ಭಾನುವಾರ, ಮಾರ್ಚ್ 7, 2021
27 °C

ರೈತರ ಉಳಿವಿಗೆ ಶಾಶ್ವತ ಯೋಜನೆ: ದೇವೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೈತರ ಉಳಿವಿಗೆ ಶಾಶ್ವತ ಯೋಜನೆ: ದೇವೇಗೌಡ

ಬಳ್ಳಾರಿ: ‘ರೈತರ ಸಾಲವನ್ನು ಒಂದು ವರ್ಷ ಮನ್ನಾ ಮಾಡಬಹುದು. ಆದರೆ ಆಮೇಲೆ ಏನು ಎಂಬ ಪ್ರಶ್ನೆ ಇದ್ದೇ ಇರುತ್ತದೆ. ಆದ್ದರಿಂದ ರೈತರ ಸುಭಿಕ್ಷ ಬದುಕಿಗಾಗಿ ಶಾಶ್ವತ ಯೋಜನೆಯೊಂದನ್ನು ರೂಪಿಸುವಂತೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಸೂಚಿಸಿದ್ದೇನೆ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ತಿಳಿಸಿದರು.

ನಗರದಲ್ಲಿ ಮಂಗಳವಾರ ನಡೆದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರತಿ ತಿಂಗಳೂ ರೈತರಿಗೆ ಕನಿಷ್ಠ ₹30,000 ಆದಾಯ ದೊರಕುವಂಥ ಸನ್ನಿವೇಶವನ್ನು ನಿರ್ಮಾಣ ಮಾಡಬೇಕು. ಅದಕ್ಕಾಗಿ ಇಸ್ರೇಲ್‌ ದೇಶಕ್ಕೆ ಭೇಟಿ ನೀಡಿ ಅಲ್ಲಿನ ಪ್ರಗತಿಪರ ಕೃಷಿ ಪದ್ಧತಿಯನ್ನು ಅರಿಯುವ ಕೆಲಸವೂ ನಡೆದಿದೆ’ ಎಂದರು.

‘ಯಾರು ಪ್ರಧಾನಿಯಾದರೂ ಈ ದೇಶದ ರೈತರಿಗೆ ಸರ್ಕಾರಿ ಕೆಲಸವನ್ನು ಕೊಡುತ್ತಾರೆ ಎಂಬುದನ್ನು ಮರೆತುಬಿಡಿ’ ಎಂದ ಅವರು ಪ್ರಧಾನಿ ಮೋದಿ ಅವರ ಹೆಸರು ಹೇಳದೇ ಟೀಕಿಸಿದರು.

ಜಾತ್ಯತೀತತೆಗೆ ಧಕ್ಕೆ: ‘ದೇಶದಲ್ಲಿ ಜಾತ್ಯತೀತತೆಗೆ ಧಕ್ಕೆ ಬಂದಿದೆ. ನನಗೆ ಮುಸ್ಲಿಮರ ಓಟು ಬೇಕಾಗಿಲ್ಲ ಎಂದು ಕೇಂದ್ರ ಸಚಿವರೊಬ್ಬರು ಹೇಳಿಕೆ ಕೊಡುತ್ತಾರೆ. ಸಂವಿಧಾನದ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸುವ ಅವರು ನಂತರ ಸಂವಿಧಾನಕ್ಕೆ ತದ್ವಿರುದ್ಧ ಹೇಳಿಕೆ ನೀಡುತ್ತಾರೆ. ಇದು ಹೇಗೆ ಸಾಧ್ಯ’ ಎಂದು ಅವರು ಅನಂತಕುಮಾರ ಹೆಗಡೆಯವರ ಹೆಸರು ಹೇಳದೆಯೇ ಪ್ರಶ್ನಿಸಿದರು.

ಅರಸು ಸ್ಮರಣೆ: ತಮ್ಮ ಭಾಷಣದ ನಡುವೆ ಹಲವು ಬಾರಿ ಡಿ.ದೇವರಾಜ ಅರಸು ಅವರನ್ನು ಸ್ಮರಿಸಿದ ದೇವೇಗೌಡರು, ‘ಅರಸರು ಹಿಂದುಳಿದ ವರ್ಗಗಳಿಗೆ ಅಧಿಕಾರದ ಅವಕಾಶವನ್ನು ತಂದುಕೊಟ್ಟ ವಿಶಿಷ್ಟ ಆಡಳಿತಗಾರ’ ಎಂದು ಬಣ್ಣಿಸಿದರು.

‘ಕಾಂಗ್ರೆಸ್‌ ಮತ್ತು ಬಿಜೆಪಿಯೊಂದಿಗೆ ಹೊಂದಾಣಿಕೆ ಇಲ್ಲದೆ ಪಕ್ಷ ಅಧಿಕಾರ ಪಡೆಯಬೇಕು ಎಂಬುದು ನನ್ನ ಕನಸು. ಅದಕ್ಕಾಗಿ ಪಕ್ಷವನ್ನು ಬೆಂಬಲಿಸಬೇಕು ಎಂದು ಎಲ್ಲೆಡೆ ಮನವಿ ಮಾಡುತ್ತಿದ್ದೇನೆ’ ಎಂದರು.

ಸೇರ್ಪಡೆ: ಇದೇ ಸಂದರ್ಭದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ಮುಖಂಡರಾದ ಎನ್‌.ಪ್ರತಾಪ ರೆಡ್ಡಿ, ಕುರೇಕುಪ್ಪದ ಸೋಮಪ್ಪ, ಹಡಗಲಿಯ ಎಸ್‌.ಜಿ.ಕೊಟ್ರೇಶ್‌, ನಂದಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದುರುಗಪ್ಪ, ಪೂಜಾನಾಯ್ಕ ಮತ್ತು ಜಹಾಂಗೀರ್‌ ಅವರಿಗೆ ಪಕ್ಷದ ಬಾವುಟ ನೀಡಿ ಸ್ವಾಗತಿಸಿದರು.

ಪಕ್ಷದ ಕಾರ್ಯಾಧ್ಯಕ್ಷ ಪಿ.ಜಿ.ಆರ್‌.ಸಿಂಧ್ಯಾ, ಕಾರ್ಯದರ್ಶಿ ಜಫ್ರುಲ್ಲಾ ಖಾನ್‌, ಚುನಾವಣಾ ವೀಕ್ಷಕರಾದ ರಮೇಶ್‌ಗೌಡ ಮತ್ತು ಚೆನ್ನರಾಜ, ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷ ರಮೇಶ್‌, ಮುಖಂಡ ವೆಂಕಟರಾವ್‌ ನಾಡಗೌಡ, ಜಿಲ್ಲಾ ಘಟಕದ ಅಧ್ಯಕ್ಷ ಕೆ.ಶಿವಪ್ಪ ಮಾತನಾಡಿದರು.

ಮಹಿಳಾ ಘಟಕದ ಅಧ್ಯಕ್ಷೆ ಗೌಸಿಯ ಬೇಗಂ, ಉಪಾಧ್ಯಕ್ಷೆ ಸುಲ್ತಾನ ಬೇಗಂ, ಕೋರ್‌ ಕಮಿಟಿ ಸದಸ್ಯರಾದ ಲಕ್ಷ್ಮಿಕಾಂತರೆಡ್ಡಿ, ಮೀನಳ್ಳಿ ತಾಯಣ್ಣ, ಹೇಮಯ್ಯಸ್ವಾಮಿ ಉಪಸ್ಥಿತರಿದ್ದರು.

2500 ಮಂದಿಗೆ ಊಟ: ಸಭೆಯ ಸಲುವಾಗಿಯೇ 2,500 ಮಂದಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಆದರೆ ಸಭೆ ಆರಂಭವಾಗುವ ವೇಳೆಗೆ ಮಧ್ಯಾಹ್ನ ವಾದ ಪರಿಣಾಮ, ಕಾರ್ಯಕರ್ತರು ಸಭೆಯಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳದೆ ಭೋಜನೆಶಾಲೆಗೆ ತೆರಳಿದರು. ಊಟಕ್ಕಾಗಿ ಕಾರ್ಯಕರ್ತರ ನೂಕು–ನುಗ್ಗಲು, ತಳ್ಳಾಟ, ಸಂಘಟಕರೊಂದಿಗೆ ವಾಗ್ವಾದವೂ ನಡೆಯಿತು.

ಬಳ್ಳಾರಿ: ದೇವೇಗೌಡರ ಭೇಟಿಯ ಪರಿಣಾಮವಾಗಿ ಬೆಳಿಗ್ಗೆಯಿಂದಲೇ ನಗರದ ಪ್ರವಾಸಿ ಮಂದಿರದಲ್ಲಿ ಜನಜಾತ್ರೆ ನೆರೆದಿತ್ತು. ಬೆಳಿಗ್ಗೆ ರೈಲಿನಲ್ಲಿ ಬಂದಿಳಿದ ಅವರು ಪ್ರವಾಸಿ ಮಂದಿರಕ್ಕೆ ತೆರಳಿ ವಿಶ್ರಾಂತಿ ಪಡೆದಿದ್ದರು. ನಂತರ ಉದ್ಯಮಿ ಇಕ್ಬಾಲ್‌ ಅಹ್ಮದ್‌ ಅವರ ಮನೆಗೆ ಭೇಟಿ ನೀಡಿ ಉಪಾಹಾರ ಸ್ವೀಕರಿಸಿದರು. ಅದಕ್ಕೂ ಮುನ್ನ ಕನಕದುರ್ಗಮ್ಮ ಗುಡಿಗೆ ತೆರಳಿ ಪೂಜೆ ಸಲ್ಲಿಸಿದರು.

ಕಾರ್ಯಕರ್ತರ ಸಭೆ ಮಧ್ಯಾಹ್ನ 3.30ಕ್ಕೆ ಮುಗಿದ ಬಳಿಕ ಗೌಡರು ಪ್ರವಾಸಿ ಮಂದಿರಕ್ಕೆ ತೆರಳಿದರು. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸುವ ಆಕಾಂಕ್ಷಿಗಳೊಂದಿಗೆ ಸಮಾಲೋಚನೆಯೂ ನಿಗದಿಯಾಗಿದ್ದರಿಂದ, ಆಕಾಂಕ್ಷಿಗಳು ತಮ್ಮ ಬೆಂಬಲಿಗರೊಂದಿಗೆ ನೆರೆದಿದ್ದರು. ಸಭೆ ಸಂಜೆ 7 ಗಂಟೆಯಾದರೂ ನಡೆದಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.