ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಹೆಸರಿನಲ್ಲಿ ನಮ್ಮನ್ನು ಆಳುತ್ತಿದ್ದಾರೆ– ಟೀಕೆ

ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಸ್ವಾಮೀಜಿ ಹೇಳಿಕೆ;
Last Updated 7 ಡಿಸೆಂಬರ್ 2017, 6:21 IST
ಅಕ್ಷರ ಗಾತ್ರ

ಬೆಳಗಾವಿ: ‘ಇದುವರೆಗೆ ಆರ್ಯ, ಬ್ರಾಹ್ಮಣ, ವಿಪ್ರ, ಪುರೋಹಿತಶಾಹಿ ಹೆಸರಿನಲ್ಲಿ ನಮ್ಮನ್ನು ಆಳಿದ ಜನರು ಈಗ ಹಿಂದೂ ಹೆಸರಿನಲ್ಲಿ ಆಳಲು ಹೊರಟಿದ್ದಾರೆ’ ಎಂದು ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಸ್ವಾಮೀಜಿ ಟೀಕಿಸಿದರು. 

ಇಲ್ಲಿನ ಸದಾಶಿವನಗರದ ಸ್ಮಶಾನದಲ್ಲಿ ಶಾಸಕ ಸತೀಶ ಜಾರಕಿಹೊಳಿ ನೇತೃತ್ವದ ಮಾನವ ಬಂಧುತ್ವ ವೇದಿಕೆಯು ಬುಧವಾರ ಆಯೋಜಿಸಿದ್ದ ಮೌಢ್ಯ ವಿರೋಧಿ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಹಿಂದೂ, ಯುವಬ್ರಿಗೇಡ್‌, ರಾಷ್ಟ್ರೀಯತೆ ಎನ್ನುವಂತಹ ದೊಡ್ಡ ದೊಡ್ಡ ಶಬ್ದಗಳನ್ನು  ಬಳಸಿ ನಮ್ಮನ್ನು ಮೋಸ ಮಾಡಿದ್ದಾರೆ. ಬೇರೆ ಬೇರೆ ಧರ್ಮಗಳ ನಡುವೆ ಘರ್ಷಣೆ ಹುಟ್ಟು ಹಾಕಲು ಸಂಚು ರೂಪಿಸುವುದಕ್ಕಾಗಿಯೇ ಉಡುಪಿಯಲ್ಲಿ ಇತ್ತೀಚೆಗೆ ಧರ್ಮ ಸಂಸತ್‌ ನಡೆಸಲಾಗಿತ್ತು. ಹೊರತು, ದೇಶ ರಕ್ಷಣೆಗಾಗಿ ಅಲ್ಲ. ಚಾತುರ್ವಣ, ವೈದಿಕಶಾಹಿ ರಕ್ಷಣೆ ಅದರ ಉದ್ದೇಶವಾಗಿದೆ ಎಂದು ಆರೋಪಿಸಿದರು.

ಗುಡಿ ನಿರ್ಮಿಸಲು ಅಡಿಪಾಯ ತೆಗೆಯುವವರು, ಗುಡಿ ಕಟ್ಟುವವರು, ಕಳಸ ತಯಾರಿಸುವವರೆಲ್ಲರೂ ಹಿಂದುಳಿದ ವರ್ಗದವರು. ಗುಡಿ ತಯಾರಾದ ನಂತರ ಗರ್ಭಗುಡಿ ಸೇರುವ ಬ್ರಾಹ್ಮಣರು ಇವರನ್ನೆಲ್ಲ ಹೊರಗೆ ನಿಲ್ಲಿಸುತ್ತಾರೆ. ಎಂತಹ ನ್ಯಾಯವಿದು? ದೇವಸ್ಥಾನದ ಒಳಗೆ ದಲಿತರನ್ನು ಬಿಟ್ಟುಕೊಡದು ಇವರು, ಗಣಪತಿಯನ್ನು ಕೇರಿಯಲ್ಲಿ ತಂದು ಕೂರಿಸಿದರು ಎಂದು ವ್ಯಂಗ್ಯವಾಡಿದರು.

ಎಲ್ಲ ಜಾತಿ, ಧರ್ಮದವರನ್ನು ಸೇರಿಸಿಕೊಂಡು 12ನೇ ಶತಮಾನದಲ್ಲಿ ಬಸವಣ್ಣನವರು ನಿರ್ಮಿಸಿದ್ದ ಕಲ್ಯಾಣ ರಾಜ್ಯ ನಮಗೆ ಬೇಕು. ಹೊರತು, ರಾಮರಾಜ್ಯ ಬೇಡ. ದಲಿತರು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರು ಮನಸ್ಸು ಮಾಡಿದರೆ ಧರ್ಮ ಆಧಾರಿತ ರಾಜಕೀಯ ಪಕ್ಷಗಳನ್ನು  ನಾಶ ಮಾಡಲು ಸಾಧ್ಯವಿದೆ. ದೇಶವನ್ನು ಅಭಿವೃದ್ಧಿ ಪಥದತ್ತ ಒಯ್ಯಲು ಸಾಧ್ಯವಿದೆ ಎಂದರು.

ಪಂಚಾಂಗ ಹೇಳುವ ಮೂಲಕ ಜನರಲ್ಲಿ ಮೌಢ್ಯತೆ ಬಿತ್ತಲಾಗುತ್ತಿದೆ. ಇಂತಹವರನ್ನು ಮಾನಸಿಕ ಭಯೋತ್ಪಾದಕರೆಂದು ಘೋಷಿಸಬೇಕಾಗಿದೆ ಎಂದು ಒತ್ತಾಯಿಸಿದರು.

ಚಿಂತಕ, ಬರಹಗಾರ ಡಾ.ಪುರುಷೋತ್ತಮ ಬಿಳಿಮಲೆ ಮಾತನಾಡಿ, ಸ್ಮಶಾನದಲ್ಲಿ ಇರುವವರು ನಮ್ಮ ಸಂಬಂಧಿಗಳು. ಆದರೂ ಹಿಂದೂಗಳಲ್ಲಿ ಸ್ಮಶಾನದ ಬಗ್ಗೆ ಆತಂಕವಿದೆ. ಮುಸ್ಲಿಮರಲ್ಲಿ ಈ ಆತಂಕವಿಲ್ಲ. ರಾಜಮಹಾರಾಜರ ಸಮಾಧಿಗಳನ್ನು ವೀಕ್ಷಿಸಲು ಹೋಗುತ್ತಾರೆ. ತಾಜಮಹಲ್‌ ಇದಕ್ಕೊಂದು ಉತ್ತಮ ಉದಾಹರಣೆ. ಈ ಕಾರ್ಯಕ್ರಮದ ಮೂಲಕ ಸ್ಮಶಾನವನ್ನು ಕೂಡ ಪವಿತ್ರ ಸ್ಥಳವನ್ನಾಗಿ ಮಾಡಲು ಹೊರಟಿರುವುದು ಸ್ವಾಗತಾರ್ಹ ಎಂದರು.

ರಾಣಿ ಪದ್ಮಿನಿಯನ್ನು ಕೆಟ್ಟದ್ದಾಗಿ ಚಿತ್ರಿಸಲಾಗಿದೆ ಎಂದು ಹಿಂದಿ ಚಲನಚಿತ್ರ ‘ಪದ್ಮಾವತಿ’ಗೆ ವಿರೋಧ ವ್ಯಕ್ತಪಡಿಸುತ್ತಿರುವ ರಜಪೂತರು ತಮ್ಮ ಮನೆಗಳಲ್ಲಿ ಮಹಿಳೆಯರನ್ನು ಯಾವ ರೀತಿ ಇಟ್ಟುಕೊಂಡಿದ್ದಾರೆ ಎನ್ನುವುದನ್ನು ನೋಡಬೇಕಾಗಿದೆ. ಈ ಚಿತ್ರದಲ್ಲಿ ಮುಸ್ಲಿಂ ದೊರೆ ಅಲ್ಲಾವುದ್ದೀನ್‌ ಖಿಲ್ಜಿ ಅವರನ್ನು ಕೆಟ್ಟದ್ದಾಗಿ ಚಿತ್ರೀಕರಿಸಿದ್ದಾರೆ. ನಿಜವಾಗಿಯೂ ಪ್ರತಿಭಟನೆ ಮಾಡಬೇಕಾಗಿದ್ದು ಮುಸ್ಲಿಮರು. ಆದರೆ, ಬಡತನ ಹಾಗೂ ಮೌಢ್ಯದಿಂದಾಗಿ ಅವರು ಪ್ರಶ್ನೆ ಕೇಳುತ್ತಿಲ್ಲ ಎಂದರು.

ಹೋರಾಟಗಾರ್ತಿ ಕೆ.ನೀಲಾ ಮಾತನಾಡಿ, ‘ಮೌಢ್ಯವನ್ನು ಕಿತ್ತುಹಾಕಲು ಅಂಬೇಡ್ಕರ್‌ ಅವರು ಸಂವಿಧಾನ ಎನ್ನುವ ಅಸ್ತ್ರ ನೀಡಿದ್ದಾರೆ. ಈ ಅಸ್ತ್ರದಿಂದಾಗಿಯೇ ಇಂದು ಹಲವರು ಹಿಂದುಳಿದ ಸಮುದಾಯದವರು ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗಿದೆ. ಹೀಗಾಗಿ ಇಂದು ಸಂವಿಧಾನವನ್ನು ಬದಲಾಯಿಸುವ ಹುನ್ನಾರ ನಡೆದಿದೆ. ಪರಾಮರ್ಶೆ ಮಾಡುತ್ತೇವೆ ಎಂದು ಹೇಳುವ ಮೂಲಕ ಸಂವಿಧಾನವನ್ನು ಕಿತ್ತುಹಾಕುವ ಪ್ರಯತ್ನ ನಡೆದಿದ್ದು, ಎಲ್ಲರೂ ಸೇರಿ ವಿರೋಧಿಸಬೇಕಾಗಿದೆ’ ಎಂದು ಹೇಳಿದರು.

‘ಹುಣಸೂರಿನಲ್ಲಿ ನಡೆದ ಹನುಮ ಜಯಂತಿಯಲ್ಲಿ ಪಾಲ್ಗೊಳ್ಳುವ ಮೂಲಕ ಸಂಸದರೊಬ್ಬರು ಮೌಢ್ಯ ನಂಬಿಕೆ ಬಿತ್ತಲು ಹೊರಟಿದ್ದಾರೆ. ನಮಗೆ ಶರೆ ಕುಡಿಸಿ, ಮಂಗ್ಯಾನಂಗ ಕುಣಿಸಿ ಅವರು ಅಧಿಕಾರ ಹಿಡಿಯುತ್ತಾರೆ’ ಎಂದು ಟೀಕಿಸಿದರು.

‘ಹೆಣ್ಣು ಮಕ್ಕಳನ್ನು ವ್ಯಭಿಚಾರಿಣಿ ಎಂದು ಹೀಯಾಳಿಸಿದ್ದ ಮನುಸ್ಮೃತಿಯನ್ನು ಅಂಬೇಡ್ಕರ್‌ ಅವರು ತಮ್ಮ ಪತ್ನಿ ರಮಾದೇವಿ ಜೊತೆ ಡಿಸೆಂಬರ್‌ 25ರಂದು ಸುಟ್ಟುಹಾಕಿದ್ದರು. ಅದರ ನೆನಪಿಗಾಗಿ ನಾವು ಕೂಡ ಇದೇ ದಿನದಂದು ಮನುಸ್ಮೃತಿ ಸುಟ್ಟುಹಾಕಬೇಕು’ ಎಂದು ಕರೆ ನೀಡಿದರು.

ಅಥಣಿಯ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿ, ‘ರಾಮ ಮಂದಿರ ಬದಲು ಜನರ ಬದುಕನ್ನು ಕಟ್ಟುವ ಕೆಲಸ ಆಗಬೇಕು. ಬುದ್ಧ, ಬಸವ, ಅಂಬೇಡ್ಕರ್‌ ನಮ್ಮ ಶಕ್ತಿಯಾಗಿದ್ದಾರೆ. ನಮ್ಮನ್ನು ಹೆಸರಿಸಲು ಸಾಧ್ಯವಿಲ್ಲ’ ಎಂದರು.

ಹುಕ್ಕೇರಿಯ ಚರಂತೇಶ್ವರ ಮಠದ ಶರಣ ಬಸವದೇವರು ಮಾತನಾಡಿ, ‘ವೇದಗಳು, ಉಪನಿಷತ್ತುಗಳು ನಮಗೆ ಸ್ವಾತಂತ್ರ್ಯ ನೀಡಿಲ್ಲ. ಅಂಬೇಡ್ಕರ್‌ ಅವರ ಸಂವಿಧಾನ ನೀಡಿದೆ. ನಮಗೆ ಬೇರೆ ಗ್ರಂಥಗಳ ಅವಶ್ಯಕತೆ ಇಲ್ಲ. ಟಿ.ವಿಯಲ್ಲಿ ಜ್ಯೋತಿಷ ಕಾರ್ಯಕ್ರಮಗಳ ಮೂಲಕ ಮೌಢ್ಯತೆಯನ್ನು ಬಿತ್ತಲಾಗುತ್ತಿದೆ. ಜ್ಯೋತಿಷಿ ಕಾರ್ಯಕ್ರಮ ನೋಡುವುದು ಬಿಟ್ಟರೆ 10 ವರ್ಷ ಹೆಚ್ಚು ಬಾಳುತ್ತೀರಿ. 25 ರೂಪಾಯಿ ಬೆಲೆಯ ಪಂಚಾಂಗ ಇಂದು ನಮ್ಮನ್ನು ಆಳುತ್ತಿದೆ’ ಎಂದರು.

ವ್ಯಾಪಾರ ವೃದ್ಧಿಯಾಗಿದೆ: ‘ಸ್ಮಶಾನದಲ್ಲಿ ಕಾರ್ಯಕ್ರಮ ಹಮ್ಮಿಕೊಂಡ ನಂತರ ನಮ್ಮ ವ್ಯಾಪಾರ ವೃದ್ಧಿಯಾಗಿದೆ. ಶೀಘ್ರದಲ್ಲಿ ಎರಡು ಹೆಲಿಕಾಪ್ಟರ್‌ಗಳನ್ನು ಖರೀದಿಸಲಿದ್ದೇನೆ’ ಎಂದು ಕಾರ್ಯಕ್ರಮದ ರೂವಾರಿ, ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

ಮೊದಲ ವರ್ಷ 10,000, ಎರಡನೇ ವರ್ಷ 20,000, ಕಳೆದ ವರ್ಷ 40,000 ಈ ಸಲ 50,000 ಜನರನ್ನು ಕಾರ್ಯಕ್ರಮಕ್ಕೆ ಸೇರಿಸಿದ್ದೇವೆ. ಮುಂಬರುವ ವರ್ಷಗಳಲ್ಲಿ ಈ ಸಂಖ್ಯೆಯನ್ನು ಹೆಚ್ಚಿಸುತ್ತ, 1 ಲಕ್ಷವರೆಗೆ ತಲುಪಿಸಲಾಗುವುದು ಎಂದರು.

***

‘ನನ್ನ ತಾಯಿ ಬೋವಿ ಜನಾಂಗದವಳು’

‘ನನ್ನ ತಾಯಿ ಬೋವಿ ಜನಾಂಗದವಳು. ಗದಗ– ಬೆಟಗೇರಿಯಲ್ಲಿ ಜನಿಸಿದ್ದಳು. ತಂದೆ– ತಾಯಿ ತೀರಿಕೊಂಡ ನಂತರ ಬೆಳಗಾವಿಯ ಅನಾಥಾಶ್ರಮಕ್ಕೆ ಬಂದು ವಿದ್ಯಾಭ್ಯಾಸ ಕಲಿತರು. ನರ್ಸಿಂಗ್‌ ಪೂರೈಸಿ, ಬೆಂಗಳೂರಿನಲ್ಲಿ ನೆಲೆಸಿದರು. ತಂದೆ ಮಂಗಳೂರಿನವರು. ಬೆಂಗಳೂರಿಗೆ ಬಂದಾಗ ತಾಯಿಯನ್ನು ಮೆಚ್ಚಿ ಮದುವೆಯಾದರು’ ಎಂದು ನಟ ಪ್ರಕಾಶ್‌ ರೈ ನೆನಪಿಸಿಕೊಂಡರು.

‘ನನಗೆ ದೇವರ ಮೇಲೆ ನಂಬಿಕೆಯಿಲ್ಲ. ಆದರೂ ಚೆನ್ನಾಗಿದ್ದೇನೆ. ಮೌಢ್ಯವನ್ನು ಬಿಟ್ಟು ಬರಬೇಕಾಗಿದೆ. ಮೌಢ್ಯದ ವಿರುದ್ಧ ಜನಜಾಗೃತಿ ಮೂಡಿಸಬೇಕಾಗಿದೆ. ನಟನಾಗಿ ಬೆಳೆಯಲು ನೀವು ಕಾರಣ. ನಿಮ್ಮ ಋಣವನ್ನು ತೀರಿಸುತ್ತಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT