ಸೋಮವಾರ, ಮಾರ್ಚ್ 1, 2021
24 °C

ಬಂದಿದೆ ಬಗೆಬಗೆ ರವಿಕೆ

ಮಂಜುಶ್ರೀ ಎಂ. ಕಡಕೋಳ Updated:

ಅಕ್ಷರ ಗಾತ್ರ : | |

ಬಂದಿದೆ ಬಗೆಬಗೆ ರವಿಕೆ

ಅಮ್ಮನಂತೆ ಸೀರೆ ಉಡೋಕೆ ಇಷ್ಟ ಕಣೇ. ಆದರೆ ಹಾಳಾದ್ದು ಈ ರವಿಕೆಯದ್ದೇ (ಬ್ಲೌಸ್‌) ಸಮಸ್ಯೆ. ಅಷ್ಟೊಂದು ಬಿಗಿಯಾಗಿರುವ ರವಿಕೆಯನ್ನು ಅಮ್ಮಾ ಅದ್ಹೇಗೆ ಹಾಕ್ಕೊಂತಾರೋ ನಂಗೊತ್ತಿಲ್ಲ. ನಾನಂತೂ ಸೀರೆ ಉಡಲ್ಲ...’ ಎಂದು ನಿಟ್ಟುಸಿರುಬಿಟ್ಟಳು ಮಲ್ಲಿಗೆ.

 ***

‘ಅಯ್ಯೋ, ಈಗಿನ ಹೆಣ್ಮಕ್ಕಳಿಗೆ ಸೀರೆ ಉಡೋಕೆ ಬರೋದಿಲ್ಲ ಕಣ್ರೀ. ನನ್ನ ಮಗಳನ್ನೇ ನೋಡಿ, ಹುಡುಗ ನೋಡಲು ಬಂದಾಗ ಸೀರೆ ಉಡು ಅಂದ್ರೆ ಮುಖ ಇಷ್ಟು ದಪ್ಪ ಮಾಡಿಕೊಳ್ತಾಳೆ. ಹೋಗಲಿ ಹಬ್ಬಕ್ಕಾದರೂ ಸೀರೆ ಉಡು ಅಂದ್ರೆ, ಅದಕ್ಕೂ ಸಿಟ್ಟಾಗ್ತಾಳೆ. ಸೀರೆ ಉಡ್ತೀನಿ ಆದ್ರೆ ಒಂದು ಕಂಡೀಷನ್. ಜೀನ್ಸ್ ಮೇಲಿನ ಟಾಪ್ ಅನ್ನೇ ಬ್ಲೌಸ್ ಮಾಡಿಕೊಳ್ತೀನಿ ಅಂತಾಳೆ. ಅದೇನೋ ಹುಡುಗಿನೋ...’ ಪಕ್ಕದ್ಮನೆ ಶಾಂತಮ್ಮನ ಬಳಿ ಮಗಳ ಸೀರೆ–ರವಿಕೆಯ ಕಥೆ ಬಿಚ್ಚಿಟ್ಟರು ಗೃಹಿಣಿ ಸರಸ್ವತಮ್ಮ.

***

ಮೇಲಿನ ಎರಡೂ ಸಂಭಾಷಣೆಗಳಲ್ಲಿ ಸೀರೆ ಓಕೆ, ರವಿಕೆ ಹೀಗೇಕೆ? ಎನ್ನುವ ಪ್ರಶ್ನೆಗಳು ಪ್ರತಿಧ್ವನಿಸುತ್ತವೆ. ಹೆಣ್ಣಿನ ಗುರುತು ಎಂದೇ ಭಾವಿಸಲಾಗುತ್ತಿದ್ದ ಸೀರೆ ಮತ್ತು ರವಿಕೆಯಲ್ಲೂ ಈಗ ಹಲಬಗೆಯ ಬದಲಾವಣೆಗಳಾಗಿವೆ. ಅದರಲ್ಲೂ ಎದೆಯನ್ನು ಬಿಗಿದಪ್ಪಿ ಹಿಡಿಯುವ ರವಿಕೆಯಂತೂ ಈಗ ತನ್ನ ಮೂಲ ಸ್ವರೂಪವನ್ನೇ ಮರೆಯುವಷ್ಟು ಮಟ್ಟಿಗೆ.

ಅಂಥ ಬದಲಾವಣೆಗೆ ಬಾಲಿವುಡ್‌ ನಟಿಯರ ಕೊಡುಗೆಯೇನೋ ಕಮ್ಮಿ ಇಲ್ಲ ಅನ್ನಿ. ಬಾಲಿವುಡ್‌ನಲ್ಲಿ ಫ್ಯಾಷನ್ ಮತ್ತು ಯೂತ್ ಐಕಾನ್ ಎಂದೇ ಬಿಂಬಿತವಾಗಿರುವ ನಟಿ ಸೋನಂ ಕಪೂರ್ ಅವರು ಪ್ರತಿ ಬಾರಿ ತೊಡುವ ಉಡುಪಿನತ್ತಲೇ ಎಲ್ಲರ ಕಣ್ಣುಗಳು ನೆಟ್ಟಿರುತ್ತವೆ. ಸೋನಂ ಸೀರೆ ಧರಿಸಿರಲಿ, ಸಲ್ವಾರ್ ತೊಟ್ಟಿರಲಿ, ಜೀನ್ಸ್ ಹಾಕಿರಲಿ ಅಲ್ಲೊಂದು ಭಿನ್ನ ಫ್ಯಾಷನ್ ಟ್ರೆಂಡ್ ಇದ್ದೇ ಇರುತ್ತದೆ. ಅದರಲ್ಲೂ ಅವರು ಧರಿಸುವ ರವಿಕೆಗಳು ಒಂದಕ್ಕಿಂತ ಒಂದು ಭಿನ್ನ. ರವಿಕೆಯ ಮೂಲ ವಿನ್ಯಾಸವನ್ನೇ ಬದಲಿಸಿದವರ ಪೈಕಿ ಅವರೂ ಒಬ್ಬರು. ಬಗೆಬಗೆ ವಿನ್ಯಾಸದ ರವಿಕೆಗಳನ್ನು ಸೀರೆಪ್ರಿಯರಿಗೆ ಸೋನಂ ಪರಿಚಯಿಸಿದ್ದಾರೆ.

‘ಕ್ವೀನ್’ ಖ್ಯಾತಿಯ ನಟಿ ಕಂಗನಾ ರೌನತ್ ಕೂಡಾ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಬಾಲಿವುಡ್‌ನ ಖ್ಯಾತ ವಸ್ತ್ರವಿನ್ಯಾಸಕ ಸಬ್ಯಸಾಚಿ ವಿನ್ಯಾಸದ ಸೀರೆಗೆ ಕಂಗನಾ ಫ್ಯಾಷನ್ ಶೋವೊಂದರಲ್ಲಿ ಪಟ್ಟಾಪಟ್ಟಿ ಟೀಶರ್ಟ್ ಧರಿಸಿ ಸುದ್ದಿಯಾಗಿದ್ದರು. ಅಂತೆಯೇ ನಟಿ ದೀಪಿಕಾ ಪಡುಕೋಣೆ ಇತ್ತೀಚೆಗೆ ರಿಯಾಲಿಟಿ ಶೋವೊಂದರಲ್ಲಿ ಕುತ್ತಿಗೆ ಮುಚ್ಚುವ, ಚೈನೀಸ್ ಕಾಲರ್ ಮಾದರಿಯ ರವಿಕೆ ತೊಟ್ಟು ನೋಡುಗರ ಮನ ಸೆಳೆದಿದ್ದರು.

ಎದೆಯನ್ನು ಬಿಗಿದಪ್ಪಿ ಹಿಡಿದು, ಗಾಳಿಯಾಡಲು ಇರಲಿ, ಉಸಿರಾಡಲೂ ಕಷ್ಟ ಎನಿಸುವಂತಿದ್ದ ರವಿಕೆಗಳ ಜಾಗವನ್ನೀಗ ಫ್ರೈಸ್ಟೈಲ್ ರವಿಕೆಗಳು ಆಕ್ರಮಿಸುತ್ತಿವೆ. ರವಿಕೆಗಳು ಯಾಕೆ ಯಾವಾಗಲೂ ಮೈ ಬಿಗಿದಪ್ಪುವಂತಿರಬೇಕು. ತುಸು ಸಡಿಲವಾಗಿದ್ದರೇನು ತಪ್ಪು? ಹೊನ್ನಬಣ್ಣದ ಭುಜಗಳಿಗೆ ತೋಳಿನ ಹಂಗೇಕೆ? ಎಂಬುದು ಇಂದಿನ ಯುವತಿಯರ ಪ್ರಶ್ನೆ. ಅದಕ್ಕೆ ತಕ್ಕಂತೆ ಸ್ಲಿಮ್ ಶರ್ಟ್‌, ಕ್ರಾಪ್ ಟಾಪ್, ಜಾಕೆಟ್‌, ಟ್ಯಾಂಕ್ ಟಾಪ್‌ ಹೀಗೆ ಹಲವು ವಿನ್ಯಾಸಗಳಲ್ಲಿ ರವಿಕೆಗಳು ಯುವತಿಯರ ಮೈಯನ್ನಪ್ಪುತ್ತಿವೆ.

‘ನಿತ್ಯವೂ ಜೀನ್ಸ್ ಮೇಲೆ ಧರಿಸುವ ಶಾರ್ಟ್ ಟೀಶರ್ಟ್ ಅನ್ನೇ ರವಿಕೆಯನ್ನಾಗಿ ಬಳಸುವುದು ಬೆಂಗಳೂರಿನಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಟ್ರೆಂಡ್. ಟೀಶರ್ಟ್‌ನ ಕೆಳಭಾಗವನ್ನು ಎದೆಯ ಭಾಗದ ತನಕ ಎತ್ತಿಹಿಡಿದು ಬಿಗಿಯಾದ ಗಂಟು ಹಾಕಿದರೆ ಸಾಕು ಸ್ಲಿಮ್ ಟೀಶರ್ಟ್ ಬ್ಲೌಸ್ ರೆಡಿ. ತಿಳಿಬಣ್ಣದ ಟೀಶರ್ಟ್‌ಗೆ ಹೊಂದುವ ಗಾಢಬಣ್ಣದ ಸೀರೆಯನ್ನು ತುಸು ಸ್ಟೈಲಿಷ್ ಆಗಿ ಧರಿಸಿದರೆ ಇಂಡೋವೆಸ್ಟರ್ನ್ ಲುಕ್ ನಿಮ್ಮದಾಗುತ್ತದೆ’ ಎನ್ನುತ್ತಾರೆ ಫ್ಯಾಷನ್ ಬ್ಲಾಗರ್ ಪಲ್ಲವಿ ಚತುರ್ವೇದಿ.

ಆಫ್ ಶೋಲ್ಡರ್ ಕ್ರಾಪ್ ಟಾಪ್ ಅನ್ನು ರವಿಕೆಯನ್ನಾಗಿ ಧರಿಸಬಹುದು. ಅಷ್ಟೇ ಅಲ್ಲ, ಕುರ್ತಾದ ಟಾಪ್ ಕೂಡಾ ರವಿಕೆಯಾಗಬಲ್ಲದು. ಇದರಲ್ಲಿ ಮೈ ಢಾಳಾಗಿ ಕಾಣುವುದಿಲ್ಲ. ಕಚೇರಿ, ಸಾರ್ವಜನಿಕೆ ಸಭೆ–ಸಮಾರಂಭಗಳಷ್ಟೇ ಅಲ್ಲ ಪಾರ್ಟಿಗೂ ಇದು ಹೊಂದುತ್ತದೆ. ವೇಸ್ಟ್ ಕೋಟ್‌, ಜಾಕೆಟ್‌, ಟ್ಯಾಂಕ್ ಟಾಪ್‌ಗಳನ್ನೂ ರವಿಕೆಯನ್ನಾಗಿ ಬಳಸಬಹುದು. ಇಲ್ಲೆಲ್ಲಾ ಸಾಂಪ್ರದಾಯಿಕ ವಿನ್ಯಾಸದ ರವಿಕೆಗಳಿರುವುದಿಲ್ಲ. ನಿತ್ಯವೂ ಧರಿಸುವ ಟಾಪ್‌ಗಳನ್ನೇ ರವಿಕೆಯನ್ನಾಗಿ ಪರಿವರ್ತಿಸಬಹುದು. ನೋಡಲು ಇವು ಟ್ರೆಂಡಿಯಷ್ಟೇ ಅಲ್ಲ ಫ್ಯಾಷನಬಲ್ ಕೂಡಾ ಆಗಿರುತ್ತವೆ. ಧರಿಸಲೂ ಸುಲಭ. ಉಸಿರಾಡಲು ಕಷ್ಟ ಎನಿಸುವುದಿಲ್ಲ.

‘ಈಚೆಗೆ ರವಿಕೆ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಸಾಂಪ್ರದಾಯಿಕ ರೌಂಡ್ ನೆಕ್‌ ರವಿಕೆಗಳಿಗಿಂತ, ಹೊಸ ವಿನ್ಯಾಸದ ರವಿಕೆಗಳನ್ನು ಧರಿಸಲು ಮಹಿಳೆಯರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಹಳೆಯ ಮಾದರಿಯ ರವಿಕೆಗಳಿಗಿಂತ ದೇಹಕ್ಕೆ ಆರಾಮದಾಯಕ ಎನಿಸುವ ರವಿಕೆಗಳತ್ತ ಅವರ ಒಲವು ಹೆಚ್ಚು’ ಎನ್ನುತ್ತಾರೆ ವಸ್ತ್ರವಿನ್ಯಾಸಕ ಅಮಿತ್ ಅಗರ್‌ವಾಲ್.

‘ರವಿಕೆಯ ವಿನ್ಯಾಸಗಳ ಬಗ್ಗೆ ಈಗ ಸೋಷಿಯಲ್ ಮೀಡಿಯಾಗಳಲ್ಲೂ ಚರ್ಚೆಯಾಗುತ್ತಿದೆ. ಎಂಥ ವಿನ್ಯಾಸದ ರವಿಕೆ ತೊಟ್ಟರೆ ಚೆಂದ. ಯಾರ ಬಳಿ ವಿನ್ಯಾಸ ಮಾಡಿಸಿದರೆ ಚೆನ್ನಾಗಿರುತ್ತದೆ ಎನ್ನುವ ಚರ್ಚೆಗಳಂತೂ ಸಾಮಾನ್ಯ. ಹಿಂದೆ ಕೋಲ್ಡ್ ಶೋಲ್ಡರ್, ಫ್ರಿಲ್ ರವಿಕೆ, ಬೆಲ್ ರವಿಕೆಗಳನ್ನು ಪಾರ್ಟಿಯಂಥ ವಿಶೇಷ ಸಂದರ್ಭಗಳಲ್ಲಿ ಮಾತ್ರ ಉನ್ನತ ವರ್ಗದ ಮಹಿಳೆಯರು ಧರಿಸುತ್ತಿದ್ದರು. ಆದರೆ, ಈಗ ಹಾಗಲ್ಲ. ಯಾರೂ ಬೇಕಾದರೂ ಯಾವ ಕಾರ್ಯಕ್ರಮಕ್ಕಾದರೂ ಈ ವಿನ್ಯಾಸದ ರವಿಕೆಗಳನ್ನು ಧರಿಸಬಹುದಾಗಿದೆ. ರವಿಕೆಯ ಆಯ್ಕೆ ವಿಷಯದಲ್ಲಿ ಇಂದಿನ ಹೆಂಗಳೆಯರನ್ನು ಮೆಚ್ಚಬೇಕು’ ಎನ್ನುತ್ತಾರೆ ಅವರು.

***

ಟ್ರೆಂಡ್ ಎನ್ನುತ್ತಾ ಸಿಕ್ಕಸಿಕ್ಕ ರವಿಕೆಗಳನ್ನು ಧರಿಸುವುದರಲ್ಲಿ ಅರ್ಥವಿಲ್ಲ. ಧರಿಸುವವರ ದೇಹಾಕೃತಿ, ಅಭಿರುಚಿ, ವ್ಯಕ್ತಿತ್ವ ಇವನ್ನು ಗಮನದಲ್ಲಿಟ್ಟುಕೊಂಡು ರವಿಕೆಯ ವಿನ್ಯಾಸ ರೂಪಿಸಬೇಕು.

–ಪಾಯಲ್ ಖಾಂಡ್‌ವಾಲಾ, ವಸ್ತ್ರವಿನ್ಯಾಸಕಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.