ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿ–ಮಳೆಯಿಂದ ಥರಗುಟ್ಟಿದ ನಗರ

Last Updated 3 ಡಿಸೆಂಬರ್ 2017, 9:50 IST
ಅಕ್ಷರ ಗಾತ್ರ

ಚಾಮರಾಜನಗರ: ‘ಒಖಿ’ ಚಂಡಮಾರುತದ ಪ್ರಭಾವ ಜಿಲ್ಲೆಯ ಮೇಲೆ ದಟ್ಟವಾಗಿದ್ದು, ಆಗಾಗ ಸುರಿಯುವ ಮಳೆ ಮತ್ತು ಥಂಡಿಯ ವಾತಾವರಣ ಜನರನ್ನು ನಡುಗಿಸುತ್ತಿದೆ. ಚಂಡಮಾರುತದ ತೀವ್ರತೆ ಹೆಚ್ಚಿರುವ ತಮಿಳುನಾಡಿಗೆ ಅಂಟಿಕೊಂಡಂತಿರುವ ಜಿಲ್ಲೆಯ ಗಡಿಭಾಗಗಳಲ್ಲಿ ಅದರ ಪ್ರಭಾವ ಅಧಿಕವಾಗಿದೆ. ಗುಂಡ್ಲುಪೇಟೆಯ ಗಡಿ ಮತ್ತು ಮಹದೇಶ್ವರ ಬೆಟ್ಟದ ಸುತ್ತಮುತ್ತ ಶುಕ್ರವಾರ ಭರ್ಜರಿ ಮಳೆಯಾಗಿದೆ.

ಕೊಳ್ಳೇಗಾಲ ತಾಲ್ಲೂಕಿನ ಮಾರ್ಟಳ್ಳಿ, ಹೂಗ್ಯಂ, ಚಿಕ್ಕಾಟಿ, ಸಿಂಗಾನಲ್ಲೂರು, ಕೌದಳ್ಳಿ, ಬಾಗಳಿ, ಮಲೆಯೂರು, ಪಿ.ಜಿ. ಪಾಳ್ಯ, ಅಜ್ಜಿಪುರ, ದಿನ್ನಳ್ಳಿ ಮುಂತಾದೆಡೆ ಕೆಲವು ಸಮಯ ಮಾತ್ರ ವಿರಾಮ ನೀಡಿದ್ದ ಮಳೆರಾಯ ಆರ್ಭಟಿಸಿದ್ದಾನೆ. ಶುಕ್ರವಾರ ತೀವ್ರವಾಗಿದ್ದ ವರುಣನ ಅಬ್ಬರ, ಶನಿವಾರ ತಗ್ಗಿತ್ತು.

ಚಾಮರಾಜನಗರ ಮತ್ತು ಯಳಂದೂರು ತಾಲ್ಲೂಕುಗಳಲ್ಲಿ ಜಿನುಗುವ ಮಳೆ ಜನರಲ್ಲಿ ಕಿರಿಕಿರಿ ಉಂಟುಮಾಡುತ್ತಿದೆ. ಶನಿವಾರ ಬೆಳಿಗ್ಗೆ ಕೆಲ ಹೊತ್ತು ದರ್ಶನ ನೀಡಿದ ಸೂರ್ಯ ಸಂಜೆ ವೇಳೆ ಮತ್ತೆ ತನ್ನ ಇರುವಿಕೆ ತೋರಿಸಿದ್ದಾನೆ. ಮೂರು ದಿನಗಳಿಂದ ಎಲ್ಲೆಡೆ ಥಂಡಿಯ ವಾತಾವರಣ ಆವರಿಸಿದೆ.

ಕಾಮಗಾರಿಗೆ ಅಡ್ಡಿ: ನಗರದಲ್ಲಿ ಆರಂಭವಾಗಿರುವ ರಸ್ತೆ ವಿಸ್ತರಣೆ ಚಟುವಟಿಕೆಗಳಿಗೆ ಮಳೆ ಅಡ್ಡಿಪಡಿಸಿದೆ. ಮೊದಲೇ ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿ ಈಗ ಮಳೆಯಿಂದ ಮತ್ತಷ್ಟು ವಿಳಂಬವಾಗುವಂತಾಗಿರುವುದು ನಾಗರಿಕರ ಸಂಕಷ್ಟ ಹೆಚ್ಚಿಸಿದೆ.

ಬಹುತೇಕ ರಸ್ತೆಗಳನ್ನು ಚರಂಡಿಗಾಗಿ ಮತ್ತು ಯುಜಿಡಿ ಕೆಲಸಗಳಿಗಾಗಿ ಅಗೆದಿರುವುದರಿಂದ ಕೆಸರು ತುಂಬಿಕೊಂಡು ಓಡಾಡುವುದೇ ದುಸ್ತರವಾಗಿದೆ. ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರು ಸಂಚರಿಸಲು ಹರಸಾಹಸಪಡಬೇಕಾಗಿದೆ.

ಎಲ್ಲೆಲ್ಲಿ ಮಳೆ?: ಶನಿವಾರ ಬೆಳಿಗ್ಗೆ ವರದಿಯಾದಂತೆ 24 ಗಂಟೆಯಲ್ಲಿ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದೆ. ಪಿ.ಜಿ. ಪಾಳ್ಯ, ದಿನ್ನಳ್ಳಿ, ಅಜ್ಜಿಪುರ, ಚಿಕ್ಕಮಾಲಾಪುರ, ಮಂಗಲ 5 ಸೆಂ.ಮೀ., ಎಲ್ಲೆಮಾಳ, ಹೂಗ್ಯಂ, ಕಣ್ಣೂರು 4 ಸೆಂ.ಮೀ., ಹೊಂಡರಬಾಳು, ಚಿಕ್ಕಾಟಿ, ಪೊನ್ನಾಚಿ, ಉತ್ತೂರು, ಅಟ್ಟುಗೂಳಿಪುರ, ನಿಟ್ರೆ, ಭೋಗನಪುರ, ಪುಣಜನೂರು, ಅಟ್ಟುಗೂಳಿಪುರ 3 ಸೆಂ.ಮೀ. ಮಳೆಯಾಗಿದೆ.

ಮಲ್ಲಯ್ಯನಪುರ, ಸಿದ್ದಯ್ಯನಪುರ, ಹೆಗ್ಗೋಠಾರ, ಅಮಚವಾಡಿ, ಶಿವಪುರ, ದೊಡ್ಡಮೋಳೆ, ವೆಂಕಟಯ್ಯನಛತ್ರ, ಬಿಸಲವಾಡಿ, ಸಿಂಗನಲ್ಲೂರು, ಹೊನ್ನಹಳ್ಳಿ, ಬದನಗುಪ್ಪೆ, ಮುಕ್ಕಡಹಳ್ಳಿ, ಮಹದೇಶ್ವರ ಬೆಟ್ಟ, ಮಾದಾಪುರ, ಅಂಬಳೆ, ಹೆಬ್ಬಸೂರು, ಕೂಡ್ಲೂರು, ಯರಿಯೂರು, ಉಮ್ಮತ್ತೂರು 2 ಸೆಂ.ಮೀ. ಮಳೆಯಾಗಿದೆ.

ಹರಳೆ, ಉಡಿಗಾಲ, ಅರಕಲವಾಡಿ, ಕುಣಗಳ್ಳಿ, ನಾಗವಳ್ಳಿ, ಟಗರಪುರ, ಹೊರೆಯಾಲ, ಮೂಡ್ನಾಕೂಡು, ಕಬ್ಬಳ್ಳಿ, ಸಾಗಡೆ, ಕುದೇರು, ಕೆಸ್ತೂರು ಮುಂತಾದೆಡೆ ವರ್ಷಧಾರೆ ಜೋರಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT