ಮಂಗಳವಾರ, ಮಾರ್ಚ್ 9, 2021
18 °C

ಬದುಕಿನ ಗಾಡಿಗೆ ‘ಪಂಕ್ಚರ್’ ಆಸರೆ

ಕಾಶೀನಾಥ ಬಿಳಿಮಗ್ಗದ Updated:

ಅಕ್ಷರ ಗಾತ್ರ : | |

ಬದುಕಿನ ಗಾಡಿಗೆ ‘ಪಂಕ್ಚರ್’ ಆಸರೆ

ಮುಂಡರಗಿ: ತಾಲ್ಲೂಕಿನ ಜ್ಯಾಲವಾಡಿಗೆ ತಾಂಡಾದ ರವಿ ಸಕ್ರಪ್ಪ ಲಮಾಣಿ ಎಂಬ 27 ವರ್ಷದ ಅಂಗವಿಕಲ ಯುವಕ ಯಾರ ನೆರವಿಲ್ಲದೇ ಸ್ವಾವಲಂಬಿ ಜೀವನ ನಡೆಸುವ ಮೂಲಕ ಇತರರಿಗೆ ಮಾದರಿ ಆಗಿದ್ದಾರೆ. ಗ್ರಾಮದ ಬಸ್ ನಿಲ್ದಾಣದ ಬಳಿ ಪಂಕ್ಚರ್ ಅಂಗಡಿ ಇಟ್ಟುಕೊಂಡು ಬದುಕಿನ ಗಾಡಿ ಎಳೆಯುತ್ತಿದ್ದಾರೆ.

ರವಿ ಎರಡು ವರ್ಷದವನಿದ್ದಾಗ ತಂದೆಯನ್ನು ಕಳೆದುಕೊಂಡ. ಅದೇ ವರ್ಷ ಪೊಲಿಯೊದಿಂದ ತನ್ನ ಎಡಗಾಲು ಕಳೆದುಕೊಂಡ. ಅಂಗವೈಕಲ್ಯಕ್ಕೆ ಜಗ್ಗದೆ ತಾಯಿಯ ನೆರವಿನಿಂದ ಮುಂಡರಗಿಯ ವಿ.ಜಿ.ಲಿಂಬಿಕಾಯಿ ಪ್ರಾಢಶಾಲೆಯಲ್ಲಿ 10ನೇ ತರಗತಿವರೆಗೂ ವಿದ್ಯಾಭ್ಯಾಸ ಪೂರೈಸಿದರು.

ಒಂದು ಕಾಲಿನಲ್ಲಿ ಸೈಕಲ್ ಓಡಿಸುವುದರಲ್ಲಿ ಪರಿಣಿತನಾಗಿರುವ ರವಿ,ಸೈಕಲ್ ರಿಪೇರಿ ಕೆಲಸ ಮಾಡತೊಡಗಿದರು. ಇದೇ ವೃತ್ತಿಯನ್ನು ಮುಂದುವರಿಸಿ ಸೈಕಲ್ ಶಾಪ್ ನಡೆಸತೊಡಗಿದರು. ಈಗ ಅವರು ಟಿಪ್ಪರ್, ಲಾರಿ, ಟ್ರ್ಯಾಕ್ಟರ್‌, ಕಾರು, ದ್ವಿಚಕ್ರ ವಾಹನ ಹೀಗೆ ಎಲ್ಲ ಬಗೆಯ ವಾಹನಗಳ ಪಂಕ್ಚರ್ ಹಾಕುವ ತಜ್ಞ ಎನಿಸಿಕೊಂಡಿದ್ದಾರೆ. ದೊಡ್ಡ ದೊಡ್ಡ ವಾಹನಗಳ ಚಕ್ರಗಳನ್ನು ಲೀಲಾಜಾಲವಾಗಿ ಬಿಚ್ಚುವ ಅವರು, ಒಬ್ಬರೇ ಪಂಕ್ಚರ್ ಹಾಕಿ ಜೋಡಿಸಿಕೊಟ್ಟು, ಎಲ್ಲರ ಹುಬ್ಬೇರುವಂತೆ ಮಾಡುತ್ತಾರೆ.

ಕಳೆದ ವರ್ಷ ರವಿ ತಮ್ಮ ತಾಯಿಯನ್ನೂ ಕಳೆದುಕೊಂಡಿದ್ದಾರೆ. ಪಂಕ್ಚರ್ ಅಂಗಡಿಯಿಂದ ಬರುವ ಸಂಪಾದನೆಯಲ್ಲೇ ಹೆಂಡತಿ ಹಾಗೂ ಇಬ್ಬರು ಪುತ್ರರನ್ನು ಸಲಹುತ್ತಿದ್ದಾರೆ. ‘ಸರ್ಕಾರ ಹೆಚ್ಚಿನ ನೆರವು ನೀಡಿದರೆ ಮುಂಡರಗಿಯಲ್ಲಿ ಒಂದು ದೊಡ್ಡ ವಾಹನ ರಿಪೇರಿ ಅಂಗಡಿ ತೆರೆಯಬೇಕು. ಅಲ್ಲಿ ಅಂಗವಿಕಲ ಯುವಕರಿಗೆ ತರಬೇತಿ ಹಾಗೂ ಕೆಲಸ ಕೊಡಬೇಕು’ ಎಂಬ ಮಹದಾಸೆಯನ್ನು ಅವರು ಹೊಂದಿದ್ದಾರೆ.

‘ನಮ್ಮ ಶಾಲೆಯ ಪಕ್ಕದಲ್ಲಿ ಪಂಕ್ಚರ್ ಅಂಗಡಿ ಇಟ್ಟುಕೊಂಡು ಸ್ವಾವಲಂಬಿ ಬದುಕು ಸಾಗಿಸುತ್ತಿರುವ ರವಿಯ ಬಗ್ಗೆ ನಮ್ಮೆಲ್ಲರಿಗೂ ಹೆಮ್ಮೆ ಇದೆ. ಅಲ್ಲದೇ ಶಾಲೆಯ ಮಕ್ಕಳಿಗೂ ಅವರು ಪ್ರೇರಣೆ ಹಾಗೂ ಮಾದರಿ’ ಎನ್ನುತ್ತಾರೆ ಜ್ಯಾಲವಾಡಿಗೆ ಶಾಲೆಯ ಶಿಕ್ಷಕ ರವಿ ದೇವರಡ್ಡಿ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.