ಮಂಗಳವಾರ, ಮಾರ್ಚ್ 2, 2021
23 °C

211 ಅಗತ್ಯ ಸರಕುಗಳು, ರೆಸ್ಟೊರೆಂಟ್‌ ಬಿಲ್‌ ಅಗ್ಗ

ಪಿಟಿಐ Updated:

ಅಕ್ಷರ ಗಾತ್ರ : | |

211 ಅಗತ್ಯ ಸರಕುಗಳು, ರೆಸ್ಟೊರೆಂಟ್‌ ಬಿಲ್‌ ಅಗ್ಗ

ನವದೆಹಲಿ: ಬಳಕೆದಾರರು ದಿನನಿತ್ಯ ಬಳಸುವ 211 ಅಗತ್ಯ ಸರಕುಗಳ ಬೆಲೆ ಬುಧವಾರದಿಂದಲೇ ಅಗ್ಗವಾಗಿದ್ದು, ರೆಸ್ಟೊರೆಂಟ್ ಗಳಲ್ಲಿನ ಊಟದ ಬಿಲ್‌ನ ಹೊರೆಯೂ ಕಡಿಮೆಯಾಗಿದೆ.

ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳನ್ನು (ಎಫ್‌ಎಂಸಿಜಿ)  ಮಾರಾಟ ಮಾಡುವ ದೊಡ್ಡ ರಿಟೇಲ್‌ ಮಳಿಗೆಗಳು ಬೆಲೆ ಕಡಿತ ಮಾಡಿರುವ ಬಗ್ಗೆ  ಬುಧವಾರವೇ ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಿಸಿ ಗ್ರಾಹಕರ ಗಮನ ಸೆಳೆದಿವೆ. ಶಾಂಪೂ, ಡಿಟರ್ಜೆಂಟ್‌, ಸೌಂದರ್ಯ ಪ್ರಸಾಧನಗಳೂ ಸೇರಿದಂತೆ ಒಟ್ಟು 211 ಉತ್ಪನ್ನಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳನ್ನು ಕಡಿತ ಮಾಡಿದ್ದರಿಂದ ಬೆಲೆಗಳು ಅಗ್ಗವಾಗಿವೆ. ಈ ತಿಂಗಳ 10ರಂದು ನಡೆದಿದ್ದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ತೆರಿಗೆ ದರ ತಗ್ಗಿಸುವ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿತ್ತು.

ಗರಿಷ್ಠ ಶೇ 28ರ ತೆರಿಗೆ ದರದ ವ್ಯಾಪ್ತಿಯಲ್ಲಿದ್ದ 178 ಸರಕುಗಳನ್ನು ಶೇ 18ರ ವ್ಯಾಪ್ತಿಗೆ ತರಲಾಗಿತ್ತು. ಇದಲ್ಲದೆ ಇತರ ತೆರಿಗೆ ಹಂತಗಳಲ್ಲಿನ 33 ಸರಕುಗಳ ಮೇಲಿನ ವಿವಿಧ ತೆರಿಗೆ ಹಂತದ ಹೊರೆಯನ್ನೂ ಕಡಿಮೆ ಮಾಡಲಾಗಿತ್ತು. ಹವಾನಿಯಂತ್ರಿತ (ಏ.ಸಿ) ಮತ್ತು ಹವಾನಿಯಂತ್ರಣ ಸೌಲಭ್ಯ ಇಲ್ಲದ (ನಾನ್‌ ಏ.ಸಿ) ರೆಸ್ಟೊರೆಂಟ್ಸ್‌ಗಳ ಮೇಲೆ ಏಕರೂಪದ ಶೇ 5ರಷ್ಟು ಜಿಎಸ್‌ಟಿ ವಿಧಿಸಲಾಗಿತ್ತು.

ಜಿಎಸ್‌ಟಿ ಮಂಡಳಿ ಪಟ್ಟಿ ಮಾಡಿರುವ ಸರಕುಗಳ ಬೆಲೆ ಕಡಿತದ ಹೊಸ ದರಗಳನ್ನು ಸರಕುಗಳ ತಯಾರಿಕಾ ಸಂಸ್ಥೆಗಳು ಇನ್ನೂ ಮುದ್ರಿಸಬೇಕಾಗಿದ್ದರೂ, ಹೊಸ ದರಗಳು ತಕ್ಷಣದಿಂದ ಜಾರಿಗೆ ಬಂದಿವೆ.

ಚಾಕಲೇಟ್‌, ಕಾಫಿ, ಚೂಯಿಂಗ್‌ ಗಮ್‌, ಸ್ನಾನದ ಮನೆಯ ಪರಿಕರ, ಕೃತಕ ಉಣ್ಣೆ, ವಿಗ್‌, ಆಫ್ಟರ್‌ ಶೇವ್‌, ಡಿಯೊಡರಂಟ್‌, ಮರದ ಪೀಠೋಪಕರಣ, ಕೈಗಡಿಯಾರ, ಅಡುಗೆ ಮನೆ ಪರಿಕರ, ಇಡ್ಲಿ– ದೋಸೆ ಹಿಟ್ಟು, ಮೀನಿನ ಬಲೆ, ಕುಕ್ಕರ್‌, ಸ್ಟೌ, ಬ್ಯಾಟರಿ, ಸೂಟ್‌ಕೇಸ್‌, ವೈರ್‌, ಕೇಬಲ್‌, ಪ್ಲೈವುಡ್‌, ಸಣಬು ಮತ್ತು ಹತ್ತಿ ಕೈಚೀಲ, ಸುಗಂಧದ್ರವ್ಯ, ಮಿಠಾಯಿ, ಕಾಲೊರಸು, ವೆಟ್‌ಗ್ರೈಂಡರ್‌ ಬೆಲೆಗಳು ಕಡಿಮೆಯಾಗಿವೆ.

ಜನರಿಗೆ ಅನುಕೂಲ

ಹೋಟೆಲ್‌ ಮತ್ತು ರೆಸ್ಟೊರೆಂಟ್‌ಗಳಿಗೆ ಜಿಎಸ್‌ಟಿ ದರವನ್ನು ಶೇ 5ಕ್ಕೆ ತಗ್ಗಿಸಿರುವುದನ್ನು ಬೆಂಗಳೂರು ಹೋಟೆಲ್‌ ಮಾಲೀಕರ ಸಂಘಟನೆ ಸ್ವಾಗತಿಸಿದೆ.

‘ಇದರಿಂದ ಜನ ಸಾಮಾನ್ಯರಿಗೆ ಅನುಕೂಲವಾಗಲಿದೆ. ನಮ್ಮ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಹೆಚ್ಚು ತೆರಿಗೆಯಿಂದಾಗಿ ಉದ್ಯಮಕ್ಕೆ ಹೊಡೆತ ಬಿದ್ದಿತ್ತು’ ಎಂದು ಬೆಂಗಳೂರು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಶೇಖರ್‌ ಹೆಬ್ಬಾರ್‌ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.