7

ಸಮಕಾಲೀನ ಸಂಕಟಗಳಿಗೆ ಮಿಡಿವ ಕೃಷ್ಣ ರಾಗ

Published:
Updated:
ಸಮಕಾಲೀನ ಸಂಕಟಗಳಿಗೆ ಮಿಡಿವ ಕೃಷ್ಣ ರಾಗ

‘ಕಲಾವಿದರು, ಬರಹಗಾರರು, ನಟ–ನಟಿಯರು, ಇನ್ನಿತರರು ರಾಜಕೀಯದ ಬಗ್ಗೆ ಅಥವಾ ಸಮಕಾಲೀನ ಸಂಕಟಗಳ ಬಗ್ಗೆ ಏಕೆ ಮಾತನಾಡಬೇಕು. ತೆಪ್ಪಗಿರಲಿ ಅವರು ಅವರಷ್ಟಕ್ಕೆ ಏನೋ ಮಾಡಿಕೊಳ್ಳುತ್ತ. ಮತ್ತೆ ಅವರು ಪ್ರಶ್ನೆ ಮಾಡುವುದು ಏಕೆ. ಧ್ವನಿಯೆತ್ತುವುದು ಏಕೆ. ಪ್ರಶ್ನೆ ಹತ್ತಿಕ್ಕುವುದನ್ನು ನಾವು ಗುತ್ತಿಗೆಗೆ ಪಡೆದಿದ್ದೇವಲ್ಲ’ ಎಂಬ ಮನೋಭಾವ ಮುನ್ನೆಲೆಗೆ ಬರುತ್ತಿರುವ ದಿನಗಳು ಇವು. ಅದರಲ್ಲೂ ಶಾಸ್ತ್ರೀಯ ಎಂದು ಪರಿಭಾವಿಸುವ ಕಲೆಗಳಲ್ಲಿ ತೊಡಗಿಸಿಕೊಂಡವರು ಆ ಚಿನ್ನದ ಚೌಕಟ್ಟಿನಲ್ಲಿಯೇ ಆರಾಮವಾಗಿರಲು ಬಯಸುವ ಹಾಗೂ ಅವರಲ್ಲೇ ಇರಲಿ ಎಂದು ಒಂದು ವರ್ಗದ ಜನ ಕೂಡ ಸೂಚ್ಯವಾಗಿ, ಆದರೆ ಬಲವಾಗಿ ಒತ್ತಾಯಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಟಿ.ಎಂ. ಕೃಷ್ಣ ಅವರು ಒಂದು ಜನಪರ ಚಳವಳಿಯ ಭಾಗವಾಗಿ ಸಂಗೀತ ಕಛೇರಿ ಕೊಡುವುದು ತುಂಬ ಮಹತ್ವ ಎನಿಸುತ್ತದೆ.

‘ಒಬ್ಬ ರೈತನ, ನೇಕಾರನ, ಕಮ್ಮಾರನ, ಕರಕುಶಲಿಗರ ಕೆಲಸವನ್ನು ಸಾಮುದಾಯಿಕ ಅರಿವನ್ನು ಕಟ್ಟುತ್ತಿದ್ದಾರೆ ಅನ್ನೋ ಅರ್ಥದಲ್ಲಿ ನಾವು ಎಂದೂ ನೋಡೋದಿಲ್ಲ. ಅದನ್ನು ದೈಹಿಕ ಶ್ರಮ ಅಂತ ಕರೀತೇವೆ. ಆದರೆ, ನಾನು ಹಾಡುವುದು ಇದೆಯಲ್ಲ ಈ ಬಗೆಯ ಕಲೆಯನ್ನು ಸೃಜನಶೀಲ ಕಲೆ, ಸ್ವಲ್ಪ ಶ್ರೇಷ್ಠ ಎಂದು ಪರಿಗಣಿಸಿದ್ದೇವೆ. ಇಷ್ಟು ಮಹತ್ತರವಾದ ಅವರ ಕೆಲಸ ಹೇಗೆ ಲೇಬರ್ ಆಗುತ್ತದೆ. ಮತ್ತೆ ನನ್ನಂಥವರ ಶಾಸ್ತ್ರೀಯ ಕಲೆ ಹೇಗೆ ಜ್ಞಾನವಾಗುತ್ತದೆ’ ಎಂದು ಪ್ರಶ್ನಿಸುವ ಕೃಷ್ಣ ‘ಮಡಿಕೆ, ಕುಡಿಕೆ, ಬುಟ್ಟಿ, ಚಾಪೆಗಳು ಸೇರಿದಂತೆ ಕೈಕಸುಬಿನ ವಸ್ತುಗಳಿಗೆ ಸಾವಾಗಿ ಪರಿಣಮಿಸಿರುವ ಜಿ.ಎಸ್‍.ಟಿ. ರದ್ದು ಮಾಡಬೇಕೆಂಬ ಕರ ನಿರಾಕರಣೆ ಹೋರಾಟ ಎಲ್ಲಿಯೋ ದೂರದ್ದಲ್ಲ. ನಮ್ಮೆಲ್ಲರ ಬದುಕಿನ ಭಾಗವಾಗಿರೋ, ಎಲ್ಲರಿಗೂ ಮುಖ್ಯವಾಗಿರೋ ಒಂದು ಚಳವಳಿಯಲ್ಲಿ ನನ್ನ ಧ್ವನಿ ಸೇರಿಸಲು ಬಂದಿದ್ದೇನೆ” ಎಂದು ತಮ್ಮ ಕಾಳಜಿಯ ಹಿನ್ನೆಲೆಯನ್ನು ತೆರೆದಿಡುತ್ತಾರೆ.

ಸಂಗೀತ ಹೇಗೆ ಕರಕುಶಲದಲ್ಲಿ ಸೇರಿಕೊಳ್ಳುತ್ತೆ ಎಂಬ ಕುತೂಹಲಕ್ಕೆ ಕೃಷ್ಣ ಸರಳವಾಗಿ ವಿವರಿಸುತ್ತಾರೆ. ‘ಸಂಗೀತ ಒಂದರ್ಥದಲ್ಲಿ ಕೈಕಸುಬಿನದು. ನೀವು ಖಂಜೀರ ನೋಡ್ತಿದ್ದೀರಿ. ಮೃದಂಗ ನೋಡ್ತಿದ್ದೀರಿ. ಕೈಯಿಂದ ಮಾಡಿದ ವಾದ್ಯಗಳು, ಕೈಯಿಂದ ನುಡಿಸುವ ವಾದ್ಯಗಳು. ಇದು ಮೇಲ್ಪದರದ ಉತ್ತರ ಎನ್ನಿಸಬಹುದು. ಆದರೆ, ಕೈಕಸುಬು ಎಂದರೆ ಅದನ್ನು ತಯಾರಿಸಿದ ವ್ಯಕ್ತಿಯ ಚಹರೆ ಅದರಲ್ಲಿರುತ್ತೆ. ಅವರ ಸ್ಪರ್ಶ ಅದರಲ್ಲಿರುತ್ತೆ. ಅದು ಅಷ್ಟರಮಟ್ಟಿಗೆ ಅದು ವೈಯಕ್ತಿಕ ಮತ್ತು ಸೃಜನಶೀಲ ಕೂಡ. ಕೈಕಸುಬು ಎಂದರೆ ಸ್ಕೇಲಿಂಗ್ ಅಥವಾ ಬೃಹತ್ ಪ್ರಮಾಣದಲ್ಲಿ ಉತ್ಪಾದಿಸುವುದು ಅಲ್ಲ. ಕೈಕಸುಬು ವಸ್ತುಗಳಲ್ಲಿ, ಅದನ್ನು ಮಾಡುವ ವ್ಯಕ್ತಿಯ ಆಳದ ಚೈತನ್ಯ ಇರುತ್ತೆ. ಆ ಅರ್ಥದಲ್ಲಿ ನೋಡಿದಾಗ ಸಂಗೀತವೂ ಕರಕುಶಲ ಕಲೆ’.

***

‘ಪೊರಂಬೋಕ್ಕು ಉನಕ್ಕು ಇಲೈ, ಪೊರಂಬೋಕ್ಕು ಎನಕ್ಕ ಇಲೈ, ಪೊರಂಬೋಕ್ಕು ಊರಿಕ್ಕು, ಪೊರಂಬೋಕ್ಕು ಭೂಮಿಕ್ಕು’ ಕೃಷ್ಣ ಈಗ ದೂರದ ಚೆನ್ನೈನ ಎನ್ನೋರ್ ಖಾರಿಯಲ್ಲಿ ಕೂತು ಹಾಡುತ್ತಿಲ್ಲ. ಇಲ್ಲಿ ನಮ್ಮೆದುರು ಕಾಂಕ್ರಿಟ್‌ ಕಾಡಾಗಿರುವ ಬೆಂಗಳೂರಿನ ರಾಗಿಕಣದ ಬಯಲು ವೇದಿಕೆಯಲ್ಲಿ ಹಾಡುತ್ತಿದ್ದಾರೆ.

ಹೌದಲ್ಲ. ಗೋಮಾಳ, ಕೆರೆ, ನದಿ ಇತ್ಯಾದಿ ‘ಪೊರಂಬೋಕ್ಕುಗಳು ನನ್ನದಲ್ಲ. ನಿನ್ನದಲ್ಲ, ಇಡೀ ಊರಿಗೆ ಸೇರಿದ್ದು, ಈ ಭೂಮಿಗೆ ಸೇರಿದ್ದು. ಆದರೆ, ಅಭಿವೃದ್ಧಿಯ ಹೆಸರಿನಲ್ಲಿ ಯಾರು ಯಾರಿಗೆ ಇವನ್ನೆಲ್ಲ ಮಾರಿಬಿಟ್ಟರು?

ಅಂದಹಾಗೆ ಈ ಪದ ಕನ್ನಡದಲ್ಲೂ ಇದೆ. ಪರಂಬೋಕು ಎಂದು. ಜಿ. ವೆಂಕಟಸುಬ್ಬಯ್ಯ ಅವರ ಇಂಗ್ಲಿಷ್‌- ಕನ್ನಡ ಶಬ್ದಕೋಶದಲ್ಲಿ ‘common’ ಪದಕ್ಕೆ ಕೊಟ್ಟಿರುವ ಅರ್ಥ ನೋಡಿ. ಕಾಮನ್ ಎಂದರೆ ‘ಊರಿನ ಗೋಮಾಳ, ಸಾರ್ವಜನಿಕ ಭೂಮಿ, ಪರಂಬೋಕು’ ಎಂದು ಮೂರು ಸಮಾನಾರ್ಥಕ ಪದಗಳಿವೆ. ಕೃಷ್ಣರು ಹಾಡುತ್ತಿರುವ ಪೊರಂಬೋಕ್ಕು ಮತ್ತು ಕನ್ನಡದ ಪರಂಬೋಕು ಎರಡೂ ಒಂದೇ.

‘ಎನ್ನೋರುಲ ಸೆಂಜು ಮುಡಿಚ ಉನ್ನೋರಲ ಸೆಯ್ಯವರುವ’

ಇದೀಗ ಅರೆನಿಮೀಲಿತರಾಗಿ ಹಾಡುತ್ತಿರುವ ಕೃಷ್ಣ ಅರೆಕ್ಷಣ ನಿಲ್ಲಿಸಿ, ಕಣ್ಣು ತೆರೆದು ಹೇಳುತ್ತಾರೆ, ‘ಮತ್ತೆ ಅವರು ಇಲ್ಲಿಗೂ ಬರುತ್ತಾರೆ. ಚೆನ್ನೈನ ಎನ್ನೋರು ಹಾಳುಗೆಡವಿ ಆಯ್ತು, ಇನ್ನು ಬೆಂಗಳೂರಿನ ಕೆರೆಗಳನ್ನು ನುಂಗಲು ಬರುತ್ತಾರೆ...’

ಅಯ್ಯೋ... ಬರುವುದೇನು? ಇಲ್ಲಿ ಈಗಾಗಲೇ ಬಂದಾಗಿದೆ! ಬೆಳ್ಳಂದೂರು ಕೆರೆಯಿಂದ ಅಂಜನಾಪುರ ಕೆರೆಯವರೆಗೆ ಎಷ್ಟೆಲ್ಲ ಕೆರೆಗಳು ಈಗ ಕೊಳೆ ತುಂಬಿ, ಕಸಕಟ್ಟಿ, ಕೊನೆಯುಸಿರು ಎಳೆಯುತ್ತಿವೆ. ಮತ್ತೆ ಇದು ಬರಿಯ ಬೆಂಗಳೂರಿನ ಮಾತಲ್ಲ. ನಾಡಿನ ಸಾವಿರಾರು ಕೆರೆಗಳು ಸತ್ತುಹೋಗಿವೆ. ನದಿಗಳು ವಿಷಮಯವಾಗಿವೆ.

‘ಕೇಳ್ವಿಕೇಟ್ಟ ಮೇಕ್ ಇನ್ ಇಂಡಿಯಾ ನಾ ವಡಸುಡವ’ ಕೃಷ್ಣ ಮೆಲ್ಲಗೆ ಕೆಮ್ಮಿ ದನಿ ಸರಿಮಾಡಿಕೊಳ್ಳುತ್ತ ವಿವರಿಸುತ್ತಾರೆ, ‘ವಡಸುಡವ... ಇದು ಚೆನೈನಲ್ಲಿದ್ದವರಿಗೆ ಮಾತ್ರ ಗೊತ್ತಿರುವ ನುಡಿಗಟ್ಟು. ಬಹುಶಃ ತಮಿಳು ಬರುವ ಇಲ್ಲಿಯವರಿಗೂ ಚೆನ್ನೈ ತಮಿಳಿನ ಈ ನುಡಿಗಟ್ಟು ಗೊತ್ತಿರಲಿಕ್ಕಿಲ್ಲ. ಅಧಿಕಾರಸ್ಥರನ್ನು ತಡೆದು ನಿಲ್ಲಿಸಿ, ಪ್ರಶ್ನಿಸಿದರೆ, ಅವರು ‘ಮೇಕ್ ಇನ್ ಇಂಡಿಯಾ’ ಅಂತ ಸುಳ್ಳು ಹೊಸೆಯುತ್ತಾರೆ’

ಈಗ ಕೃಷ್ಣ ಹಾಡಿನ ಕೊನೆಯ ಚರಣಕ್ಕೆ ಬಂದಿದ್ದಾರೆ. ‘ನಾ ನಾ ನಾ ಪೊರಂಬೋಕ್ಕು, ನೀ ನೀ ನೀ ಪೊರೋಂಬೋಕ್ಕಾ?’ ಎಂದು ಕೃಷ್ಣ ನಮ್ಮೊಳಗನ್ನು ಕಲಕುವಂತೆ ಕೇಳುತ್ತಿದ್ದಾರೆ. ನಮ್ಮ ಆತ್ಮಸಾಕ್ಷಿ ಜೀವಂತವಿದ್ದರೆ, ಸುತ್ತಣ ನೆಲ, ನೀರು, ಗಾಳಿಗೆ ನಾವಿನ್ನೂ ತೆರೆದುಕೊಂಡಿದ್ದರೆ, ತಡಮಾಡದೆ ಹೇಳಬೇಕಿದೆ ಗಟ್ಟಿಧ್ವನಿಯಲ್ಲಿ ಕೃಷ್ಣರೊಂದಿಗೆ ‘ನಾ ಪೊರಂಬೋಕ್ಕು’ ಅಥವಾ ನಮ್ಮದೇ ಕನ್ನಡದಲ್ಲಿ ‘ನಾನೂ ಪರಂಬೋಕು’ ಎಂದು.

(ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಡುಗಾರ ಟಿ.ಎಂ. ಕೃಷ್ಣ)

**

‘ಈ ಸಂಗೀತದ ರಚನೆಗಳು ಒಂದು ಬಗೆಯ ತಮಿಳಿನಲ್ಲಿ, ಒಂದು ಬಗೆಯ ತೆಲುಗಿನಲ್ಲಿ, ಒಂದು ಬಗೆಯ ಕನ್ನಡದಲ್ಲಿ ಇವೆ. ಅಂದರೆ ನಮ್ಮ ಜನರು ಆಡುವ ಮಾತಿನಲ್ಲಿ ಇಲ್ಲ. ಹೀಗಾಗಿ ಕೀರ್ತನೆಗಳ ವಿಷಯ ಮಾತ್ರವಲ್ಲ, ಕೀರ್ತನೆಗಳ ಭಾಷೆಯ ಟೆಕ್ಸ್‌ಚರ್ ಕೂಡ ಬದಲಾಗಬೇಕು. ಅಂದರೆ ಭಕ್ತಿ ವಿಷಯ ಮಾತ್ರವಲ್ಲ, ಬೇರೆ ವಿಷಯಗಳನ್ನೂ ಒಳಗೊಳ್ಳಬೇಕು. ಸಂಗೀತದ ಭಾಷೆ ದಿನನಿತ್ಯದ, ಜನರ ಆಡುಭಾಷೆಯಾಗಬೇಕು. ಹಾಗಾದಾಗ ಮಾತ್ರ ಜನರ ಹತ್ತಿರಕ್ಕೆ ಹೋಗಲು ಸಾಧ್ಯ. ತ್ಯಾಗರಾಜ, ಪೊರಂಬೋಕ್ಕ ಎಲ್ರೂ ಇಲ್ಲೇ ಒಟ್ಟಿಗೆ ಇರ್ತಾರೆ. ಅದು ಬಿಟ್ಟು ಇದು, ಇದು ಬಿಟ್ಟು ಅದು ಎಂದೇನಲ್ಲ...’. ಶಾಸ್ತ್ರೀಯ ಸಂಗೀತ, ಆಡುಭಾಷೆ, ಭಕ್ತಿ ಮಾತ್ರವಲ್ಲದೇ ನಮ್ಮ ನಿತ್ಯದ ಬದುಕು, ಕರಕುಶಲ ಕಲೆಗಳು ಕಟ್ಟಿಕೊಡುವ ಸೃಜನಶೀಲ ಚೈತನ್ಯ ಎಲ್ಲವೂ ಇಲ್ಲಿ ಒಟ್ಟಿಗೆ ಇರಲು ಸಾಧ್ಯವಿದೆ ಎಂದು ಕೃಷ್ಣ ಮೆಲುಧ್ವನಿಯಲ್ಲಿ ವಿವರಿಸುತ್ತಾರೆ.

ನಿಜ, ಕೃಷ್ಣ ಹಾಡಿರುವ ಪೊರಂಬೋಕ್ಕ, ಜನಸಾಮಾನ್ಯರು ಮಾತನಾಡುವ ‘ಚೆನ್ನೈ ತಮಿಳಿ’ನಲ್ಲಿದೆ. ಇದೊಂದು ರಾಗಮಾಲಿಕೆ. ಕರ್ನಾಟಕ ಸಂಗೀತದ ಆನಂದ ಭೈರವಿ, ಬೇಗಡೆ, ಹಮಿರ್ ಕಲ್ಯಾಣಿ, ದೇವಗಾಂಧಾರಿ, ಸಲಗ ಭೈರವಿ ಮತ್ತು ಸಿಂಧು ರಾಗಗಳು ಇದರಲ್ಲಿದೆ. ‘ಪ್ರತಿ ಸಂಗೀತಕ್ಕೂ ಅದರದ್ದೇ ಆದ ವಿಶಿಷ್ಟ ಚಲನೆಗಳು ಇರುತ್ತೆ. ಭಾಷೆ, ಅದರ ಅಕ್ಷರಗಳು ಎಲ್ಲವೂ ಅದರೊಂದಿಗೆ ಸಾಗಬೇಕು. ತಮಿಳಿನಲ್ಲಿ ಕೆಲವು ಬಗೆಯ ಚಲನೆಗಳು ಕೆಲವು ಅಕ್ಷರಗಳಿಗೆ ಸಾಧ್ಯವಾಗುತ್ತೆ.

ಆನಂದ ಭೈರವಿಯನ್ನು ಚೆನ್ನೈ ತಮಿಳಿನಲ್ಲಿ ಹಾಡಕ್ಕೆ ಆಗುತ್ತಾ ಅಂತ ನಂಗೆ ನಾನೇ ಪ್ರಶ್ನೆ ಮಾಡಿಕೊಂಡೆ. ಎಷ್ಟು ಚೆನ್ನಾಗಿ ಹೊಂದಿಕೆಯಾಯಿತು ಎಂದು ನನಗೆ ಅಚ್ಚರಿ ಎನಿಸಿತು. ಹೀಗೆ ಹೊಂದಿಕೆಯಾಗಲ್ಲ ಅಂತ ಯೋಚನೆ ಮಾಡೋದು ನಾವು, ಸಂಗೀತ ಅಥವಾ ಭಾಷೆ ಅಲ್ಲ, ಅವುಗಳು ಪರಸ್ಪರ ಏನೋ ಒಂದು ಕೊಡುಕೊಳೆಯಿಂದ ಸಮನ್ವಯದಲ್ಲಿರುತ್ತವೆ’

**

‘ನಾನು ತ್ಯಾಗರಾಜರ ಕೀರ್ತನೆಗಳ ಜೊತೆಗೇ ಬೆಳೆದವನು. ಮತ್ತೆ ಜೀವನದುದ್ದಕ್ಕೂ ಅದನ್ನು ಹಾಡುತ್ತಲೇ ಇರುತ್ತೇನೆ. ಅದರಿಂದ ಓಡಿಹೋಗುವುದಿಲ್ಲ. ನನ್ನೊಳಗೆ ತ್ಯಾಗರಾಜ, ಜೋಗಪ್ಪ, ಪೊರಂಬೋಕ್ಕ, ಪೆರುಮಾಳ್ ಮುರುಗನ್, ಎಲ್ಲರೂ ಒಟ್ಟಿಗೇ ಇದ್ದಾರೆ’ ಎನ್ನುವ ಕೃಷ್ಣ ಈಗ ನಮ್ಮನ್ನೂ ತಮ್ಮ ಕೀರ್ತನೆಯ ಪಯಣದಲ್ಲಿ ಜೊತೆಯಾಗಿಸಿಕೊಂಡಿದ್ದಾರೆ. ತ್ಯಾಗರಾಜರ ಕೀರ್ತನೆಯ ‘ದೂರದೇಶ ಪ್ರಕಾಶಂ, ರಸಿಕ ಶಿರೋಮಣಿ’ ಸಾಲನ್ನು ರಾಗಿ ಕಣದಲ್ಲಿ ಭಾವಪರವಶತೆಯಿಂದ ಹಾಡುತ್ತಿರುವ ಕೃಷ್ಣ ಅರೆಕ್ಷಣ ಕಣ್ಣು ತೆರೆದು, ‘ನೋಡಿ, ತ್ಯಾಗರಾಜರು ಅಂದು ಬೇರೆ ಸಂದರ್ಭದಲ್ಲಿ ದೂರದ ದೇಶಗಳಲ್ಲಿ ನಾವು ರಸಿಕರು ಎಂದು ಹೆಸರಾಗಿದ್ದೇವೆ ಎಂದು ಹಾಡಿದರು.

ಆದರೆ, ನೀವು ದೂರದ ಬೇರೆ ದೇಶಗಳಿಗೆ ಹೋಗಿ ನೋಡಿ, ಭಾರತ ಎಂದರೆ ಕ್ರಾಫ್ಟ್, ಕರಕುಶಲ ವಸ್ತುಗಳು, ಸಂಗೀತ, ನೃತ್ಯ, ಅಡುಗೆ– ಹೀಗೆ ಎಲ್ಲ ಬಗೆಯ ರಸಗಳನ್ನು ನೆನಪಿಸಿಕೊಳ್ಳುತ್ತಾರೆ. ತ್ಯಾಗರಾಜರು ಅಂದು ಹಾಡಿದ ಸಾಲುಗಳು ಇಂದಿನ ನಮ್ಮ ಕೈಕಸುಬಿನಲ್ಲಿ ತೊಡಗಿಸಿಕೊಂಡವರಿಗೆ ತುಂಬ ಚೆನ್ನಾಗಿ ಅನ್ವಯಿಸುತ್ತದೆ ಎಂದು ಮೆಲುವಾಗಿ ಹೇಳುತ್ತಾರೆ. ಮಾತು ನಿಲ್ಲಿಸುವ ಕೃಷ್ಣ ಮತ್ತೆ ನಮ್ಮನ್ನೂ ಕರೆದುಕೊಂಡು, ತ್ಯಾಗರಾಜರ ಕೀರ್ತನೆಯಲ್ಲಿ ಕಳೆದುಹೋಗಿದ್ದಾರೆ.

**

ಟಿಎಂಕೆ ತಂದೆ ಉದ್ಯಮಿ. ತಾಯಿ ಸಂಗೀತ ಪ್ರೇಮಿ ಮತ್ತು ಹಲವಾರು ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸಿದವರು. ‘ಸಂಗೀತ ಪರಂಪರೆಯ ಮನೆತನ’ದ ಹೊರೆ ಬೆನ್ನಿಗೆ ಇಲ್ಲದೇ ಇರೋದ್ರಿಂದ ಹೀಗೆ ತುಂಬ ಪ್ರಗತಿಪರವಾಗಿ ಆಲೋಚಿಸಲು, ಕ್ರಾಂತಿಕಾರಕ ನಡೆ ಇಡಲು, ಪರಂಪರೆಯ ಒಳಗಿದ್ದೆ ಎಲ್ಲವನ್ನೂ ಪ್ರಶ್ನಿಸುವ ಒಂದು ಮನೋಭಾವ ತೋರಲು ಸಾದ್ಯವಾಗಿರಬಹುದೇ? ಗೊತ್ತಿಲ್ಲ.

‘ಆದರೆ, ನಾನು ಓದಿದ್ದು ಜಿಡ್ಡು ಕೃಷ್ಣಮೂರ್ತಿ ಅವರ ಶಾಲೆಯಲ್ಲಿ, ನಾನು ಹೀಗೆ ರೂಪುಗೊಳ್ಳಲು ಸಾಧ್ಯವಾಗಿದ್ದರ ಬೇರು ಅಲ್ಲಿದೆ ಎನ್ನಿಸುತ್ತೆ’ ಎಂದು ಮೆಲ್ಲನೆ ನಕ್ಕು ನುಡಿಯುವ ಕೃಷ್ಣ ಅವರಿಗೆ ಈ ಎಲ್ಲ ಪ್ರಯೋಗದಲ್ಲಿ ಬೇರೆ ಸಮಕಾಲೀನ ಸಂಗೀತಗಾರರನ್ನೂ ಒಳಗೊಂಡು ಸಾಗಬೇಕೆಂಬ ತುಡಿತ ಬಹಳವಿದೆ. ತಮಿಳಿನ ಜೀವಪರ ಬರಹಗಾರ ಪೆರುಮಾಳ್ ಮುರುಗನ್ ಅವರ ಹತ್ತು ಕವನಗಳಲ್ಲಿ ಮೂರಕ್ಕೆ ತಾವೇ ಸಂಗೀತ ಸಂಯೋಜನೆ ಮಾಡಿದ್ದರೆ ಇನ್ನುಳಿದ ಏಳಕ್ಕೆ ಅವರ ಬಾಳ ಸಂಗಾತಿ, ಅಮೆರಿಕದಲ್ಲಿರುವ ಇನ್ನೋರ್ವರು, ಹೀಗೆ ಬೇರೆಯವರಿಂದ ಸಂಗೀತ ಸಂಯೋಜನೆ ಮಾಡಿಸಿದ್ದಾರೆ.

‘ನಾನು ಮ್ಯುಸಿಕಲ್ ಆಕ್ಟಿವಿಸ್ಟ್ ಅಲ್ಲ. ಈಗಲೇ ಎಲ್ಲ ಆಗಿಬಿಡಬೇಕು ಎಂಬ ತರಾತುರಿ ನನಗಿಲ್ಲ. ಮತ್ತೆ ಎಲ್ಲವೂ ನನ್ನ ತಲೆಮಾರಿನಲ್ಲಿಯೇ ಸಾಧ್ಯವಾಗಲಿಕ್ಕಿಲ್ಲ. ನಮ್ಮ ತಮಿಳುನಾಡಿನಲ್ಲಿ ‘ಕೂತ್ತು’ ಅಂತ ಒಂದು ದಲಿತರ ಜನಪದ ಕಲೆ, ಸಂಗೀತ ನೃತ್ಯ ರೂಪಕ ಇದೆ. ಸ್ವಲ್ಪಮಟ್ಟಿಗೆ ನಿಮ್ಮ ಯಕ್ಷಗಾನದ ಹಾಗೆ ಅದು. ಅವರ ನೃತ್ಯ ಪ್ರದರ್ಶನಕ್ಕೆ ನಾನು ಮತ್ತು ನನ್ನ ಹೆಂಡತಿ ಸಂಗೀತ ಸಂಯೋಜನೆ ಮಾಡಿ, ಹಾಡುತ್ತಿದ್ದೇವೆ. ಡಿಸೆಂಬರ್‌ನಲ್ಲಿ ಮುಂಬೈನಲ್ಲಿ ಮೊದಲ ಪ್ರದರ್ಶನ ಏರ್ಪಾಡಾಗಿದೆ’ ಎಂದು ಕೃಷ್ಣ ತಮ್ಮ ಮುಂದಿನ ಸಹಭಾಗಿತ್ವದ ಯೋಜನೆ ಬಗ್ಗೆ ವಿವರಿಸುತ್ತಾರೆ.

**

ಈಗ ವೇದಿಕೆಯಿಂದ ಕೇಳುತ್ತಿದೆ ಪೆರುಮಾಳ್ ಮುರುಗನ್ ಕವಿತೆಯ ಸಾಲುಗಳು. ‘ಮೇಟ್ಟಂಗಾಡು ಕಾಂಜುಪೊಚ್ಚು, ಮೊಟ್ಟಪಾರೈ ಪೋಲಾಚ್ಚು’ ಹಾಗೆ ಕಿವಿಗೊಟ್ಟು ಆಲಿಸಿದರೆ. ಅರೆ... ಕೇಳುತ್ತಿರುವುದು ಕೃಷ್ಣರ ಧ್ವನಿಯಲ್ಲಿ ದನ್ಯಾಸಿ ರಾಗದಲ್ಲಿ ಸಂಯೋಜನೆಗೊಂಡ ಪೆರುಮಾಳ್ ಕವಿತೆ ಮಾತ್ರವಲ್ಲ, ಅದೀಗ ತಮಿಳುನಾಡಿನ ಬಯಲುಸೀಮೆ ಹಳ್ಳಿಯೊಂದರ ರೈತನ ಆರ್ತ ಧ್ವನಿ ಕೂಡ. ಮತ್ತೆ ಇದು ಮಳೆ ಬಂದರೆ ಬೆಳೆಯುವ ಬೆಂಗಾಡಿನ ಆ ರೈತನೊಬ್ಬನದೇ ಏನು, ಖಂಡಿತಾ ಅಲ್ಲ. ಹೃದಯಗೊಟ್ಟು ಆಲಿಸಿ... ‘ಮಳೆ ಇಲ್ಲ, ನೀರು ಇಲ್ಲ, ಮಡಿಯೆರಮೆ ಸಾಮಿ’ ಇದೀಗ ಅಕ್ಕಪಕ್ಕದ ರಾಜ್ಯಗಳ, ಇಡೀ ದೇಶದ ಸೋತು ಸುಣ್ಣವಾದ ಎಲ್ಲ ರೈತರ ಧ್ವನಿಯೂ ಇಲ್ಲಿ ಮೇಳೈಸಿದೆ.

ನಸುಗತ್ತಲು ಆವರಿಸಿದೆ. ಆಗಸದಲ್ಲಿ ತುಸು ಮೇಲೆ ಬಂದಿದ್ದ ಚಂದ್ರನೂ ಇದನ್ನೆಲ್ಲ ಕೇಳಿಸಿಕೊಳ್ಳುತ್ತ, ರಾತ್ರಿ ಹಸಿದ ಹೊಟ್ಟೆಗಳಲ್ಲಿ ಮಲಗುವವರ ನೆನೆಯುತ್ತ ದಣಿದು ನಿಂತಂತೆ ಮಂಕಾಗಿದ್ದಾನೆ. ಪೆರುಮಾಳ್ ಮುರುಗನ್‍ ಅವರ ಎದೆಯಾಳದ ಅಕ್ಷರಗಳು ಇದೀಗ ವೇದಿಕೆ ಮೇಲೆ ಸ್ವರಸುಂದರಾಂಗ ಕೃಷ್ಣರ ಕೊರಳಿನಲ್ಲಿ ಇಡೀ ದೇಶದ ರೈತದನಿಯಾಗಿ ನಾವೆಲ್ಲರೂ ಎಲ್ಲಿಯೋ ಮಾರಿಕೊಂಡ ಆತ್ಮಸಾಕ್ಷಿಯನ್ನು ಮೀಟುವಂತೆ ಮೊರೆಯಿಡುತ್ತಿದೆ...

ಕೇಳೀತೆ ಇದು ಪ್ರಭುತ್ವದ ಕಬ್ಬಿಣದ ಕುರ್ಚಿಯ ಮೇಲೆ ಕೂತು ಕಲ್ಲಾದವರಿಗೆ? ಕರ್ನಾಟಕ ಸಂಗೀತ, ಅಚ್ಚ ತಮಿಳಿನ ಪೆರುಮಾಳ್ ಮುರುಗನ್ ಕವಿತೆ, ದಲಿತರ, ರೈತರ, ದುಡಿಯುವ ವರ್ಗದ ಸಂಕಟ, ಬದುಕಿನ ದಣಿವು, ಆಳದ ನೋವು, ತೀರದ ಹಸಿವು ಎಲ್ಲವೂ ಒಂದೇ ಕಡೆ ನಿಜವಾಗುತ್ತಿದೆ ಕೃಷ್ಣ ದನಿಯಲ್ಲಿ. ಮತ್ತೆ ಕೈಗಳನ್ನು ಮೇಲೆತ್ತಿ, ಕಣ್ಮುಚ್ಚಿ, ಆರ್ತವಾಗಿ ಮೊರೆಯಿಡುತ್ತಿರುವ ಕೃಷ್ಣ ಇಲ್ಲಿ ನಮ್ಮೆದುರು ವೇದಿಕೆ ಮೇಲೆ ಇದ್ದಾರೆಯೇ. ಊಹೂಂ ಇಲ್ಲಿ ಕೂತಿರುವಂತೆಯೇ ಅವರಾಗಲೇ ಅದಾವುದೋ ಹಳ್ಳಿಯಲ್ಲಿ ಮಳೆಯಿರದ, ನೀರಿರದ, ಕೆಲಸವೂ ಇಲ್ಲದ ರೈತರ ಜಮೀನಿನಲ್ಲಿ ನಿಂತು ಬದುಕು, ಸಂಕಟವನ್ನು ತಮ್ಮದಾಗಿಸಿಕೊಂಡಿದ್ದಾರೆ!

‘ಸಬ್‍ಕೋ ಸನ್ಮತಿ ದೇ ಭಗವಾನ್’ ಎಂದು ಕೃಷ್ಣರು ಪಿಸುಗುಡುವಂತೆ ಕೊನೆಯಲ್ಲಿ ಮೊರೆಯಿಟ್ಟಿದ್ದು ತಟ್ಟುವುದೇ ‘ಸನ್ಮತಿ’ಯನ್ನು ಹರಾಜಿಗಿಟ್ಟು ಅಭಿವೃದ್ಧಿಯ ಉನ್ಮತ್ತತೆಯಲ್ಲಿ ಮತ್ತವಾದ ನಮ್ಮ ಪ್ರಭುತ್ವಕ್ಕೆ? ಇಂದಲ್ಲ ನಾಳೆ ಇವು ‘ಸಾವಿರದ’ ದನಿಯಾಗಿ ಜಾಣಕಿವುಡು, ಜಾಣಕುರುಡು ನಟಿಸುತ್ತ ಮೇಲೆ ಕೂತವರಿಗೆ ಕೇಳಿತೆಂದು, ತಟ್ಟಿತೆಂದು, ತುಸುವಾದರೂ ಬದಲಾವಣೆಗೆ ಮೆಟ್ಟಿಲಾದೀತೆಂದು ಆಶಿಸೋಣ.

**

ಆಡುಮಾತಿನ ಕನ್ನಡವೂ ಸಂಗೀತಕ್ಕೆ ಬೇಕು

‘ಸಂಗೀತದಲ್ಲಿ ಬೇರೆ ಬೇರೆ ಆಡುಮಾತಿನ ಹಾಡುಗಳು ಬರಬೇಕಿದೆ. ಬೇರೆ ಬೇರೆ ಕಡೆಯ ಕನ್ನಡಗಳು ಸಂಗೀತದಲ್ಲಿ ಬರಬೇಕು. ನಿಮ್ಮ ಬೆಂಗಳೂರು ಕನ್ನಡ’ ತೋಡಿ, ಭೈರವಿ, ಕಲ್ಯಾಣಿ ರಾಗದಲ್ಲಿ ಯಾಕೆ ಇರಬಾರದು? ನೀವು ರಾಮನ ಬಗ್ಗೆ ಸಂಸ್ಕೃತ ಕನ್ನಡದಲ್ಲಿ ಮಾತ್ರ ಹಾಡಬೇಕಿಲ್ಲ. ರಾಮನ ಬಗ್ಗೆ ನಿಮ್ಮ ನಿತ್ಯದ ಕನ್ನಡದಲ್ಲಿ ಯಾಕೆ ಹಾಡಬಾರದು. ರಾಮನಿಗೆ ಈ ಎರಡೂ ಸಮಸ್ಯೆಯಲ್ಲ. ರಾಗಕ್ಕೆ ಏನೂ ಸಮಸ್ಯೆಯಲ್ಲ. ನನಗೇನೂ ಸಮಸ್ಯೆ ಕಾಣುವುದಿಲ್ಲ. ಹಾಗಿದ್ದರೆ ಸಮಸ್ಯೆ ಇರುವುದು ಎಲ್ಲಿ? ನೀವು ಡಯಲೆಕ್ಟ್ ಬದಲಿಸುತ್ತಿದ್ದ ಹಾಗೆ ಕಲ್ಪನೆಗಳು ಬದಲಾಗುತ್ತವೆ. ವಿಚಾರಗಳು ಬದಲಾಗುತ್ತವೆ’. ಕೃಷ್ಣರ ಸಮನ್ವಯದ ದೃಷ್ಟಿಕೋನ ಸ್ಫಟಿಕ ಸ್ಪಷ್ಟ, ನೇರ ಮತ್ತು ಸರಳ.

ನನಗೆ ದಕ್ಕಿದ ಜೋಗಪ್ಪ, ಪರಂಬೋಕ್ಕು

‘ಶಾಸ್ತ್ರೀಯ ಸಂಗೀತ ಮಾತ್ರವಲ್ಲ ಎಲ್ಲ ಬಗೆಯ ಕಲೆಗಳಿಗೂ ಸಾಮಾಜಿಕ- ರಾಜಕೀಯ ಆಯಾಮಗಳಿದ್ದೇ ಇರುತ್ತವೆ. ಶಾಸ್ತ್ರೀಯ ಅನ್ನೋದು ನನಗೆ ಇಷ್ಟವಾಗಲ್ಲ. ಸಂಗೀತ ಅಷ್ಟೇ. ನಾನು ಬೇರೆ, ನನ್ನೊಳಗಿನ ಸಂಗೀತಗಾರ ಬೇರೆ ಅಂತ ಅನ್ನಿಸಲ್ಲ. ಎಲ್ಲವನ್ನೂ ಗಮನಿಸ್ತಾ ಹೋಗುತ್ತೇನೆ.

ಸಂಗೀತ ಕಲೆಯಲ್ಲಿ ನಾನು ಆಳವಾಗಿ ಮುಳುಗಿದಷ್ಟೂ ನನ್ನ ಗಮನಿಸುವಿಕೆಯ ಅಗಲವೂ ಹೆಚ್ಚುತ್ತ ಹೋಗುತ್ತೆ. ಐ ಆಮ್ ಕಾನ್ಷಸಲೀ ಅವೇರ್ ಆಫ್ ಮೈಸೆಲ್ಫ್, ಮೈ ಪ್ರಾಬ್ಲಮ್ಸ್... ಆಗ ನಾನು ನನ್ನ ಸುತ್ತಲಿನ ರಾಜಕೀಯ, ಪರಿಸರ ಇತ್ಯಾದಿ ಸಮಸ್ಯೆಗಳ ಕುರಿತು ತೆರೆದುಕೊಳ್ತಾ ಹೋಗ್ತೀನಿ. ಜೊತೆಗೆ ನನ್ನ ಮಿತಿಗಳಿಗೆ ನಾನೇ ಸವಾಲು ಹಾಕಿಕೊಳ್ತೇನೆ. ಹೀಗಾಗಿ ಜೋಗಪ್ಪ, ಪರಂಬೋಕ್ಕು ಎಲ್ಲವೂ ನನಗೆ ದಕ್ಕುತ್ತ ಹೋಯಿತು’ ಇದು ಕೃಷ್ಣ ಅವರ ಜೀವಪರ ಮನೋಭೂಮಿಕೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry