಅವನು ಈಗ ಗಾಢವಾದ ಚಿಂತನೆಯಲ್ಲಿರುವುದು. ವಿಶೇಷವಾದ ವಾಕ್ಯಸಮೂಹ ತನ್ನಿಂದ ಅನಾಯಾಸವಾಗಿಯೂ ಅಕಸ್ಮಾತ್ತಾಗಿಯೂ ಪ್ರಕಟವಾಗಿರುವುದನ್ನು ಅವನು ಗಮನಿಸಿದ್ದಾನೆ; ಅದರ ತಾಂತ್ರಿಕ ವಿವರಗಳೂ ಅರ್ಥವಾಗಿವೆ. ಈ ಚಿಂತನ–ಮಂಥನವೇ ಅವನ ಧ್ಯಾನಸ್ಥಿತಿಗೂ ಕಾರಣವಾಗಿದೆ. ಅವನ ಗಮನವೆಲ್ಲ ‘ಮಾ ನಿಷಾದ...’ ಶ್ಲೋಕದ ಕಡೆಗೇ ನಿಂತಿದೆ.

ವಾಲ್ಮೀಕಿಯ ಹುಟ್ಟಿಗೂ ಹುತ್ತಕ್ಕೂ ಸಂಬಂಧವನ್ನು ಪರಂಪರೆ ಕಲ್ಪಿಸಿರುವುದನ್ನು ನೋಡಿದ್ದೆವು. ಈಗ ಮತ್ತೆ ವಾಲ್ಮೀಕಿ ಅದೇ ಸ್ಥಿತಿಯಲ್ಲಿದ್ದಾನೆ.  ಅವನಾಡಿದ ಮಾತು ಅವನ ಮೈ–ಮನಗಳನ್ನು ಆವರಿಸಿ ಹುತ್ತವಾಗಿ ಬೆಳೆದಿದೆ. ಈಗ ನಿಜವಾಗಲೂ ಅವನ ಮನಸ್ಸು ಶ್ರೀರಾಮನ ರೂಪು–ರೇಖೆಗಳನ್ನು ಕೆತ್ತುವುದಕ್ಕೆ ಬೇಕಾದ ಸಿದ್ಧತೆಯನ್ನು ಪಡೆದಿದೆ. ಮಾತು ಇಷ್ಟೊಂದು ಕಾಡುವಂತಾಗಿರುವುದು ಆಕಸ್ಮಿಕ ವಿದ್ಯಮಾನವಲ್ಲ; ಮಾತಿಗೂ ರಾಮಾಯಣದ ಹುಟ್ಟಿಗೂ ರಾಮಾಯಣದ ವಸ್ತುವಿಗೂ ಹೊಕ್ಕಳಬಳ್ಳಿಯ ಸಂಬಂಧವೇ ಇದೆಯೆನ್ನಿ! ಹೀಗಾಗಿಯೇ ವಾಲ್ಮೀಕಿಗೆ ಮಾತನ್ನು ಕುರಿತು ಅಂಥ ಗಾಢ ಚಿಂತನೆ ಒದಗಿದ್ದು. ಮಾತು ಏನೆಲ್ಲ ಮಾಡುತ್ತದೆ ಎನ್ನುವುದರ ಮಹಾದರ್ಶನವೇ ಈ ಋಷಿಕವಿಗೆ ಒದಗಿದೆ. ಮಾತು ಕವಿತ್ವಕ್ಕೂ ಮೂಲ; ವ್ಯಕ್ತಿತ್ವಕ್ಕೂ ಮೂಲ. ರಾಮಾಯಣದ ಉದ್ದಕ್ಕೂ ನಾವು ಕಾಣುವುದು ಮಾತಿನ ಪರಿಣಾಮಗಳನ್ನೇ ಹೌದು. ಕಾವ್ಯದ ಹುಟ್ಟಿಗೂ ಮಾತಿಗೂ ಇರುವ ಸಂಬಂಧವನ್ನು ನೋಡಿದ್ದೇವೆ.ಇನ್ನು ಮೂಲಕಥೆ. ಅದರ ಮಹತ್ವದ ತಿರುವುಗಳಿಗೆಲ್ಲ ಮಾತೇ ಮೂಲಕಾರಣ. ರಾಮನು ವನವಾಸಕ್ಕೆ ಹೋಗುವಂಥಾದದ್ದು ದಶರಥನು ಕೈಕೇಯಿಗೆ ನೀಡಿದ್ದ ‘ಮಾತಿ’ನಿಂದಾಗಿಯೇ; ಮಾರೀಚನ ಮೋಸದ ‘ಮಾತಿ’ನಿಂದಾಗಿಯೇ ಸೀತೆಯ ಅಪಹರಣವಾಯಿತು; ಮಾತಿನ ಮರ್ಮ ಅರಿತಿದ್ದ ಹನುಮಂತನ ಮೂಲಕವೇ ಕಾಡಿನಲ್ಲಿದ್ದ ರಾಮನಿಗೂ ಅಶೋಕವನದಲ್ಲಿದ್ದ ಸೀತೆಗೂ ಹೃದಯದ ಸೇತುವೆ ಒದಗಿದ್ದು; ಸೀತೆಯ ಮೇಲೆ ಎರಗಿದ ಅಪವಾದದ ಮಾತಿನಿಂದಾಗಿಯೇ ಅವಳು ಪುನಃ ಕಾಡಿನ ಪಾಲಾದದ್ದು. ಹೀಗೆ ಕಾವ್ಯದ ಹುಟ್ಟಿನಿಂದ ಕೊನೆಯ ತನಕ ಮಾತಿನ ವಿವರ್ತಗಳ – ಎಂದರೆ ಅಲೆಗಳ – ಪರಿಣಾಮವೇ ಕಾರಣವಾಗಿದೆ. ಮಾತು ಕಾವ್ಯದ ಯಶಸ್ಸಿಗೂ ಸೋಲಿಗೂ ಕಾರಣವಾಗುವಂತೆ ವ್ಯಕ್ತಿತ್ವದ ಸೋಲು–ಗೆಲುವುಗಳಿಗೂ ನಿರ್ಣಾಯಕವಾಗಬಲ್ಲದು. ಈ ರಹಸ್ಯವೇ ವಾಲ್ಮೀಕಿಯನ್ನು ಕಾಡುತ್ತಿರುವುದು. ತಂದೆ ಯಾರಿಗೋ ಕೊಟ್ಟಿದ್ದ ಒಂದು ಮಾತಿನ ಕಾರಣದಿಂದಾಗಿ ತಾನು ಕಾಡಿಗೆ ಹೊರಟವನು ರಾಮ; ಅಂತೆಯೇ ಸಾಮಾನ್ಯನೊಬ್ಬ ಆಡಿದ ಮಾತಿನಿಂದಾಗಿ ಸೀತೆಯಂಥ ಹೆಂಡತಿಯನ್ನೂ ಕಾಡಿಗೆ ಅಟ್ಟಿದವನು ಅವನು. ಆದರೆ ರಾವಣ ಇದಕ್ಕೆ ತದ್ವಿರುದ್ಧ. ಮಾತನ್ನು ಮೋಸಕ್ಕಾಗಿಯೇ ಬಳಸಿಕೊಂಡವನು; ಋಜುವಾದ ಮಾತನ್ನು ಕೇಳಲು ಕೂಡ ಸಿದ್ಧವಿಲ್ಲದವನು. ರಾವಣನಿಗೆ ಮಾತಿನ ಬಗ್ಗೆ ಇದ್ದ ತಿರಸ್ಕಾರವನ್ನು ಬಹಳ ಧ್ವನಿಪೂರ್ಣವಾಗಿ ವಾಲ್ಮೀಕಿ ತನ್ನ ಕಾವ್ಯದಲ್ಲಿ ಸೂಚಿಸಿದ್ದಾನೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.