ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹25 ಕೋಟಿ ವೆಚ್ಚದಲ್ಲಿ ನಿರ್ಮಾಣ

Last Updated 5 ಡಿಸೆಂಬರ್ 2017, 8:32 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರದ ಗೃಹ ಮಂಡಳಿ ಬಡಾವಣೆ (ಕೆ.ಎಂ ರಸ್ತೆ) ಕಾಬ್‌ ಸೆಟ್‌ ಬಳಿ ಪ್ರಗತಿಯಲ್ಲಿರುವ ಜಿಲ್ಲಾ ಕಚೇರಿ ಸಂಕೀರ್ಣ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಮತ್ತು ಶಾಸಕ ಸಿ.ಟಿ.ರವಿ ಸೋಮವಾರ ಪರಿಶೀಲಿಸಿದರು.

ಈ ಸಂಕೀರ್ಣದಲ್ಲಿ 30 ಇಲಾಖೆಗಳ ಕಚೇರಿಗಳು ಬರಲಿವೆ. ಒಟ್ಟು ₹ 25 ಕೋಟಿ ವೆಚ್ಚದಲ್ಲಿ ಈ ಕಟ್ಟಡವನ್ನು ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿಗೆ 18 ತಿಂಗಳು ಕಾಲಮಿತಿ ನಿಗದಿಪಡಿಸಲಾಗಿದೆ. ಅಕ್ಟೋಬರ್‌ನಲ್ಲಿ ಕೆಲಸ ಆರಂಭವಾಗಿದೆ. ಕಾಮಗಾರಿ ನಿರ್ವಹಣೆಯನ್ನು ಗೃಹ ಮಂಡಳಿಗೆ ವಹಿಸಲಾಗಿದೆ. ‘ಗುಣಮಟ್ಟದ ಕಾಮಗಾರಿ ಮಾಡಬೇಕು. ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಶಾಸಕ ಸಿ.ಟಿ.ರವಿ ಅವರು ಗುತ್ತಿಗೆದಾರರಿಗೆ ಸೂಚಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ‘ಈ ಜಾಗ ಸ್ವಲ್ಪ ದೂರವಾಯಿತು ಎಂಬುದು ನಿಜ. ರೈಲು ನಿಲ್ದಾಣದ ಬಳಿ ನಿರ್ಮಿಸಬೇಕು ಎಂಬ ಬಗ್ಗೆ ಈ ಹಿಂದೆ ಚರ್ಚೆಯಾಗಿತ್ತು. ಜಿಲ್ಲಾ ಪಂಚಾಯಿತಿ, ಆರ್‌ಟಿಒ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ಮೊದಲಾದವು ಈ ಭಾಗದಲ್ಲಿ ಇವೆ. ಆದರೆ, ಬೇರೆ ಕಡೆ ಸರ್ಕಾರಿ ಜಾಗ ಇಲ್ಲದಿದ್ದರಿಂದ ಈ ಜಾಗ ಗುರುತಿಸಲಾಯಿತು. ಇಲ್ಲಿ 100 ಎಕರೆಗೂ ಹೆಚ್ಚು ಸರ್ಕಾರಿ ಜಾಗ ಇದೆ’ ಎಂದರು.

‘ಚಿಕ್ಕಮಗಳೂರಿನಲ್ಲಿ ಮಳೆ ಜಾಸ್ತಿ. ಇಲ್ಲಿ ಕಟ್ಟಡಕ್ಕೆ ಸ್ಲೊಪ್‌ ರೂಫಿಂಗ್‌ ಮಾಡುವುದು ಸರಿ. ಈ ಕಟ್ಟಡದ ನೀಲನಕ್ಷೆಯಲ್ಲಿ ಫ್ಲಾಟ್‌ ರೂಫಿಂಗ್‌ ಇದೆ. ಮುಖ್ಯಎಂಜಿನಿಯರ್‌ ಅವರೊಂದಿಗೆ ಚರ್ಚಸಿ, ಸ್ಲೋಪ್‌ ರೂಫಿಂಗ್‌ಗೆ ಬದಲಾಯಿಸಿಕೊಳ್ಳುವಂತೆ ಸಲಹೆ ನೀಡಲಾಗುವುದು’ ಎಂದು ತಿಳಿಸಿದರು.

‘ಇಲ್ಲಿಗೆ ಕಚೇರಿಗಳು ಸ್ಥಳಾಂತರವಾದ ನಂತರ, ಈಗಿರುವ ಜಿಲ್ಲಾಧಿಕಾರಿ ಕಚೇರಿಯನ್ನು ಜಿಲ್ಲೆಯ ಇತಿಹಾಸ, ಸಮಗ್ರ ಮಾಹಿತಿಯ ಜಿಲ್ಲಾ ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಬೇಕು ಎಂಬ ಸಲಹೆಗಳು ವ್ಯಕ್ತವಾಗಿವೆ. ಅರ್ಜಿ ಸ್ವೀಕೃತಿ ವಿಭಾಗವು ಈಗಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇರುತ್ತದೆ’ ಎಂದು ತಿಳಿಸಿದರು.

‘ದತ್ತ ಜಯಂತಿಯಂದು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಿಂದ ಪೊಲೀಸರು ಬಿಗಿ ಕ್ರಮ ಕೈಗೊಂಡಿದ್ದಾರೆ. ಪೊಲೀಸರ ಮುಂಜಾಗ್ರತೆ ಕ್ರಮದಿಂದಾಗಿ ಪರಿಸ್ಥಿತಿ ಹತೋಟಿಗೆ ಬಂದಿದೆ’ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

‘ನಗರದ ತಮಿಳು ಕಾಲೋನಿ ಭಾಗದಲ್ಲಿ ಡಿ.3ರಂದು ರಾತ್ರಿ ಪೊಲೀಸರು ಏಳು ಪೆಟ್ರೋಲ್ ಬಾಂಬ್‌ಗಳು, ರಾಡು, ಲಾಂಗ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಗಲಾಟೆಗೆ ಸಂಚು ರೂಪಿಸಿದ್ದ 33 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಗೊತ್ತಾಗಿದೆ’ ಎಂದರು.

‘ಕರಾವಳಿ ಭಾಗದ ಸಂಘಟನೆಗಳೊಂದಿಗೆ ಸಂಪರ್ಕ ಇರುವವರು ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದರು ಎಂಬ ಮಾಹಿತಿ ಪೊಲೀಸ್‌ ಬಾತ್ಮಿದಾರರಿಂದ ನನಗೆ ಗೊತ್ತಾಗಿದೆ. ಈ ವಿಷಯನ್ನು ಗಂಭೀರವಾಗಿ ಪರಿಗಣಿಸುವಂತೆ ಪೊಲೀಸ್‌ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ’ ಎಂದು ಹೇಳಿದರು. ‘ಜನತೆ ವದಂತಿಗಳಿಗೆ ಕಿವಿಗೊಡಬಾರದು. ಪ್ರಚೋದನೆಗೆ ಒಳಗಾಗಬಾರದು. ಶಾಂತಿಸುವ್ಯವಸ್ಥೆ ಕಾಪಾಡಲು ಜನರು ನೆರವಾಗಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT