ಶುಕ್ರವಾರ, ಮಾರ್ಚ್ 5, 2021
21 °C
ಇನಾಂ ದತ್ತಾತ್ರೇಯ ಪೀಠಕ್ಕೆ ಭಕ್ತರ ದಂಡು, ದತ್ತ ಜಯಂತಿ ಉತ್ಸವ ಸಂಪನ್ನ

ಹಾರಿದ ಧ್ವಜ,ಗೋರಿಗೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾರಿದ ಧ್ವಜ,ಗೋರಿಗೆ ಹಾನಿ

ಚಿಕ್ಕಮಗಳೂರು: ದತ್ತಜಯಂತಿ ಪ್ರಯುಕ್ತ ಭಾನುವಾರ ಇಲ್ಲಿಗೆ ಸಮೀಪದ ಇನಾಂ ದತ್ತಾತ್ರೇಯ ಪೀಠಕ್ಕೆ ವಿವಿಧೆಡೆಗಳಿಂದ ಬಂದಿದ್ದ ಸಹಸ್ರಾರು ದತ್ತಮಾಲಾಧಾರಿಗಳ ಪೈಕಿ ಒಬ್ಬ ವ್ಯಕ್ತಿ ಆವರಣದ ಬೇಲಿ ಏರಿ ಜಿಗಿದು ನಿರ್ಬಂಧಿತ ಪ್ರದೇಶದಲ್ಲಿ ಭಗವಾದ್ವಜ ನೆಟ್ಟಿದ್ದಾನೆ.

ಇತರ ಕೆಲವು ಭಕ್ತರು ನಿರ್ಬಂಧಿತ ಪ್ರದೇಶದೊಳಗೆ ತೆರಳಿ ಗೋರಿಗೆ ನೆಟ್ಟಿದ್ದ ನಾಮಫಲಕವನ್ನು ಉರುಳಿಸಿದರು. ಇದರಿಂದ ಕೆಲಕಾಲ ಬಿಗುವಿನ ಪರಿಸ್ಥಿತಿ ನಿರ್ಮಾಣವಾಯಿತು.

ಕೂಡಲೇ ಪೊಲೀಸರು ಭಗವಾಧ್ವಜ ನೆಟ್ಟ ದತ್ತಭಕ್ತನನ್ನು ನಿಷೇಧಿತ ಪ್ರದೇಶದಿಂದ ಎಳೆದೊಯ್ದುರು. ಈ ಸಂದರ್ಭದ ತಳ್ಳಾಟ ನಡೆದು ಬೇಲಿ ಪಕ್ಕದಲ್ಲಿ ಅಳವಡಿಸಿದ್ದ ಮರದ ಕಟ್ಟಿಗೆಗಳ ಬ್ಯಾರಿಕೇಡ್‌ ನೂಕಾಟದಲ್ಲಿ ಬಿದ್ದಿತು. ಕೆಲವರು ಕೇಸರಿ ಶಲ್ಯಗಳನ್ನು ಗಂಟುಕಟ್ಟಿ ನಿರ್ಬಂಧಿತ ಪ್ರದೇಶದ ಕಡೆಗೆ ತೂರಿದರು.  ನಗರದಲ್ಲಿ ಸಂಜೆ ಕೆಲವು ಕಿಡಿಗೇಡಿಗಳು ಖಾಸಗಿ ಬಸ್‌ ಮೇಲೆ ಕಲ್ಲು ತೂರಿ ಗಾಜು ಪುಡಿಗೊಳಿಸಿದ್ದಾರೆ.

‘ಶಲ್ಯ ತೂರುವುದು ಸನ್ಮಾನ ಅಲ್ಲ ಅಪಮಾನ. ಯಾರೂ ಇಂಥ ಕೆಲಸ ಮಾಡಬಾರದು. ಮಾಲಾಧಾರಿಗಳಾಗಿ ಕೆಟ್ಟ ಘೋಷಣೆಗಳನ್ನು ಕೂಗುವುದು ಸಂಸ್ಕಾರ ಅಲ್ಲ’ ಎಂದು ಶಾಸಕ ಸಿ.ಟಿ.ರವಿ ಹೇಳಿ ಜನರನ್ನು ಸಮಾಧಾನಪಡಿಸಿದರು.

ಐಜಿಪಿ ಹೇಮಂತ್‌ ನಿಂಬಾಳ್ಕರ್‌, ಎಸ್ಪಿ ಅಣ್ಣಾಮಲೈ, ಎಎಸ್ಪಿ ಕೆ.ಎಚ್‌.ಜಗದೀಶ್‌ ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಪಾದುಕೆ ದರ್ಶನ: ದತ್ತ ಜಯಂತಿ ಅಂಗವಾಗಿ ಇನಾಂ ದತ್ತಾತ್ರೇಯ ಪೀಠಕ್ಕೆ ಭಾನುವಾರ ವಿವಿಧೆಡೆಗಳಿಂದ ಬಂದಿದ್ದ ಸಹಸ್ರಾರು ದತ್ತಮಾಲಾಧಾರಿಗಳು ಗುರುದತ್ತಾತ್ರೇಯ ಸ್ವಾಮಿ ಪಾದುಕೆ ದರ್ಶನ ಮಾಡಿದರು.

ಮುಂಜಾನೆಯಿಂದಲೇ ದತ್ತಮಾಲಾಧಾರಿಗಳು ಇರುಮುಡಿ ಹೊತ್ತು ದತ್ತಪೀಠಕ್ಕೆ ತೆರಳಿದರು. ಕೆಲವರು ಮಾರ್ಗ ಮಧ್ಯೆ ಹೊನ್ನಮ್ಮನ ಹಳ್ಳದಲ್ಲಿ ಮಿಂದು ಸಾಗಿದರು. ಪೀಠದ ಪ್ರವೇಶ ದ್ವಾರದಿಂದ ಸಾಲಾಗಿ ತೆರಳಿ ಗುಹೆಯೊಳಗಿನ ಪಾದುಕೆ ದರ್ಶನ ಮಾಡಿ, ಹರಕೆ ಸಲ್ಲಿಸಿ, ಭಕ್ತಿ ಸಮರ್ಪಿಸಿದರು.

ಪ್ರವೇಶ ದ್ವಾರದಿಂದ ಸುಮಾರು ಎರಡೂವರೆ ಕಿಲೋ ಮೀಟರ್‌ ವರೆಗೆ ಭಕ್ತರ ಸಾಲು ಇತ್ತು. ಮಧ್ಯಾಹ್ನದ ನಂತರವೂ ಭಕ್ತರ ದಂಡು ಪೀಠದತ್ತ ಸಾಗಿತು. ಪೀಠದ ಆವರಣದಲ್ಲಿರುವ ಸಭಾಂಗಣದಲ್ಲಿ ಗಣಪತಿ ಹೋಮ, ದತ್ತಹೋಮ, ಹವನಗಳೂ ನಡೆದವು. ಅನಸೂಯಾದೇವಿ, ಅತ್ರಿಮುನಿ, ಗುರುದತ್ತಾತ್ರೇಯ ಮೂರ್ತಿಗೆ ಪೂಜೆ ನೆರವೇರಿಸಲಾಯಿತು.

(ದತ್ತಭಕ್ತನೊಬ್ಬ ಭಗವಾಧ್ವಜ ನೆಟ್ಟಾಗ ನೂಕುನುಗ್ಗಲು ಉಂಟಾಯಿತು)

ಸಂಚಾರ ದಟ್ಟಣೆ: ಪೀಠದಿಂದ ಸುಮಾರು ಮೂರು ಕಿಲೋ ಮೀಟರ್‌ವರೆಗೆ ಸಂಚಾರ ದಟ್ಟಣೆ ಆಗಿತ್ತು. ವಾಹನಗಳ ದಟ್ಟಣೆ ನಿಯಂತ್ರಿಸಿ ಸಂಚಾರಕ್ಕೆ ಅನುವು ಮಾಡಲು ಪೊಲೀಸರು ಹರಸಾಹಸಪಟ್ಟರು.

ಜಿಲ್ಲೆ ಮತ್ತು ಹೊರಜಿಲ್ಲೆಗಳಿಂದ ವಾಹನಗಳಲ್ಲಿ ಭಕ್ತರು ಬಂದಿದ್ದರು. ದತ್ತಪೀಠ ಆವರಣ ಕೇಸರಿಮಯವಾಗಿತ್ತು. ಭಗವಾಧ್ವಜಗಳ ಹಾರಾಟ, ಕೇಸರಿ ವಸ್ತ್ರಧಾರಿಗಳ ಓಡಾಟ ಜೋರಾಗಿತ್ತು. ಪೊಲೀಸ್‌ ಬಿಗಿ ಭದ್ರತೆಯೂ ಇತ್ತು.

ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ನಗರದಲ್ಲಿ ಅಂಗಡಿಮುಂಗಟ್ಟುಗಳನ್ನು ಮುಚ್ಚಿಸಿತ್ತು. ನಗರದಲ್ಲಿ ಅಘೋಷಿತ ಬಂದ್‌ ವಾತಾವರಣ ಇತ್ತು.

**

ಸಂಸದ ಪ್ರತಾಪ ಸಿಂಹ ಬಂಧನ

ನಿಷೇಧಾಜ್ಞೆಯನ್ನು ಉಲ್ಲಂಘಿಸಿದ ಆರೋಪದ ಮೇರೆಗೆ 300ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಿಗದಿತ ಕಾಲಮಿತಿಯೊಳಗೆ ಕಾರ್ಯಕ್ರಮ ನಡೆಸದ ಪರಿಣಾಮ ಹನುಮ ಜಯಂತಿ ರಥಯಾತ್ರೆಗೆ ಅವಕಾಶ ನಿರಾಕರಿಸಲಾಗಿದೆ. ಪೊಲೀಸರ ಕ್ರಮವನ್ನು ಖಂಡಿಸಿ ಡಿ.4ರಂದು (ಸೋಮವಾರ) ಹುಣಸೂರು ಬಂದ್‌ಗೆ ಬಿಜೆಪಿ ಕರೆ ನೀಡಿದೆ.

ಈದ್ ಮಿಲಾದ್ ಹಾಗೂ ಹನುಮ ಜಯಂತಿ ಒಟ್ಟಿಗೆ ಬಂದಿದ್ದರಿಂದ ಮೆರವಣಿಗೆ ಸಾಗುವ ಮಾರ್ಗಗಳನ್ನು ಹೊರತುಪಡಿಸಿ ಪಟ್ಟಣದಲ್ಲಿ ಡಿ.2ರಿಂದ ಡಿ.4ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಮಂಜುನಾಥ ಬಡಾವಣೆಯ ಹನುಮ ದೇಗುಲದಿಂದ ನಗರಸಭೆಯವರೆಗೆ ರಥಯಾತ್ರೆ ನಡೆಸಲು ತಾಲ್ಲೂಕು ಆಡಳಿತ ಅವಕಾಶ ನೀಡಿತ್ತು. ಆದರೆ, ಸಂಘ ಪರಿವಾರದ ಕಾರ್ಯಕರ್ತರು ರಂಗನಾಥ ಬಡಾವಣೆಯಿಂದ ಮೆರವಣಿಗೆ ನಡೆಸಲು ಮುಂದಾದರು. ಇದನ್ನು ತಡೆದ ಪೊಲೀಸರೊಂದಿಗೆ ವಾಗ್ವಾದವೂ ನಡೆಯಿತು.

ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಪೊಲೀಸರು, ಸ್ಥಳದಲ್ಲಿದ್ದ 50ಕ್ಕೂ ಹೆಚ್ಚು ಜನರನ್ನು ಬಂಧಿಸಿದರು. ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಮೈಸೂರಿನಿಂದ ತೆರಳುತ್ತಿದ್ದ ಸಂಸದ ಪ್ರತಾಪಸಿಂಹ ಅವರನ್ನು ಪಟ್ಟಣದ ಹೊರಭಾಗದಲ್ಲಿ ಪೊಲೀಸರು ವಶಕ್ಕೆ ಪಡೆದರು.

ಇದರಿಂದ ಕೆರಳಿದ ಸಂಘ ಪರಿವಾರದ ಕಾರ್ಯಕರ್ತರು ದೇಗುಲದ ಎದುರು ಜಮಾಯಿಸಿ ಧರಣಿ ಕುಳಿತರು. ಸಂಸದರನ್ನು ಬಿಡುಗಡೆ ಮಾಡುವವರೆಗೂ ಮೆರವಣಿಗೆ ನಡೆಸುವುದಿಲ್ಲವೆಂದು ಪಟ್ಟು ಹಿಡಿದರು. ಪ್ರತಿಭಟನಾಕಾರರ ಮನವೊಲಿಸಲು ಸ್ಥಳಕ್ಕೆ ಧಾವಿಸಿದ ಉಪವಿಭಾಗಾಧಿಕಾರಿ ಕೆ.ನಿತೀಶ್‌ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ ಕಾರಿನ ಮೇಲೆ ಉದ್ರಿಕ್ತರು ಕಲ್ಲು ತೂರಾಟ ನಡೆಸಿದರು.

ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಕೈಗೆ ಸಿಕ್ಕರವನ್ನು ಬಂಧಿಸಿ ಸಾರಿಗೆ ಬಸ್ಸಿಗೆ ತುಂಬಿದರು. ಪೊಲೀಸರ ಲಾಠಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಕೆಲವರು ಕಲ್ಯಾಣಿಗೆ ಬಿದ್ದು ಗಾಯಗೊಂಡರು. ಉದ್ರಿಕ್ತರು ಪೊಲೀಸರ ಮೇಲೆ ಕಲ್ಲು ತೂರಿದ್ದರಿಂದ ಇಬ್ಬರು ಕಾನ್‌ಸ್ಟೆಬಲ್‌ಗಳು ಗಾಯಗೊಂಡಿದ್ದಾರೆ.

ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಪಟ್ಟಣಕ್ಕೆ ಭೇಟಿ ನೀಡಿ ಸಂಸದರ ಬಂಧನವನ್ನು ಖಂಡಿಸಿದರು.

ಪ್ರಜಾಪ್ರಭುತ್ವದ ಕಗ್ಗೊಲೆ: ಆಕ್ರೋಶ

ಹುಣಸೂರು: ಸಂಸದ ಪ್ರತಾಪಸಿಂಹ ಅವರನ್ನು ಬಂಧಿಸುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಆಕ್ರೋಶ ವ್ಯಕ್ತಪಡಿಸಿದರು.

‘ಜನಪ್ರತಿನಿಧಿಯನ್ನು ಹೇಗೆ ನಡೆಸಿಕೊಳ್ಳಬೇಕು ಎಂಬ ಸಾಮಾನ್ಯಜ್ಞಾನವೂ ರಾಜ್ಯ ಸರ್ಕಾರಕ್ಕೆ ಇಲ್ಲ. ದಮನಕಾರಿ ನೀತಿಯನ್ನು ಅನುಸರಿಸಿ ಹಿಂದೂ ಧರ್ಮದ ಆಚರಣೆಗಳನ್ನು ಹತ್ತಿಕ್ಕಲು ಪ್ರಯತ್ನಸುತ್ತಿದೆ. ಗಲಭೆಯ ಹಿಂದೆ ರಾಜ್ಯ ಸರ್ಕಾರದ ಕೈವಾಡವಿದೆ’ ಎಂದು ಆರೋಪಿಸಿದರು.

‘ಜನರ ಧಾರ್ಮಿಕ ಭಾವನೆಗಳನ್ನು ಸರ್ಕಾರವೇ ಕೆರಳಿಸುತ್ತಿದೆ. ಶಾಂತ ರೀತಿಯಲ್ಲಿ ಮೆರವಣಿಗೆ ನಡೆಸಲು ಅವಕಾಶ ನೀಡಬೇಕಿತ್ತು. ಲಾಠಿ ಬೀಸುವ ಅನಿವಾರ್ಯತೆ ಇರಲಿಲ್ಲ’ ಎಂದರು.

ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲು

ಮೈಸೂರು: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ನಿರ್ಲಕ್ಷ್ಯತನದ ವಾಹನ ಚಾಲನೆ ಆರೋಪದ ಮೇರೆಗೆ ಸಂಸದ ಪ್ರತಾಪಸಿಂಹ ಅವರ ವಿರುದ್ಧ ಹುಣಸೂರು ತಾಲ್ಲೂಕಿನ ಬಿಳಿಕೆರೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಹನುಮ ಜಯಂತಿಯಲ್ಲಿ ಪಾಲ್ಗೊಳ್ಳಲು ಸಂಸದರು, ಮೈಸೂರಿನಿಂದ ಹುಣಸೂರಿಗೆ ಹೊರಟಿದ್ದರು. ಬಿಳಿಕೆರೆ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಮುನ್ನೆಚ್ಚರಿಕೆಯ ಕ್ರಮವಾಗಿ ವಶಕ್ಕೆ ಪಡೆಯಲು ಮುಂದಾದರು.

ಪೊಲೀಸರ ಸೂಚನೆಯನ್ನು ಪಾಲಿಸದೆ ತಾವೇ ಕಾರು ಚಲಾಯಿಸಿಕೊಂಡು ಹೊರಟಾಗ, ಅವರ ಕಾರು ಬ್ಯಾರಿಕೇಡ್‌ಗೆ ಗುದ್ದಿದೆ.

‘ಪ್ರತಾಪ ಸಿಂಹ ಮಾಡಿರುವುದು ಅಪರಾಧ’

ಬೆಂಗಳೂರು: ‘ಸಂಸದ ಪ್ರತಾಪಸಿಂಹ ಸ್ವತಃ ವಾಹನ ಚಾಲನೆ ಮಾಡಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಗಳ ಮೇಲೆ ನುಗ್ಗಿಸಿರುವುದು ಅಪರಾಧ. ಕಾನೂನು ಕೈಗೆ ತೆಗೆದುಕೊಳ್ಳುವುದಕ್ಕೆ ಯಾರಿಗೂ ಅವಕಾಶ ಇಲ್ಲ’ ಎಂದು ಮುಖ್ಯಮಂತ್ರಿ

ಸಿದ್ದರಾಮಯ್ಯ ಹೇಳಿದರು.

‘ಸಂಸದರಾಗಲಿ, ಶಾಸಕರಾಗಲಿ ತಾವೇ ಮಾಡಿದ ಕಾನೂನಿಗೆ ಗೌರವ ಕೊಡದಿದ್ದರೆ ಜನ ಸಾಮಾನ್ಯರು ಹೇಗೆ ಗೌರವಿಸುತ್ತಾರೆ’ ಎಂದು ಅವರು ಭಾನುವಾರ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

**

ಬಸ್‌ಗೆ ಕಲ್ಲು ತೂರಾಟ

ನಗರದಲ್ಲಿ ಸಂಜೆ ಕೆಲವು ಕಿಡಿಗೇಡಿಗಳು ಖಾಸಗಿ ಬಸ್‌ ಮೇಲೆ ಕಲ್ಲು ತೂರಿ ಗಾಜು ಪುಡಿಗೊಳಿಸಿದ್ದಾರೆ. ಉಪ್ಪಳ್ಳಿಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಪರಿಸ್ಥಿತಿ ನಿಯಂತ್ರಣ ನಿಟ್ಟಿನಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.