ಸೋಮವಾರ, ಮಾರ್ಚ್ 1, 2021
28 °C

ನೂರು ಅಸಾಧಾರಣ ಮಹಿಳೆಯರ ಕಥಾಮೃತ

ಮಹತಿ Updated:

ಅಕ್ಷರ ಗಾತ್ರ : | |

ನೂರು ಅಸಾಧಾರಣ ಮಹಿಳೆಯರ ಕಥಾಮೃತ

'ಗುಡ್‍ನೈಟ್ ಸ್ಟೋರೀಸ್‍ ಫಾರ್‍ ರೆಬೆಲ್‍ ಗರ್ಲ್ಸ್' ಅಸಾಧಾರಣ ಮಹಿಳೆಯರ ಕಥೆಗಳ ಗುಚ್ಛ. ತಂತಮ್ಮ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆ ಮಾಡಿದ ನೂರು ಮಹಿಳೆಯರ ಬದುಕಿನ ಕಥನಗಳು ಇಲ್ಲಿವೆ.

ಈ ಕೃತಿಯಲ್ಲಿ ಪರಿಚಿತ ಹೆಣ್ಣುಮಕ್ಕಳಿರುವಂತೆಯೇ ತೆರೆಮರೆಯಲ್ಲಿಯೇ ಉಳಿದಿರುವ ದಿಟ್ಟ ಸಾಧಕಿಯರು ಇದ್ದಾರೆ. ಇತಿಹಾಸದ ಪುಟಗಳಲ್ಲಿ ಅಮರರಾದವರ ಜೊತೆಗೆ, ನಮ್ಮೊಂದಿಗೆ ಇರುವ ಹೀರೊಯಿನ್‍ಗಳೂ ಇದ್ದಾರೆ. ಇವರೆಲ್ಲರ ಬದುಕಿನ ಕಥೆಗಳನ್ನು ಹಿಡಿದಿಟ್ಟುವ ಸೂತ್ರ ಒಂದೇ - ಸ್ಫೂರ್ತಿ, ಜೀವನಪ್ರೀತಿ.

ಓದುಗರು ತಮ್ಮ ಹೃದಯಕ್ಕೆ ಹತ್ತಿರವಾದುದನ್ನು ಅಪಾರ ಆಸ್ಥೆಯಿಂದ ಮಾಡಲು ಹಾಗೂ ಅದಕ್ಕೆ ಅಗತ್ಯವಾದ ಆತ್ಮವಿಶ್ವಾಸವನ್ನು ತುಂಬುವ ನಿಟ್ಟಿನಲ್ಲಿ ಈ ಕಥನಗಳಿಗೆ ಉದ್ದೀಪನಶಕ್ತಿಯಿದೆ. ಅಲೆಕ್‍ ವೆಕ್‍ (ಸೂಪರ್‍ ಮಾಡೆಲ್‍), ಮಿಶೆಲ್‍ ಒಬಾಮಾ (ವಕೀಲೆ, ಸಾಮಾಜಿಕ ಕಾರ್ಯಕರ್ತೆ), ರೋಸ್ ಪಾರ್ಕ್ಸ್ (ಸಾಮಾಜಿಕ ಕಾರ್ಯಕರ್ತೆ), ಮೇರಿ ಕೋಮ್ (ಬಾಕ್ಸರ್), ಲೆಲ್ಲಾ ಲೊಂಬಾರ್ಡಿ (ಫಾರ್ಮುಲಾ ರೇಸರ್), ನಾನ್ಸಿ ವೇಕ್ (ಗೂಢಚಾರಿಣಿ) - ಹೀಗೆ ವಿಭಿನ್ನ ಕ್ಷೇತ್ರಗಳ ಸಾಧಕಿಯರು ಈ ಕೃತಿಯಲ್ಲಿ ಓದುಗರಿಗೆ ಎದುರಾಗುತ್ತಾರೆ. ನಮ್ಮ ಸಾಲುಮರದ ತಿಮ್ಮಕ್ಕನನ್ನು ನೆನಪಿಸುವ ಕೀನ್ಯಾದ ಪರಿಸರವಾದಿ ವಾಂಗರಿ ಮಥಾಯಿ ಕೂಡ ಇಲ್ಲಿದ್ದಾರೆ.

ಎಲೆನಾ ಫವಿಲ್ಲಿ ಹಾಗೂ ಫ್ರಾನ್ಸೆಸ್ಕಾ ಕಾವೆಲ್ಲೊ ಟಿಂಬುಕ್ಟು ಲಾಬ್ಸ್ ಇಲ್ಲಿನ ಕಥೆಗಳನ್ನು ರಚಿಸಿದ್ದಾರೆ. ಎಲ್ಲ ಕಥೆಗಳು 'ಒಂದಾನೊಂದು ಕಾಲದಲ್ಲಿ' ಎನ್ನುವ ರೀತಿಯಲ್ಲಿಯೇ ಆರಂಭವಾಗುತ್ತವೆ.

ಇಲ್ಲಿನ ಪ್ರತಿಯೊಂದು ಕಥೆಯೂ ಒಂದು ಪುಟದ ಮಿತಿಯಲ್ಲೇ ಇದೆ. ಇದಕ್ಕೆ ಪೂರಕವಾಗಿ ಕಥಾನಾಯಕಿಯ ಸುಂದರವಾದ ಚಿತ್ರವಿದೆ. ಜಗತ್ತಿನ ವಿವಿಧ ಭಾಗಗಳ 60 ಕಲಾವಿದೆಯರು ಈ ಪೋಟ್ರೈಟ್‍ಗಳನ್ನು ರೂಪಿಸುವ ಮೂಲಕ ಪುಸ್ತಕದ ಅಂದ ಹೆಚ್ಚಿಸಿದ್ದಾರೆ. ನೂರು ಕಥೆಗಳನ್ನು ಓದಿದ ನಂತರ, ತಮ್ಮದೇ ಆದ ಕಥೆ ಬರೆಯಲು ಒಂದು ಖಾಲಿ ಪುಟವಿದೆ. ತಮ್ಮ ಚಿತ್ರ ಬಿಡಿಸಿಕೊಳ್ಳಲು ಮತ್ತೊಂದು ಪುಟವಿದೆ. ಇದರ ಉದ್ದೇಶ ಇಷ್ಟೇ: ಅಪೂರ್ವ ಸಾಧಕಿಯರ ಜೊತೆಗೆ ಮಕ್ಕಳು ತಮ್ಮನ್ನು ತಾವು ಸಮೀಕರಿಸಿಕೊಳ್ಳಲು ಪ್ರೇರೇಪಿಸುವುದು.

ಇದು ಹೆಣ್ಣುಮಕ್ಕಳಿಗಾಗಿ ರೂಪಿಸಿರುವ ವಿಶೇಷ ಪುಸ್ತಕ. ಹುಡುಗಿಯರಿಗೆ ಉಡುಗೊರೆ ಕೊಡಲಿಕ್ಕೆ ಇದು ಅತ್ಯುತ್ತಮ ಪುಸ್ತಕ. amazon.inನಲ್ಲಿ ಪುಸ್ತಕ ಲಭ್ಯವಿದೆ. ಬೆಲೆ 559 ರೂಪಾಯಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.