ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗನ ಶಿಕ್ಷೆ ರದ್ದುಪಡಿಸಿ: ಪಾಕ್ ಅಧ್ಯಕ್ಷರಿಗೆ ಭಾರತೀಯ ತಾಯಿ ಮನವಿ

ಫೇಸ್‌ಬುಕ್‌ನಲ್ಲಿ ಯುವತಿ ಪರಿಚಯ: ಪಾಕ್‌ಗೆ ಅಕ್ರಮ ಪ್ರವೇಶ ಆರೋಪ
Last Updated 4 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಲಾಹೋರ್: ಜೈಲು ಶಿಕ್ಷೆ ಅನುಭವಿಸುತ್ತಿರುವ ಭಾರತದ ಎಂಜಿನಿಯರ್‌ವೊಬ್ಬರ ಉಳಿದ ಅವಧಿಯನ್ನು ರದ್ದುಗೊಳಿಸುವಂತೆ ಅವರ ತಾಯಿ ಪಾಕಿಸ್ತಾನ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದಾರೆ.

ಅಕ್ರಮ ಪ್ರವೇಶಕ್ಕೆ ಸಂಬಂಧಿಸಿದಂತೆ ಮುಂಬೈ ನಿವಾಸಿ ಹಮೀದ್ ಅನ್ಸಾರಿ ಎನ್ನುವವರಿಗೆ ಪಾಕಿಸ್ತಾನ ಸೇನಾ ನ್ಯಾಯಾಲಯ 2015ರ ಡಿಸೆಂಬರ್‌ 15ರಂದು ಮೂರು ವರ್ಷಗಳ ಕಠಿಣ ಶಿಕ್ಷೆ ವಿಧಿಸಿತ್ತು. ಮುಂದಿನ ವರ್ಷ ಡಿಸೆಂಬರ್‌ 14ಕ್ಕೆ ಈ ಶಿಕ್ಷೆಯ ಅವಧಿ ಮುಗಿಯುತ್ತದೆ.

ಭಾರತೀಯ ನಿರ್ವಹಣಾ ಸಂಸ್ಥೆಯಲ್ಲಿ ಅನ್ಸಾರಿ ಸಹಾಯಕ ಪ್ರಾಧ್ಯಾಪಕರಾಗಿದ್ದರು. ಫೇಸ್‌ಬುಕ್‌ನಲ್ಲಿ ಪರಿಚಯ ಮಾಡಿಕೊಂಡಿದ್ದ ಯುವತಿಗೆ ನೆರವು ನೀಡುವ ಸಲುವಾಗಿ 2012ರಲ್ಲಿ ಅನ್ಸಾರಿ ಪಾಕಿಸ್ತಾನಕ್ಕೆ ತೆರಳಲು ಮುಂದಾಗಿದ್ದರು. ಆದರೆ, ಪಾಕಿಸ್ತಾನದ ವೀಸಾ ಸಿಗದ ಕಾರಣ ಅಫ್ಗಾನಿಸ್ತಾನಕ್ಕೆ ತೆರಳಿ, ಅಲ್ಲಿಂದ ಅಕ್ರಮವಾಗಿ ಪಾಕಿಸ್ತಾನ ಪ್ರವೇಶಿಸಿದ್ದರು. 2012ರ ನವೆಂಬರ್ 14ರಂದು ಕೋಹತ್‌ನಲ್ಲಿನ ಹೋಟೆಲ್‌ನಲ್ಲಿ ಇವರನ್ನು ಬಂಧಿಸಲಾಗಿತ್ತು. ಬಳಿಕ, ಸೇನಾ ನ್ಯಾಯಾಲಯ ವಿಚಾರಣೆ ನಡೆಸಿ ಜೈಲು ಶಿಕ್ಷೆ ವಿಧಿಸಿತ್ತು.

ಶಿಕ್ಷೆ ಘೋಷಣೆಯಾಗುವ ಮೊದಲು ಜೈಲಿನಲ್ಲಿದ್ದ ಅವಧಿಯನ್ನೇ ಶಿಕ್ಷೆಯ ಅವಧಿ ಎಂದು ಪರಿಗಣಿಸಿ ಮಾನವೀಯತೆ ಆಧಾರದ ಮೇಲೆ ಮಗನನ್ನು ಜೈಲಿನಿಂದ ಬಿಡುಗಡೆಗೊಳಿಸಬೇಕು ಎಂದು ಅನ್ಸಾರಿ ಅವರ ತಾಯಿ ತಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

‘ಹಮೀದ್ ಅನ್ಸಾರಿಗಿಂತ ಸಾಕಷ್ಟು ಘೋರ ಅಪರಾಧ ಮಾಡಿದ ವಿದೇಶಿ ಪ್ರಜೆಗಳಿಗೆ ನಿಮ್ಮ ಸರ್ಕಾರ ದಯೆ ತೋರಿಸಿದೆ. ಅನ್ಸಾರಿಯ ಉಳಿದ ಅವಧಿಯ ಜೈಲು ಶಿಕ್ಷೆಯನ್ನು ರದ್ದು ಮಾಡಿದರೆ, ಮಾನವೀಯ ಮನವಿಗಳಿಗೆ ಮನ್ನಣೆ ನೀಡುವ ನಿಮ್ಮ ದೇಶದ ಕೀರ್ತಿ ಹೆಚ್ಚುತ್ತಿದೆ. ಭಾರತದ ಜೈಲುಗಳಲ್ಲಿರುವ ಪಾಕಿಸ್ತಾನಿ ಪ್ರಜೆಗಳ ಬಿಡುಗಡೆಯ ಸಾಧ್ಯತೆ ಹೆಚ್ಚಬಹುದು’ ಎಂದು ಪತ್ರದಲ್ಲಿ ಬರೆದಿದ್ದಾರೆ.

‘ಅನ್ಸಾರಿ ಅಪರಾಧ ಎಸಗಿದ್ದಾರೆ ಎನ್ನುವಲ್ಲಿ ಯಾವುದೇ ಅನುಮಾನ ಇಲ್ಲ. ಆದರೆ ಸಂಕಷ್ಟದಲ್ಲಿದ್ದ ಮಹಿಳೆಗೆ ನೆರವು ನೀಡುವುದು ಅವರ ಉದ್ದೇಶವಾಗಿತ್ತು ಎನ್ನುವುದು ಬಲವಾದ ಮಾನವೀಯ ನೆಲೆಯಾಗುತ್ತದೆ. ಈಗಾಗಲೆ ಅವರು ಸಾಕಷ್ಟು ಶಿಕ್ಷೆ ಅನುಭವಿಸಿದ್ದಾರೆ’ ಎಂದು ಮಾನವ ಹಕ್ಕುಗಳ ಕಾರ್ಯಕರ್ತ ಐ.ಎ.ರೆಹಮಾನ್ ಅವರು ತಕ್ಷಣವೇ ಅನ್ಸಾರಿ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT