7

‘ಪ್ರಜಾ ಪರಿವರ್ತನ ಪಕ್ಷ ನಿರ್ಣಾಯಕವಾಗಲಿ’

Published:
Updated:
‘ಪ್ರಜಾ ಪರಿವರ್ತನ ಪಕ್ಷ ನಿರ್ಣಾಯಕವಾಗಲಿ’

ಜಮಖಂಡಿ: ‘ದಲಿತರು, ಮುಸ್ಲಿಮರು, ಹಿಂದುಳಿದವರು ಭಿಕ್ಷೆ ಬೇಡುವುದನ್ನು ಬಿಟ್ಟು ಕುರ್ಚಿ ಕಸಿದುಕೊಳ್ಳುವ ಕೆಲಸ ಮಾಡಬೇಕು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಟ 20–25 ಮಂದಿ ಶಾಸಕರನ್ನು ಪ್ರಜಾ ಪರಿವರ್ತನ ಪಕ್ಷದಿಂದ ಆಯ್ಕೆಯಾಗಬೇಕು. ಆಗ ಮಾತ್ರ ಪಕ್ಷ ನಿರ್ಣಾಯಕವಾಗಿ ಹೊರಹೊಮ್ಮಿ ಅಧಿಕಾರ ಹಿಡಿಯಲು ಸಾಧ್ಯವಾಗುತ್ತದೆ’ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಬಿ. ಗೋಪಾಲ್‌ ಹೇಳಿದರು.

ನಗರದ ಪ್ರಮುಖ ಬೀದಿಗಳಲ್ಲಿ ನಡೆದ ಮಹಾ ಪರಿವರ್ತನ ರ್‍ಆಯಾಲಿ ಬಳಿಕ ಜಿ.ಜಿ. ಹೈಸ್ಕೂಲ್‌ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಜಾ ಪರಿವರ್ತನ ಪಕ್ಷದ ರಾಷ್ಟ್ರೀಯ ಖಜಾಂಚಿ ಡಾ.ಸಯ್ಯದ್‌ ರೋಷನ್‌ ಮುಲ್ಲಾ ಮಾತನಾಡಿ, ‘ಜಾತಿ ಮುಕ್ತ ದೇಶ, ಹಣ ಮುಕ್ತ ಮತದಾನ, ಭ್ರಷ್ಟಾಚಾರ ಮುಕ್ತ ಭಾರತ, ಸುಳ್ಳು ಭರವಸೆಗಳ ಮುಕ್ತ, ಸಾಲ ಮುಕ್ತ, ಅಂಧಕಾರ ಮುಕ್ತ ದೇಶ ಹಾಗೂ ಸಮಾಜ ಘಾತುಕ ವ್ಯಕ್ತಿಗಳ ಮುಕ್ತ ವಿಧಾನಸಭೆ ಮತ್ತು ಲೋಕಸಭೆ ಸ್ಥಾಪನೆಗೆ ಪ್ರಜಾ ಪರಿವರ್ತನ ಪಕ್ಷವನ್ನು ಬೆಂಬಲಿಸಬೇಕು’ ಎಂದರು.

ಛತ್ತೀಸ್‌ಗಢ ಮಾಜಿ ಶಾಸಕ ದಾವೂರಾಮ ರತ್ನಾಕರ ಮಾತನಾಡಿ, ‘ಮತ ಇಲ್ಲದವರು ನೋಟುಗಳ ಮೂಲಕ ಓಟುಗಳನ್ನು ಖರೀದಿಸಿ ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗುತ್ತಿದ್ದಾರೆ. ಆದರೆ, ನಮ್ಮ ಹತ್ತಿರ ನೋಟುಗಳು ಇಲ್ಲ. ಮತದಾನದ ನಂತರ ನೋಟುಗಳ ಎಣಿಕೆ ನಡೆಯುವುದಿಲ್ಲ. ಬದಲಾಗಿ ಮತಗಳ ಎಣಿಕೆ ನಡೆಯುತ್ತದೆ. ಕಾರಣ ಬಹುದೊಡ್ಡ ಅಸ್ತ್ರ ಹೊಂದಿರುವ ಬಹುಸಂಖ್ಯಾತ ದಲಿತರು, ಮುಸ್ಲಿಮರು, ಹಿಂದುಳಿದ ವರ್ಗದವರು ತಮ್ಮ ಮತಗಳನ್ನು ಮಾರಾಟ ಮಾಡಿಕೊಳ್ಳಬಾರದು’ ಎಂದು ಹೇಳಿದರು.

‘ದೇಶಕ್ಕೆ ಸ್ವಾತಂತ್ರ್ಯ ದೊರೆತು 70 ವರ್ಷಗಳ ಬಳಿಕವೂ ಪ್ರಜೆಗಳು ಇನ್ನೂ ಹಸಿವಿನಿಂದ ಬಳಲುತ್ತಿದ್ದಾರೆ. ಆದ್ದರಿಂದ ಸ್ವಾತಂತ್ರ್ಯ ದೊರೆತಿರುವುದು ಸುಳ್ಳು ಎನಿಸುತ್ತಿದೆ. ಅಸ್ಪೃಶ್ಯತೆ, ಜಾತಿವಾದ ನಿರ್ಮೂಲನೆ ಮಾಡಿ ಸಾಂಸ್ಕೃತಿಕ ಪರಿವರ್ತನೆ ತರಬೇಕಾದರೆ ಮತಗಳ ಲೂಟಿ ತಪ್ಪಿಸಬೇಕು. ಸ್ವಾಭಿಮಾನದ ಬದುಕಿಗಾಗಿ ಮತಗಳ ಮಾರಾಟ ನಿಲ್ಲಲಿ’ ಎಂದರು.

ಬೆಂಗಳೂರಿನ ಪ್ರೊ.ಚಂದ್ರಕಾಂತ ಮಾತನಾಡಿ, ‘ಸಂವಿಧಾನದ ಕತ್ತನ್ನು ಕೊಯ್ಯಲು ಮಚ್ಚನ್ನು ಸಿದ್ಧಪಡಿಸುತ್ತಿರುವ ಬಿಜೆಪಿ ತತ್ವಗಳನ್ನು ಸುಟ್ಟು ಬೂದಿಯನ್ನು ಗಂಗಾನದಿಯಲ್ಲಿ ಹಾಕಬೇಕು. ಮನುಸ್ಮೃತಿಯನ್ನು ಸುಟ್ಟು ಹಾಕಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಂಜಾಬಿನ ಜಸ್ವಿಂದರ್‌ ಕೌರ್‌ ಮಾತನಾಡಿ, ‘ಅಂದು ಸಂವಿಧಾನ ಇರಲಿಲ್ಲ. ಆದರೆ, ಇಂದು ಸಂವಿಧಾನ ಇದೆ. ಅದರ ರಕ್ಷಣೆ ಆಗಬೇಕು. ಡಾ.ಅಂಬೇಡ್ಕರ್‌ ಅವರ ಕನಸನ್ನು ನನಸಾಗಿಸಲು ಈ ದೇಶದ ಅಸಲಿ ನಿವಾಸಿಗಳಾದ ದಲಿತರು, ಮುಸ್ಲಿಮರು, ಹಿಂದುಳಿದ ವರ್ಗದವರು ಮನಸ್ಸು ಮಾಡಬೇಕು’ ಎಂದರು. ಹರಿಯಾಣದ ಕಾಂತಾ ಲಾಡಿಯಾ ಮಾತನಾಡಿದರು. ಆಸ್ಟ್ರೇಲಿಯಾದ ಮೆಲ್ಬೋರ್ನ್‌ ಖಾಲಿದ್‌ ಸೋಹೆಲ್‌, ತುಮಕೂರಿನ ಆಕಿಯಾಜ್‌ ಅಹ್ಮದ್‌ ವೇದಿಕೆಯಲ್ಲಿದ್ದರು.

ಪ್ರಜಾ ಪರಿವರ್ತನ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಗೋಪಿನಾಥ ಮೀಸಿ ಸ್ವಾಗತಿಸಿದರು. ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಪರಶುರಾಮ ಮಹಾರಾಜನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಶ್ರೀನಿವಾಸ ಕಟ್ಟಿಮನಿ, ಶಿವಾನಂದ ಬಬಲೇಶ್ವರ ನಿರೂಪಿಸಿದರು. ಶಂಕರ ಕುಂಚನೂರ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry