ಬುಧವಾರ, ಮಾರ್ಚ್ 3, 2021
19 °C

ಹೂಗಳ ಕದನ

ವಿದ್ಯಾ ವಿ.ಹಾಲಭಾವಿ Updated:

ಅಕ್ಷರ ಗಾತ್ರ : | |

ಹೂಗಳ ಕದನ

ಪ್ರತಿ ವಸಂತ ಋತುವಿನಲ್ಲಿ ಮೇ ತಿಂಗಳು ಬರುತ್ತಿದ್ದಂತೆಯೇ ದಕ್ಷಿಣ ಸ್ಪೇನ್‌ನ ಕೊರ್ಡೊಬಾ ನಗರ ವಿಶೇಷ ರೀತಿಯಿಂದ ಸಜ್ಜಾಗುತ್ತದೆ. ಎಲ್ಲಿ ನೋಡಿದರಲ್ಲಿ ಹೂಗಳದ್ದೇ ಘಮಲು. ಋತುಗಳ ರಾಜನ ಆಗಮನ ಸ್ವಾಗತಿಸಲು ಪಟ್ಟಣದಲ್ಲೆಲ್ಲಾ ಸಂಭ್ರಮದ ಚಟುವಟಿಕೆಗಳು ಗರಿಗೆದರುತ್ತವೆ. ಊರಿನವರ ಸಡಗರದ ಉತ್ಸವಕ್ಕೆ ಮುನ್ನುಡಿಯಾಗಿ ‘ಹೂಗಳ ಕದನ’ (ಬ್ಯಾಟಲ್ ಆಫ್ ಫ್ಲವರ್ಸ್) ಎಂದು ಕರೆಯುವ ಪುಷ್ಪ ಪರೇಡ್ ಶುರುವಾಗುತ್ತದೆ.

ತದನಂತರ ಜನರೆಲ್ಲರೂ ಬಹು ಕಾತರದಿಂದ ಎದುರು ನೋಡುವ ತೆರೆದ ಒಳಾಂಗಣ ಸ್ಪರ್ಧೆಯಾದ ‘ಲಾಸ್ ಪೇಟಿಯೋಸ್ ಡಿ ಕೊರ್ಡೊಬಾ’ ಅಥವಾ ‘ಫಿಯೆಸ್ಟಾ ಆಫ್ ಪ್ಯಾಟಿಯೋಸ್’ ನಡೆಯುತ್ತದೆ. ನಂತರದ ಎರಡು ವಾರಗಳಲ್ಲಿ ಕೊರ್ಡೋಬಾದ ಜನರು ಅತ್ಯಂತ ಸುಂದರ ಒಳಾಂಗಣಕ್ಕಾಗಿ ಮುಂದೆ ನಡೆಯಲಿರುವ ಪೈಪೋಟಿಯ ಸ್ಪರ್ಧೆಗೆ ತಮ್ಮ ಮನೆಯ ಬಾಲ್ಕನಿಗಳು ಮತ್ತು ಅಲಂಕೃತ ಕಬ್ಬಿಣದ ಗ್ರಿಲ್‍ಗಳನ್ನು ಅಂದಗೊಳಿಸುತ್ತಾರೆ. ಇವುಗಳನ್ನು ಮುಖ್ಯವಾಗಿ ಮಲ್ಲಿಗೆ, ಜೆರೇನಿಯಮ್, ಕಾರ್ನೇಷನ್ ಮುಂತಾದ ಬಣ್ಣ ಬಣ್ಣದ ಹೂ ಗಿಡಗಳಿಂದ ಸಿಂಗರಿಸುತ್ತಾರೆ. ಪುಷ್ಪದ ನೆಲ ಹಾಸುಗೆ, ಕೈಯಿಂದಲೇ ಮಾಡಿರುವ ಇಸ್ಲಾಮಿಕ್ ಮೊಸಾಯಿಕ್, ಗಮನ ಸೆಳೆಯುವಂಥ ನೀರಿನ ವೈಶಿಷ್ಟಗಳು ಅಂಗಳವನ್ನು ಅಲಂಕರಿಸುತ್ತವೆ.

ಸಾಮಾನ್ಯವಾಗಿ ಈ ತೆರೆದ ಒಳಾಂಗಣಗಳು ಖಾಸಗಿ ಮಾಲೀಕತ್ವದಲ್ಲಿರುವುದರಿಂದ ಸಾರ್ವಜನಿಕ ವೀಕ್ಷಣೆಗೆ ಅಲಭ್ಯವಾಗಿರುತ್ತವೆ. ಆದರೆ, ಉತ್ಸವದ ಸಮಯದಲ್ಲಿ ಮಾತ್ರ ಬಹಳ ಸೊಗಸಾಗಿ ಅಲಂಕೃತಗೊಂಡಿರುವ ಒಳಂಗಾಣವನ್ನು ಎಲ್ಲರೂ ನೋಡಬಹುದು. ಉತ್ತಮವಾಗಿ ಪಾಲನೆ ಮಾಡಿರುವ ಹಾಗೂ ಅತ್ಯಂತ ಸುಂದರತೆಯಿಂದ ಕಂಗೊಳಿಸುವ ಅಂಗಳಕ್ಕೆ ಮತವನ್ನು ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ಗೆದ್ದವರು ನಗದು ರೂಪದಲ್ಲಿ ಬಹುಮಾನ ಪಡೆಯುತ್ತಾರೆ. ಜೊತೆಗೆ ಇಡೀ ನಗರದಲ್ಲೇ ಅತ್ಯಂತ ಚಂದನೆಯ ಒಳಾಂಗಣವೆಂಬ ಪ್ರತಿಷ್ಠೆಯನ್ನು ತಮ್ಮದಾಗಿಸಿಕೊಳ್ಳುತ್ತಾರೆ.

(ದಕ್ಷಿಣ ಸ್ಪೇನ್‌ನ ಕೊರ್ಡೊಬಾ ನಗರದ ಮನೆಯೊಂದರ ಮುಂದೆ ಅರಳಿರುವ ಹೂಗಳು)

ಕೊರ್ಡೋಬಾದ ವಾತಾವರಣ ಬಿಸಿಲು ಮತ್ತು ಒಣ ಹವೆಯಿಂದ ಕೂಡಿದೆ. ಇದರಿಂದ ರೋಮನ್ನರ ಕಾಲಕ್ಕಿಂತಲೂ ಹಿಂದೆಯೇ ಮನೆಗಳನ್ನು ತೆರೆದ ಒಳಾಂಗಣವಿರುವಂತೆ ಕಟ್ಟಿರುವುದನ್ನು ಇತಿಹಾಸದುದ್ದಕ್ಕೂ ನೋಡಬಹುದು. ಆದರೆ, ಒಳಾಂಗಣ ಅಲಂಕರಿಸಲು ಪ್ರಾರಂಭಿಸಿದ್ದು ಮತ್ತು ಮನೆಯನ್ನು ತಂಪಾಗಿಡಲು ಗಿಡಗಳನ್ನು ಹಾಗೂ ನೀರಿನ ವೈಶಿಷ್ಟ್ಯ ಪರಿಚಯಿಸಿದ್ದು ಅರಬ್ಬೀಯರು. ಬಿಸಿಲ ಬೇಗೆಯಿಂದ ಪಾರಾಗಲು ಕುಟುಂಬದ ಮಂದಿಯಲ್ಲಾ ಮನೆಯ ವಿಶೇಷವಾದ ಈ ಜಾಗದಲ್ಲಿ ಒಂದುಗೂಡುತ್ತಿದ್ದರು. 10ನೇ ಶತಮಾನ ಕಾಲಮಾನದ ಕೆಲವು ತೆರೆದ ಒಳಾಂಗಣವನ್ನು ಇಂದಿಗೂ ಕೊರ್ಡೊಬಾದಲ್ಲಿ ಕಾಣಬಹುದು.

ಒಳಾಂಗಣದ ಸೌಂದರೀಕರಣವನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಪಡಿಸಿದ್ದು ಕ್ರಿಶ್ಚಿಯನ್ನರು. ಇವರು 13ನೇ ಶತಮಾನದಲ್ಲಿ ಕೊರ್ಡೊಬಾ ನಗರವನ್ನು ವಶಪಡಿಸಿಕೊಂಡಿದ್ದರು. ಜತೆಗೆ, ಉತ್ತಮವಾದ ಮನೆಗಳನ್ನು ತಮ್ಮದಾಗಿಸಿಕೊಂಡಿದ್ದರು. ಪುನರುಜ್ಜೀವನದ ಅಂತ್ಯಕಾಲದಲ್ಲಿ, ಎಲ್ಲಿ ಸಂದರ್ಶಕರು ಭೇಟಿಯಾಗುವರೋ ಅಲ್ಲಿ ಹಾಗೂ ಕುದುರೆ ಲಾಯಗಳಿರುವ ಕಡೆಗಳಲ್ಲೆಲ್ಲಾ ‘ತೆರೆದ ಒಳಾಂಗಣಗಳ ಅಥವಾ ಅಂಗಳಗಳ ಸ್ವೀಕಾರ ಮಾಡುವಿಕೆ’ಯು ಕಾಣತೊಡಗಿತು. ಅಂಗಳದಿಂದಲೇ ಪ್ರವೇಶ ದ್ವಾರಗಳಿರುವ ಮನೆಗಳು ಸಾಮಾನ್ಯವಾಗಿ ಎರಡು ಅಂತಸ್ತು ಹೊಂದಿರುತ್ತಿತ್ತು. ಕೆಳ ಅಂತಸ್ತು ಬೇಸಿಗೆಯಲ್ಲಿ ವಾಸ ಮಾಡಲು ಹಾಗೂ ಮೇಲಂತಸ್ತು ಚಳಿಗಾಲದಲ್ಲಿ ವಾಸಿಸಲು. 18 ಮತ್ತು 19ನೇ ಶತಮಾನದಲ್ಲಿ ವಿದೇಶಿ ಪ್ರಭಾವಗಳಿಂದಾಗಿ ಮಾರ್ಬಲ್, ನಡುವೆ ಕಾರಂಜಿ, ಮೇಲಂತಸ್ತಿನಲ್ಲಿ ಮುಚ್ಚಿದ ಗ್ಯಾಲರಿ ಮುಂತಾದವು ಅಂಗಳದಲ್ಲಿ ಕಾಣತೊಡಗಿದವು.

ಒಳಾಂಗಣ ಅಲಂಕರಣ ಉತ್ಸವವನ್ನು 1918ರಲ್ಲಿ ಕೊರ್ಡೋಬಾ ಸಿಟಿ ಹಾಲ್‍ನಲ್ಲಿ ಆಯೋಜಿಸಲಾಯಿತು. ಮೊದಲ ಸ್ಪರ್ಧೆಯು 1921ರಲ್ಲಿ ನಡೆಯಿತು. ಅತ್ಯಂತ ಸುಂದರ ಹಾಗೂ ಉತ್ತಮ ನಿರ್ವಹಣೆಯ ಒಳಾಂಗಣಕ್ಕೆ ಹೆಚ್ಚು ಮೊತ್ತದ ಬಹುಮಾನ ನೀಡುವಿಕೆಯಿಂದಾಗಿ ನಂತರದ ದಿನಗಳಲ್ಲಿ ಇದು ಸಾಕಷ್ಟು ಜನಪ್ರಿಯತೆ ಪಡೆಯಿತು. ಇಂದು ಈ ಸ್ಪರ್ಧೆಯಲ್ಲಿ ಆಧುನಿಕ, ಸಾಂಪ್ರದಾಯಿಕ, ಧಾರ್ಮಿಕ, ಇಸ್ಲಾಮಿಕ್, ಏಕ ಕುಟುಂಬ ವಾಸ್ತವ್ಯ, ಸಾಂಘಿಕ ಪ್ರಯತ್ನ, ಕಲಾತ್ಮಕ ನೀರಿನ ಬಳಕೆ, ಪುಷ್ಪ ವೈವಿಧ್ಯ, ದೀಪಾಲಂಕಾರ, ವಾಸ್ತುಶಿಲ್ಪ ಸಂರಕ್ಷಣೆ ಮುಂತಾದ ವಿಭಾಗಗಳಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.